ಮೂಕಹಂತಕ ಮಧುಮೇಹ

:-
ಡಾ. ಲತಾ ದಾಮ್ಲೆ:-
ಸಕ್ಕರೆ ಕಾಯಿಲೆಯಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವುದಕ್ಕಿಂತ ಮುಖ್ಯವಾದುದು ಅದು ಮುಂದೊಡ್ಡಬಹುದಾದಂತಹ ತೊಂದರೆಯನ್ನು ಗಮನಿಸುವುದು ಹಾಗೂ ತಕ್ಕ ಕ್ರಮ ಕೈಗೊಳ್ಳುವುದು. ಹೆಚ್ಚಿರುವ ಸಕ್ಕರೆಯಂಶದಿಂದ ಕಣ್ಣು, ನರಗಳು, ರಕ್ತನಾಳಗಳು, ಮೂತ್ರಕೋಶ, ಮೆದುಳು, ಜೀರ್ಣಾಂಗ, ಜನನಾಂಗಗಳು, ಮಾಂಸಪೇಶಿ ಇತ್ಯಾದಿಗಳು ತೊಂದರೆ ಅನುಭವಿಸುತ್ತವೆ.

ಇದು ಅಕ್ಷರಶ: ದೇಹದ ಎಲ್ಲ ಅಂಗಾಂಗಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಮಧುಮೇಹವನ್ನು 'ಮೂಕ ಹಂತಕ' (ಸೈಲೆಂಟ್ ಕಿಲ್ಲರ್) ಎನ್ನುತ್ತಾರೆ. ಆದ್ದರಿಂದ ಇದನ್ನು ತಡೆಯುವುದು, ರಕ್ತದಲ್ಲಿನ ಸಕ್ಕರೆಯಂಶವನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಿಕೊಳ್ಳುವುದು, ಇದರಿಂದ ಬರಬಹುದಾದ ಉಪದ್ರವಗಳ ಬಗ್ಗೆ ಪೂರ್ಣ ಪ್ರಮಾಣದ ಅರಿವು ಅತ್ಯಗತ್ಯ.

ಸಾಮಾನ್ಯವಾಗಿ ನಾವು ತಿಂದ ಆಹಾರವು ಕಟ್ಟ ಕಡೆಗೆ ಸಕ್ಕರೆಯ ರೂಪಕ್ಕೆ ಪರಿಣಾಮ ಹೊಂದಿ ಎಲ್ಲ ಜೀವಕಣಗಳಿಗೆ ರಕ್ತದ ಮೂಲಕ ಗ್ಲೂಕೋಸ್ ರೂಪದಲ್ಲಿ ದೊರಕುತ್ತದೆ. ಸುಲಭವಾಗಿ ಹೇಳುವುದಾದಲ್ಲಿ ಪ್ರತಿಯೊಂದು ಜೀವಕೋಶಗಳಿಗೆ ಒಂದು ದ್ವಾರವಿರುತ್ತದೆ. ಆ ದ್ವಾರ ತೆರೆದಾಗ ನಿರ್ದಿಷ್ಟ ಮತ್ತು ಅವಶ್ಯ ಪ್ರಮಾಣದ ಸಕ್ಕರೆಯಂಶ ಒಳ ಸೇರುತ್ತದೆ. ಇಲ್ಲಿ 'ಇನ್ಸುಲಿನ್' ಬಾಗಿಲು ತೆರೆಯುವ ಕೀಲಿ! ಪ್ಯಾಂಕ್ರಿಯಾ (ಮೇದೋಜೀರಕ ಗ್ರಂಥಿ)ಯಲ್ಲಿ ಇವುಗಳ ಉತ್ಪತ್ತಿ. ಇವನ್ನು ತಡೆಯುವ ಮೂರು ವಿಧವಾದ ಮಧುಮೇಹಗಳಿವೆ.

1. ಇನ್ಸುಲಿನ್ ಅವಲಂಬಿತ (ಟೈಪ್1): ಈ ಕೀಲಿಗಳನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ದೇಹ ಕಳೆದುಕೊಳ್ಳುತ್ತದೆ.

2. ಟೈಪ್2: ಈ ಕೀಲಿಯಿಂದ ಬಾಗಿಲು ತೆಗೆಯಲಾಗದಿರುವುದು. ಇದರಲ್ಲಿ ಕೆಲವೊಮ್ಮೆ ಇನ್ಸುಲಿನ್ ಉತ್ಪತ್ತಿ ಕೂಡಾ ಕಡಿಮೆಯಿರುತ್ತದೆ. ಕ್ರಮೇಣ ನಶಿಸಿಯೂ ಹೋಗುತ್ತದೆ. ಇದನ್ನು 'ಇನ್ಸುಲಿನ್ ರೆಸಿಸ್ಟೆನ್ಸ್' ಎನ್ನುತ್ತೇವೆ.

3. ಗರ್ಭಾವಸ್ಥೆಯ ಮಧುಮೇಹ. ಇದು ಪ್ರಸವದ ನಂತರ ಸರಿಯಾಗುತ್ತದೆ. ಆದರೆ ಇವರು ಮುಂದೆಯೂ ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತವೆ.

ಮೊದಲನೆಯ ವಿಧದಲ್ಲಿ ಹೊರಗಿನಿಂದ ಇನ್ಸುಲಿನ್ ನೀಡಬೇಕಾಗುತ್ತದೆ. ಹಾಗಾಗಿ ಇನ್ಸುಲಿನ್ ಇಂಜೆಕ್ಷನ್‌ಗಳ ಬಳಕೆ. ಎರಡನೆಯದನ್ನು ಔಷಧಿಗಳಿಂದ ನಿಯಂತ್ರಿಸಬಹುದು. 2-5% ಗರ್ಭಿಣಿಯರಲ್ಲಿ ಈ ತೊಂದರೆ ಕಂಡುಬರಬಹುದು. ಅವರಲ್ಲಿ 20-25ರಷ್ಟು ಮಹಿಳೆಯರಲ್ಲಿ ತದನಂತರ ಕೂಡ ಮಧುಮೇಹ ಕಾಣಿಸಿಕೊಳ್ಳಬಹುದು.

ಇನ್ನು ಕೆಲವರನ್ನು 'ಪ್ರೀಡಯಾಬಿಟಿಕ್' ಎನ್ನಬಹುದು. ಇವರಲ್ಲಿ ರಕ್ತದ ಸಕ್ಕರೆಯಂಶ ನಿಯಮಿತ ಮಟ್ಟಕ್ಕಿಂತ ಹೆಚ್ಚಿದ್ದು, ಮಧುಮೇಹದ ಮಟ್ಟಕ್ಕಿಂತ ಕಡಿಮೆಯಿರುತ್ತದೆ.

ಮಧುಮೇಹಿಗಳು ಹಣ್ಣು ತಿನ್ನಬಹುದೇ?
ಮಧುಮೇಹಿಗಳು ಹಣ್ಣುಗಳನ್ನು ತಿನ್ನಲೇ ಬಾರದೆಂದಿಲ್ಲ. ಪ್ರತಿಯೊಂದು ಹಣ್ಣಿನ ಸಕ್ಕರೆ/ಸಿಹಿಯಂಶ ನೋಡಿ ತಿನ್ನುವುದು ಮುಖ್ಯ. ಅಲ್ಲದೇ ಹಣ್ಣಿನಲ್ಲಿರುವ 'ಫ್ರಕ್ಟೋಸ್' ಎಂಬ ಸಕ್ಕರೆಯು ಬೇರೆ ಆಹಾರದಂತೆ ರಕ್ತದಲ್ಲಿ ಒಮ್ಮೆಗೆ ಸಕರೆಯಂಶವನ್ನು ಹೆಚ್ಚಿಸುವುದಿಲ್ಲ. ಆದರೂ ಮಿತ ಪ್ರಮಾಣದಲ್ಲಿ ಹಣ್ಣುಗಳನ್ನೂ ಸೇವಿಸಬಹುದು. ಸಿಹಿ ಹೆಚ್ಚಿರುವ ಮಾವು, ಚಿಕ್ಕು, ದ್ರಾಕ್ಷಿ, ಕಿತ್ತಲೆಗಳಿಗಿಂತ, ಸಿಹಿ ಕಡಿಮೆಯಿರುವ ಮೂಸಂಬಿ, ಪಪ್ಪಾಯಿ, ಸೇಬು, ಪೇರಲೆ, ಕಲ್ಲಂಗಡಿ, ಕರಬೂಜ ಇತ್ಯಾದಿಗಳು ಸೂಕ್ತ. ಹಣ್ಣಿನ ರಸಕ್ಕಿಂತ ಇಡಿಹಣ್ಣಿನ ಬಳಕೆ ಉತ್ತಮ.
ಕಾರಣಗಳು
* ಟೈಪ್ 1 ಹೆಚ್ಚಾಗಿ ಅನುವಂಶೀಯವಾಗಿರುತ್ತದೆ.
* ಟೈಪ್ 2 ಅನುವಂಶೀಯದೊಂದಿಗೆ ಮುಖ್ಯವಾಗಿ ನಮ್ಮ ಆಹಾರ ಹಾಗೂ ಜೀವನಕ್ರಮದ ಮೇಲೆ ಅವಲಂಬಿಸಿದೆ.
* ಮುಖ್ಯವಾಗಿ ಸ್ಥೌಲ್ಯ (ಬೊಜ್ಜು), ದೈಹಿಕ ವ್ಯಾಯಾಮ ಅಥವಾ ಚಟುವಟಿಕೆಯಿಲ್ಲದಿರುವುದು, ಕಳಪೆ ಆಹಾರ ಸೇವನೆ, ಮಾನಸಿಕ ಒತ್ತಡ, ನಗರೀಕರಣ.
* ಅತಿಯಾಗಿ ಸಿಹೀಕರಿಸಿದ ಪಾನೀಯಗಳ ಸೇವನೆ, ಕರಿದ ಪದಾರ್ಥಗಳ ಸೇವನೆ, ಅತಿಯಾಗಿ ಪಾಲಿಷ್ ಆಗಿರುವ ಬಿಳಿ ಅನ್ನ, ಸಂಸ್ಕರಿಸಿದ ಮೈದಾ ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸುವುದು.
* ಇವಲ್ಲದೇ ಥೈರಾಯಿಡ್ ತೊಂದರೆಗಳು, ಮೇದೋಜೀರಕ ಗ್ರಂಥಿಯ ಊತ, ಅಥವಾ ಅದರ ಶಸ್ತ್ರನಿರ್ಹರಣ, ಅರ್ಬುದ ಇತ್ಯಾದಿಗಳಲ್ಲೂ ಮಧುಮೇಹ ಉಂಟಾಗುತ್ತದೆ.
* ಸ್ಟೀರಾಯಿಡ್ ಔಷಧಿ ಸೇವನೆ, ಥೈರಾಯಿಡ್ ಔಷಧಿಗಳು, ಉಬ್ಬಸ, ಅಲರ್ಜಿಗೆ ತೆಗೆದುಕೊಳ್ಳುವ ಕೆಲವು ಔಷಧಿಗಳು, ಕೊಲೆಸ್ಟ್ರಾಲ್ ಇಳಿಸುವ 'ಸ್ಟಾಟಿನ್'ಗಳು ಮಧುಮೇಹಕ್ಕೆ ಎಡೆ ಮಾಡಿಕೊಡಬಹುದು.

ಲಕ್ಷಣಗಳು
ಒಂದು ಜನಸಾಮಾನ್ಯ ತಪ್ಪು ಗ್ರಹಿಕೆಯೆಂದರೆ ಮಧುಮೇಹದ ಲಕ್ಷಣಗಳಾವುವೂ ಇಲ್ಲದಲ್ಲಿ ತನಗೆ ಮಧುಮೇಹವಿಲ್ಲ. ಇದು ತಪ್ಪು. ರೋಗದ ಲಕ್ಷಣ ಕಾಣುವ ಸಮಯಕ್ಕೆ ಸಕ್ಕರೆಯಂಶ ಬಹಳ ಹೆಚ್ಚಾಗಿರುವ ಸಾಧ್ಯತೆಯಿರುತ್ತದೆ. ಮುಖ್ಯವಾಗಿ ತೂಕದಲ್ಲಿ ಗಮನಾರ್ಹ ಇಳಿಕೆ, ಪದೇಪದೇ ಮೂತ್ರವಿಸರ್ಜನೆ, ಹೆಚ್ಚಿದ ಹಸಿವು ಹಾಗೂ ಬಾಯಾರಿಕೆ. ಟೈಪ್ 1ನಲ್ಲಿ ಇವುಗಳು ತ್ವರಿತಗತಿಯಲ್ಲಿ ಕಾಣಿಸಿಕೊಳ್ಳುತ್ತವೆ.

ಉದಾ: ವಾರದೊಳಗೆ. ಟೈಪ್ 2ರಲ್ಲಿ ನಿಧಾನವಾಗಿ ಅಥವಾ ಹೆಚ್ಚಾಗಿ ಯಾವುದೇ ಲಕ್ಷಣಗಳಿಲ್ಲದೇ ಕೂಡಾ ಆರಂಭವಾಗಬಹುದು. ಬಹಳ ದಿನದಿಂದಿರುವ ಹೆಚ್ಚಿದ ರಕ್ತದಲ್ಲಿನ ಸಕ್ಕರೆಯಂಶ ಕಣ್ಣಿನೊಳಗಿರುವ ಮಸೂರದಲ್ಲಿ ತೊಂದರೆಯುಂಟು ಮಾಡಿ ಕಣ್ಣು ಮಂಜಾಗಿಸುತ್ತದೆ. ಅಥವಾ ಚರ್ಮರೋಗಗಳನ್ನು ತಂದೊಡ್ಡುತ್ತದೆ. ಇವುಗಳೂ ಕೆಲವೊಮ್ಮೆ ಮಧುಮೇಹವನ್ನು ರೋಗಿಯಲ್ಲಿ ಗುರುತಿಸುವಲ್ಲಿ ಸಹಾಯ ಮಾಡುತ್ತವೆ.

ರಕ್ತದಲ್ಲಿನ ಸಕ್ಕರೆಯಂಶದ ಮಟ್ಟ: ಬರಿ ಹೊಟ್ಟೆಯಲ್ಲಿ 110ರ ಒಳಗಿರಬೇಕು, ಊಟದ ನಂತರ 140ರ ಒಳಗಿರಬೇಕು.

ಮಧುಮೇಹ ತಂದೊಡ್ಡುವ ತೊಂದರೆಗಳು
ಸಕ್ಕರೆ ಕಾಯಿಲೆಯಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವುದಕ್ಕಿಂತ ಮುಖ್ಯವಾದುದು ಅದು ಮುಂದೊಡ್ಡಬಹುದಾದಂತಹ ತೊಂದರೆಯನ್ನು ಗಮನಿಸುವುದು ಹಾಗೂ ತಕ್ಕ ಕ್ರಮ ಕೈಗೊಳ್ಳುವುದು. ಹೆಚ್ಚಿರುವ ಸಕ್ಕರೆಯಂಶದಿಂದ ದೇಹದ ಅನೇಕ ಮಹತ್ವದ ಅಂಗಾಂಗಳಾದ ಕಣ್ಣು, ನರಗಳು, ರಕ್ತನಾಳಗಳು, ಮೂತ್ರಕೋಶ, ಮೆದುಳು, ಜೀರ್ಣಾಂಗ, ಜನನಾಂಗಗಳು, ಮಾಂಸಪೇಶಿಗಳು ಇತ್ಯಾದಿಗಳು ತೊಂದರೆ ಅನುಭವಿಸುತ್ತವೆ.

ದುರಾದೃಷ್ಟವಶಾತ್ ಹೆಚ್ಚಾಗಿ, ಒಮ್ಮೆ ಅವುಗಳ ತೊಂದರೆ ಕಂಡು ಬಂದ ನಂತರ ಸಕ್ಕರೆಯಂಶವನ್ನು ನಿಯಂತ್ರಿಸಿದರೂ ಇವು ಸರಿಹೋಗುವುದಿಲ್ಲ. ಹಾಗಾಗಿ ಸಕ್ಕರೆಯಂಶವನ್ನ್ನು ನಿಯಂತ್ರಿಸುವತ್ತ ಸಂಪೂರ್ಣ ಪ್ರಯತ್ನ ನಡೆಸುವುದು ರೋಗಿ ಹಾಗೂ ವೈದ್ಯರ ಆದ್ಯ ಕರ್ತವ್ಯ. ಆರಂಭವಾದ 10-20 ವರ್ಷಗಳಲ್ಲಿ ಸಾಧಾರಣವಾಗಿ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ರೋಗ ನಿಯಂತ್ರಣದಿಲ್ಲದಿದ್ದಲ್ಲಿ ಇನ್ನೂ ಮೊದಲೇ ಕಾಣಿಸಬಹುದು.

ಮುಖ್ಯವಾದ ತೊಂದರೆಗಳು
* ರಕ್ತನಾಳಗಳು: ದೊಡ್ಡ ರಕ್ತನಾಳಗಳ ತೊಂದರೆ (ಮ್ಯಾಕ್ರೊ ಆಂಜಿಯೋಪತಿ)ಯಲ್ಲಿ ಹೃದಯದ ರಕ್ತನಾಳಗಳು, ಅಲ್ಲದೇ ಹೊರಮೈ ರಕ್ತನಾಳಗಳ ತೊಂದರೆ (ಕಾಲು ಕೈಯಲ್ಲಿರುವ) ಕಂಡು ಬರುತ್ತದೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು, ಕಾಲಿನಲ್ಲಿ ಹುಣ್ಣು ಕಾಣುವುದು. ಹಾಗೆಯೇ ಚಿಕ್ಕ ರಕ್ತನಾಳಗಳ ತೊಂದರೆಯಿಂದ ಅಕ್ಷಿಪಟಲದ ದೋಷದಿಂದ ಅಂಧತ್ವ ಬರಬಹುದು. ಮೂತ್ರಕೋಶದ ರಕ್ತನಾಳಗಳ ತೊಂದರೆಯಿಂದ ಮೂತ್ರಾಘಾತ ಉಂಟಾಗಬಹುದು.

* ನರಸಂಬಂಧೀ ತೊಂದರೆಗಳು (ನ್ಯೂರೋಪತಿ) ಇದರಿಂದ ಕಾಲು ಕೈಯ ಸಂವೇದನಾ ಶಕ್ತಿನಾಶವಾಗುತ್ತದೆ. ಜೋಮು ಹಿಡಿಯುವುದು, ನೋವು ಇತ್ಯಾದಿಗಳಿರುತ್ತವೆ. ರಕ್ತ ಮತ್ತು ನರದ ತೊಂದರೆಗಳಿಂದ ಅಂಗವಿಚ್ಛೇದ ಕೂಡ ಮಾಡಬೇಕಾಗಬಹುದು.

* ಅಲ್ಲದೇ ಮಾಂಸಪೇಶಿಗಳ ತೊಂದರೆಯಲ್ಲಿ ಸುಸ್ತು, ಮೈಕೈ ನೋವು, ಅಜೀರ್ಣ (ಜೀರ್ಣಾಂಗದ ಮಾಂಸಪೇಶಿಗಳ ದೌರ್ಬಲ್ಯ), ಮಲಬದ್ಧತೆ, ಕೃಶತ್ವ ಉಂಟಾಗುತ್ತದೆ.

ಚಿಕಿತ್ಸೆ
ಮಧುಮೇಹ ಗುಣಪಡಿಸಲಾಗದ ರೋಗವೆಂಬುದು ಮನದಟ್ಟಾಗಿಸಿಕೊಳ್ಳಬೇಕು. ಇದು ನಿಯಂತ್ರಿಸಬಲ್ಲ ವ್ಯಾಧಿ. ಆಯುರ್ವೇದದಲ್ಲಿ ಕೂಡ ಇದನ್ನು ಯಾಪ್ಯ ಅಥವಾ ನಿಯಂತ್ರಿಸಬಲ್ಲ ರೋಗವೆಂದೇ ಹೇಳಲಾಗಿದೆ. ಮುಖ್ಯವಾಗಿ ಆಹಾರ, ವ್ಯಾಯಾಮ ಹಾಗೂ ಔಷಧಿಗಳನ್ನು ಸೂಕ್ತವಾಗಿ ಉಪಯೋಗಿಸಬೇಕು. ಏನು ಬೇಕಾದರೂ ತಿನ್ನಿ, ಮಧುಮೇಹವನ್ನು ಗುಣಪಡಿಸುತ್ತೇವೆ ಎಂಬ ಸುಳ್ಳು ಜಾಹೀರಾತಿಗೆ ಬಲಿಯಾಗಬೇಡಿ.

ಆಹಾರ: ಸಿಹಿಯಾದ ಯಾವುದೇ ಪದಾರ್ಥ ವರ್ಜ್ಯ.  ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮಾಂಸ, ಮದ್ಯಸೇವನೆ ಕಡಿಮೆ ಮಾಡಬೇಕು. ಆಹಾರದಲ್ಲಿನ ಶರ್ಕರ ಪರಿವರ್ತನ ಮಾಪನ (ಗ್ಲೈಸೆಮಿಕ್ ಇಂಡೆಕ್ಸ್)ದ ಬಗ್ಗೆ ತಿಳಿದಿರುವುದು ಒಳ್ಳೆಯದು. ಪಾಲಿಷ್ ಅಕ್ಕಿಯಲ್ಲಿ ಇದು ಹೆಚ್ಚಿರುವುದರಿಂದ ಅದರ ಪ್ರಮಾಣ ಕಡಿಮೆಯಿರಲಿ. ಪಾಲಿಷ್ ಮಾಡದೇ ಇರುವ ಅಕ್ಕಿಯ ಬಳಕೆ ಸೂಕ್ತ. ರಾಗಿ, ಜೋಳ, ಇಡಿ ಗೋಧಿ, ಹುರುಳಿ, ಕಡಲೆಬೇಳೆ, ಇನ್ನಿತರ ಬೇಳೆಗಳಲ್ಲಿ ಇದು ಕಡಿಮೆಯಿದೆ. ಹಾಗಾಗಿ ಇವುಗಳನ್ನು ಮಿತವಾಗಿ ಬಳಸಬಹುದು. ಪಿಷ್ಟ ಪದಾರ್ಥ ಗಳಲ್ಲಿ, ಆಲೂಗಡ್ಡೆ, ಕಾರ್ನ್ ಫ್ಲೇಕ್ಸ್, ಸಂಸ್ಕರಿತ ಆಹಾರ ಮುಂತಾದುವುಗಳಲ್ಲಿ ಸಾಮಾನ್ಯವಾಗಿ ಇದರ ಪ್ರಮಾಣ ಹೆಚ್ಚಿರುತ್ತದೆ. ಇವುಗಳ ಬಳಕೆ ಕಡಿಮೆಯಿರಲಿ. ದೇಹದ ತೂಕ ಹತೋಟಿಯಲ್ಲಿಡಬೇಕು.

ವ್ಯಾಯಾಮ: ವ್ಯಾಯಾಮದಿಂದ ಹೆಚ್ಚಿರುವ ರಕ್ತದ ಸಕ್ಕರೆಯಂಶ ಕಡಿಮೆ ಮಾಡಬಹುದು. ದಿನಕ್ಕೆ 30ನಿಮಿಷದ ನಡಿಗೆ ಕೂಡಾ ರೋಗವನ್ನು ಹತೋಟಿಗೆ ತರಲು ಸಹಕಾರಿ. ಆಹಾರ ಮತ್ತು ವ್ಯಾಯಾಮದಲ್ಲಿ ಶ್ರದ್ಧೆವಹಿಸಿದಷ್ಟೂ ಔಷಧಿಯ ಅಗತ್ಯ ಕಡಿಮೆಯಾಗುತ್ತದೆ.

ಅಲ್ಲದೇ ಹಾಗಲಕಾಯಿ, ಮಧುನಾಶಿನಿ, ಕರಿಬೇವು, ಮೆಂತ್ಯ, ಅರಶಿನ, ವಿಜಯಸಾರ, ಏಕನಾಯಕನ ಬೇರು, ಜಂಬೂ ನೇರಳೆ ಬೀಜ, ನೆಲ್ಲಿಕಾಯಿ, ಖದಿರ, ಬೇವು ಇತ್ಯಾದಿಗಳಲ್ಲಿ ಸಕ್ಕರೆಯಂಶ ಕಡಿಮೆ ಮಾಡುವಂತಹ ಗುಣವನ್ನು ಸಂಶೋಧನೆಗಳಿಂದ ಕಂಡುಹಿಡಿದಿದ್ದಾರೆ. ಆಯುರ್ವೇದ ಔಷಧಿಗಳಿಂದ ಮಧುಮೇಹವನ್ನು ಉತ್ತಮವಾಗಿ ನಿಯಂತ್ರಿಸಬಹುದು. ಕತಕಖದಿರ ಕಷಾಯ, ಗ್ಲೂಕೊಸ್ಟಾಟ್, ನಿರೂರ್ಯಾದಿ, ಚಂದ್ರಪ್ರಭ, ನಿಶಾಮಲಕಿ ಮುಂತಾದ ಔಷಧಿಗಳು ಗುಣಕಾರಿ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023