Omprakash will be New DGP of K,taka, he will take charge on 28/2/15

ಓಂಪ್ರಕಾಶ್‌ಗೆ ಡಿಜಿಪಿ ಕಿರೀಟ

ಬೆಂಗಳೂರು, ಫೆ. ೨೬- ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ-ಐಜಿಪಿ)ರಾಗಿ ಗೃಹ ರಕ್ಷಕದಳ ಹಾಗೂ ಅಗ್ನಿಶಾಮಕದ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರು ನೇಮಕವಾಗಲಿದ್ದಾರೆ.

ಲಾಲ್ ರುಕುಂ ಪಚಾವೋ ಅವರು ಇದೇ ಫೆ.28 ರಂದು ನಿವೃತ್ತರಾಗಲಿದ್ದು, ಅಂದು ಓಂಪ್ರಕಾಶ್ ಅವರು ನೂತನ ಡಿಜಿಪಿ-ಐಜಿಪಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಾಜ್ಯದ ಡಿಜಿಪಿ-ಐಜಿಪಿ ಹುದ್ದೆಗೆ ಐಪಿಎಸ್ ಅಧಿಕಾರಿಗಳ ಸೇವಾಹಿರಿತನದಲ್ಲಿ ಮೊದಲಿಗರಾಗಿರುವ ಸುಶಾಂತ್ ಮಹಾಪಾತ್ರ ಹಾಗೂ ಎರಡನೆಯವರಾಗಿರುವ ರೂಪಕ್ ಕುಮಾರ್ ದತ್ತ ಅವರನ್ನು ನೇಮಿಸಲು ಕಾನೂನಿನ ತೊಡಕು ಎದುರಾಗಿದ್ದರಿಂದ ಯಾವುದೇ ವಿವಾದಕ್ಕೆ ಒಳಗಾಗದ ದಕ್ಷ ಅಧಿಕಾರಿ ಓಂಪ್ರಕಾಶ್ ಅವರನ್ನು ನೇಮಿಸಲು ಸರ್ಕಾರ ತೀರ್ಮಾನಿಸಿದೆ.

ಸಿಬಿಐನ ಜಂಟಿ ಪೊಲೀಸ್ ಮಹಾನಿರ್ದೇಶಕರಾಗಿರುವ ರೂಪಕ್ ಕುಮಾರ್ ದತ್ತ ಅವರನ್ನು ಡಿಜಿಪಿ-ಐಜಿಪಿಯಾಗಿ ನೇಮಿಸಲು ಸರ್ಕಾರ ಒಲವು ತೋರಿತ್ತು.

ಆದರೆ, ಸರ್ಕಾರದ ಅನುಮತಿ ಪಡೆಯದೇ ಕಾನೂನು ಪರೀಕ್ಷೆ ಬರೆದ ಹಾಗೂ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಮನೆ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ನೋಟೀಸಿನಿಂದ ಕಾನೂನು ತೊಡಕು ದತ್ತ ಅವರ ನೇಮಕಕ್ಕೆ ಎದುರಾಗಿದ್ದರಿಂದ ಕಾನೂನು ತಜ್ಞರ ಜೊತೆ ಸರ್ಕಾರ ಚರ್ಚಿಸಿತು.ದತ್ತ ಅವರನ್ನು ನೇಮಿಸಿದರೆ ಕಾನೂನಿನ ತೊಂದರೆ ಎದುರಿಸಬೇಕಾಗುತ್ತದೆ ಎನ್ನುವ ಸಲಹೆಯನ್ನು ಕಾನೂನು ತಜ್ಞರು ನೀಡಿದ್ದರಿಂದ ಎಚ್ಚೆತ್ತ ಸರ್ಕಾರ ಓಂಪ್ರಕಾಶ್ ಅವರನ್ನು ನೇಮಿಸಲು ಮುಂದಾಯಿತು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಸೇವಾಹಿರಿತನದಲ್ಲಿ ಮೊದಲಿಗರಾಗಿರುವ ಸುಶಾಂತ್ ಮಹಾಪಾತ್ರ ಅವರು ನ್ಯಾಯಾಲಯದ ಮೊರೆ ಹೋದರೆ ಅವರ ಮೇಲೆ ಲೋಕಾಯುಕ್ತದಲ್ಲಿರುವ ವೀಸಾ ಪ್ರಕರಣದ ದೂರು ಮುಂದಿಟ್ಟುಕೊಂಡು ಎದುರಿಸಬಹುದು ಎನ್ನುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಏಕೆಂದರೆ ಮೊದಲಿನಿಂದಲೂ ಸುಶಾಂತ್ ಮಹಾಪಾತ್ರ ಅವರನ್ನು ಡಿಜಿಪಿ-ಐಜಿಪಿ ಹುದ್ದೆಗೆ ತರಲು ಸರ್ಕಾರಕ್ಕೆ ಇಷ್ಟವಿರಲಿಲ್ಲ. ಇವೆಲ್ಲದರ ಲಾಭ ಪಡೆದ ಓಂಪ್ರಕಾಶ್ ಅವರು ನೂತನ ಡಿಜಿಪಿ-ಐಜಿಪಿಯಾಗಿ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ಅಂದ ಹಾಗೆ ಓಂಪ್ರಕಾಶ್ ಅವರ ಸೇವಾವಧಿ ಬರುವ 2017ರ ಜನವರಿ 31ಕ್ಕೆ ಕೊನೆಗೊಳ್ಳಲಿದೆ.

ಓಂಪ್ರಕಾಶ್ ಪರಿಚಯ

ದಕ್ಷ ಅಧಿಕಾರಿ ಎನ್ನುವ ಹೆಸರು ಪಡೆದಿರುವ ಓಂಪ್ರಕಾಶ್ ಅವರು ಬಿಹಾರದ ಚಂಪಾರಣ್ಯ ಜಿಲ್ಲೆಯ ತಿಪ್ರಾಸಿ ಗ್ರಾಮದವರು. ಬನಾರಸ್ ವಿವಿಯಲ್ಲಿ ಎಂಎಸ್ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದು ಪೂರೈಸಿದವರು. ವಿದ್ಯಾಭ್ಯಾಸದ ವೇಳೆ ಹಲವು ಪದಕ, ಪ್ರಶಸ್ತಿಗಳನ್ನು ಪಡೆದು 1981 ರಲ್ಲಿ ಐಪಿಎಸ್ ಪೊರೈಸಿ ಕರ್ನಾಟಕ ಕೇಡರ್‌ಗೆ ನೇಮಕಗೊಂಡರು.

ಹರಪನಹಳ್ಳಿ ಉಡುಪಿಯಲ್ಲಿ ಎಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ ಅವರು ಚಿಕ್ಕಮಗಳೂರು, ಶಿವಮೊಗ್ಗ, ಕಾರವಾರದಲ್ಲಿ ಎಸ್‌ಪಿಯಾಗಿ ಕಾರ್ಯ ನಿರ್ವಹಿಸಿದರು. ಬಾಬ್ರಿಮಸೀದಿ ಧ್ವಂಸದ ವೇಳೆ ಶಿವಮೊಗ್ಗದ ಎಸ್‌ಪಿಯಾಗಿದ್ದ ಓಂಪ್ರಕಾಶ್ ಅವರು ಇಡೀ ಜಿಲ್ಲೆಯ ಯಾವುದೇ ಭಾಗದಲ್ಲಿ ಕೋಮುಗಲಭೆಯಾಗದಂತೆ ನೋಡಿಕೊಂಡ ಹೆಗ್ಗಳಿಕೆ ಅವರದು.

ಭಟ್ಕಳದಲ್ಲಿ 1990 ರಲ್ಲಿ ನಡೆದ ಕೋಮುಗಲಭೆ ನಿಯಂತ್ರಣಕ್ಕೆ ಬಾರದಿದ್ದಾಗ ಓಂಪ್ರಕಾಶ್ ಅವರನ್ನು ಸರ್ಕಾರ ಕಳುಹಿಸಿ ಕ್ರಮಕೈಗೊಂಡ ಒಂದೆರಡು ದಿನಗಳಲ್ಲೇ ಕೋಮುಗಲಭೆ ಹತೋಟಿಗೆ ಬಂದಿತ್ತು.

ಎಸ್‌ಪಿಯಿಂದ ಡಿಐಜಿಪಿ ಹುದ್ದೆಗೆ 1995ರಲ್ಲಿ ಬಡ್ತಿ ಹೊಂದಿದ ಅವರು, ಬೆಳಗಾವಿ ಉಪವಿಭಾಗ, ತರಬೇತಿ ಹಾಗೂ ಅಗ್ನಿಶಾಮಕದಳದಲ್ಲಿ ಉಪ ಪೊಲೀಸ್ ಮಹಾ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಒಳ್ಳೆಯ ಅಧಿಕಾರಿ ಎನ್ನುವ ಹೆಸರು ಗಳಿಸಿದರು.

ನಂತರ 2001 ರಲ್ಲಿ ಐಜಿಪಿಯಾಗಿ ಬಡ್ತಿ ಹೊಂದಿದ ಓಂಪ್ರಕಾಶ್ ಸಿಐಡಿ, ಬೆಳಗಾವಿ ಉಪವಿಭಾಗದ ಐಜಿಪಿಯಾಗಿ, ಸಾರಿಗೆ ಆಯುಕ್ತರಾಗಿ ಸೇವೆ ಸಲ್ಲಿಸಿದರು 2009 ರಲ್ಲಿ ಎಡಿಜಿಪಿಯಾದ ಅವರು ಅಪರಾಧ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಕರ್ತವ್ಯ ನಿರ್ವಹಿಸಿ 2012ರ ಮೇ 31 ರಂದು ಬಡ್ತಿ ಹೊಂದಿ ಅಗ್ನಿಶಾಮಕದಳದ ಡಿಜಿಪಿಯಾದರು.

ರಾಷ್ಟ್ರಪತಿಗಳ ಶ್ಲಾಘನೀಯ ಸೇವಾಪದಕ, ವಿಶಿಷ್ಠ ಸೇವಾ ಪದಕ ಪಡೆದಿರುವ ಓಂಪ್ರಕಾಶ್ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷ, ಪ್ರಾಮಾಣಿಕ ಅಧಿಕಾರಿ ಎನ್ನುವ ಹೆಸರು ಪಡೆದಿದ್ದಾರೆ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023