Sunday, April 26, 2015

ನೇಪಾಳಕ್ಕೆ ಭಾರತದ ಸಹಾಯ ಹಸ್ತ 'ಆಪರೇಷನ್‌ ಮೈತ್ರಿ"

ಹೊಸದಿಲ್ಲಿ: ಭೀಕರ ಭೂಕಂಪದಿಂದ ತತ್ತರಿಸಿರುವ ನೆರೆ ರಾಷ್ಟ್ರ ನೇಪಾಳದಲ್ಲಿ ಪರಿಹಾರ ಕಾರ್ಯ ಕೈಗೊಂಡಿರುವ ಭಾರತೀಯ ಸೇನೆ, ಈ ಕಾರ್ಯಾಚರಣೆಗೆ 'ಆಪರೇಷನ್‌ ಮೈತ್ರಿ' ಎಂದು ಹೆಸರಿಟ್ಟಿದೆ.

ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ವಾಯುಪಡೆಯ ಸಿ-130 ಜೆ ಸೂಪರ್ ಹರ್ಕ್ಯೂಲಸ್ ವಿಮಾನವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಸಿಬ್ಬಂದಿ ಹಾಗೂ ಪರಿಹಾರ ಸಾಮಗ್ರಿಗಳೊಂದಿಗೆ ನೇಪಾಳ ತಲುಪಿತ್ತು.

40 ಸದಸ್ಯರ ತ್ವರಿತ ಸೇವೆಯ ವೈದ್ಯಕೀಯ ತಂಡ ಮತ್ತು ವೈದ್ಯರು ವಿಮಾನದಲ್ಲಿದ್ದಾರೆ. ಭಾರತೀಯ ವಾಯುಪಡೆ, ಸೇನಾಪಡೆ ಮತ್ತು ವಿಪತ್ತು ನಿರ್ವಹಣಾ ತಂಡ ಸಕ್ರಿಯವಾಗಿವೆ. ಕಾಠ್ಮಂಡುವಿನಲ್ಲಿ ಸಿಲುಕಿದ್ದ 500ಕ್ಕೂ ಹೆಚ್ಚು ನಾಗರಿಕರನ್ನುರಕ್ಷಣಾ ಪಡೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

'ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಭಾರತ ಬೃಹತ್ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಕಳುಹಿಸಿದೆ. ಭಾನುವಾರವೂ ತಜ್ಞರ ತಂಡ ಅಲ್ಲಿಗೆ ತೆರಳಲಿದೆ,' ಎಂದು ರಕ್ಷಣಾ ಸಚಿವಾಲಯದ ವಕ್ತಾರ ಸಿತಾಂಶು ಕರ್‌ ತಿಳಿಸಿದ್ದಾರೆ.

'ಭಾನುವಾರ ಸುಮಾರು 10 ವಿಮಾನಗಳು ನೇಪಾಳಕ್ಕೆ ಪ್ರಯಾಣ ಬೆಳೆಸಲಿವೆ. ವೈದ್ಯರು, ಎಂಜಿನಿಯರ್‌ಗಳ ತಂಡ ಅಲ್ಲಿಗೆ ತೆರಳಲಿದೆ. ನೀರು ಮತ್ತು ಆಹಾರ ಪದಾರ್ಥಗಳನ್ನು ಸಂತ್ರಸ್ತರಿಗೆ ತಲುಪಿಸಲಾಗುವುದು,' ಎಂದು ಅವರು ತಿಳಿಸಿದ್ದಾರೆ.