Wednesday, January 28, 2015

ಮೊದಲ ರ್ಯಾಂಕ್ ಸಾಧ್ಯವೇ?


ತಮ್ಮ ಮಗು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕೆಂಬ
ನಿರೀಕ್ಷೆ ಪ್ರತಿಯೊಬ್ಬ
ಪಾಲಕರಲ್ಲೂ ಇರುತ್ತದೆ. ಇದು ತಪ್ಪಲ್ಲ. ಆದರೆ, 'ಸ್ಪರ್ಧಾತ್ಮಕ
ಜಗತ್ತಿನಿಂದ' ತುಸು ಹೆಚ್ಚಾಗಿಯೇ ಪ್ರಭಾವಿತರಾಗಿರುವ
ಇಂದಿನ ಬಹುತೇಕ ಪಾಲಕರು ತಮ್ಮ ಮಗು ತರಗತಿಯಲ್ಲಿ
'ಮೊದಲ ರ್ಯಾಂಕ್'
ಬರಲೇಬೇಕೆಂದು ಬಯಸುತ್ತಾರೆ. ಪೂರ್ವ ಪ್ರಾಥಮಿಕ
ಎಲ್ಕೆಜಿಯಿಂದಲೇ ಮಗುವಿನ ಮೇಲೆ ಈ ನಿಟ್ಟಿನಲ್ಲಿ
ಅನಗತ್ಯ ಹಾಗೂ ಅನಪೇಕ್ಷಿತ ಒತ್ತಡ ಹೇರುತ್ತಾರೆ.
'ಭಿನ್ನತೆ' ಅರಿಯಿರಿ; 'ಅನನ್ಯತೆ' ಗೌರವಿಸಿ
ಪ್ರತಿ ಮಗುವು ತನ್ನ ಅನುವಂಶೀಯ ಹಾಗೂ ಪರಿಸರದ
ಕಾರಕಗಳ ಪರಿಣಾಮದಿಂದ ವಿಭಿನ್ನವಾಗಿರುತ್ತದೆ.
ಇದನ್ನು ಮನಶಾಸ್ತ್ರೀಯವಾಗಿ 'ವೈಯಕ್ತಿಕ ಭಿನ್ನತೆ'
ಎನ್ನುತ್ತಾರೆ. ಪ್ರತಿ ಮಗು ಬೇರೆ ಮಕ್ಕಳಿಗಿಂತ ಹಾಗೂ ತನ್ನ
ಸ್ವಂತ ಸಹೋದರ / ಸಹೋದರಿಯರಿಗಿಂತ ಭಿನ್ನವಾಗಿರುತ್ತದೆ.
ಅಷ್ಟೇ ಏಕೆ ಬಾಹ್ಯ ನೋಟಕ್ಕೆ ಪ್ರತ್ಯೇಕವಾಗಿ
ಗುರುತಿಸಲಾಗದಷ್ಟು ದೈಹಿಕ ಸಾಮ್ಯತೆ ಹೊಂದಿರುವ
ಸಮರೂಪಿ ಅವಳಿಗಳಲ್ಲೂ, ದೇಹಕ್ಕೆ ದೇಹ
ಅಂಟಿಕೊಂಡಿರುವ
ಸಯಾಮಿಗಳಲ್ಲೂ ಹಲವಾರು ಭಿನ್ನತೆಗಳು ಕಂಡುಬರುತ್ತವೆ. ಪ್ರತಿ
ಮಗು ಅನನ್ಯವಾಗಿರುತ್ತದೆ. ಹೋಲಿಕೆಗಳಿಗೆ
ಅತೀತವಾಗಿರುತ್ತದೆ. ಈ ಭಿನ್ನತೆಗಳನ್ನು ಅರಿತು ಮಗುವಿನ
ಅನನ್ಯತೆಯನ್ನು ಗೌರವಿಸಬೇಕಾದುದು ಪಾಲಕರ ಹಾಗೂ ಶಿಕ್ಷಕರ
ಕರ್ತವ್ಯವೂ ಹೌದು.
ಪ್ರತಿ ಬಾರಿ 'ಮೊದಲ ರ್ಯಾಂಕ್'
ನಿರೀಕ್ಷೆ ತಪ್ಪು
ಪ್ರತಿ ಮಗುವೂ ತನ್ನ ದೈಹಿಕ, ಮಾನಸಿಕ, ಬೌದ್ಧಿಕ, ಸಾಂಸ್ಕೃತಿಕ,
ಸಾಮಾಜಿಕ, ಆರ್ಥಿಕ, ಮನೋಚಾಲನಾತ್ಮಕ ಭಿನ್ನತೆಗಳಿಗೆ ಅನುಗುಣವಾಗಿ,
ತನ್ನ ಪರಿಮಿತಿಯಲ್ಲಿ ಕಲಿಯುತ್ತದೆ, ಬೆಳೆಯುತ್ತದೆ
ಮತ್ತು ಬದುಕುತ್ತದೆ. ಹೀಗಿರುವಾಗ ಪ್ರತಿ ಮಗುವೂ ಪ್ರತಿ ಸಾರಿ
'ಮೊದಲ ರ್ಯಾಂಕ್' ಬರಬೇಕೆಂಬ
ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪು.
ಇದು ಶ್ರೇಣೀಕೃತ
ಪರೀಕ್ಷಾ ತತ್ವಕ್ಕೂ ವಿರುದ್ಧವಾದುದು. ನಿಮ್ಮ
ಮಗು 'ಮೊದಲ ರ್ಯಾಂಕ್' ಬರಲಿಲ್ಲ
ಎಂದು ದೂಷಿಸುವುದಾದರೆ
ನಿಮ್ಮನ್ನೇ ನೀವು ದೂಷಿಸಿಕೊಳ್ಳಬೇಕು.
ಏಕೆಂದರೆ ನೀವೇ ಒದಗಿಸಿರುವ
ಅನುವಂಶೀಯ ಹಾಗೂ ಪರಿಸರದ ಕಾರಕಗಳು ನಿಮ್ಮ
ಮಗುವನ್ನು 'ಮೊದಲ ರ್ಯಾಂಕ್'
ಗಳಿಸುವಷ್ಟು ಸಮರ್ಥವಾಗಿಸಿಲ್ಲ ಎಂದರ್ಥ.
ಕಲಿಕಾ ಹಂತದಲ್ಲಿರುವ ಮಗು ಹೊಸ
ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ ತನ್ನ
ವರ್ತನೆ
ಬದಲಿಸಿಕೊಳ್ಳುತ್ತಾ 'ತನ್ನತನ' (ವ್ಯಕ್ತಿತ್ವ)
ಕಂಡುಕೊಳ್ಳುತ್ತದೆ. ಇದು ನಿತ್ಯದ ಕ್ರಿಯೆ.
ಇದುವೇ ಕಲಿಕೆ. ಈ ವೇಳೆಯಲ್ಲಿ ಕಲಿಕಾನುಭವಗಳಿಗೆ ಪ್ರತಿ ಮಗುವಿನ
ಪ್ರತಿಕ್ರಿಯೆ ಮತ್ತು ಸ್ಪಂದಿಸುವಿಕೆ ವಿಭಿನ್ನವಾಗಿರುತ್ತದೆ
ಇದನ್ನು ಪೋಷಕರು ಅರ್ಥೈಯಿಸಿಕೊಳ್ಳಬೇಕು.
ಸ್ಪಂದನೆ ಹೀಗಿರಲಿ
ಇಂದಿನ ಮಕ್ಕಳು ಸಂವೇದನಾಶೀಲರು. ಅವರ
ನಿರೀಕ್ಷೆಗಳೂ ಉನ್ನತವಾಗಿವೆ. ನಾಲ್ಕೈದು ವರ್ಷಗಳ
ಅಂತರದಲ್ಲಿ ಪೀಳಿಗೆಗಳ ನಡುವೆ 'ಜನರೇಶನ್
ಗ್ಯಾಪ್' ಕಂಡು ಬರುತ್ತಿದೆ. ಇದು ತಂತ್ರಜ್ಞಾನ
ಹಾಗೂ ಮಾಧ್ಯಮಗಳ ಪ್ರಭಾವವೂ ಹೌದು. ಪರಿಸ್ಥಿತಿ
ಹೀಗಿರುವಾಗ ಪೋಷಕರು ತಮ್ಮ
ನಿರೀಕ್ಷೆಯನ್ನು ಮಗುವಿನ ಮೇಲೆ ಹೇರದೇ ಮಗುವಿನ
ನಿರೀಕ್ಷೆಗಳಿಗೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ.
ಇದು ಕಲಿಗಾಲ! ಅಲ್ಲಮಪ್ರಭುವಿನ ಕಾಲಜ್ಞಾನದ
ವ್ಯಾಖ್ಯಾನದನ್ವಯ ಇಂದಿನ ಮಕ್ಕಳಿಗೆ
ಬೈದು ಅಥವಾ ಹೊಡೆದು ಕಲಿಸುವಂತಿಲ್ಲ.
'ವಂದಿಸಿ' ಕಲಿಸಿದಾಗಲೇ ಅದು ಅವರಿಗೆ ಮಹಾಪ್ರಸಾದ.
ಇದೇ ಕಾರಣಕ್ಕೆ ಶಿಕ್ಷಣ ಇಲಾಖೆ ಹಾಗೂ ಕಾನೂನು 'ಮಕ್ಕಳನ್ನು ಶಿಕ್ಷಿಸಬೇಡಿ.
ಅವರ ಹಕ್ಕುಗಳನ್ನು ಗೌರವಿಸಿ' ಎಂದು ಡಂಗುರ ಸಾರಿರುವುದು.
ಮಗುವಿನೊಂದಿಗೆ ನಿಮ್ಮ ವರ್ತನೆ
ಹೀಗಿರಲಿ...
* ಮಗುವಿನ ಸಮಸ್ಯೆಗಳನ್ನು ಅರಿಯುವ ಸಂವೇದನೆ,
ಭಾವನೆಗಳನ್ನು ಅರ್ಥೈಯಿಸಿಕೊಳ್ಳುವ ಸೂಕ್ಷ್ಮತೆ,
ಮಾತುಗಳನ್ನು ಕೇಳುವ ತಾಳ್ಮೆ, ಪ್ರಶ್ನೆಗಳಿಗೆ ಉತ್ತರಿಸುವ ಜಾಣ್ಮೆ,
ಅಗತ್ಯಗಳನ್ನು ಈಡೇರಿಸುವ ಸಾಮರ್ಥ್ಯ ನಿಮ್ಮಲ್ಲಿರಲಿ.
* ನಿಮ್ಮ ಮಗುವನ್ನು ಸ್ನೇಹಿತರಂತೆ ಪಕ್ಕಕ್ಕೆ
ಕೂರಿಸಿಕೊಂಡು ಪ್ರೀತಿಯಿಂದ
ತಿಳಿವಳಿಕೆ ಹೇಳಿ.
* ಇತರ ಮಕ್ಕಳನ್ನು ಪ್ರಶಂಸಿಸಿ, ನಿಮ್ಮ
ಮಗುವನ್ನು ಮೂದಲಿಸುವ ಋಣಾತ್ಮಕ ಹೋಲಿಕೆ ಬೇಡ. ಇತರ ಮಕ್ಕಳ
ಪ್ರಶಂಸೆಯೊಡನೆ ನಿಮ್ಮ
ಮಗುವನ್ನೂ ಪ್ರಶಂಸಿಸುವ 'ಸಕಾರಾತ್ಮಕ' ಹೋಲಿಕೆ ಇರಲಿ.
* ಮಗುವನ್ನು 'ದಡ್ಡ' ಎಂದು ಜರಿಯಬೇಡಿ. ಇದು ಮಗುವಿನ
ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ.
* 'ರ್ಯಾಂಕ್' ಸಾಧನೆಗೆ ಯಾವುದೇ ರೀತಿಯ 'ಆಮಿಷ'
ಒಡ್ಡಬೇಡಿ. ಇದು ಮಕ್ಕಳಲ್ಲಿ ಅನಾರೋಗ್ಯಕರ ಸ್ಪರ್ಧಾ ಮನೋಭಾವಕ್ಕೆ
ಎಡೆಮಾಡಿಕೊಡಬಹುದು.
* ಬಾಹ್ಯ ಪ್ರೇರಣೆ ಅಥವಾ ಉತ್ತೇಜನೆಗಳಿಗಿಂತ ಆಂತರಿಕ
ಪ್ರೇರಣೆ ಮುಖ್ಯ. ಮಗುವು ಕಲಿಕೆಯತ್ತ
ಸ್ವಯಂ ಆಕರ್ಷಿತವಾಗಲು ಮಾರ್ಗದರ್ಶಿಸಿ.
* ಪಾಠದೊಂದಿಗೆ ಆಟಕ್ಕೂ ಪ್ರಾಧಾನ್ಯತೆ
ನೀಡಿ. ಆಟದಲ್ಲೂ ಪಾಠವಿರಲಿ.
* ಮಗುವಿನ ಸೂಕ್ಷ್ಮತೆ ಹಾಗೂ ಸಂವೇದನೆಗಳನ್ನು ಅರಿತು ಮುಕ್ತ
ಕಲಿಕೆಗೆ ಅಗತ್ಯವಾಗಿರುವ 'ಸುರಕ್ಷಿತ ಭಾವ' ವೃದ್ಧಿಸಿ.
*
* ಬರೀ ಕೋಶ ಓದಿಸಿ ಮಕ್ಕಳನ್ನು 'ಪುಸ್ತಕದ ಹುಳು'ವಾಗಿಸಬೇಡಿ.
ದೇಶವನ್ನು ಸುತ್ತಿಸಿ 'ಜ್ಞಾನದ ಖಣಿ'ಯಾಗಿಸಿ.