Thursday, February 26, 2015

Feb 27: Chandrasekhar Azad BALIDAAN DINA: gull details here...


ಫೆಬ್ರುವರಿ ೨೭ ಆಜಾದ್ ಬಲಿದಾನ ದಿನ
ಆ ನೆನಪಿಗೆ ಈ ಲೇಖನ
ಮರೆತುಹೋದ ವೀರಪುರುಷನನ್ನು ನೆನೆಯೋಣ
ಅವರ ದಾರಿಯಲ್ಲಿ ಸಾಗೋಣ

🇮🇳"ಮೈ ಆಜಾದ್ ಹೂಂ… ಆಜಾದ್ ಹೀ ರಹೂಂಗಾ"🇮🇳

         ★ ಸ್ವಾತಂತ್ರ್ಯ ಅಂದರೆ ನಮಗೇನು ನೆನಪಾಗುತ್ತೋ ಗೊತ್ತಿಲ್ಲ ಆದರೆ "ಆಜಾದ್" ಅಂದೊಡನೆ ನೆನಪಾಗೋದು " ಚಂದ್ರಶೇಖರ ಆಜಾದ್" ಸ್ವಾತಂತ್ರ್ಯದ ಕನಸು ಕಂಡ ಈ ಅಪ್ರತಿಮ ವೀರ ತನ್ನ ಹೆಸರಲ್ಲೇ ಸ್ವತಂತ್ರ್ಯವನ್ನು ಜೋಡಿಸಿ ಬಿಟ್ಟ…ತನ್ನ ಹದಿನಾರನೆಯ ವಯಸ್ಸಿನಲ್ಲಿ , ಅಸಹಕಾರ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾಗ ತನ್ನ ನಾಯಕನ ಮೇಲಾದ ಪೋಲೀಸ್ ದೌರ್ಜನ್ಯವನ್ನು ಕಂಡು ಸಹಿಸಲಾಗದೇ… ಆ ಪೋಲಿಸನ ಮೇಲೆ ಕಲ್ಲೆಸೆದು ಅದರ ಪರಿಣಾಮವಾಗಿ ಹನ್ನೆರಡು ಛಡಿ ಏಟಿನ ಶಿಕ್ಷೆಗೆ ಗುರಿಯಾದ….

ಈ ಘಟನೆಯ ಬಗ್ಗೆ ತನಿಖೆ ಆಗುತ್ತಿದ್ದಾಗ ಈ ಹುಡುಗ ಕೋರ್ಟಿಗೆ ನೀಡಿದ ಉತ್ತರವೇ ಇವನ ದೇಶ ಭಕ್ತಿ ಗೆ ಸಾಕ್ಷಿ…

ಮ್ಯಾಜಿಸ್ಟ್ರೇಟ್ : ಹೌದೇನೋ ಆ ಪೋಲೀಸನನ್ನು ಕಲ್ಲಿನಿಂದ ಹೊಡೆದದ್ದು ನಿಜವೇನೋ..
ಬಾಲಕ : ಹೌದು, ಅದು ನಿಜ, ನಾನು ತಪ್ಪು ಮಾಡಿದೆನೆಂದು ಈಗ ನನಗನ್ನಿಸುತ್ತಿದೆ…

ತನ್ನ ತಪ್ಪಿನ ಅರಿವಾಗುತ್ತಿದೆ ಎಂದು ಎಣಿಸುತ್ತಿದ್ದ ಮ್ಯಾಜಿಸ್ಟ್ರೇಟ್ ಗೆ ನಿರಾಸೆ ಕಾದಿತ್ತು…

ಬಾಲಕ: ಕಲ್ಲಿನಿಂದ ಹೊಡೆಯಬಾರದಿತ್ತು… ಲಾಠಿಯಿಂದ ಅವನ ತಲೆ ಒಡೆದು ಹಾಕಬೇಕಿತ್ತು. ನಾವು ಅಹಿಂಸಾ ವಾದಿಗಳೆಂದು ತಿಳಿದೇ ಪೋಲೀಸರು ರಾಕ್ಷಸರಂತೆ ನಡೆದುಕೊಳ್ಲುತ್ತಿದ್ದಾರೆ. ನಮ್ಮ ಧ್ವಜಕ್ಕೆ ಅವಮಾನ ಮಾಡಿ ನಮ್ಮ ಪೂಜ್ಯ ನಾಯಕರನ್ನು ಸಾಯ ಬಡಿದ ಇವನನ್ನು ನನ್ನ ಕೈಯಲ್ಲಿ ಪಿಸ್ತೂಲು ಇದ್ದಿದ್ದರೆ ಅಲ್ಲಿಯೇ ಗುಂಡಿಟ್ಟು ಸುಟ್ಟು ಹಾಕುತ್ತಿದ್ದೆ..

ಕೋಪಗೊಂಡ ಮ್ಯಾಜಿಸ್ಟ್ರೇಟರು ಮುಂದುವರೆಸುತ್ತಾ ಕೇಳುತ್ತಾರೆ…

ಮ್ಯಾ: ಹೇಳು ಏನು ನಿನ್ನ ಹೆಸರು

ಬಾ: (ಗಟ್ಟಿಯಾಗಿ ಗರ್ಜಿಸಿದ ) " ಆಜಾದ್"

ಮ್ಯಾ: ನಿನ್ನ ತಂದೆಯ ಹೆಸರೇನು..?

ಬಾ: ಸ್ವಾಧೀನತೆ..

ಮ್ಯಾ: ಸರಿಯಾಗಿ ಬೊಗಳು ಎಲ್ಲಿ ನಿನ್ನ ಮನೆ..

ಬಾ: ನನ್ನ ಮನೆ ಸೆರೆಮನೆ..

ಮ್ಯಾ: ಏನು ನಿನ್ನ ಕೆಲಸ

ಬಾ: ಬ್ರಿಟಿಷರನ್ನು ಭಾರತದಿಂದ ಹೊರಗಟ್ಟುವುದು…

ಅಂದಿನಿಂದ ಚಂದ್ರಶೇಖರ ಶರ್ಮಾ … ಚಂದ್ರ ಶೇಖರ ಅಜಾದ್ ಆಗಿ ಹೋದ

ಹನ್ನೆರಡು ಛಡಿ ಏಟು ತಿಂದಾಗಲೂ ಈ ಎಳೆಯ ಆಜಾದ್ ನ ಕಣ್ನಲ್ಲಿ ರೋಷ ತುಂಬಿತ್ತು ವಿನಹಾ ಕಣ್ಣೀರು ಇರಲಿಲ್ಲ … ಇನ್ನಷ್ಟು ಏಟು ತಿನ್ನಲು ನಾ ಸಿದ್ಧ ಎಂದ…ಈ ಘಟನೆಯ ನಂತರ ಸಾರ್ವಜನಿಕವಾಗಿ ಆತನನ್ನು ಸನ್ಮಾನಿಸಿದಾಗ ಆತನ ಬಾಯಿಂದ ಹೊರ ಬಿದ್ದ ಮಾತುಗಳಾದರೂ ಎಂಥವು…

" ದುಶ್ಮನೋಂಕೀ ಗೋಲಿಯೋಂಕೋ ಮೈ ಸಾಮ್ನಾ ಕರೂಂಗಾ …. ಅಜಾದ್ ಹೀ ರಹೂಂಗಾ… ಮೈ ಅಜಾದ್ ಹೀ ಮರೂಂಗಾ…"

ಅಬ್ಬಾ ಹದಿನಾರನೆಯ ವಯಸ್ಸಿನಲ್ಲಿ ಅದೆಂತಾ ಪ್ರೌಢಿಮೆ… ಅದೆಂತಾ ದೇಶ ಭಕ್ತಿ…ಅಂದು ಜೈಲಿನಿಂದ ಹೊರ ಬಂದ ನಂತರ ತನ್ನಲ್ಲಿ ತಾನೆ ಮಾಡಿಕೊಂಡ ಪ್ರತಿಜ್ನೆ " ಇನ್ನೆಂದಿಗೂ ಪೋಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲ…

ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಅಜಾದ್… ಜಲಿಯನ್ ವಾಲ ಬಾಗ್ ದುರಂತದ ನಂತರ ನಿಧಾನವಾಗಿ ಕ್ರಾಂತಿಕಾರಿ ಯಾಗತೊಡಗಿದ. ಮಹಾನ್ ಕ್ರಾಂತಿಕಾರಿ ನಾಯಕ " ರಾಮ್ ಪ್ರಸಾದ್ ಬಿಸ್ಮಿಲ್" ಇವರ ಕೈಯಲ್ಲಿ ಪಳಗಿ ತನ್ನ ಗುರುವನ್ನೇ ಮೀರಿಸಿದ ಶಿಷ್ಯನಾದ ಬಗೆ ಅದ್ವಿತೀಯ…. ಆಜಾದ್ ಸಣ್ಣ ಪ್ರಾಯದಲ್ಲೇ ತನ್ನ ದೇಶಪ್ರೇಮದ ಕಂಪನ್ನು ಬೀರತೊಡಗಿದ್ದರು… ಮೊದಲಿಗೆ ಗಾಂಧಿಯ ಹಿಂಬಾಲಕರಾಗಿ ಕಾಂಗ್ರೆಸ್ ನ ಕಾರ್ಯಕರ್ತರಾಗಿದ್ದ ಇವರು , ಕಾಂಗ್ರೆಸ್ ಅನ್ನು ತೊರೆಯಲು ಕಾರಣವಾದದ್ದು ಗಾಂಧೀಜಿಯ ನಿಲುವು … ಚೌರಿ ಚೌರಾ ಎಂಬಲ್ಲಿ ನಡೆದ ಅಹಿತಕರ ಘಟನೆಗೆ, ಸಫಲತೆಯ ಹಾದಿ ಹಿಡಿದ ಅಸಹಕಾರ ಚಳುವಳಿಯನ್ನು ಗಾಂಧೀಜಿ ನಿಲ್ಲಿಸಿಬಿಟ್ಟದ್ದು… ಆಜಾದರಿಗೆ ತುಂಬಾ ನೋವು ತಂದಿತ್ತು… ಇನ್ನೊಂದು ಕಡೆಯಲ್ಲಿ ಜಲಿಯನ್ ವಾಲಾಭಾಗ್ ಘಟನೆ ಅವರೊಳಗಿನ ರೋಶವನ್ನು ಉಕ್ಕಿಸಿತ್ತು…ಮುಖ್ಯವಾಗಿ ಈ ಎರಡು ಘಟನೆಯೇ ಆಜಾದರನ್ನು ಕ್ರಾಂತಿಯ ಲೋಕಕ್ಕೆ ಸ್ವಾಗತಿಸಿದ್ದು…ಕೈ ಹಿಡಿದು ಕರಕೊಂಡು ಹೋದವರು ಮನ್ಮಥನಾಥ ಗುಪ್ತ ಅನ್ನೋ ಅವರ ಒಬ್ಬ ಸಹಪಾಠಿ..ಮುಂದಕ್ಕೆ ನಿಧಾನವಾಗಿ ಅಜಾದರಿಗೆ ಒಬ್ಬೊಬ್ಬರಾಗೇ ಕ್ರಾಂತಿಕಾರಿಗಳ ಪರಿಚಯವಾಗತೊಡಗಿತು…ರಾಜೇಂದ್ರ ಲಾಹಿರಿ, ಶಚೀಂದ್ರ ಬಕ್ಷಿ, ರಬೀಂದ್ರ ಮೋಹನ ಕರ್, ಜೋಗೇಶ್ ಚಂದ್ರ ಚಟರ್ಜಿ, ಗೋವಿಂದ ಚರಣ ಕರ್, ಕುಂದನ್ ಲಾಲ್, ಭಜರಂಗ್ ಬಲಿ ಗುಪ್ತ..ಹೀಗೆ …..ಮುಂದಕ್ಕೆ ಮಹಾನ್ ಕ್ರಾಂತಿಕಾರಿ ಗುರು…ರಾಮ್ ಪ್ರಸಾದ್ ಬಿಸ್ಮಿಲ್…ಮುಂದೆ ಈ ಬಿಸ್ಮಿಲ್ ಅವರೆ ಕ್ರಾಂತಿಕಾರಿಕಾರಿಗಳ ನಾಯಕರಾಗಿ ಕಾಕೋರಿಯಲ್ಲಿ ಸರಕಾರಿ ಖಜಾನೆ ಲೂಟಿ ಮಾಡಿದ್ದು…

ರಾಮ ಪ್ರಸಾದ್ ಬಿಸ್ಮಿಲ್ ಅವರ ಗರಡಿಯಲ್ಲೇ ಚಂದ್ರ ಶೇಖರ ಆಜಾದ್ ಅನ್ನೋ ಕ್ರಾಂತಿಕಾರಿ ದೇಶಭಕ್ತನೊಬ್ಬ ರೂಪುಗೊಂಡದ್ದು…ರಾಮ್ ಪ್ರಸಾದ್ ಬಿಸ್ಮಿಲ್ ಅವರೊಬ್ಬ ಅಪ್ಪಟ ಬ್ರಹ್ಮಾಚಾರಿ ಎಲ್ಲಾ ಮಹಿಳೆಯರನ್ನು ಜಗನ್ಮಾತೆಯಂತೆ ಕಾಣುತ್ತಿದ್ದರು… ಬಹುಶ ಇದೇ ಗುಣವನ್ನು ಅಜಾದ್ ಚಾಚು ತಪ್ಪದೆ ಪಾಲಿಸತೊಡಗಿದ್ದರು..ಅಜಾದರ ಬ್ರಹ್ಮಚರ್ಯಕ್ಕೆ ಕಳೆಕಟ್ಟುವಂಥಾ ಘಟನೆ ಅವರ ಜೀವನದಲ್ಲಿ ನಡೆದಿತ್ತು, ಹೆಚ್ಚಿನವರಿಗೆ ಈ ವಿಚಾರ ಗೊತ್ತಿರಲಿಕ್ಕಿಲ್ಲ…( ನನಗೂ ಅಜೇಯ ಓದಿದಾಗಲೇ ಗೊತ್ತಾಗಿದ್ದು…)

ಕಾಕೋರಿ ದರೋಡೆಯಾದ ಮೇಲೆ ಅಜಾದ್ ತಲೆ ಮರೆಸಿಕೊಳ್ಳುವ ಸಲುವಾಗಿ ಢಿಮರಾಪುರ್ ಅನ್ನೋ ಗ್ರಾಮದಲ್ಲಿ ಒಬ್ಬ ಸ್ವಾಮಿಯ ವೇಷದಲ್ಲಿ ನೆಲೆನಿಲ್ಲುತ್ತಾರೆ. ಆ ಊರಿನಲ್ಲಿ ಠಾಕೂರ್ ಮಲಖಾನ್ ಸಿಂಹ ಎಂಬ ಶ್ರೀಮಂತ ಜಮೀನ್ದಾರ ಇರುತ್ತಾನೆ ಮುಂದೆ ಅಜಾದರು ಬಹು ಹೊತ್ತು ಠಾಕೂರರ ಮನೆಯಲ್ಲೆ ಕಳೆಯ ತೊಡಗುತ್ತಾರೆ. ಸ್ವಾಮಿಯಾಗಿ ಆಜಾದರು ಎಷ್ಟೊಂದು ಪ್ರಸಿದ್ಧರಾಗುತ್ತಾರೆಂದರೆ ಆ ಊರಿನ ಎಲ್ಲರಿಗೂ ಅವರ ಮೇಲೆ ಅಪಾರ ನಂಬಿಕೆ.. ಇನ್ನೊಂದು ಊರಿಗೆ ತಮ್ಮ ಹೆಣ್ಣುಮಕ್ಕಳನ್ನು ಇವರೊಂದಿಗೆ ಕಳುಹಿಸಿಕೊಡಲು ಹಿಂದುಮುಂದು ನೋಡುತ್ತಿರಲಿಲ್ಲ… ಆಜಾದರೆಂದರೆ ಅಷ್ಟೊಂದು ವಿಶ್ವಾಸ… ಆಗಿನ ಕಾಲದ ಶ್ರೀಮಂತ ಹೆಂಗಸರೂ ಸ್ವೇಚ್ಛಾಚಾರಿಗಳಾಗಿದ್ದರು, ತಮ್ಮ ಎಲ್ಲಾ ಬಗೆಯ ಆಸೆಯನ್ನ ಪೂರೈಸಿಕೊಳ್ಳುವಂತರಾಗಿದ್ದರು.ಒಮ್ಮೆ ಮಲಖಾನ್ ಸಿಂಗರ ಮನೆಗೆ ನೆರೆಯ ಸಂಸ್ಥಾನದ ಒಬ್ಬ ಶ್ರೀಮಂತ ಹೆಂಗಸು ಬಂದಿದ್ದಳು. ತನ್ನ ಮನೆಯಲ್ಲಿ ನಡೆಯಲಿದ್ದ ಒಂದು ವಿವಾಹಕ್ಕೆ ಆಹ್ವಾನ ನೀಡಲು ಬಂದಿದ್ದಳು.ಈ ರಜಪೂತ ಹೆಂಗಸು ತನ್ನ ಗಂಡನನ್ನು ಕಳಕೊಂಡಿದ್ದಳು , ಸಣ್ಣ ಪ್ರಾಯದಲ್ಲೇ ಮದುವೆಯಾಗಿದ್ದರಿಂದ ಹೆಚ್ಚೇನೂ ಪ್ರಾಯವಾಗಿರಲಿಲ್ಲ.. ಮುವತ್ತು ಮೂವತೈದಾಗಿತ್ತು. ಬಹಳ ಹಠಮಾರಿ ಹೆಂಗಸು.. ತಾನು ಬಯಸಿದ್ದನ್ನು ಪಡೆದೇ ತೀರಬೇಕೆಂಬ ಛಲಗಾರ್ತಿ..ಹೀಗೆ ಅತಿಥಿಯಾಗಿ ಬಂದ ಈಕೆಗೆ ಠಾಕೂರರ ಮನೆಗೆ ಬರುತಿದ್ದ ಸ್ವಾಮಿ ವೇಷದ ಆಜಾದರ ಮೇಲೆ ಮನಸ್ಸಾಯಿತು ವ್ಯಾಯಾಮ ಮಾಡಿ ಬಲಿಷ್ಠಗೊಂಡಿದ್ದ ಅವರ ದೇಹವನ್ನು ಕಂಡಾಗ ಇವನನ್ನು ಹೇಗಾದರೂ ಪಡೆದೇ ತೀರಬೇಕೆಂಬ ಮನಸ್ಸಿನ ಹುಚ್ಚು ಆಸೆ ಹೆಚ್ಚಾಯಿತು.. ಆದರೆ ಅಜಾದರೋ ಅಖಂಡ ಬ್ರಹ್ಮಾಚಾರಿ…ಆ ಹೆಂಗಸು ಅಜಾದರನ್ನು ಮೋಹಗೊಳಿಸಲು ಅದೆಷ್ಟೇ ಪ್ರಯತ್ನಿಸಿದರೂ ಅಜಾದರನ್ನು ತನ್ನೆಡೆಗೆ ಸೆಳೆದುಕೊಳ್ಲಲಾಗಲಿಲ್ಲ…ಒಂದು ದಿನ ಠಾಕೂರ್ ಮಲಖಾನ್ ಸಿಂಗ್ ಮತ್ತು ಅವನ ಸಹೋದರರು ಕೆಲಸದ ಮೇಲೆ ಎರಡು ಮೂರು ದಿನ ಹೊರಹೋಗಬೇಕಾಗಿತ್ತು ಮನೆಯಲ್ಲಿ ಬರಿಯ ಹೆಂಗಸರೇ..ಹಾಗಾಗಿ ರಾತ್ರಿ ಹೊತ್ತಲ್ಲಿ ಮಲಗಲು ಅಜಾದರು ಬರುತ್ತಿದ್ದರು, ಮಲಗುತ್ತಿದ್ದುದು ಮನೆಯ ಬಿಸಿಲು ಮಾಳಿಗೆಯಲ್ಲಿ…ಇಂತಹದ್ದೇ ಸಮಯಕ್ಕೆ ಕಾದಿದ್ದ ಆ ಹೆಂಗಸು ಆ ದಿನ ಎಲ್ಲರೂ ಮಲಗಿದ ಮೇಲೆ ಮೆಲ್ಲನೆ ಮನೆಯ ಮಾಳಿಗೆಗೆ ಹೋದಳು.. ಅಷ್ಟು ಹೊತ್ತಲ್ಲಿ ಅಲ್ಲಿಗೆ ಬಂದ ಆಕೆಯನ್ನ ಕಾರಣ ಕೇಳತೊಡಗಿದರೆ ಆಕೆ ಉತ್ತರಿಸಲ್ಲಿಲ್ಲ ಆದರೆ ಆಕೆಯ ವರ್ತನೆಯನ್ನು ಕಂಡಾಗಲೇ ಆಜಾದರಿಗೆ ಅವಳ ಮನದಾಸೆ ಗೊತ್ತಾಗಿ ಹೋಯಿತು…ತಡಮಾಡದೆ ಆಜಾದರು ಹೇಳಿದರು "ನೋಡಿ ಇಷ್ಟು ಹೊತ್ತಲ್ಲಿ ನೀವು ಇಲ್ಲಿ ಬರುವುದು ಸರಿಯಲ್ಲ ಹೊರಟು ಹೋಗಿ" ಆದರೆ ಇವನನ್ನು ಪಡೆಯಲೇ ಬೇಕೆಂಬ ಹುಚ್ಚು ಹೆಚ್ಚಾಗಿದ್ದ ಆಕೆ ಎಲ್ಲಿ ಕೇಳುತ್ತಾಳೆ…ಅವಳು ಹೇಳುತ್ತಾಳೆ.. ನೋಡು ನೀನು ನನ್ನಿಂದ ತಪ್ಪಿಸಿಕೊಂಡು ಹೋಗಲಾರೆ… ನನ್ನ ಮಾತು ಕೇಳು ಇಲ್ಲವಾದಲ್ಲಿ ನಾನು ಬೊಬ್ಬಿಡುತ್ತೇನೆ .. ಜನರನ್ನು ಕರೆದು ನನ್ನ ಮಾನಭಂಗ ಮಾಡಲು ಪ್ರಯತ್ನಿಸಿದ ಎಂದು ಎಲ್ಲರಿಗೂ ಹೇಳಿ ನಿನ್ನ ಮಾನ ಹರಾಜು ಹಾಕುತ್ತೇನೆ ಅಂದು ಬಿಟ್ಟಳು…ಇಪ್ಪತ್ತು ವರ್ಷದ ಸನ್ಯಾಸಿ ಯುವಕ ತನ್ನ ಮಾತಿಗೆ ಸಮ್ಮತಿಸುತ್ತಾನೆ ಎಂದುಕೊಂಡಿದ್ದಳು…ಆತ ಬೇಗನೆ ಬಾಗಿಲು ತೆರೆದು ಹೊರಗೋಡುವ ಪ್ರಯತ್ನ ಮಾಡಿದ ಆದರೆ ಈಕೆ ಮೊದಲೇ ಇನ್ನೊಂದು ಬದಿಯಿಂದ ಚಿಲಕ ಹಾಕಿಸುವ ವ್ಯವಸ್ಥೆ ಮಾಡಿದ್ದಳು…ಇನ್ನದರೂ ನನ್ನ ಮಾತನ್ನ ಕೇಳಿಯಾನು ಎಂದುಕೊಂಡಿದ್ದ ಆಕೆ ತನ್ನ ಬಯಕೆ ಈಡೇರಿತು ಅಂತಾನೆ ತಿಳಿದುಕೊಂಡಿದ್ದಳು ಆದರೆ ಅಜಾದ್ ಸೋಲೊಪ್ಪಿಕೊಳ್ಳುವವನೇ… ಹಿಂದೆ ಮುಂದೆ ನೋಡದೆ ಮನೆಯ ಮಾಳಿಗೆಯಿಂದ ಧುಮುಕಿಯೇ ಬಿಟ್ಟ… ಒಂದೆರಡಲ್ಲ ಹದಿನೆಂಟರಿಂದ ಇಪ್ಪತ್ತು ಅಡಿ ಎತ್ತರದಿಂದ ಹಾರಿದ್ದ … ಕೇವಲ ತನ್ನ ಬ್ರಹ್ಮಚರ್ಯವ ಉಳಿಸುವ ಸಲುವಾಗಿ…ಎಂತಹಾ ಆತ್ಮ ನಿಗ್ರಹ…ಯಾರದರೂ ಎಡವುತ್ತಿದ್ದರು ಆದರೆ ತನ್ನ ಗುರು ಬಿಸ್ಮಿಲ್ ಅವರು ಹೇಳಿಕೊಟ್ಟ ಪಾಠ.. " ಮಾತೃವತ್ ಪರದಾರೇಷು" ಎಲ್ಲ ಸ್ತ್ರೀಯರೂ ತಾಯಂದಿರೇ ಎಂಬುದನ್ನು ಮರೆಯಲಿಲ್ಲ..ಇಷ್ಟೊಂದು ಕಠೋರ ನಿರ್ಧಾರ ಯಾತಕ್ಕಾಗಿ ಅಂದರೆ ಆತನ ಉತ್ತರ ಹೀಗಿತ್ತು…

"ಧ್ಯೇಯ ಜೀವಿಯಲ್ಲಿ ವಿಷಯಲಂಪಟತೆ ಇದ್ದಲ್ಲಿ ತನ್ನ ಆದರ್ಶಗಳನ್ನೆಲ್ಲ ಮೂಲೆಗೊತ್ತಿ ನೀಚ ಹಾಗೂ ಕ್ಷಣಿಕ ಸಮಾಧಾನ ನೀಡುವ ಭೋಗಗಳಿಗೆ ಬಲಿಬೀಳುತ್ತಾನೆ, ಅಂದೇ ಅವನ ಧ್ಯೇಯ ಜೀವನಕ್ಕೆ ತಿಲಾಂಜಲಿ . ತನ್ನ ಜೀವನದ ಗುರಿ, ಅನುಶಾಸನತೆ ಎಲ್ಲವನ್ನೂ ಕಳಕೊಂಡು ತನ್ನ ಸಂಸ್ಥೆಗೆ ಭಾರವಾಗುತ್ತಾನೆ" ಎಂತಹಾ ವಿಚಾರಧಾರೆ ಅಲ್ವ… ತಾಯಿ ಭಾರತಿಯ ದಾಸ್ಯದ ಸಂಕೋಲೆ ಮುರಿಯುವ ತನ್ನ ಮೂಲ ಗುರಿಯನ್ನು ಎಲ್ಲಿ ಮರೆತು ಹೋಗುತ್ತೇನೋ ಅನ್ನುವ ಕಾರಣಕ್ಕೆ ತನ್ನ ಎಲ್ಲಾ ದೈಹಿಕ ಕಾಮನೆಗಳನ್ನು ಮೆಟ್ಟಿ ನಿಂತಿದ್ದ ಅಜಾದ್…ತಾನು ತೊಡುವ ಬಟ್ಟೆಯ ಬಗ್ಗೆಯಾಗಲಿ… ತನ್ನ ಹೊಟ್ಟೆ ತುಂಬಿಸುವ ಕುರಿತು ಆಸಕ್ತಿ ಇರಲಿಲ್ಲ… ಅದೆಷ್ಟೋ ದಿನ ಬರಿಯ ನೆಲಗಡಲೆ ಮತ್ತು ನೀರು ಇವೇ ಅಜಾದರ ಮೃಷ್ಟಾನ್ನ ಭೋಜನವಾಗಿತ್ತಂತೆ… ಅವರಲ್ಲಿದ್ದುದು ಒಂದೇ ಹಸಿವು ತಾಯಿ ಭಾರತಿಯ ಸ್ವಾತಂತ್ರ್ಯ… ದೇಶಭಕ್ತಿಯ ಪರಾಕಾಷ್ಠೆ ಅಂದರೆ ಇದೇನಾ…… ಕಾಕೋರಿ ದರೋಡೆ ಆದ ನಂತರ ಬಿಸ್ಮಿಲ್ಲರು ಕಟ್ಟಿದ ಕ್ರಾಂತಿಕಾರಿ ಪಡೆ ಕ್ರಮೇಣ ಕರಗತೊಡಗಿತು. ಒಬ್ಬೊಬ್ಬರಾಗಿ ಸಿಕ್ಕಿಹಾಕತೊಡಗಿದರು…ಆದರೆ ಯಾರಿಗೂ ಸಿಕ್ಕಿ ಬೀಳದೆ ಇದ್ದದ್ದು ಅಜಾದ್ ಮಾತ್ರ…ತನ್ನ ಬಹುವಿಧದ ವೇಷ ಮತ್ತು ಚಾಣಾಕ್ಷತನದಿಂದ ಪೋಲ
ೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ… ತಮ್ಮನ್ನು ತಾವು ಬಚ್ಚಿಡುವ ನೆಪದಲ್ಲಿ ತನ್ನ ಮುಖ್ಯ ಕೆಲಸವನ್ನು ಆತ ಎಂದೂ ಮರೆತಿರಲಿಲ್ಲ, ಹೋದ ಹೋದಲ್ಲಿ ತಮ್ಮ ಸಂಘಟನೆಗಾಗಿ ಸದ್ದಿಲ್ಲದೆ ದುಡಿಯುತ್ತಿದ್ದ. ಯುವ ಪಡೆಯನ್ನು ಸಿದ್ಧಗೊಳಿಸುತ್ತಿದ್ದ…ಇಂತಹಾ ಸಮಯದಲ್ಲಿಯೇ ಮತ್ತೊಬ್ಬ ಕ್ರಾಂತಿಯ ಕಿಡಿ, ಪಂಜಾಬಿನ ಗಂಡುಗಲಿಯೊಡನೆ ಅಜಾದರ ಮಿಲನವಾಯಿತು… ರಾಮಾಯಣದಲ್ಲಿ ಶ್ರೀ ರಾಮ ಮತ್ತು ಹನುಮಂತನ ಮಿಲನದ ದೃಶ್ಯ ನನಗೇಕೋ ನೆನಪಾಗುತ್ತಿದೆ ಅಲ್ಲೂ ಒಂದು ಹೆಣ್ಣಿನ ರಕ್ಷೆ ಆಗಬೇಕಿತ್ತು ಇಲ್ಲೂ ಒಬ್ಬ ಹೆಣ್ಣಿನ ರಕ್ಷೆ… ಅದು ತಾಯಿ ಭಾರತಿ…

ಹಾಗೆ ನೋಡಿದರೆ ಈ ಇಬ್ಬರೂ ಬೆಳೆದು ಬಂದ ರೀತಿ ಬೇರೆ ಬೇರೆಯೆ ಆಗಿತ್ತು ಭಗತ್ ತಮ್ಮ ಓದು ಮತ್ತು ವೈಚಾರಿಕ ವಿಷಯದ ಮುಖಾಂತರ ಒಬ್ಬ ಹೋರಾಟಗಾರರಾಗಿ ಮೂಡಿ ಬಂದಿದ್ದರು ಆದರೆ ಅಜಾದ್ ಬರಿಯ ಹೋರಾಟದಿಂದಲೇ ತಮ್ಮನ್ನು ತಾವು ಗುರಿತಿಸಿಕೊಂಡಿದ್ದರು.. ಆದರೂ ಇಬ್ಬರೂ ಒಬ್ಬರೊನ್ನಬ್ಬರು ಬಹು ಬೇಗ ಅರ್ಥೈಸಿಕೊಳ್ಳುತ್ತಿದ್ದರು, ಯಾಕೆಂದರೆ ಇಬ್ಬರ ಪರಮ ಗುರಿ ಒಂದೆ… ಭಾರತ ಮಾತೆಯ ರಕ್ಷಣೆ…

ಇದೇ ಸಮಯದಲ್ಲಿ ಚದುರಿ ಹೋಗಿದ್ದ ಕ್ರಾಂತಿಕಾರಿಗಳೆಲ್ಲರೂ ಒಂದಾಗಿ ಹೋರಡುವ ಕಾರಣಕ್ಕಾಗಿ, ಹೊಸ ಸಂಘಟನೆ ರೂಪುಗೊಂಡಿತು … ಅದುವೇ " ಹಿಂದೂಸ್ಥಾನ್ ಸೋಷಲಿಸ್ಟ್ ರಿಪಬ್ಲಿಕನ್ ಆರ್ಮಿ " ಮತ್ತು ಈ ಗುಂಪಿನ ಪ್ರಧಾನ ದಂಡನಾಯಕನಾಗಿ ಎಲ್ಲರ ಒಕ್ಕೊರಲಿನಿಂದ ಆಯ್ಕೆ ಆದದ್ದು …. ಚಂದ್ರ ಶೇಖರ ಆಜಾದ್…

ಇದೇ ಸಂಧರ್ಭದಲ್ಲಿ ಬ್ರಿಟಿಷ್ ಸರ್ಕಾರ ಭಾರತದ ಸ್ಥಿತಿಗತಿಗಳನ್ನು ಪರಿಶೀಲಿಸಿ ಅದರ ನಂತರ ಕೆಲವು ತೀರ್ಮಾನ ಕೈಗೊಳ್ಳುವ ಬಗ್ಗೆ ಭಾರತದ ನಾಯಕರುಗಳಿಗೆ ತಿಳಿಸಿತು . ಇದು ಆ ಧೂರ್ತ ಸರ್ಕಾರದ ಮತ್ತೊಂದು ವಂಚನೆಯಾಗಿತ್ತು ಕಾರಣ ಈ ಪರಿಶೀಲನೆಗೆ ಬರೋ ಸಮಿತಿಯಲ್ಲಿ ಯಾವೊಬ್ಬ ಭಾರತೀಯ ನಾಯಕನೂ ಇರಲಿಲ್ಲ… ಆ ಸಮಿತಿ ಮುಖ್ಯಸ್ಥನಾಗಿ ಬಂದ್ದದ್ದು "ಸರ್ ಜಾನ್ ಸೈಮನ್ನ್"..ಆಂಗ್ಲರ ಈ ಕಪಟತನ ಭಾರತೀಯರನ್ನು ರೊಚ್ಚಿಗೆಬ್ಬಿಸಿತು..ಸೈಮನ್ನ್ ಭಾರತಕ್ಕೆ ಕಾಲಿಡುತ್ತಿದ್ದಂತೆಯೇ ಚಳುವಳಿಗಳು ಪ್ರಾರಂಭವಾದವು …ಎಲ್ಲೆಡೆಯೂ ಒಂದೇ ಧ್ವನಿ "ಸೈಮನ್ ಗೋ ಬ್ಯಾಕ್" ಇಂತಹದ್ದೇ ಒಂದು ಚಳುವಳಿಗೆ ಲಾಲಾಜೀ( ಲಾಲಾ ಲಜಪತ್ ರಾಯ್) ಮುಂದಾಳತ್ವ ವಹಿಸುವ ಸಲುವಾಗಿ ಬಂದಿದ್ದರು.ತಮ್ಮ ಇಳಿ ವಯಸ್ಸಿನಲ್ಲೂ ಹೋರಾಟದ ಕಿಚ್ಚನ್ನು ಪ್ರದರ್ಶಿಸಿದ್ದರು… ಆದರೆ ಅವರ ಪ್ರಾಯಕ್ಕೂ ಬೆಲೆಕೊಡದ ಸ್ಕಾಟ್ ಎಂಬ ಆಂಗ್ಲ ಅಧಿಕಾರಿ ಲಾಠಿ ಚಾರ್ಜ್ ಗೆ ಆದೇಶ ಕೊಟ್ಟೇ ಬಿಟ್ಟ… ಜೆ.ಪಿ. ಸ್ಯಾಂಡರ್ಸ್ ಎಂಬ ಮತ್ತೊಬ್ಬ ಉನ್ಮತ್ತ ಅಧಿಕಾರಿ ಲಾಲಾಜಿ ಮೇಲೆ ಪ್ರಹಾರ ಮಾಡಿಯೇ ಬಿಟ್ಟ… ಆತನ ಮಾರಣಾಂತಿಕ ಪೆಟ್ಟಿಗೆ ಲಾಲಾಜಿ ಎದೆಗೊಟ್ಟು ವೀರ ಮರಣವನ್ನು ಹೊಂದಿ ಅಮರರಾದರು… ಅವರ ಸಾವು ಎಲ್ಲ ಭಾರತೀಯರ ಕಣ್ಣಲ್ಲಿ ಕಣ್ಣೀರು ತರಿಸಿತ್ತು , ಆದರೆ ಕ್ರಾಂತಿಕಾರಿಗಳಲ್ಲಿ ….ರೋಷದ ಅಲೆಯನ್ನೇ ಎಬ್ಬಿಸಿತ್ತು ಅವರೆಲ್ಲರಲ್ಲೂ ಈಗ ಸೇಡಿನ ಜ್ವಾಲಾಮುಖಿ ಸ್ಪೋಟಿಸಿತ್ತು… ಅಜಾದರ ನಾಯಕತ್ವದಡಿ ದೊಡ್ದ ಯೋಜನೆಯೊಂದು ರೂಪುಗೊಂಡಿತು…ಡಿಸೆಂಬರ್ ೧೭ ಈ ಯೋಜನೆ ಕಾರ್ಯರೂಪಕ್ಕೆ ಬರುವುದರಲ್ಲಿತ್ತು…ಸಂಜೆ ಸ್ಕಾಟ್ ಠಾಣೆಯಿಂದ ಹೊರ ಬರುವಾಗ ಆತನನ್ನು ಗುಂಡಿಟ್ಟು ಕೊಲ್ಲಬೇಕು ಅನ್ನೋದು ಪ್ಲಾನ್ ಮಾಡಿದ್ದ ಯೋಜನೆಯಂತೆಯೇ ಎಲ್ಲರೂ ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಸ್ಥಳದಲ್ಲಿ ಹೊಂಚು ಹಾಕಿ ಕಾದಿದ್ದರು… ಸ್ಕಾಟ್ ತನ್ನ ಮೋಟಾರ್ ಸೈಕಲನ್ನು ಇಟ್ಟಿರುವ ಸ್ಥಳಕ್ಕೆ ಬಂದಾಗ ಗುಂಡಿಟ್ಟು ಕೊಲ್ಲಲು ಆತುರರಾಗಿದ್ದರು ರಾಜ್ ಗುರು ಮತ್ತು ಭಗತ್ ಸಿಂಗ್…… ಉಳಿದಂತೆ ಸುಖದೇವ್, ವಿಜಯಕುಮಾರ್, ಭಗವಾನ್ ದಾಸ್ ಇವೆರೆಲ್ಲರೂ ಸಹಾಯಕರು… ಇವೆರೆಲ್ಲರ ರಕ್ಷಣೆಯ ಜವಾಬ್ದಾರಿ ಅಜಾದನದು… ಆದರೆ ಅಷ್ಟರಲ್ಲಿ ಒಂದು ಬದಲಾವಣೆ ಆಗಿತ್ತು ನಿಜವಾದ ಬಲಿ ಸ್ಕಾಟ್ ನ ಬದಲಿಗೆ ಸಾಂಡರ್ಸ್ ಬಂದಿದ್ದ…ಆದರೆ ಅವನೇನೂ ಕಮ್ಮಿಯಲ್ಲ ತಾನೆ… ಆತ ಮೋಟಾರ್ ಸೈಕಲ್ಲಿನ ಮೇಲೆ ಕುಳಿತು ಹೊರಡುವಷ್ಟರಲ್ಲೇ ರಾಜ್ ಗುರು ಎದ್ದು ಬಂದು ಆತನ ಬಲಿ ತೆಗೆದುಕೊಂಡಿದ್ದ ಮತ್ತೆ ಭಗತ್ ಬಂದು ತನ್ನ ಕೈಯಲ್ಲಿದ್ದ ಬಂದೂಕಿನ ದಾಹವನ್ನು ತೀರಿಸಿದ. ಲಾಲಾಜಿಯ ಕೊಲೆಯ ಸೇಡು ತೀರಿಸಿದ್ದರು ಭಾರತದ ಯುವ ಕ್ರಾಂತಿಯ ಕುಡಿಗಳು…ಪೋಲೀಸ್ ಠಾಣೆಯ ಎದುರೆ ಆಂಗ್ಲ ಅಧಿಕಾರಿಯ ಕೊಲೆ ಮಾಡಿ ಎಲ್ಲರೂ ತಪ್ಪಿಸಿಕೊಂಡಿದ್ದರು.. ಕಾರಣ ಅಜಾದನ ಸುರಕ್ಷೆ… ತನ್ನ ಸಂಗಡಿಗರ ರಕ್ಷಣೆಯ ಸಲುವಾಗಿ ಚನ್ನನ್ ಸಿಂಗ್ ಅನ್ನೋ ಹೆಡ್ ಕಾನ್ಸ್ ಸ್ಟೇಬಲ್ ನನ್ನು ಅಜಾದ್ ಬಲಿ ತೆಗೆದುಕೊಂಡಿದ್ದ…ಎಲ್ಲರೂ ಸುಸೂತ್ರವಾಗಿ ಮರೆಯಾಗಿದ್ದರು…ಆ ಮೂಲಕ ಆಂಗ್ಲರ ಎದೆಯೊಳಗೆ ಭಯ ಮತ್ತು ನಡುಕದ ಬೀಜವನ್ನ ಬಿತ್ತಿದ್ದರು… ತನ್ನ ನಂಬಿಗಸ್ಥ ಪಡೆಯಲ್ಲಿನ ಸದಸ್ಯರು ಒಬ್ಬೊಬ್ಬರಾಗಿ ದೂರ ಸರಿದಂತೆ ಅಜಾದ್ ಒಬ್ಬಂಟಿಯಾಗತೊಡಗಿದ್ದರು … ಒಂದಷ್ಟು ಜನ ಸೆರೆವಾಸದಲ್ಲಿದ್ದರೆ ಇನ್ನೊಂದಷ್ಟು ಜನ ಭಾರತ ಮಾತೆಯ ಚರಣಗಳಿಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದರು …ತನ್ನ ಗೆಳೆಯರನ್ನು ಕಳೆದುಕೊಂಡಾಗ ಆಗುತ್ತಿದ್ದ ಬೇಸರ ಅವರನ್ನು ತಮ್ಮ ಗುರಿಯ ಮಾರ್ಗದಿಂದ ಹಿಂದೆ ಸರಿಯುವಂತೆ ಮಾಡಲಿಲ್ಲ .. ಅಜಾದರ ದೇಶಪ್ರೇಮದ ಉತ್ಕಟತೆಯೇ ಹಾಗಿತ್ತು. ಒಂದು ಕಡೆ ಆಂಗ್ಲರ ಪೋಲೀಸ್ ಪಡೆ ಅಜಾದರ ಬಂಧನಕ್ಕೆ ಹಗಲಿರುಳೆನ್ನದೇ ತುಡಿಯುತ್ತಿತ್ತು. ಅಜಾದರ ಬಳಿಯಲ್ಲೋ ನಂಬಿಗಸ್ಥರ ಪಡೆಯೇ ಇಲ್ಲ…. ಇದ್ದವರಲ್ಲಿ ಕೆಲವು ಜನ ಗೋ ಮುಖ ವ್ಯಾಘ್ರಗಳು…

ಆಗಿನ ಕಾಲಕ್ಕೆ ಅಜಾದರನ್ನು ಹಿಡಿದು ಕೊಟ್ಟವರಿಗೆ 30000 ರೂಪಾಯಿಗಳ ಬಹುಮಾನ ಘೋಷಿಸಿತ್ತು ಆಂಗ್ಲ ಸರ್ಕಾರ.. ಆಜಾದರ ಬಂಧನಕ್ಕಾಗಿ ವಿಶೇಷ ಪಡೆಯನ್ನೇ ರಚಿಸಿತ್ತು… ರಾಯ್ ಶಂಭುನಾಥ ಅನ್ನುವ ಗುಪ್ತಚರ ವಿಭಾಗದ ಸಬ್ ಇನ್ಸ್ ಪೆಕ್ಟರ್ ಗೆ ಅಜಾದರ ಬಂಧನದ ವಿಶೇಷ ಜವಾಬ್ದಾರಿ ಕೊಡಲಾಗಿತ್ತು. ಇವನ ಜೊತೆಗೆ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರು ಠೀಕಾರಾಮ್, ಮಹಮ್ಮದ್ ನಾಸಿರ್ ಖಾನ್, ನಾಟ್ ಬಾವರ್, ಠಾಕೂರ್ ವಿಶ್ವೇಶ್ವರ ಸಿಂಹ… ಈ ಗುಪ್ತಚರ ವಿಭಾಗ ಕೆಲಸ ಕಾರ್ಯಗಳಿಗಾಗಿ " ಸೀಕ್ರೆಟ್ ಸರ್ವೀಸ್ ಮನಿ" ಎಂಬ ಖಾತೆಯಲ್ಲಿ ಅಪಾರ ಹಣವಿರುತ್ತಂತೆ… ಇದರ ಬಳಕೆಯಾಗೋದು ಮಾಫೀ ಸಾಕ್ಷಿಗಳಿಂದ ರಹಸ್ಯ ತಿಳಿದುಕೊಳ್ಳುವ ಸಲುವಾಗಿ… ಈ ಹಣವನ್ನು ಉಪಯೋಗಿಸಿಕೊಂಡು ಇನ್ಸ್ ಪೆಕ್ಟರ್ ಶಂಭನಾಥ್ , ಅಜಾದ್ ಬಂಧನಕ್ಕೆ ಅಡಿಪಾಯ ಹಾಕತೊಡಗಿದ… ಅದಕ್ಕೆ ಬಳಸಿಕೊಂಡದ್ದು ವೀರಭದ್ರ ತಿವಾರಿ ಅನ್ನೋ ಗೋ ಮುಖವ್ಯಾಘ್ರನನ್ನು…ಆತನಿಗೆ ಅಜಾದರ ಬಗೆಗಿನ ಮಾಹಿತಿ ಕೊಡುವುದಕ್ಕಾಗಿಯೇ ತಿಂಗಳಿಗೆ 200 ರೂಪಾಯಿ ಕೊಡಲಾಗುತ್ತಿತ್ತು.

ತನ್ನ ಸುತ್ತ ಮುತ್ತ ಬಂಧನದ ಬಲೆ ಬೀಸತೊಡಗಿದ್ದಾರೆ ಅನ್ನೋದರ ಸುಳಿವು ಸಿಕ್ಕಿದ್ದರೂ ಅದರ ಕುರಿತು ಅಜಾದ್ ಗಮನ ಹರಿಸಲಿಲ್ಲ.. ಎಲ್ಲೋ ಮತ್ತೊಂದು ತಪ್ಪು ಮಾಡತೊಡಗಿದರು ಅನ್ನುವ ಹಾಗಿಲ್ಲ ಯಾಕೆಂದರೆ ಇಂತಹಾ ಪರಿಸ್ಥಿತಿಯಲ್ಲೂ ಅಜಾದ್ ಹೋರಾಟದ ಕುರಿತೇ ಯೋಚಿಸುತ್ತಿದ್ದರು… ತಮ್ಮ ಕ್ರಾಂತಿಕಾರಿಗಳಲ್ಲಿ ಕೆಲವರನ್ನು ರಷ್ಯಾಕ್ಕೆ ಕಳುಹಿಸಿ ಕ್ರಾಂತಿ ಕಾರಿ ಚಟುವಟಿಕೆಯಲ್ಲಿ ತರಬೇತಿ ಕೊಡಿಸಬೇಕು ಅನ್ನುವ ನಿಟ್ಟಿನಲ್ಲಿ ಕಾರ್ಯ ನಿರತರಾಗಿದ್ದರು ಹಣ ಹೊಂದಿಸುವುದರಲ್ಲಿ ತನ್ನ ಗಮನ ಹರಿಸಿದ್ದರು… ಹಾಗಾಗಿ ತಮ್ಮ ಸುತ್ತ ಬೆಳೆಯುತ್ತಿದ್ದ ವ್ಯೂಹ ಅವರ ಅರಿವಿಗೆ ಬರಲೇ ಇಲ್ಲವೇನೋ…

ಆದಿನ ಶುಕ್ರವಾರ …ಫೆಬ್ರವರಿ 27, 1931
ಯಶಪಾಲ್, ಸುರೇಂದ್ರ ಪಾಂಡೆಯರನ್ನು ರಷ್ಯಾಕ್ಕೆ ಕಳುಹಿಸುವ ಕುರಿತಾಗಿ ಮಾತನಾಡುವುದಿತ್ತು.. ಹಾಗಾಗಿ ಬೆಳಗ್ಗೆ ಬೇಗನೆ ಎದ್ದಿದ್ದರು… ರಷ್ಯಾದ ಯಾತ್ರೆಗಾಗಿ ಬೇಕಾದ ವಸ್ತುಗಳನ್ನು ಕೊಳ್ಳಲು ಯಶ್ಪಾಲ್ ಮತ್ತು ಸುರೇಂದ್ರ ಪೇಟೆಗೆ ಹೊರಡಲು ಅನುವಾಗುತ್ತಿದ್ದರು… ಅಷ್ಟರಲ್ಲೇ ಅಜಾದ್ ಕೂಡ ಹೊರಡತೊಡಗಿದ… ಬಿಗಿದ ಕಚ್ಚೆ ಪಂಚೆ, ಜುಬ್ಬಾ, ತೋಳಿಲ್ಲದ ಕೋಟು.. ಅದರೊಳಗೆ ಅವನ ಅತಿ ನಂಬುಗೆಯ ಪ್ರಾಣ ಸಂಗಾತಿ…ಅವನ ಗುಂಡಿಗೆಯ ರಕ್ಷಕ.. ಆತನ ಪಿಸ್ತೂಲು " ಬಮ್ ತುಲ್ ಬುಖಾರ್ "… ಅಮೇರಿಕಾದಲ್ಲಿ ತಯಾರಾದ 32 ಬೋರಿನ ಅಟೋಮ್ಯಾಟಿಕ್ ಕೋಲ್ಟ್ ಕ್ಯಾಲಿಬರ್ ಪಿಸ್ತೂಲು… ಯಶ್ಪಾಲ್ ಮತ್ತು ಸುರೇಂದ್ರ ರೊಡನೆ ನಾನು ಬರುತ್ತೇನೆ ಅಂದ ಅಜಾದ್… ಆದರೆ ಅಜಾದ್ ಹೋಗಲು ಯೋಚಿಸಿದ್ದು ಆಲ್ಫ್ರೆಡ್ ಪಾರ್ಕಿಗೆ. ಒಟ್ಟಿಗೆ ಹೆಜ್ಜೆ ಹಾಕಿದರೂ.. ಯಶ್ಪಾಲ್ ಮತ್ತು ಸುರೇಂದ್ರ ಪೇಟೆಗೆ ಹೋದರು. ಅಜಾದ್ ಆಲ್ಫ್ರೆಡ್ ಪಾರ್ಕಿನ ಸಮೀಪ ಬಂದರು ಅಲ್ಲಿ ಅವರನ್ನು ಕೂಡಿ ಕೊಂಡದ್ದು ಸುಖದೇವ ರಾಜ್… ಇಬ್ಬರೂ ಯಾವುದೋ ವಿಷಯದ ಬಗ್ಗೆ ಚರ್ಚಿಸುತ್ತಾ ಪಾರ್ಕಿನ ಸುತ್ತಾ ನಡೆಯಲಾರಂಭಿಸಿದರು…ದುರದೃಷ್ಟವಶಾತ್ ಈ ನಡಿಗೆ ದುಷ್ಟ ಗುಪ್ತಚರ ಕಂಗಳಿಗೆ ಕಾಣಿಸಿತ್ತು…ಆ ಗುಪ್ತಚರ ಓಡಿ ಹೋಗಿ ಠಾಕೂರ್ ವಿಶ್ವೇಶ್ವರ ಸಿಂಹ ರಿಗೆ ವಿಷಯ ತಿಳಿಸಿಯೇ ಬಿಟ್ಟ..ಇತ್ತ ಇನ್ನೊಬ್ಬ ಇವರ ಚಲನ ವಲನದ ಬಗ್ಗೆ ಗಮನವಿಟ್ಟಿದ್ದ … ವೀರಭದ್ರ ತಿವಾರಿ… ಅಕಸ್ಮಾತ್ ಆಗಿ ತಿವಾರಿ ಸುಖದೇವರಾಜ್ ಕಣ್ಣಿಗೆ ಕಾಣಿಸಿದ್ದ… ಅದನ್ನು ಆತ ಅಜಾದರಿಗೆ ತಿಳಿಸಿದ ಆದರೆ ಅವರು ಅದನ್ನು ಗಮನಿಸಲ್ಲಿಲ್ಲ… ತಿವಾರಿ ಓಡಿ ಹೋಗಿ ಶಂಭುನಾಥ್ ಬಳಿ ಅಜಾರ ಮಾಹಿತಿ ಕಕ್ಕಿ ಬಿಟ್ಟ… ಶಂಭುನಾಥ್ ಕೂಡಲೆ ಸದಾ ಸಿದ್ದವಾಗಿರುತ್ತಿದ್ದ ಪಡೆಗೆ ಕರೆ ಮಾಡಿದ…80 ಮಂದಿಯ ಪೋಲೀಸ್ ಪಡೆ ಪಾರ್ಕಿನೆಡೆ ದೌಡಾಯಿಸಿತ್ತು…
ಪಾರ್ಕಿನ ಬಳಿಗೆ ವಿಶ್ವೇಶ್ವರ ಸಿಂಹ, ಡಾಲ್ ಚಂದ್ ಕೂಡ ಆಗಮಿಸಿದರು ದೂರದಿಂದಲೇ ಅಜಾದರನ್ನು ಗುರುತಿಸತೊಡಗಿದರು … ಖಾತ್ರಿಯಾದೊಡನೆ ಡಾಲ್ ಚಂದ್ ರಿಗೆ ಅವರ ಮೇಲೆ ಕಣ್ಣಿಡಲು ಹೇಳಿದರು… ಡಾಲ್ ಚಂದ್ ಹಲ್ಲುಜ್ಜುವವನಂತೆ ನಟಿಸುತ್ತಾ ರಾಜ್- ಅಜಾದ್ ರನ್ನು ಗಮನಿಸುತ್ತಲೇ ಇದ್ದ ಸುಖದೇವ್ ರಾಜ್ ಗೆ ಈತನನ್ನು ಕಂಡಾಗ ಅದೇಕೋ ಅನುಮಾನವಾಯಿತು ಇದನ್ನು ಅಜಾದರ ಬಳಿ ಕೇಳಿದರೂ ಅಜಾದ್ ಇದಕ್ಕೆ ಮಹತ್ವ ಕೊಡದೆ ತಮ್ಮ ಯೋಜನೆಗಳ ಕುರಿತೇ ಆಲೋಚಿಸತೊಡಗಿದ್ದರು…ಎಂಥಾ ದುರಂತ ಅವರ ಕನಸುಗಳೇ ಅವರ ಮೃತ್ಯುವನ್ನು ಮರೆಮಾಚಿತ್ತು…ಇಬ್ಬರೂ ಸಾಗಿ ನೇರಳೆ ಮರವೊಂದರ ಕೆಳಗೆ ಕುಳಿತರು… ಇತ್ತ ಇವರ ಸುತ್ತಾ ಪೋಲೀಸ್ ಪಡೆ ಆವರಿಸತೊಡಗಿತು…ವಿಶ್ವೇಶ್ವರ ಸಿಂಹ ತನ್ನ ಪಿಸ್ತೂಲು ಹಿಡಿದು ಪಾರ್ಕಿನ ಒಳಗಡೆ ನುಗ್ಗಲು ಹವಣಿಸುತ್ತಿದ್ದ…ಇನ್ನಷ್ಟು ಜನ ಪೋಲೀಸರ ಆಗಮನವಾಗತೊಡಗಿತು… ರಾಯ್ ಸಾಹೆಬ್ ಚೌಧುರಿ ಬಿಹಾಲ್ ಸಿಂಹ, ಜಿಲ್ಲಾಧಿಕಾರಿ ಮಮ್ ಫೋರ್ಡ್… ನಟ್ ಬಾವರ್ ತನ್ನ ಕಾರಿನಲ್ಲಿ ಪಾರ್ಕ್ ಪ್ರವೇಶಿಸಿದ… ಇಲ್ಲಾದರೂ ಆಜಾದ್ ಎಚ್ಚೆತ್ತುಕೊಳ್ಳಬಹುದಿತ್ತು , ಆದರೆ ಅಜಾದ್ ತಲೆಯ ತುಂಬಾ… ಕ್ರಾಂತಿ ಕ್ರಾಂತಿ ಅಷ್ಟೇ… ಅಜಾದ್ ಕುಳಿತಿದ್ದ ಸ್ಥಳಕ್ಕೆ ಸುಮಾರು ಹತ್ತು ಗಜ ದೂರದಲ್ಲಿ ನಾಟ್ ಬಾವರನ ಕಾರು ನಿಂತಿತು.. ಕಾರಿನಿಂದ ಇಳಿದವನೆ ಮಿಂಚಿನ ಗತಿಯಲ್ಲಿ " ಯಾರು ನೀವು..?" ಅನ್ನುತ್ತಾ ಟ್ರಿಗ್ಗರ್ ಒತ್ತಿಬಿಟ್ಟ… ಬೆಂಕಿಯುಗುಳುತ್ತಾ ಹೊರಟ ಗುಂಡು ಅಜಾದರ ಬಲತೊಡೆಯನ್ನು ಹೊಕ್ಕಿತ್ತು… ಈ ಅಪ್ರತಿಮ ಹೋರಾಟಗಾರ ತತ್ತರಿಸಿದ್ದು ಬರಿಯ ಒಂದೆರಡು ಕ್ಷಣ ಮಾತ್ರ… ರಕ್ತ ಹರಿಯುತ್ತಿದ್ದರೂ ಛಂಗನೆ ಎದ್ದು … ನಾಟ್ ಬಾವರ ತೋಳಿಗೆ ಗುರಿ ಇಟ್ಟ… ಅಂತಹಾ ಕ್ಷಣದಲ್ಲೂ ಅಜಾದರ ಗುರಿ ತಪ್ಪಲಿಲ್ಲ… ಗುಂಡು ನಾಟ್ ಬಾವರನ ಬಲತೋಳನ್ನು ಹೊಕ್ಕಿತು … ಗಾಬರಿ ಗೊಂಡ ಆತ ತನ್ನ ಕಾರಿನೆಡೆಗೆ ಓಡತೊಡಗಿದ… ಅಜಾದರ ಎರಡನೇ ಗುಂಡು ಕಾರಿನ ಚಕ್ರದೆಡೆ.. ಅದೂ ಗುರಿ ತಲುಪಿತ್ತು…ನಾಟ್ ಬಾವರ್ ದಿಕ್ಕೆಟ್ಟು ಹತ್ತಿರದ ಮರದ ಮರೆಗೆ ಓಡಿದ…ಅತ್ತ ವಿಶ್ವೇಶ್ವರ ಸಿಂಹ ಮಲಗಿ ಅಜಾದರೆಡೆ ಗುಂಡು ಹಾರಿಸಿದ ಅದು ಅಜಾದರ ಬಲತೋಳಿನೊಳಕ್ಕೆ ಹೋಯಿತು…ಕೂಡಲೇ ಪಿಸ್ತೂಲು ಎಡಕೈಗೆ ಬಂದಿತು… ಹೋರಾಡುವ ಕೆಚ್ಚಿದ್ದರೂ ಆಜಾದ್ ಸುತ್ತುವರಿಯಲ್ಪಟ್ಟಿದ್ದರು 40 ಜನ ಬಂದೂಕುಧಾರಿಗಳು… ಗುರಿ ಇಟ್ಟು ಕಾದಿದ್ದರು.. ಅಜಾದ್ ಹತ್ತಿರದ ನೇರಳೇ ಮರದ ಮರೆಯನ್ನಾಶ್ರಯಿಸಲು ಹೊರಟರು ಆಗ ಅವರಿಗೆ ಕಂಡದ್ದು ತನ್ನ ಹಳೆಯ ವೈರಿ ವಿಶ್ವೇಶ್ವರ ಸಿಂಹ… ಅಜಾದರ ಪಿಸ್ತೂಲಿನಿಂದ ಮತ್ತೊಂದು ಗುಂಡು ಸಿಡಿಯಿತು ಅದು ನೇರ ಹೋಗಿ ವಿಶ್ವೇಶ್ವರ ಸಿಂಹನ ದವಡೆಯನ್ನು ಹೊಕ್ಕಿತ್ತು… ಕಿರುಚುತ್ತಾ ಆತ ದೂರ ಓಡತೊಡಗಿದ…ಆ ಕ್ಷಣ ಆಜಾದರ ರಕ್ಷಣೆಗೆ ಇದ್ದದ್ದು ನೇರಳೆ ಮರ ಮಾತ್ರ ಮತ್ತೆ ಎಲ್ಲ ಕಡೆ ಪೋಲೀಸರು ನಿಂತಿದ್ದರು.ಮರದ ಮರೆಯಲ್ಲಿ ಸುಖದೇವ್ ರಾಜ್ ಮತ್ತು ಅಜಾದ್ ಗುಂಡು ಹಾರಿಸತೊಡಗಿದರು ಇತ್ತ ಪೋಲೀಸ್ ಪಡೆ ಮೆಲ್ಲ ಮೆಲ್ಲನೆ ಮುಂದುವರಿಯುತ್ತಿತ್ತು… ಇಂತಹಾ ಕ್ಷಣದಲ್ಲೂ ಅಜಾದ್ ತನ್ನ ಸ್ನೇಹಿತನ ಪ್ರಾಣ ರಕ್ಷಣೆಯ ಕುರಿತಾಗಿ ಯೋಚಿಸಿ ಸುಖದೇವರಾಜ್ ಅನ್ನು ದೇಶ ಸೇವೆ ಮುಂದುವರಿಸಿ ಅನ್ನುತ್ತಾ ಒತ್ತಾಯಪೂರ್ವಕವಾಗಿ ಕಳುಹಿಸಿದ…. ಈಗ ಅಜಾದ್ ಒಬ್ಬಂಟಿ… ಆದರೆ ಹೋರಾಟ ಕಂಡರೆ ಪೂರ್ತಿ ಸೈನ್ಯವೇ ಹೋರಾಡಿದಂತಿತ್ತು…ಪೋಲೀಸರ ಕಡೆ ಬಿಟ್ಟ ಪ್ರತಿಯೊಂದು ಗುಂಡಿನ ಲೆಕ್ಕಾಚಾರ ಅಜಾದನ ಬಳಿ ಇತ್ತು ಕೊನೆಯ ಗುಂಡು ಆತನಿಗೆ ಆತನ ಪ್ರತಿಜ್ನೆಯನ್ನು ನೆನಪಿಸಿತು …" ಇನ್ನೆಂದೂ ಪೋಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲ"… ಮತ್ತಿನ್ನೇನು ಶತ್ರುಗಳ ಕಡೆ ಮುಖ ಮಾಡಿದ್ದ ಪಿಸ್ತೂಲು ಮೆಲ್ಲನೆ ಆತನ ತಲೆಯ ಬಳಿ ಹೋಯಿತು… ಕ್ಷಣಾರ್ಧದಲ್ಲಿ ಅದರೊಳಗಿನ ಗುಂಡು "ಢಂ" ಎಂದು ಅವರ ತಲೆಯನ್ನು ಭೇದಿಸಿತು. ಮೈ ಅಜಾದ್ ಹೂಂ ಔರ್ ಅಜಾದ್ ಹೀ ರಹೂಂಗಾ ಅನ್ನುತ್ತಿದ್ದ ಅಜಾದ್…. ಅಜಾದ್ ಆಗಿ ಹೋದ… ಅಜಾದ್ ತಾಯಿ ಭಾರತಿಗೆ ತನ್ನ ಪ್ರಾಣದಾರತಿಯನ್ನು ಬೆಳಗಿದರು. ಆಂಗ್ಲರನ್ನು ಕಾಡುತ್ತಿದ್ದ ಕ್ರಾಂತಿಕಾರಿಯೊಬ್ಬ ಅಸುನೀಗಿದ್ದ… ಆದರೆ ಆಂಗ್ಲರಿಗೆ ಅಜಾದರ ಶವದ ಮೇಲೂ ಭಯ … ಸಾವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅಜಾದ್ ಶವದ ಮೇಲೂ ಗುಂಡು ಹಾರಿಸಿದ್ದರಂತೆ… ಇಡಿಯ ಸ್ವಾತಂತ್ರ್ಯ ಹೋರಾಟಗಾರರಲ್ಲೇ ಅಜಾದ್ ವಿಶಿಷ್ಟ ವ್ಯಕ್ತಿ… ಜೀವನವಿಡೀ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಮಾತು ಉಳಿಸುವ ಸಲುವಾಗಿ ಅತ್ಮಾರ್ಪಣೆ ಮಾಡಿದ ಇನ್ನೊಬ್ಬ ಹೋರಾಟಗಾರ ನನ್ನ ದೃಷ್ಟಿಗೆ ಇನ್ನೂ ಬಿದ್ದಿಲ್ಲ, ಭಾರತ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಅಜಾದ್ ಅವರ ಜೀವನಗಾಥೆ ನೋಡುವಾಗ ನನ್ನ ಕಣ್ಣಿಗೆ ಅದೇಕೋ ಭೀಷ್ಮ ಪಿತಾಮಹ ಕಂಡರು… ಆತನೂ ಅಖಂಡ ಬ್ರಹ್ಮಾಚಾರಿ ಈತನೂ ಅಖಂಡ ಬ್ರಹ್ಮಾಚಾರಿ… ಆತನೂ ತನ್ನ ಮಾತನ್ನು ಉಳಿಸಿಕೊಂಡಾತ ಈತನು ಮಾತನ್ನು ಉಳಿಸಿಕೊಂಡಾತ ಇಬ್ಬರೂ ಅಪ್ರತಿಮ ಹೋರಾಟಗಾರರು… ಭೀಷ್ಮ ತನ್ನ ವಂಶದ ಒಳಿತಿಗಾಗಿ ಜೀವನ ತೇದ… ಆದರೆ ಅಜಾದನ ಜೀವನದ ಕ್ಷಣಕ್ಷಣವೂ ತಾಯಿ ಭಾರತಿಯ ಪಾಲಿಗೇ ಮೀಸಲು…

ಇಂತಹಾ ಮಹಾನ್ ಚೇತನದ ಜೀವನಗಾಥೆ ಓದಿ ಮುಗಿಸಿದಾಗ ನನ್ನ ಕಣ್ಣು ತೇವಗೊಂಡಿತ್ತು…ಎದೆ ಉಬ್ಬಿ ನಿಂತಿತ್ತು… ಅಜೇಯ ಅನ್ನೋ ಅಜಾದರ ಜೀವನಗಾಥೆಯ ಸಾಗರದಿಂದ ನಾನು ನಿಮಗೆ ಉಣಬಡಿಸಿದ್ದು ನನ್ನ ಬೊಗಸೆಯೊಳಗೆ ಬಂದದ್ದನ್ನು ಮಾತ್ರ.ನನ್ನದೇ ವಾಕ್ಯಗಳು ರುಚಿಸದೇ ಇರಬಹುದು ನಿಜವಾದ ರುಚಿ ಸಿಗಬೇಕಾದರೆ ಬಾಬು ಕೃಷ್ಣಮೂರ್ತಿಯವರ " ಅಜೇಯ " ಓದಿ…. ನಾನು ಬರೆದುದನೆಲ್ಲ ಪ್ರೀತಿಯಿಂದ ಓದಿ ಆರು ಭಾಗಗ ಳಷ್ಟು ಬರೆಯೋಕೆ ಸ್ಪೂರ್ತಿ ನೀಡಿದ ಎಲ್ಲರಿಗೂ ವಂದನೆಗಳು…

ಕ್ರಾಂತಿಕಾರಿ ಅಜಾದ್ ಅಮರ್ ರಹೇ…

🇮🇳ಬೋಲೋ ಭಾರತ್ ಮಾತಾಕಿ ಜೈ🇮🇳
🇮🇳ಚಂದ್ರಶೇಖರ್ ಆಜಾದ್ ಜೀ ಕಿ ಜೈ🇮🇳
📚ಸಂಗ್ರಹ : ಗೌಡ್ರು