Drop


Monday, April 13, 2015

ಮೆರಿಟ್‌ಗೆ ಪದವಿ ಅಂಕಗಳ ಶೇ 35ರಷ್ಟು ಪರಿಗಣನೆಗೆ ನಿರ್ಧಾರ ಬಿಇಡಿ ಅಭ್ಯರ್ಥಿಗಳ ವಿರೋಧ


ಸೂರ್ಯನಾರಾಯಣ ವಿ.

Mon, 04/13/2015 - 01:00

ಬೆಂಗಳೂರು: ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ಮೆರಿಟ್‌ ಲೆಕ್ಕಹಾಕಲು ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನುಸರಿ ಸಲಿರುವ ವಿಧಾನದ ಬಗ್ಗೆ ಬಿಇಡಿ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿ ದ್ದಾರೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲೂ ನಿರ್ಧರಿಸಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆಯ (6ರಿಂದ 8ನೇ ತರಗತಿವರೆಗೆ) ಶಿಕ್ಷಕರಾಗಲು ಅಭ್ಯರ್ಥಿಗಳು ಪದವಿಯೊಂದಿಗೆ ಬಿಇಡಿ ಮಾಡಿ ನಂತರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪಾಸಾಗುವುದು ಕಡ್ಡಾಯ. ಹೀಗಾಗಿ, ಬಿಇಡಿ ಮಾಡಿ ಟಿಇಟಿಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಈ ವರ್ಷ ಹಿರಿಯ ಪ್ರಾಥ ಮಿಕ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸು ತ್ತಿದ್ದಾರೆ. (ಈ ಬಾರಿಯಸ್ಪರ್ಧಾತ್ಮಕ ಪರೀಕ್ಷೆ ಮೇ 23, 24ಕ್ಕೆ ನಡೆಯಲಿದೆ)

ನೇಮಕಾತಿಯ ಅಂತಿಮ ಹಂತದಲ್ಲಿ ಮೆರಿಟ್‌ ಆಧಾರದಲ್ಲಿ ಪಟ್ಟಿ ಸಿದ್ಧಪಡಿಸುವಾಗ,  ಪದವಿ ಶಿಕ್ಷಣ, ಬಿಇಡಿ, ಟಿಇಟಿ ಮತ್ತು ಸಿಇಟಿಯಲ್ಲಿ ಅಭ್ಯರ್ಥಿಗಳು ಪಡೆದಿರುವ ಶೇಕಡಾವಾರು ಅಂಕಗಳನ್ನು ಇಲಾಖೆ ಪರಿಗಣಿಸಲಿದೆ.

ಅಭ್ಯರ್ಥಿಯು ಪದವಿ ಶಿಕ್ಷಣದಲ್ಲಿ ಪಡೆದಿರುವ ಒಟ್ಟು ಅಂಕಗಳಲ್ಲಿ ಶೇ 35ರಷ್ಟು, ಬಿಇಡಿ ಅಂಕಗಳ ಶೇ 15, ಟಿಇಟಿಯ ಶೇ 15 ಮತ್ತು ಸಿಇಟಿಯ ಒಟ್ಟು ಅಂಕಗಳಲ್ಲಿ ಶೇ 35ರಷ್ಟು ಅಂಕಗಳನ್ನು ಗಣನೆಗೆ ತೆಗೆದುಕೊಂಡು ಅವುಗಳ ಸರಾಸರಿ ಆಧಾರದಲ್ಲಿ ಇಲಾಖೆ ಮೆರಿಟ್‌ ಪಟ್ಟಿ ಸಿದ್ಧಪಡಿಸಲಿದೆ.

ಆದರೆ, ಪದವಿ ಶಿಕ್ಷಣದ ಅಂಕಗಳಲ್ಲಿ ಶೇ 35ರಷ್ಟನ್ನು ಪರಿಗಣಿಸುತ್ತಿರುವುದಕ್ಕೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡಿದರೆ ಪದವಿ ಶಿಕ್ಷಣದಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವರಿಗೆ ಅನ್ಯಾಯ ಆಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮಾತ್ರ: ಈ ಮೊದಲು, ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಮೆರಿಟ್‌ ಲೆಕ್ಕ ಹಾಕುವಾಗ ಪಿಯುಸಿ, ಡಿಇಡಿ ಮತ್ತು ಸಿಇಟಿಗಳಲ್ಲಿ ಪಡೆದಿರುವ ಒಟ್ಟು ಅಂಕಗಳಲ್ಲಿ ತಲಾಶೇ 33 ಅಂಕಗಳನ್ನು ಪರಿಗಣಿಸ ಲಾಗುತ್ತಿತ್ತು.

ಆದರೆ, ಕಳೆದ ವರ್ಷದಿಂದ ರಾಜ್ಯದಲ್ಲಿ ಟಿಇಟಿ ಜಾರಿಗೆ ಬಂದಿರುವುದರಿಂದ ಮೆರಿಟ್‌   ನಿಗದಿಪಡಿಸಲು ಅಭ್ಯರ್ಥಿಗಳು ಟಿಇಟಿಯಲ್ಲಿ ಪಡೆದ ಅಂಕಗಳನ್ನೂ ಇಲಾಖೆ ಪರಿಗಣಿಸಲಿದೆ.

ಪದವಿ ಅಂಕಗಳನ್ನು ಪರಿಗಣಿಸುವ ಕ್ರಮ ಕರ್ನಾಟಕದಲ್ಲಿ ಮಾತ್ರ ಇದೆ ಎಂಬುದು ಅಭ್ಯರ್ಥಿಗಳ ಆರೋಪ. ಕೇರಳ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಮೆರಿಟ್‌ ಲೆಕ್ಕಾಚಾರ ಮಾಡುವಾಗ ಸಿಇಟಿ ಅಂಕಗಳನ್ನೇ ಹೆಚ್ಚು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ರಾಜ್ಯಗಳಲ್ಲಿ ಸಿಇಟಿಯಲ್ಲಿ ಪಡೆದಿರುವ ಒಟ್ಟು ಅಂಕಗಳ ಶೇ 80ರಷ್ಟು ಮತ್ತು ಪದವಿಯ ಶೇ 20ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.

'ಹೊಸ ವಿಧಾನದ ಅನುಸಾರ ಮೆರಿಟ್‌ ಲೆಕ್ಕ ಹಾಕಿದರೆ, ಪದವಿಯಲ್ಲಿ ಶೇ 60ಕ್ಕಿಂತ ಕಡಿಮೆ ಅಂಕಗಳು ಬಂದಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಅವರು ಸಿಇಟಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದರೂ, ಪದವಿ ಶಿಕ್ಷಣದ ಕಡಿಮೆ ಅಂಕಗಳ ಕಾರಣಕ್ಕೆ  ಮೆರಿಟ್‌ನಲ್ಲಿ ಹಿಂದೆ ಉಳಿಯಬಹುದು' ಎಂದು ರಾಯಚೂರಿನ ಬಿಇಡಿ ಅಭ್ಯರ್ಥಿ ವಸಂತಕುಮಾರ್‌ 'ಪ್ರಜಾವಾಣಿ'ಗೆ ತಿಳಿಸಿದರು.

'ಇದು ಅವೈಜ್ಞಾನಿಕ ಕ್ರಮ. ನಮ್ಮಲ್ಲಿ ಮಾತ್ರ ಈ ರೀತಿ ಮಾಡಿದ್ದಾರೆ. ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಕರನ್ನು ನೇಮಕಾತಿ ಮಾಡುವಾಗ ಸಿಇಟಿ ಅಂಕಗಳನ್ನು ಮಾತ್ರ  ಪರಿಗಣಿಸಲಾಗುತ್ತದೆ. ಬೇರೆ ರಾಜ್ಯಗ ಳಲ್ಲೂ ಸಿಇಟಿ ಅಂಕಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ ' ಎಂದು ವಿಜಯ ಪುರದ ಚಂದ್ರಕಾಂತ ಉಂಡೋಡಿ ಅವರು ಅಳಲು ತೋಡಿಕೊಂಡರು.

ಪ್ರೌಢಶಾಲೆಗಳಿಗೆ ಶಿಕ್ಷಕರನ್ನು ನೇಮ ಕಾತಿಯಲ್ಲಿ ಮೆರಿಟ್‌ ಪಟ್ಟಿ ಸಿದ್ಧಪಡಿ ಸುವಾಗ ಸಿಇಟಿಯಲ್ಲಿ ಪಡೆದಿರುವ ಒಟ್ಟು ಅಂಕಗಳಲ್ಲಿ ಶೇ 70ರಷ್ಟನ್ನು, ಪದವಿ ಶಿಕ್ಷಣದ ಒಟ್ಟು ಅಂಕಗಳಲ್ಲಿ ಶೇ 20 ಮತ್ತು ಬಿಇಡಿಯ ಅಂಕಗಳಲ್ಲಿಶೇ10 ರಷ್ಟನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದೇ ಮಾದರಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ನೇಮಕ ಮಾಡಬೇಕು   ಎಂಬುದು ಅವರ ಒತ್ತಾಯ.

ನ್ಯಾಯಾಲಯಕ್ಕೆ ಮೊರೆ
ಶಿಕ್ಷಣ ಇಲಾಖೆಯ ಕ್ರಮವನ್ನು ಪ್ರಶ್ನಿಸಿ  200 ಬಿಇಡಿ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಈ ಸಂಬಂಧ, ವಕೀಲರ ಸಲಹೆ ಪಡೆದಿರುವ ಅವರು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ರಿಟ್‌ ಅರ್ಜಿ ಸಲ್ಲಿಸಲಿದ್ದಾರೆ.