Drop


Tuesday, December 4, 2012

ಮಹಿಳಾ ಸಬಲೀಕರಣದ
ಚಿಗುರು
"ಯತ್ರ
ನಾರ್ಯಂತು ಪೂಜ್ಯಂತೇ
ರಮ್ಯಂತೇ ತತ್ರ ದೇವತಃ "
ಎಲ್ಲಿ
ನಾರಿಯು ಪೂಜಿಸಲ್ಪಡುವಳೋ
ಅಲ್ಲಿ ದೇವತೆಗಳು
ಗಮಿಸುತ್ತಿರುತ್ತಾರೆ
ಎಂಬುದು ಮೇಲಿನ ಸಾಲುಗಳ
ತಾತ್ಪರ್ಯ. ಇಂತಹ ಮೋಹಕ
ಸಾಲುಗಳನ್ನು ಬಳಸುತ್ತ
ನಾಮ ಮಾತ್ರಕ್ಕೆ
ಮಹಿಳೆಯರನ್ನು ಮೇಲ್ ಸ್ತರಕ್ಕೆ
ತರುವ ಅವಿರತ
ಪ್ರಯತ್ನವನ್ನು ಪುರುಷ
ಸಮಾಜ ಶತಶತಮಾನಗಳಿಂದ
ಮಾಡುತ್ತಲೇ ಬಂದಿದೆ.
ದೇಶದಲ್ಲಿ
ಎಷ್ಟೋ ಮಹಿಳೆಯರು ಇನ್ನೂ
ಅಡುಗೆ ಮನೆ ಹುಡುಗಿಯರಾಗಿ
ಕಿರು ಕಿಂಡಿಯಲ್ಲಿ ಬರಿ ಬಯಲ
ಆಕಾಶವನ್ನು
ನೋಡುತ್ತಿದ್ದಾರೆ.
ಸಮಾಜದಲ್ಲಿನ ಅನಿಷ್ಟ
ಪದ್ಧತಿಗಳಾದ ಕೇಶ
ಮುಂಡನ, ಬಾಲ್ಯ ವಿವಾಹ,
ವರದಕ್ಷಿಣೆ, ಲೈಂಗಿಕ
ಕಿರುಕುಳ, ಉದ್ದೇಶಿತ
ಅನಕ್ಷರತೆಯಂತಹವುಗಳು
ಇನ್ನೂ ದೂರಾಗಿಲ್ಲ.
ಎಲ್ಲೋ ಒಂದು ಕಡೆ ಇವೆಲ್ಲ
ಇನ್ನೂ ಜೀವಂತವಾಗಿವೆ.
ಇಂತಹ ಸಮಸ್ಯೆಗಳು ಮಹಿಳೆಯರ
ಬೆಂಗಾವಲಲ್ಲಿ ಸುಳಿಯುತ್ತಿವೆ.
ಈ ಪರಿಯ ಅಸಹನೀಯ
ವಾತಾವರಣಕ್ಕೆ
ಕಾರಣಗಳು ಅನೇಕ.
ಆದ್ದರಿಂದ
ಬಾಲ್ಯದಿಂದಲೇ ಪ್ರಾಥಮಿಕ
ಶಾಲೆಗಳಲ್ಲಿ ಹೆಣ್ಣು ಮಕ್ಕಳ
ಸಬಲೀಕರಣಕ್ಕಾಗಿ
ಸದ್ದಿಲ್ಲದೆ ಯೋಜನೆಯೊಂದು
ಶುರುವಾಗಿದೆ.
ಅದೇ ಮೀನಾ ತಂಡಗಳುಳ್ಳ
ಎನ್.ಪಿ.ಇ.ಜಿ.ಇ.ಎಲ್(NPEGEL)
ಕಾರ್ಯಕ್ರಮ.
ಎನ್.ಪಿ.ಇ.ಜಿ.ಇ.ಎಲ್(NPEGEL)
ನಡೆದು ಬಂದ ದಾರಿ :
ದಕ್ಷಿಣ ಏಷ್ಯಾದಲ್ಲಿನ
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ
UNICEF ರೂಪಿಸಿದ ಈ ಹೊಸ
ಕಾರ್ಯಕ್ರಮವು ಸೆಪ್ಟೆಂಬರ್
24, 1998ರಂದು ಅಧಿಕೃತವಾಗಿ
ನಮ್ಮ ಭಾರತ ದೇಶದಲ್ಲಿ
ಪರಿಚಿತವಾಯಿತು. ಉತ್ತರ
ಪ್ರದೇಶದ 28
ಸಾವಿರಕ್ಕೂ ಹೆಚ್ಚಿನ
ಶಾಲೆಗಳಲ್ಲಿ
ಪರೀಕ್ಷಾರ್ಥವಾಗಿ
ಆರಂಭಗೊಂಡು ಯಶಸ್ಸನ್ನು
ಕಂಡಿತು. ನಮ್ಮ
ಕರ್ನಾಟಕದಲ್ಲೂ ಕೆಲವು
ಹಿಂದುಳಿದ ಬ್ಲಾಕ್
(ತಾಲ್ಲೂಕು)ಗಳಲ್ಲಿ
ಎನ್.ಪಿ.ಇ.ಜಿ.ಇ.ಎಲ್(National
Programme for Education of Girls
at Elementary Level) ಅಂದರೆ
'ಪ್ರಾಥಮಿಕ ಹಂತದಲ್ಲಿ
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ
ರಾಷ್ಟ್ರೀಯ ಕಾರ್ಯಕ್ರಮ'
2008-09 ನೇ ಸಾಲಿನಲ್ಲಿ
ಪ್ರಾರಂಭವಾಯಿತು. ಕಳೆದ
ಎರಡು ವರ್ಷಗಳಿಂದರಾಜ್ಯದ
ಎಲ್ಲಾ ಹಿರಿಯ ಪ್ರಾಥಮಿಕ
ಶಾಲೆಗಳಲ್ಲಿ ಎನ್.ಪಿ.ಇ.ಜಿ.ಇ.ಎಲ್
ಪ್ರಾರಂಭವಾಗಿ ಯಶಸ್ಸಿನತ್ತ
ದಾಪುಗಾಲು ಇಟ್ಟಿದೆ.
ಎನ್.ಪಿ.ಇ.ಜಿ.ಇ.ಎಲ್(NPEGEL)
ನಲ್ಲಿ ಏನಿದೆ?
ಈ ಕಾರ್ಯಕ್ರಮದಲ್ಲಿ ಹಿರಿಯ
ಪ್ರಾಥಮಿಕ ಶಾಲೆಯ
ಹೆಣ್ಣು ಮಕ್ಕಳಿಗೆ
ಒಂದು ವಿಭಿನ್ನ ರೀತಿಯ
ತರಬೇತಿ ಇದೆ. ಇಲ್ಲಿ 20
ವಿದ್ಯಾರ್ಥಿಗಳ
ಒಂದು ತಂಡವಿರುತ್ತದೆ.
ಅದನ್ನು 'ಮೀನಾ ತಂಡ'
ಎಂದು ಕರೆಯಲಾಗುತ್ತದೆ. ಈ
ತಂಡದ ಕಾರ್ಯಕ್ರಮಗಳ
ಮೂಲಕ ಹೆಣ್ಣು ಮಕ್ಕಳ
ಶಿಕ್ಷಣಕ್ಕಾಗಿ ವಿಶೇಷ ಗಮನ
ಹರಿಸಲಾಗುತ್ತದೆ.
ವಿದ್ಯಾರ್ಥಿನಿಯರಿಗೆ ವೃತ್ತಿ
ತರಬೇತಿ ಹಾಗೂ ಜೀವನ
ಕೌಶಲಗಳನ್ನು
ಕಲಿಸಲಾಗುತ್ತಿದೆ. ಹೊಲಿಗೆ,
ಕಸೂತಿ,ಅಗರಬತ್ತಿ ತಯಾರಿಕೆ,
ಮೇಣದ ಬತ್ತಿ ತಯಾರಿಕೆ,
ಆಹಾರ ಪದಾರ್ಥಗಳ
ತಯಾರಿಕೆಯಂತಹ ವೃತ್ತಿ
ಕೌಶಲ್ಯಗಳನ್ನು
ಕಲಿಸಲಾಗುತ್ತಿದೆ. ಅದಲ್ಲದೆ
ಸೈಕಲ್ ರಿಪೇರಿ,
ಎಲೆಕ್ಟ್ರಾನಿಕ್ ವಸ್ತುಗಳ
ರಿಪೇರಿ, ಈಜು,ಕರಾಟೆ,ಕುಂಗ್
ಫು, ಆಟೋಟಗಳು
ಮುಂತಾದವುಗಳ ಮೂಲಕ
ಹೆಣ್ಣು ಅಬಲೆಯಲ್ಲ, ಸಬಲೆ
ಎಂದು ಸಾರಲಾಗುತ್ತಿದೆ.
ಮೀನಾ ತಂಡಗಳಲ್ಲಿ
ಅತೀ ಚಟುವಟಿಕೆಯುಳ್ಳ
ವಿದ್ಯಾರ್ಥಿನಿಯರಿದ್ದು ಊರಿನ
ಪ್ರಮುಖ ಬೀದಿಗಳಲ್ಲಿ ಪಥ
ಸಂಚಲನ ನಡೆಸಿ
ಹೆಣ್ಣು ಮಕ್ಕಳ ಶಿಕ್ಷಣದ
ಮಹತ್ವ ಸಾರುತ್ತಾರೆ. ಬೀದಿ
ನಾಟಕಗಳನ್ನು
ಪ್ರದರ್ಶಿಸುತ್ತಾರೆ.
ಗೈರು ಹಾಜರಾದ ಮಕ್ಕಳ
ಮನೆಗೆ ತೆರಳಿ ಶಾಲೆಗೆ
ಬರಲು ಮನವೊಲಿಸುತ್ತಾರೆ.
ಇದಕ್ಕಾಗಿ ಸಾರ್ವಜನಿಕ
ಶಿಕ್ಷಣ ಇಲಾಖೆಯು ಅನೇಕ
ಅನುದಾನಗಳನ್ನು,
ಪ್ರೋತ್ಸಾಹಕಗಳನ್ನು
ಬಿಡುಗಡೆ ಮಾಡುತ್ತದೆ. ಹಿರಿಯ
ಪ್ರಾಥಮಿಕಶಾಲೆಯ ಒಬ್ಬ
ಮಾರ್ಗದರ್ಶಕ ಶಿಕ್ಷಕ/
ಶಿಕ್ಷಕಿಯರು ಮೀನಾ ತಂಡ
ಸೇರಿ ಈಎನ್.ಪಿ.ಇ.ಜಿ.ಇ.ಎಲ್
ಕಾರ್ಯಕ್ರಮವನ್ನು
ಯಶಸ್ಸಿನತ್ತ
ಕೊಂಡೊಯ್ಯುವಲ್ಲಿ
ಶ್ರಮಿಸುತ್ತಿದ್ದಾರೆ.
ಬದಲಾವಣೆಯ ಗಾಳಿ :
ಈ ಕಾರ್ಯಕ್ರಮ
ಅನುಷ್ಠಾನಗೊಂಡ
ವರ್ಷದಲ್ಲಿ ಗ್ರಾಮೀಣ
ಶಾಲೆಗಳ ಶೈಕ್ಷಣಿಕ ಸ್ಥಿತಿ
ಗತಿಗಳು ಬದಲಾಗಿವೆ.
ಹೆಣ್ಣು ಮಕ್ಕಳ ಶಿಕ್ಷಣದ
ಮಹತ್ವ ತಿಳಿದ
ಪೋಷಕರು ತಮ್ಮ
ಹೆಣ್ಣು ಮಕ್ಕಳನ್ನು ಪ್ರತಿದಿನ
ತಪ್ಪದೇ ಶಾಲೆಗೆ
ಕಳುಹಿಸುತ್ತಿದ್ದಾರೆ.
ಮಹಿಳಾ ಶೋಷಣೆ, ಅನಕ್ಷರತೆ,
ಮಹಿಳೆಯರಿಗೆ ಸಂಬಂಧಿಸಿದ ಮೂಢ
ನಂಬಿಕೆಗಳು
ಮಾಯವಾಗುತ್ತಿವೆ. ಇದಕ್ಕಾಗಿ
ಸರ್ವ ಶಿಕ್ಷಣ ಅಭಿಯಾನ
ಮತ್ತು ಸಾರ್ವಜನಿಕ ಶಿಕ್ಷಣ
ಇಲಾಖೆಯವರು ಅಹರ್ನಿಶಿ
ಪ್ರಯತ್ನಿಸಿ ಸುಂದರ
ಯೋಜನೆಗಳನ್ನು ರೂಪಿಸಿವೆ.
ಹೆಣ್ಣು ಮಕ್ಕಳಿಗೆ ಹಾಯೆನಿಸುವ
ಶಾಲಾ ಕಟ್ಟಡಗಳು,
ಪ್ರತ್ಯೇಕ ಶೌಚಾಲಯಗಳು,
ಕಿಶೋರಿ ತರಬೇತಿಯಂತಹ
ಆರೋಗ್ಯಕರ
ಕಾರ್ಯಕ್ರಮಗಳನ್ನು ರೂಪಿಸಿ
ಧನ್ಯತೆ ಮೆರೆದಿವೆ. ಲಿಂಗ
ತಾರತಮ್ಯ, ಲೈಂಗಿಕ
ಕಿರುಕುಳ, ಮಕ್ಕಳ
ಸಾಗಾಣಿಕೆಯಂತಹ ಅಕ್ಷಮ್ಯ
ಅಪರಾಧಗಳ ಬಗ್ಗೆ
ಅರಿವು ಉಂಟಾಗಿದೆ. ಈ
ಕಾರ್ಯಕ್ರಮದಿಂದಾಗಿ
ಕುಗ್ರಾಮದ
ಎಷ್ಟೋ ಹೆಣ್ಣು ಮಕ್ಕಳು ಶಾಲೆ
ಸೇರಿ ತಮ್ಮ ಸುಂದರ
ಭವಿಷ್ಯವನ್ನು
ರೂಪಿಸಿಕೊಳ್ಳುವಲ್ಲಿ
ಯಶಸ್ವಿಯಾಗಿದ್ದಾರೆ. ಆದರೆ
ಮಹಿಳಾ ಸಬಲೀಕರಣ ಕೇವಲ
ಒಬ್ಬರಿಂದ
ಸಾಧ್ಯವಾಗುವುದಿಲ್ಲ.
ಸಮುದಾಯ,ಪೋಷಕರು ಹಾಗೂ
ಸ್ವತಃ ಮಹಿಳೆಯರೂ ಇದಕ್ಕೆ
ಟೊಂಕ ಕಟ್ಟಿ ನಿಲ್ಲ
ಬೇಕಾಗಿದೆ. ಅದೇನೇ ಇರಲಿ.
ಪ್ರಾಥಮಿಕ
ಹಂತದಿಂದಲೇ ಹೆಣ್ಣು
ಮಕ್ಕಳನ್ನು
ವೃತ್ತಿಪರರನ್ನಾಗಿ
ಹಾಗೂ ಸಮಾಜ
ಮುಖಿಯರನ್ನಾಗಿ
ಮಾಡುತ್ತಿರುವ ಶಿಕ್ಷಣ
ಇಲಾಖೆಯ ಈ ಕಾರ್ಯ
ಅಭಿನಂದನಾರ್ಹವಾದುದು.
---ಸಚಿನ್ ಕುಮಾರ ಬಿ.ಹಿರೇಮಠ