ಕಾವೇರಿ ನದಿಯ ಇತಿಹಾಸ*


ಕಾವೇರಿ ನದಿಯ ಉಗಮ ಸ್ಥಾನ ಕರ್ನಾಟಕದ ಕೊಡಗು ಜಿಲ್ಲೆ. ಪಶ್ಚಿಮಘಟ್ಟಗಳ ವ್ಯಾಪ್ತಿಗೆ ಬರುವ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿನ, ಸಮುದ್ರ ಮಟ್ಟಕ್ಕಿಂತಲೂ ೧೩೪೧ ಮೀಟರುಗಳಷ್ಟು ಎತ್ತರದಲ್ಲಿರುವ ತಲಕಾವೇರಿ ಕಾವೇರಿ ನದಿಯ ಉಗಮ ಸ್ಥಾನ. ಇದರಿಂದಾಗಿಯೇ ತಲಕಾವೇರಿ ದಕ್ಷಿಣ ಭಾರತದ ಪವಿತ್ರ ಸ್ಥಳವೆನಿಸಿಕೊಂಡಿದೆ. ಇಲ್ಲಿ ಹುಟ್ಟುವ ಕಾವೇರಿ ತಮಿಳುನಾಡಿನಲ್ಲಿ ಸಮುದ್ರ ಸೇರುವವರೆಗೂ ಒಟ್ಟು ಹರಿಯುವ ಉದ್ದ ೮೦೨ ಕಿ.ಮೀ.ಗಳು. ಈ ಸುದೀರ್ಘ ಪಯಣದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೆರಿ ರಾಜ್ಯಗಳಿಗೂ ಕಾವೇರಿ ನೀರಿನಲ್ಲಿ ಪಾಲಿದೆ. ಆದ್ದರಿಂದಲೇ ದೇಶದ ಹಲವಾರು ನದಿಗಳಂತೆ ಕಾವೇರಿಗೂ ಅಂತರರಾಜ್ಯ ನದಿಯೆಂಬ ಪಟ್ಟ. ೮೦೨ ಕಿ ಮೀ.ಗಳ ಉದ್ದದ ಕಾವೇರಿಯ ಹರಿವಿನಲ್ಲಿ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಕಾವೇರಿ ಕರ್ನಾಟಕದಲ್ಲಿಯೇ ೩೮೧ ಕಿ.ಮೀ.ನಷ್ಟು ದೂರವನ್ನು ಹರಿಯುವುದಲ್ಲದೆ ಕರ್ನಾಟಕ ತಮಿಳುನಾಡು ಗಡಿಗೆ ಹೊಂದುಕೊಂಡಂತೆ ೬೪ ಕಿ.ಮೀ.ದೂರ ಪಯಣಿಸುತ್ತದೆ. ನಂತರ ತಮಿಳುನಾಡು, ಕೇರಳ, ಪಾಂಡಿಚೆರಿಯಲ್ಲಿ ೩೫೭ ಕಿ.ಮೀ.ವರೆಗೆ ಹರಿದು ಬಂಗಾಳಕೊಲ್ಲಿಯಲ್ಲಿ ಸಮುದ್ರ ಸೇರುತ್ತದೆ. ಹಾಗೆ ಕರ್ನಾಟಕದ ಕೊಡಗಿನಿಂದ ಉದ್ಭವವಾಗಿ ತಮಿಳುನಾಡಿನಲ್ಲಿನ ಬಂಗಾಳ ಕೊಲ್ಲಿಯಲ್ಲಿ ಮಿಲನವಾಗುವ ಕಾವೇರಿ ದಕ್ಷಿಣ ಭಾರತದ ಜೀವನದಿಯೆನಿಸಿದೆ. ಭಾರತದ ಪುಣ್ಯ ನದಿಗಳ ಪಾಲಿಗೆ ಕಾವೇರಿಯೂ ಸೇರಿದ್ದು ಇದನ್ನು 'ದಕ್ಷಿಣ ಗಂಗೆ' ಎಂದೂ ಕರೆಯುತ್ತಾರೆ.

ಕಾವೇರಿಯೊಟ್ಟಿಗೆ ಮಿಲನವಾಗುವ ಕರ್ನಾಟಕದ ಉಪನದಿಗಳು

ಕಾವೇರಿಯ ಸಮುದ್ರ ಸೇರುವ ದೀರ್ಘ ಪಯಣದಲ್ಲಿ ಹಲವಾರು ಉಪನದಿಗಳು ಇದರೊಟ್ಟಿಗೆ ಮಿಲನವಾಗುತ್ತವೆ. ತಲಕಾವೇರಿಯಿಂದ ಕೆಳಗಿಳಿದ ನಂತರ 'ಕನ್ನಿಕಾ' ಎಂಬ ಉಪನದಿಯು ಕಾವೇರಿ ಜತೆ ಸಂಗಮವಾಗುತ್ತದೆ. ಕನ್ನಿಕಾ-ಕಾವೇರಿ ನದಿಗಳ ಸಂಗಮ ಭಾಗಮಂಡಲ ಜನರಿಗೆ ಈಗಲೂ ಒಂದು ಪವಿತ್ರ ಸಂಗಮ ಸ್ಥಾನ. ಇಲ್ಲಿಂದ ಮುಂದಕ್ಕೆ ರಭಸವನ್ನು ಹೆಚ್ಚಿಸಿಕೊಂಡು ಕೊಡಗು ಜಿಲ್ಲೆಯಲ್ಲಿ ೮೦ ಕಿ.ಮೀ. ನಷ್ಟು ಹರಿದ ನಂತರ, ಕೊಡಗು-ಮೈಸೂರು ಜಿಲ್ಲೆಗಳ ಗಡಿಯಲ್ಲಿ ಮತ್ತೊಂದು ಉಪನದಿ 'ಹಾರಂಗಿ'ಯು ಕೂಡಿಗೆ ಎಂಬಲ್ಲಿ ಕಾವೇರಿಯನ್ನು ಸೇರಿಕೊಳ್ಳುತ್ತದೆ. ಹಾರಂಗಿ ಮತ್ತು ಕಾವೇರಿ ನದಿಗಳು ಕೂಡುವ ಸ್ಥಳವಾಗಿರುವುದರಿಂದಲೇ ಆ ಊರಿಗ ಕೂಡಿಗೆ ಎಂದು ಕರೆಯಲಾಗುತ್ತದೆ. ಹಾಗೇ, ಕೊಡಗು ಜಿಲ್ಲೆಯಲ್ಲಿ ಹರಿಯುವ ಸಣ್ಣ-ಪುಟ್ಟ ನದಿಗಳಾದ ಕಕ್ಕಬ್ಬೆ, ಕಡಮಾರು, ಮತ್ತು ಕುಟ್ಲು ಹೊಳೆಗಳೂ ಕಾವೇರಿಯನ್ನು ಸೇರಿಕೊಳ್ಳುತ್ತವೆ. ಮುಂದೆ ಮೈಸೂರು ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ನಿಂತ ನಂತರ 'ಹೇಮಾವತಿ' ಮತ್ತು 'ಲಕ್ಶ್ಮಣ ತೀರ್ಥ' ಎಂಬೆರಡು ಪ್ರಮುಖ ನದಿಗಳು ಕಾವೇರಿಯಲ್ಲಿ ಸೇರಿಕೊಳ್ಳುತ್ತವೆ.

ಶ್ರೀರಂಗ ಪಟ್ಟಣದ ಬಳಿ ಕಾವೇರಿ ನದಿ ಎರಡು ಕವಲಾಗಿ ಒಡೆದು ಮುಂದುವರೆದು ಶ್ರೀರಂಗ ಪಟ್ಟಣವನ್ನು ದ್ವೀಪವನ್ನಾಗಿಸಿ ಮತ್ತೆ ಸಂಗಮದ ಬಳಿ ಒಂದುಗೂಡುತ್ತದೆ. ಈ ಪಟ್ಟಣದ ಚೆಲುವಿಗೆ ಮನಸೋತಿದ್ದ ಖ್ಯಾತ ದೊರೆ ಟಿಪ್ಪುಸುಲ್ತಾನ್ ತನ್ನ ಬೇಸಿಗೆಯ ಅರಮನೆಯನ್ನಾಗಿ 'ದರಿಯಾ ದೌಲತ್' ಅನ್ನು ನಿರ್ಮಿಸಿಕೊಂಡಿದ್ದನು. ಆತನ ತಂದೆ ಹೈದರಾಲಿ ಹಾಗೂ ಅವನ ಸಮಾಧಿ 'ಗುಂಬಜ್' ಸಹ ಇಲ್ಲಿದ್ದು ಶ್ರೀರಂಗಪಟ್ಟಣ ಐತಿಹಾಸಿಕ ಸ್ಥಳವೆನಿಸಿಕೊಳ್ಳುವುದರ ಜತೆಗೇ ಇಲ್ಲಿ ಪ್ರಸಿದ್ದಿಯಾದ 'ಶ್ರೀರಂಗನಾಥ ಸ್ವಾಮಿ' ದೇವಸ್ಥಾನವಿದ್ದು, ಕಾವೇರಿ ಒಡೆದು ಮತ್ತೆ ಕೂಡುವ 'ಸಂಗಮ' ಅನೇಕರಿಗೆ ಪವಿತ್ರ ಸ್ಥಳವಾಗಿದೆ. ಹೀಗೆ ಶ್ರೀರಂಗಪಟ್ಟಣವನ್ನು ದ್ವೀಪವನ್ನಾಗಿಸಿ ನೈಸರ್ಗಿಕ ಚೆಲುವನ್ನು ಸೃಷ್ಟಿಮಾಡುವ ಕಾವೇರಿ ಇಲ್ಲಿಂದ ಮತ್ತೆ ಬಿರುಸನ್ನು ಪಡೆದು ಕೊಂಚ ದೂರ ಕ್ರಮಿಸಿದ ಕೂಡಲೇ ಅದಕ್ಕೆ 'ಲೋಕ ಪಾವನಿ' ಎಂಬ ನದಿ ಸೇರಿಕೊಳ್ಳುತ್ತದೆ. ಇದರ ನಂತರ ಕಾವೇರಿಯ ಅತ್ಯಂತ ಪ್ರಮುಖ ಉಪನದಿಯಾಗಿರುವ ಕಬಿನಿ ತಿರುಮಕೂಡಲು ನರಸೀಪುರದಲ್ಲಿ ಕಾವೇರಿಯನ್ನು ಸೇರಿಕೊಳ್ಳುತ್ತದೆ. ಕಬಿನಿ ನದಿ ಹುಟ್ಟುವುದು ಕೇರಳದಲ್ಲಿ. ಈ ನದಿ ಪಶ್ಚಿಮ ಘಟ್ಟದ ಕಾಡಿನ ಇಳಿಜಾರಿನಲ್ಲಿ ಹರಿಯುತ್ತಾ ಕರ್ನಾಟಕವನ್ನು ಸೇರುತ್ತದೆ. ದಟ್ಟವಾದ ಕಾನನದಲ್ಲಿ ಹರಿಯುವ ಕಬಿನಿ ಸೃಷ್ಟಿಸಿರುವ ನೈಸರ್ಗಿಕ ಚೆಲುವು ಅತ್ಯಮೋಘ! ಈ ದಟ್ಟ ಕಾಡುಗಳನ್ನು 'ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ' ವೆಂಬ ಹೆಸರಿನ ವನ್ಯಜೀವಿ ಸಂರಕ್ಷಣೆಯ ಸುರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಕಾಕನಕೋಟೆಯಂತಹ ಅದ್ಭುತವಾದ ಕಾಡಿನ ಜತೆಗೇ ಕೇರಳ-ಕರ್ನಾಟಕ ರಾಜ್ಯ ಗಳಲ್ಲಿ ಹರಡಿಕೊಂಡಿರುವ ದಟ್ಟ ಕಾನನದ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗ, ನುಗು, ಅರಬ್ಬಿ ತಿಟ್ಟುಗಳನ್ನು ಅಭಯಾರಣ್ಯಗಳೆಂದು ಘೋಷಿಸಲಾಗಿದೆ. ಕಬಿನಿ ನದಿಗೆ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ಇಂತಾ ರುದ್ರರಮಣೀಯ ಚೆಲುವನ್ನು ಸೃಷ್ಟಿಸಿದ ಕಬಿನಿ 'ಟಿ' ನರಸೀಪುರದಲ್ಲಿ ಕಾವೇರಿಯಲ್ಲಿ ಮಿಲನವಾದ ನಂತರ ಕಾವೇರಿಯ ಒಳ ಹರಿವು ಮತ್ತಷ್ಟು ಹೆಚ್ಚಾಗುತ್ತದೆ. ಮತ್ತೆ ಸ್ವಲ್ಪ ದೂರ ಮುಂದುವರೆಯುವಾಗಲೇ ಕಾವೇರಿಗೆ ಮತ್ತೊಂದು ಉಪ ನದಿ 'ಸುವರ್ಣಾವತಿ' ಸೇರಿಕೊಳ್ಳುತ್ತದೆ. ನಂತರ ಧಾಣಗೆರೆ ಅಣೆಕಟ್ಟೆಯ ಮುಂದೆ ಮತ್ತೊಂದು ಉಪ ನದಿ 'ಗುಂಟಲ್' ಕಾವೇರಿಯನ್ನು ಸೇರಿಕೊಳ್ಳುತ್ತದೆ. ನಂತರ ತನ್ನ ದಿಕ್ಕನ್ನು ಬದಲಿಸುವ ಕಾವೇರಿ ಆಗ್ನೇಯ ದಿಕ್ಕಿನತ್ತ ತನ್ನ ಪಯಣವನ್ನು ಮುಂದುವರಿಸುತ್ತದೆ.

ಹೀಗೆ ದಿಕ್ಕನ್ನು ಬದಲಿಸಿ ಮುಂದುವರೆಯುವ ಕಾವೇರಿಗೆ ಶಿವನ ಸಮುದ್ರದ ಉಪ ದಂಡೆಯ ಕೆಳಭಾಗದಲ್ಲಿ ಶಿಂಷಾ ನದಿಯು ಕೂಡಿಕೊಳ್ಳುತ್ತದೆ. ಇಲ್ಲಿಂದ ಅತ್ಯಂತ ಕಿರಿದಾದ ಪ್ರದೇಶಗಳಲ್ಲಿ ಮುಂದುವರೆಯುವ ಕಾವೇರಿ ಆಳವಾದ ಕಮರಿಗಳಲ್ಲಿ ನುಗ್ಗಿ ಧುಮುಕುವುದರಿಂದ ಹಲವಾರು ಮನೋಹರ ನೈಸರ್ಗಿಕ ಜಲಪಾತಗಳನ್ನು ಕಾಣಬಹುದು. ಶಿವನಸಮುದ್ರದ ಬಳಿ ಮತ್ತೆ ಎರಡು ಕವಲಾಗಿ ಒಡೆಯುವ ಕಾವೇರಿ ಜಗತ್ ಪ್ರಸಿದ್ಧ 'ಗಗನಚುಕ್ಕಿ' ಹಾಗೂ 'ಭರಚುಕ್ಕಿ' ಜಲಪಾತಗಳ ಸೃಷ್ಟಿಗೆ ಕಾರಣವಾಗುತ್ತದೆ. ಈ ನೈಸರ್ಗಿಕ ಜಲಪಾತಗಳನ್ನುಪಯೋಗಿಸಿಕೊಂಡು ಏಷ್ಯಾದ ಪ್ರಥಮ ದೂರ ಪ್ರಸರಣದ ಜಲ ವಿದ್ಯುತ್ ಸ್ಥಾವರವನ್ನು ನಿರ್ಮಿಸಲಾಗಿದೆ. ಇಲ್ಲಿ ತಯಾರಾಗುವ ವಿದ್ಯುತ್ ನಿಂದಲೇ ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆಯನ್ನು ನಿರ್ಮಿಸಲು ಸಾಧ್ಯವಾದದ್ದು(ಇದರ ಬಗೆಗಿನ ವಿವರವನ್ನು ಮುಂದೆ ತಿಳಿಯೋಣ). ಶಿಂಷಾ ಜಲ ವಿದ್ಯುತ್ ಸ್ಥಾವರದಿಂದ ಮುಂದೆ ಕಾವೇರಿಯ ಎರಡೂ ಕವಲುಗಳೂ ಮತ್ತೆ ಒಂದಾಗಿ ಮುಂದುವರೆಯುತ್ತವೆ. ಮೇಕೆದಾಟುವಿನೆಡೆಗೆ ಪಯಣಿಸುವಾಗ ಕಾವೇರಿಗೆ ಮತ್ತೊಂದು ಉಪನದಿ 'ಅರ್ಕಾವತಿ' ಸೇರಿಕೊಳ್ಳುತ್ತದೆ. ಮೇಕೆದಾಟುವಿನ ಬಳಿ ಕಾವೇರಿಯ ಹರಿಯುವಿಕೆ ಸಣ್ಣ ಸಣ್ಣ ಭಾಗವಾಗಿರುವುದರಿಂದ, ಹಿಂದೆಂದೋ ಮೇಕೆಯೊಂದು ಈ ನದಿಯನ್ನು ಹಾರಿ ದಾಟಿತೆಂಬ ಪ್ರತೀತಿ ಇರುವುದರಿಂದ ಈ ಪ್ರದೇಶಕ್ಕೆ 'ಮೇಕೆದಾಟು' ಎಂಬ ಹೆಸರು ಬಂದಿದೆಯಂತೆ. ಮೇಕೆದಾಟುವಿನಿಂದ ಮುಂದುವರೆಯುವ ಕಾವೇರಿ ತಮಿಳುನಾಡಿನ ಎಲ್ಲೆಯನ್ನು ಪ್ರವೇಶಿಸುತ್ತದೆ. ಇಲ್ಲಿಂದ ಪೂರ್ವಾಭಿಮುಖವಾಗಿ ಹರಿಯುವ ಕಾವೇರಿ ೬೪ ಕಿ.ಮೀ.ಗಳಷ್ಟು ದೂರ ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ನೈಸರ್ಗಿಕ ಗಡಿಯಾಗಿ ಮುಂದುವರೆಯುತ್ತದೆ. ಈ ನಡುವೆ ಉಡುತೊರೆ ಎಂಬ ಹಳ್ಳವು ಕಾವೇರಿ ನದಿಯನ್ನು ಸೇರಿಕೊಳ್ಳುತ್ತದೆ.

ತಮಿಳುನಾಡಿನಲ್ಲಿ ಕಾವೇರಿಯ ಹರಿವು

ತಮಿಳುನಾಡು ಪ್ರವೇಶಿಸಿದ ನಂತರ ಕಾವೇರಿಯು ಪೂರ್ವಾಭಿಮುಖವಾಗಿಯೇ ಮುಂದುವರೆದು ಸೇಲಂ ಮತ್ತು ಕೊಯಮತ್ತೂರು ಜಿಲ್ಲೆಗಳ ನಡುವೆ ಸಾಗಿ ಹೊಗೇನಕಲ್ ಎಂಬಲ್ಲಿ ಸಣ್ಣ ಪುಟ್ಟ ಜಲಪಾತಗಳನ್ನು ನಿರ್ಮಿಸುತ್ತದೆ. ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳಿಗೆ ಸೇರುವ ಈ ಹೊಗೇನಕಲ್ ಪ್ರದೇಶವು ನೈಸರ್ಗಿಕವಾಗಿ ನಿರ್ಮಿತವಾಗಿರುವ ಬಂಡೆ ಕಣಿವೆಗಳ ಸೌಂದರ್ಯದಿಂದ ಕಂಗೊಳಿಸುತ್ತದೆ. ಹೊಗೇನಕಲ್ ದಾಟಿದ ನಂತರ ದಿಕ್ಕು ಬದಲಿಸುವ ಕಾವೇರಿ ದಕ್ಷಿಣಾಭಿಮುಖವಾಗಿ ಹರಿಯತೊಡಗಿ ಮೆಟ್ಟೂರು ಜಲಾಶಯವನ್ನು ಸೇರುತ್ತದೆ. ಮೆಟ್ಟೂರು ಜಲಾಶಯದಿಂದ ಮುಂದುವರೆದು ಪೂರ್ವಘಟ್ಟ ಅರಣ್ಯವನ್ನು ಪ್ರವೇಶಿಸಿ ದಕ್ಷಿಣ ದಿಕ್ಕಿನಲ್ಲಿ ಹರಿಯತೊಡಗುತ್ತದೆ. ಮೆಟ್ಟೂರಿನಿಂದ ೪೫ ಕಿ.ಮೀ. ದೂರದಲ್ಲಿ ಪ್ರಮುಖ ಉಪನದಿ 'ಭವಾನಿ' ಯು ಕಾವೇರಿಯನ್ನು ಕೂಡಿಕೊಳ್ಳುತ್ತದೆ. ಭವಾನಿಯು ಕಾವೇರಿಯ ಜತೆ ಸೇರಿಕೊಂಡ ನಂತರ ಮುಂದುವರೆಯುವ ಕಾವೇರಿ ಮತ್ತೆ ತನ್ನ ದಿಕ್ಕನ್ನು ಬದಲಿಸಿ ಪೂರ್ವಕ್ಕೆ ವಿಶಾಲವಾಗಿ ಹರಿಯತೊಡಗುತ್ತದೆ. ಮುಂದೆ 'ನೋಯಿಲ್' ಹಾಗೂ 'ಅಮರಾವತಿ' ಎಂಬ ಎರಡು ಉಪನದಿಗಳು ಇದರೊಳಗೆ ಸೇರುತ್ತವೆ. ಈ ಉಪನದಿಗಳ ಕೂಡುವಿಕೆಯಿಂದಾಗಿ ತನ್ನ ರಭಸವನ್ನು ಹೆಚ್ಚಿಸಿಕೊಳ್ಳುತ್ತಾ ತಿರುಚಿನಾಪಳ್ಳಿ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಪೂರ್ವ ದಿಕ್ಕಿನಲ್ಲೇ ಅತ್ಯಂತ ವಿಶಾಲವಾಗಿ ಹರಿಯುವ ಕಾವೇರಿಗೆ ಅಲ್ಲಿ 'ಅಖಂಡ ಕಾವೇರಿ'ಯೆಂದು ಕರೆಯಲಾಗುತ್ತದೆ. ತಿರುಚಿನಾಪಳ್ಳಿ ತಲುಪಿದ ನಂತರ ಕಾವೇರಿ ಮತ್ತೆ ಎರಡು ಕವಲುಗಳಾಗಿ ಒಡೆಯುತ್ತದೆ. ತನ್ನ ಇಲ್ಲಿಯವರೆಗಿನ ಪಯಣದಲ್ಲಿ ಕಾವೇರಿ ಅನೇಕ ಬಾರಿ ಕವಲುಗಳಾಗಿ ಒಡೆದರೂ ತನ್ನ ಹೆಸರನ್ನೇ ಉಳಿಸಿಕೊಂಡಿರುತ್ತದೆ. ಆದರೆ ಇಲ್ಲಿ ಕವಲಾಗುವ ಕಾವೇರಿಯ ಒಂದು ಭಾಗಕ್ಕೆ 'ಕೊಲೆರಾನ್'ಎಂದು ಕರೆಯಲಾಗುತ್ತದೆ. ಉತ್ತರ ಭಾಗವಾಗಿರುವ 'ಕೊಲೆರಾನ್' ನದಿಗೆ ೧೮೩೬ ರಲ್ಲಿ ಮೇಲ್ಭಾಗದ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ೧೬ ಕಿ.ಮೀ. ಗಳಷ್ಟು ದೂರ ಸಾಗಿದ ನಂತರ ಎರಡು ಕವಲುಗಳು ಮತ್ತೆ ಒಂದುಗೂಡುತ್ತವೆ. ಹಾಗೆ ೧೬ ಕಿ.ಮೀ. ಪ್ರದೇಶವು ದ್ವೀಪವಾಗಿರುವುದರಿಂದ ಆ ಪ್ರದೇಶವನ್ನು ನಮ್ಮ ಶ್ರೀರಂಗಪಟ್ಟಣದಂತೆಯೇ 'ಶ್ರೀರಂಗಂ' ಎಂದು ಕರೆಯಲಾಗುತ್ತದೆ. ಎರಡೂ ಕವಲುಗಳು ಮತ್ತೆ ಒಂದಾಗುವ ಜಾಗದಲ್ಲಿ ತಮಿಳುನಾಡಿನ ಪ್ರಸಿದ್ದ ರಾಜನಾಗಿದ್ದ ಚೋಳ ರಾಜನು ಕಟ್ಟಿಸಿದ್ದ 'ಗ್ರಾಂಡ್' ಅಣೆಕಟ್ಟೆಯಿದೆ. ಈ ಅಣೆಕಟ್ಟೆಯ ನಂತರ ಮುಂದುವರೆಯುವ ಕಾವೇರಿ ಮತ್ತೆ ಎರಡು ಕವಲಾಗಿ ಒಡೆಯುತ್ತದೆ. ಇಲ್ಲಿಯೂ ಒಂದು ಕವಲಿಗೆ 'ವೆಣ್ಣಾರ್' ಎಂದು ಹೆಸರಿಸಲಾಗಿದೆ. ತನ್ನ ಮೂಲ ಹೆಸರನ್ನೇ ಉಳಿಸಿಕೊಂಡ ಮತ್ತೊಂದು ಕವಲು ಟ್ರಾಂಕ್ ಬಾರಿನ ಉತ್ತರಕ್ಕೆ ೧೩ ಕಿ.ಮೀ. ದೂರದ ಕಾವೇರಿ ಪಟ್ಟಣಂ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮತ್ತೊಂದು ಕವಲು ಚಿದಂಬರಂ ಬಳಿ ಸಮುದ್ರವನ್ನು ಸೇರುವುದರೊಂದಿಗೆ ಕಾವೇರಿ ಕರ್ನಾಟಕದ ಕೊಡಗಿನಿಂದ ಆರಂಭಿಸಿದ ೮೦೨ ಕಿ.ಮೀ. ದೂರದ ತನ್ನ ಸುದೀರ್ಘ ಪಯಣವನ್ನು ಅಂತ್ಯಗೊಳಿಸುತ್ತದೆ.

ಕರ್ನಾಟಕದ ಭಾಗದಲ್ಲಿ ಕಾವೇರಿ ನದಿಗೆ ೧೩ ಉಪನದಿಗಳು ಸೇರ್ಪಡೆಯಾಗುತ್ತವೆ. ಈ ಉಪನದಿಗಳು ಕರ್ನಾಟಕದಲ್ಲಿ ಕಾವೇರಿ ನದಿ ನೀರಿನ ಹೆಚ್ಚಳಕ್ಕೆ ಕಾರಣವಾಗಿವೆ. ಆದರೆ ತಮಿಳುನಾಡಿನಲ್ಲಿ ಕಾವೇರಿಗೆ ಜತೆಯಾಗುವುದು ೩ ಉಪನದಿಗಳಷ್ಟೇ. ಈ ಮೊದಲೇ ತಿಳಿಸಿದಂತೆ ಕಾವೇರಿಯು ಕರ್ನಾಟಕದಲ್ಲಿ ೩೮೧ ಕಿ.ಮೀ ದೂರ ಹರಿದು ತನ್ನ ಉಪನದಿಗಳ ನೆರವಿನಿಂದ ಸಂಗ್ರಹಿಸುವ ನೀರಿನ ಹರಿವಿನಿಂದ ಒಟ್ಟಾರೆ ನೀರಿನ ಪ್ರಮಾಣದ ಶೇ. ೫೩ ರಷ್ಟು ಪ್ರಮಾಣವು ಕರ್ನಾಟಕದ ಕೊಡುಗೆಯಾಗಿದೆ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023