ಧರೆಗುರುಳಿದ ಧರಹರಾ ,180 ಪ್ರವಾಸಿಗರ ಸಾವು

ಕಾಠ್ಮಂಡು : ನೇಪಾಳದ ಐತಿಹಾಸಿಕ ಧರಹರಾ ಗೋಪುರವು(ಭೀಮಸೇನ್ ಗೋಪುರ) ಭೂಕಂಪದಿಂದಾಗಿ ಶನಿವಾರ ಧರೆಗುರುಳಿದೆ. 183 ವರ್ಷಗಳಷ್ಟು ಹಳೆಯ ಈ ಗೋಪುರವು ರಾಜಧಾನಿ ಕಾಠ್ಮಂಡುವಿನ ಹೃದಯ ಭಾಗದಲ್ಲಿದ್ದು, ಇಲ್ಲಿಗೆ ಬಂದಿದ್ದ ನೂರಾರು ಪ್ರವಾಸಿಗರು ಅವಶೇಷಗಳಡಿ ಸಿಲುಕಿದ್ದಾರೆ.

50.5 ಮೀಟರ್ ಎತ್ತರದ ಗೋಪುರ ಕುಸಿದಿದ್ದು, ಅಲ್ಲಿ ಸ್ಮಶಾನವೇ ಸೃಷ್ಟಿಯಾಗಿದೆ. ಸುಮಾರು 180 ಶವಗಳು ಅವಶೇಷಗಳಡಿ ಸಿಲುಕಿದ್ದು, ಇನ್ನೂ ಕೆಲವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1832ರಲ್ಲಿ ನಿರ್ಮಾಣಗೊಂಡಿದ್ದು ಎನ್ನಲಾದ ಈ ಗೋಪುರವನ್ನು ನೇಪಾಳದ ಮೊದಲ ಪ್ರಧಾನಿ ಭೀಮಸೇನ್ ಥಾಪಾ ನಿರ್ಮಿಸಿದ್ದರು. ಮೊದಲಿಗೆ ಸೇನೆಯ ವೀಕ್ಷಣಾ ಗೋಪುರವಾಗಿದ್ದ ಇದು ನಂತರದಲ್ಲಿ ಕಾಠ್ಮಂಡುವಿನ ಪ್ರಮುಖ ಹೆಗ್ಗುರುತಾಗಿತ್ತು.

ಬಿಳಿಯ ಬಣ್ಣದ ಈ ಗೋಪುರದ ತುದಿಯಲ್ಲಿ ಕಂಚಿನ ಕಳಶವಿತ್ತು. ಸುರುಳಿಯಾಕಾರದ 200 ಮೆಟ್ಟಿಲುಗಳು ಪ್ರವಾಸಿಗಳ ಪಾಲಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಗೋಪುರ ಏರಿ, ಅದರ ಮೇಲಿಂದ ಸುತ್ತಲಿನ ನಗರ ವೀಕ್ಷಿಸುವುದು ಜನರಿಗೆ ಮುದ ನೀಡುತ್ತಿತ್ತು. ಇದರ ಪ್ರವೇಶ ಶುಲ್ಕ ಸಹ ಅತ್ಯಂತ ಅಗ್ಗವಾಗಿತ್ತು. ಮೊಗಲ್ ಮತ್ತು ಯೂರೋಪಿಯನ್ ಶೈಲಿಯ ವಿನ್ಯಾಸವನ್ನು ಗೋಪುರ ಹೊಂದಿದ್ದು, ಗೋಪುರದ ಮೇಲೆ ಶಿವನ ವಿಗ್ರಹವಿತ್ತು.

ಬಾಲಿವುಡ್ ಚಿತ್ರಗಳ ಹಾಡುಗಳಲ್ಲಿ ಈ ಗೋಪುರವನ್ನು ಆಗಾಗ್ಗೆ ತೋರಿಸಲಾಗಿತ್ತು. 1834ರ ಭೂಕಂಪದಲ್ಲಿ ಒಂದಿಷ್ಟು ಹಾನಿಗೀಡಾಗಿದ್ದ ಈ ಗೋಪುರ, ಅದಾಗಿ ನೂರು ವರ್ಷಗಳ ನಂತರದ ಭೂಕಂಪದಲ್ಲಿ ಧರೆಗೆ ಕುಸಿದಿದೆ.

ದರ್ಬಾರ್ ಚೌಕವೂ ಹಾಳು
ಭೂಕಂಪದ ಏಟಿಗೆ ನೇಪಾಳದ ಇನ್ನೊಂದು ಐತಿಹಾಸಿಕ ತಾಣವಾದ ರಾಯಲ್ ದರ್ಬಾರ್ ಚೌಕವೂ ನೆಲಸಮವಾಗಿದೆ. ಪ್ರತಿವರ್ಷ ಸಾವಿರಾರು ಜನ ಭೇಟಿ ನೀಡುವ ಕಾಠ್ಮಂಡುವಿನಲ್ಲಿನ ಈ ತಾಣ ಇನ್ನು ನೆನಪು ಮಾತ್ರ.

ಇಲ್ಲಿ ಜೀನತ್ ಅಮಾನ್ ಮತ್ತು ಅಮಿತಾಭ್ ಅಭಿನಯದ 'ಮಹಾನ್' ಚಿತ್ರವನ್ನು ಚಿತ್ರೀಕರಿಸಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ನಟ ಅಮಿತಾಭ್ ಬಚ್ಚನ್, ''ಓ! ಗಾಡ್... ನೇಪಾಳದಲ್ಲಿ ಭೂಕಂಪವಾಗಿದೆ!!! ಅಲ್ಲಿ ನನ್ನ 'ಮಹಾನ್' ಚಿತ್ರದ ಹಾಡೊಂದರ ಚಿತ್ರೀಕರಣ ಮಾಡಲಾಗಿತ್ತು... ಜೀನತ್ ಅಮನ್ ಜತೆ ನಾನು ನಟಿಸಿದ್ದೆ,'' ಎಂದು ನೆನಪುಗಳನ್ನು ಕೆದಕಿದ್ದಾರೆ.

ಈ ದರ್ಬಾರ್ ಚೌಕವೂ ಒಂದು ಕಾಲದಲ್ಲಿ ಹೆಚ್ಚಿನ ಐತಿಹಾಸಿಕ ಮಹತ್ವ ಪಡೆದಿತ್ತು. ಇಲ್ಲಿ ದೇವಸ್ಥಾನಗಳು, ಕಾರಂಜಿಗಳು, ಹನುಮಂತನ ವಿಗ್ರಹವಿದೆ. ಇದು ಯುನೆಸ್ಕೊ ಗುರ್ತಿಸಿರುವ ಪಾರಂಪರಿಕ ತಾಣಗಳಲ್ಲಿ ಒಂದಾಗಿತ್ತು.

ಜಗ್ಗದ ಪಶುಪತಿನಾಥ ದೇವಾಲಯ
ವಸುಂಧರೆಯ ರುದ್ರನರ್ತನಕ್ಕೆ ನೇಪಾಳದ ರಾಜಧಾನಿ ಕಾಠ್ಮಂಡು ನೆಲಸಮವಾಗಿದೆ. ಆದರೆ ವಿಶ್ವಪ್ರಸಿದ್ಧ ಪಶುಪತಿನಾಥ ದೇವಾಲಯ ಮಾತ್ರ ಜಗ್ಗಿಲ್ಲ. ಅಲ್ಪಸ್ವಲ ಪ್ರಮಾಣದಲ್ಲಷ್ಟೇ ಹಾನಿಯಾಗಿದೆ. ಆದರೆ ಅದೃಷ್ಟವಶಾತ್ ದೇವಸ್ಥಾನದ ಅರ್ಚಕರ ಜೀವಕ್ಕೆ ಕುತ್ತುಬಂದಿಲ್ಲ. ಅವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರಾಖಂಡ್‌ನ ಬಿಜೆಪಿಯ ಭಗತ್ ಎಸ್.ಕೋಶಯಾರಿ ಅವರು, ''ನೇಪಾಳ ಸರಕಾರ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಜತೆ ಸಂಪರ್ಕದಲ್ಲಿದ್ದೇವೆ. ಪಶುಪತಿನಾಥ ದೇವಾಲಯಕ್ಕೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ವಿಷಯ ತಿಳಿದುಬಂದಿದೆ. ಆದರೆ ಅಪಾಯವಿಲ್ಲ ಎಂದವರು ಹೇಳಿದ್ದಾರೆ,'' ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಪತ್ರಕರ್ತೆ ನಳಿನಿ ಸಿಂಗ್ ಅವರು ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲವೆಂದು ವರದಿಯೊಂದನ್ನು ಆಧರಿಸಿ ಟ್ವೀಟ್ ಮಾಡಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023