ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 96 ವರ್ಷ

ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 96 ವರ್ಷ
(PSG)
ಭಾರತದ ಇತಿಹಾಸವನ್ನು ಅವಲೋಕಿಸಿದರೆ ಮೈನವಿರೇಳಿಸುವ ಅದೆಷ್ಟೋ ಘಟನೆಗಳು ಅನಾವರಣಗೊಳ್ಳುತ್ತವೆ. ಹಾಗೆಯೇ ಎದೆ ನಡುಗಿಸುವ, ನರನಾಡಿಗಳಲ್ಲಿ ರಕ್ತ ಕುದಿದು ರೋಷ ಉಕ್ಕಿಸುವ ಘಟನೆಗಳೂ ಬಿಚ್ಚಿಕೊಳ್ಳುತ್ತವೆ.  ಏಕೆಂದರೆ ವಿದೇಶಿ ದಾಳಿಕೋರ ಕಟುಕರು ಭಾರತದ ನೆಲದ ಮೇಲೆ ನಡೆಸಿದ ಅತ್ಯಾಚಾರ, ಅನಾಚಾರ, ಹತ್ಯಾಕಾಂಡಗಳು ಒಂದೆರಡಲ್ಲ. ಆದರೆ ಅಂಥ ಎಲ್ಲ ಘಟನೆಗಳಲ್ಲೇ ಅತ್ಯಂತ ಹೇಯ, ಅಮಾನವೀಯ, ಅಮಾನುಷ ಘಟನೆಯೆಂದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ.  ಜಲಿಯನ್ ವಾಲಾಬಾಗ್ ಎಂಬುದು ಒಂದು ಸುಂದರ ತೋಟ.
ಪಂಜಾಬ್‌ನ ಈ ತೋಟ ಪ್ರಶಾಂತತೆಗೆ ತವರಾಗಿತ್ತು. 1919ರ ಏಪ್ರಿಲ್ ತಿಂಗಳ ಇದೇ ದಿನದಂದು  ಅಲ್ಲೊಂದು ಇಡೀ ಮಾನವ ಸಮುದಾಯವೇ ಬೆಚ್ಚಿ ಬೀಳುವಂಥ ಹೀನ ಕೃತ್ಯವೊಂದು ನಡೆದು ಹೋಯಿತು. ಮಾನವ ನಿರ್ಮಿತ ಆ ದುರಂತಕ್ಕೆ ಇದೀಗ ಬರೋಬ್ಬರಿ 96 ವರ್ಷ.

ಈ ದುಷ್ಕೃತ್ಯದ ರೂವಾರಿ ಬ್ರಿಟನ್‌ನ ಭಾರತ ಚಕ್ರವರ್ತಿ ಬ್ರಿಗೆಡಿಯರ್-ಜನರಲ್ ರೆಜಿನಾಲ್ಡ್ ಡಯರ್. ಅವನೊಬ್ಬ ಸೇನಾ ಕಮಾಂಡರ್. ಈಗ ಈ ಜಲಿಯನ್ ವಾಲಾಬಾಗ್‌ನ್ನೇ ಅಮೃತಸರ ಎಂದು ಕರೆಯಲಾಗುತ್ತದೆ. 1919ರ ಏಪ್ರಿಲ್ 13ರಂದು ಅಲ್ಲಿ ಸಾವಿರಾರು ಮಂದಿ ಪುರುಷರು, ಮಹಿಳೆಯರು, ಮಕ್ಕಳು ಸೇರಿದ್ದರು. ಈ ಪ್ರದೇಶ(ಜಲಿಯನ್ ವಾಲಾಬಾಗ್)ದ ಸುತ್ತ ಎತ್ತರದ ಗೋಡೆ, ಒಂದೇ ಕಡೆ ದ್ವಾರ, ಅಲ್ಲಿಂದ ತಪ್ಪಿಸಿಕೊಂಡು ಪಾರಾಗುವುದು ಭಾರೀ ಕಷ್ಟಸಾಧ್ಯ.  ಅದು ಸ್ವತಂತ್ರ ಹೋರಾಟ ಮೊಳೆಯುತ್ತಿದ್ದ ಕಾಲ. ಮೊದಲ ಮಹಾಯುದ್ಧದ ಸಮಯ. ಇದ್ದಕ್ಕಿದ್ದಂತೆ ಜನರಲ್ ಡಯರ್ ಭಾರತೀಯ ಸೇನೆಗೆ ಜಲಿಯನ್ ವಾಲಾಬಾಗ್‌ನಲ್ಲಿ ಸೇರಿದ್ದ ಜನತೆಯ ಮೇಲೆ ಗುಂಡು ಹಾರಿಸುವಂತೆ ಆದೇಶಿಸುತ್ತಾನೆ. ಭಾರತೀಯ ಸೈನಿಕರೇ ಭಾರತೀಯರ ಮೇಲೆ ಅಸಾಧ್ಯ ಗುಂಡಿನ ದಾಳಿ ನಡೆಸಿ ಅಲ್ಲಿದ್ದವರನ್ನು ಸೊಳ್ಳೆ-ನೊಣಗಳಂತೆ ನೆಲಕ್ಕುರುಳಿಸುತ್ತದೆ. ಅಂದು ಅಲ್ಲಿ ನಡೆದ ಆ ಕಟುಕ ಕಾರ್ಯ ಹೆಂಗಸರು-ಮಕ್ಕಳು ಅನುಭವಿಸಿದ ಯಾತನೆ, ಅವರ ಆಕ್ರಂದನಗಳು ಅರಣ್ಯ ರೋಧನವಾಗಿ ಇತಿಹಾಸದ ಪುಟ ಸೇರಿಬಿಟ್ಟವು.

ಅಂದು ಅಲ್ಲಿ ಸತ್ತವರ ಸಂಖ್ಯೆ ಇಂದಿಗೂ ನಿರ್ದಿಷ್ಟವಾಗಿ ಲಭ್ಯವಾಗಿಲ್ಲ. ಬ್ರಿಟಿಷ್ ಆಡಳಿತದ ಪ್ರಕಾರ ಸತ್ತದ್ದು 379 ಜನ. ಆದರೆ ಇನ್ನೊಂದು ಮಾಹಿತಿ ಹೇಳಿದ್ದು 1000 ಜನ. ಇವೆರಡರ  ಮೇಲೆ ಡಾ.ಸ್ಮಿತ್ ಎಂಬ ವೈದ್ಯನೊಬ್ಬ ನೀಡಿದ ಹೇಳಿಕೆ ಪ್ರಕಾರ ಸ್ಥಳದಲ್ಲಿ ಸತ್ತವರ ಸಂಖ್ಯೆ 1,526! ಗಾಯಗೊಂಡವರ ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚು ! ಗಾಯಾಳುಗಳಲ್ಲಿ ನಂತರ ಸಾವ ನ್ನಪ್ಪಿದವರ  ಸಂಖ್ಯೆ ಲಭ್ಯವಾಗಿಲ್ಲ.  ಇದು ಇತಿಹಾಸ ಕಂಡ ಮಾನವನ ವಿಕಟ ಅಟ್ಟಹಾಸ, ನಿಷ್ಕರುಣೆ, ಮದಕ್ಕೆ ಸಾಕ್ಷಿಯಾಗಿ ಇಂದಿಗೂ ನಿಂತ ಹೇಯ ಘಟನೆ.  ದುರಂತವೆಂದರೆ, ಇಂದಿನ ಪೀಳಿಗೆಗೆ ಬಹುತೇಕ ಇತಿಹಾಸದಲ್ಲಿನ ಇಂಥ ಕರಾಳ ಕೃತ್ಯಗಳ ಬಗ್ಗೆ ಅರಿವಿಲ್ಲದಿರುವುದು.  ವಿಶ್ವ ಎಂದೂ ಮರೆಯದ ಈ ಘಟನೆಗೆ ಕಾರಣವೇನು?: ಮೊದಲ ಮಹಾಯುದ್ಧ ಕಾಲ. ಭಾರತೀಯ ನಾಯಕತ್ವ ಬ್ರಿಟಿಷರಿಗೆ  ಅರಿವಿಲ್ಲದೆಯೇ ಈ ಮಹಾಯಜ್ಞದಲ್ಲಿ ಪಾಲ್ಗೊಂಡಿತ್ತು. ಇದನ್ನು ಬ್ರಿಟಿಷರು ನಿರೀಕ್ಷಿಸಿರಲಿಲ್ಲ. ಇದೇ ನೆಪದಲ್ಲಿ ಭಾರತೀಯರು ದಂಗೆ ಏಳಬಹುದೆಂಬ ಭೀತಿ ಅವರನ್ನು ಕಾಡತೊಡಗಿತು. ಭಾರತವು ಈ ಯುದ್ಧ ಕಾಲದಲ್ಲಿ ಭಾರೀ ಕೊಡುಗೆಯನ್ನೇ ನೀಡಿತ್ತು.

ಭಾರತದ ಸುಮಾರು 1.3 ಮಿಲಿಯನ್ ಸೈನಿಕರು ಯುರೋಪ್, ಆಫ್ರಿಕಾ, ಮಧ್ಯಪ್ರಾಚ್ಯಗಳಲ್ಲಿ  ಸೇವೆ ಸಲ್ಲಿಸುತ್ತಿದ್ದರು. ಇಲ್ಲಿಂದ ಪಶ್ಚಿಮ ಬಂಗಾಳ, ಪಂಜಾಬ್‌ಗಳಲ್ಲಿ ಜನ ಬ್ರಿಟಿಷರನ್ನು ವಿರೋಧಿಸುತ್ತಿದ್ದರು. ಇವೇ ಸ್ವಾತಂತ್ರ್ಯ ಹೋರಾಟದ ಮೂಲಗಳು.  ಬ್ರಿಟಿಷರು ಬಂಧಿಸಿದ್ದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಾದ ಸತ್ಯಪಾಲ್ ಹಾಗೂ ಸೈಫುದ್ದೀನ್ ಕಛ್‌ಲ್ಯೂ ಅವರ ಬಿಡುಗಡೆಗೆ ಒತ್ತಾಯಿಸಿ ಏಪ್ರಿಲ್ 10ರಂದು ಜಲಿಯಾನ್ ವಾಲಾಬಾಗ್‌ನಲ್ಲಿ ಪ್ರತಿಭಟನೆಗಳು ನಡೆದವು. ಆಗ ಬ್ರಿಟಿಷ್ ಸೈನಿಕರು ಹಲವರ ಮೇಲೆ ಗುಂಡು ಹಾರಿಸಿದ್ದರು. ಈ ಹಿನ್ನೆಲೆಯಲ್ಲಿ ಹಿಂಸಾಚಾರಗಳು ನಡೆದು ಐವರು ಯೂರೋಪಿಯನ್ನರು ಸಾವನ್ನಪ್ಪಿದ್ದರು.  ಇದು ಪಂಜಾಬಿಗಳು ಮತ್ತು ಬ್ರಿಟಿಷರ ನಡುವೆ ಕಿಚ್ಚು ಹೊತ್ತಿಸಿತ್ತು. ಸಣ್ಣಪುಟ್ಟ ಗಲಭೆಗಳು ನಡೆದೇ ಇದ್ದವು. ಕಡೆಗೆ ಏ.13ರಂದು ಜನರಲ್ ಡಯರ್ ಈ ದುಷ್ಕೃತ್ಯಕ್ಕೆ ಕೈ ಹಾಕಿ ಸಾವಿರಾರು ಜನರ ಜೀವ ತೆಗೆದ, ಆಗ ಭಾರತದ ವೈಸರಾಯ್ ಆಗಿದ್ದವನು ಲಾರ್ಡ್ ಚೆಲ್‌ಮ್ಸ್ ಫೋರ್ಡ್. ಅಂದಿನ ಜನರಲ್ ಡಯರ್ ಕೃತ್ಯವನ್ನು ಹಾಡಿ ಹೊಗಳಿದ್ದ ಪಂಜಾಬ್ ಗವರ್ನರ್ ಸರ್ ಮೈಖೇಲ್ ಒ.ಡಾಯರ್ 'ಯು ಹ್ಯಾವ್ ಡನ್ ವೆಲ್, ಯುವರ್ ಆಕ್ಷನ್ ಇಸ್ ಕರೆಕ್ಟ್ ಎಂದು ಶಹಭಾಸ್‌ಗಿರಿ ನೀಡಿದ್ದ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023