Drop


Thursday, April 30, 2015

50000 ಕೋಟಿ ವೆಚ್ಚದಲ್ಲಿ 'ಭಾರತ್ ಮಾಲ' ಎಂಬ ರಸ್ತೆ ಸಂಪರ್ಕ ಯೋಜನೆ


ನವದೆಹಲಿ, ಏ.30- ದೇಶದ ಗಡಿಯಿಂದ ಕರಾವಳಿ
ತೀರ ಪ್ರದೇಶದವರೆಗೂ ಸಂಪರ್ಕ ಕಲ್ಪಿಸುವ
ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭಾರತ್ ಮಾಲ ಎಂಬ ರಸ್ತೆ
ಸಂಪರ್ಕ ಪ್ರಾರಂಭಿಸಲು ಮುಂದಾಗಿದೆ. ಇದರ ಪ್ರಕಾರ,
ದೇಶದಲ್ಲಿ ಮತ್ತೆ ನೂತನವಾಗಿ 5 ಸಾವಿರ ಕಿ.ಮೀ. ರಸ್ತೆ
ನಿರ್ಮಿಸಲು ಪ್ರಧಾನಮಂತ್ರಿ ನರೇಂದ್ರಮೋದಿ
ತೀರ್ಮಾನಿಸಿದ್ದಾರೆ. ಭಾರತ್ ಮಾಲ ಎಂಬ
ಯೋಜನೆಯಡಿ ದೇಶದುದ್ದಕ್ಕ ಸುಮಾರು 5 ಸಾವಿರ ಕಿ.ಮೀ.
ರಸ್ತೆ ನಿರ್ಮಾಣವಾಗಲಿದೆ. ಗಡಿ ಭಾಗದಿಂದ ಕರಾವಳಿ
ತೀರ ಪ್ರದೇಶ, ಕುಗ್ರಾಮದಿಂದ ನಗರ-ಪಟ್ಟಣಗಳಿಗೂ
ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮೂಲ ಉದ್ದೇಶ.
ಸುಮಾರು 50 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗುತ್ತಿದ್ದು,
ಈಗಾಗಲೇ ಕೇಂದ್ರ ಸಾರಿಗೆ ಇಲಾಖೆ ಇದಕ್ಕೆ ವಿಸ್ತೃತ ಯೋಜನಾ ವರದಿ
(ಡಿಪಿಆರ್) ತಯಾರಿಸಲು ಮುಂದಾಗಿದೆ.
ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎನ್ಡಿಎ
ಅವಧಿಯಲ್ಲಿ ಸುವರ್ಣ ಚತುಷ್ಪಥ ಯೋಜನೆಯಡಿ
ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು
ಮುಂದಾಗಿತ್ತು. ಇದೀಗ ಮೋದಿ ಸರ್ಕಾರ ಐದು ಸಾವಿರ
ಕಿ.ಮೀ. ರಸ್ತೆ ನಿರ್ಮಿಸಲು ವಿಶೇಷ ಕಾಳಜಿ ವಹಿಸಿದೆ. ಸಾರಿಗೆ
ಇಲಾಖೆಯು ಸದ್ಯದಲ್ಲೇ ವರದಿಯನ್ನು ಪ್ರಧಾನಿಗೆ
ನೀಡಲಿದೆ. ನೇಪಾಳ, ಬಾಂಗ್ಲಾದೇಶ, ಚೀನ,
ಪಾಕಿಸ್ತಾನ, ಭೂತಾನ್ ಜತೆಗೆ ಗಡಿ ಸಂಪರ್ಕ
ಹೊಂದಿರುವ ರಾಜ್ಯಗಳಲ್ಲೂ ರಸ್ತೆ
ನಿರ್ಮಾಣವಾಗಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನೂ ನಡೆಸಲಾಗಿದೆ.
ಡಿಪಿಆರ್ ವರದಿ ಬರುತ್ತಿದ್ದಂತೆ ಪ್ರಧಾನಿ
ಕಾರ್ಯಾಲಯದಿಂದ ಒಪ್ಪಿಗೆ ಪಡೆಯಲಾಗುವುದು. ರಸ್ತೆ
ಸಂಪರ್ಕದಿಂದ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ
ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು
ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ರಸ್ತೆಯು ಈಶಾನ್ಯ ರಾಜ್ಯಗಳು, ಒಡಿಸ್ಸಾ
(400ಕಿ.ಮೀ.), ಪಶ್ಚಿಮ ಬಂಗಾಳ
(300ಕಿ.ಮೀ.), ಪಂಜಾಬ್, ರಾಜಸ್ಥಾನ (ಸಾವಿರ
ಕಿ.ಮೀ.), ಉತ್ತರ ಪ್ರದೇಶ, ತಮಿಳುನಾಡು (600
ಕಿ.ಮೀ.) ಉತ್ತರಖಂಡ್ (300ಕಿ.ಮೀ.)
ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹಾದು ಬರಲಿದೆ. ಈ ವರ್ಷದ
ಅಂತ್ಯಕ್ಕೆ ಯೋಜನೆ ಪ್ರಾರಂಭವಾಗಲಿದ್ದು,
ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ
ಗುರಿ ಹೊಂದಲಾಗಿದೆ ಎಂದು ಅಧಿಕಾರಿ
ಹೇಳಿದ್ದಾರೆ. ಇದರ ಜತೆಗೆ ಪ್ರಮುಖ ನಗರಗಳಲ್ಲೂ ಕೂಡ ರಸ್ತೆ
ನಿರ್ಮಾಣವಾಗಲಿದ್ದು, ಭೂಮಿ ವಶಪಡಿಸಿಕೊಳ್ಳುವವರಿಗೆ
ಜಮೀನಿನ ಒಟ್ಟು 4ರಷ್ಟು ಪರಿಹಾರ ನೀಡಲು
ಸರ್ಕಾರ ಮುಂದಾಗಿದೆ.