Drop


Wednesday, April 15, 2015

FAST RUNNING ROBO 'ATRIYAS'

ವೇಗವಾಗಿ ಓಡುವ ರೋಬೊ 'ಏಟ್ರಿಯಾಸ್‌'

ಓದೇಶ ಸಕಲೇಶಪುರ

Wed, 04/15/2015 - 01:00

3 Images

VIEW GALLERY

ಹಿಂದಿನ ಎಲ್ಲ ರೋಬೊಗಳಿಗೆ ಹೋಲಿಸಿದರೆ, 'ಏಟ್ರಿಯಾಸ್' ಬಲು  ವೇಗವಾಗಿ ನಡೆಯಬಲ್ಲದು, ಓಡಬಲ್ಲದು. ನಡಿಗೆ ಮತ್ತು ಓಟಕ್ಕೆ ಸಮತಟ್ಟು ನೆಲವೇ ಬೇಕೆಂದಿಲ್ಲ. ಕಡಿಮೆ ಭಾರದ ಕಾರ್ಬನ್‌ ಫೈಬರ್‌ನಿಂದ ನಿರ್ಮಿಸಲಾದ ಇದರ ಕಾಲುಗಳಿಗೆ ಎಲಾಸ್ಟಿಕ್‌ ಫೈಬರ್‌ಗ್ಲಾಸ್‌ ಸ್ಪ್ರಿಂಗ್‌ ಅಳವಡಿಸಿದೆ. 'ಏಟ್ರಿಯಾಸ್‌' ಕುರಿತ  ಮಾಹಿತಿ ಇಲ್ಲಿದೆ .

ವಿಜ್ಞಾನಲೋಕದ ವಿಸ್ಮಯವೆನಿಸುವಂತಹ ಸಂಶೋಧನೆಯಾದ 'ರೊಬೊ' (ಯಂತ್ರಮಾನವ) ಯಾರಿಗೆ ತಾನೇ ಗೊತ್ತಿಲ್ಲ? ಕೆಲವರು ಓದಿ ತಿಳಿದಿದ್ದರೆ, ಮತ್ತೊಬ್ಬರು ನೋಡಿ ಅರ್ಥ ಮಾಡಿಕೊಂಡಿರುತ್ತಾರೆ. 

ಹೆಚ್ಚಿನ ಮಂದಿಗೆ 'ರೊಬೊ' ದರ್ಶನವಾಗಿರುವುದು ಸಿನಿಮಾಗಳಲ್ಲಿ. ಅದರಲ್ಲೂ ನಾಲ್ಕೈದು ವರ್ಷದ ಹಿಂದೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ನಟನೆಯಲ್ಲಿ ಮೂಡಿಬಂದ 'ಎಂದಿರನ್‌'  ಸಿನಿಮಾ ವೀಕ್ಷಿಸಿದ್ದರೆ, ಅದರಲ್ಲಿರುವ 'ಚಿಟ್ಟಿ' ಪಾತ್ರ (ರಜನಿಕಾಂತ್‌ ರೂಪದ ರೊಬೊ) ನಿಜಕ್ಕೂ ಮನದಲ್ಲಿ ಅಚ್ಚೊತ್ತಿಯೇ ಇರುತ್ತದೆ.

ಮನುಷ್ಯನಂತೆ ಓಡಾಡಬಲ್ಲ, ಮಾತನಾಡಬಲ್ಲ, ಹೇಳಿದ್ದನ್ನು ಕೇಳಿಸಿಕೊಂಡು ಪ್ರತಿಕ್ರಿಯಿಸಬಲ್ಲ.... ಹೀಗೆ ಹಲವು ಬಗೆಯ ರೊಬೊಗಳು ಇಲ್ಲಿಯವರೆಗೂ ಬಂದಿವೆ. ಆದರೆ ಈ ಹಿಂದಿನ ವಿಜ್ಞಾನಿಗಳ ಸಂಶೋಧನೆಯಲ್ಲಿ ಮೂಡಿ ಬಂದ ರೊಬೊಗಳನ್ನು ಮೀರಿಸುವಂತಹ ಯಂತ್ರಮಾನವನನ್ನು ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿದೆ!
ಹಲವು ವೈಶಿಷ್ಟ್ಯಗಳ ಈ ರೊಬೊ, ಈಗಾಗಲೇ ವಿಶ್ವದಾಖಲೆಯ ಕದ ತಟ್ಟಿದೆ.

'ಏಟ್ರಿಯಾಸ್‌' (ATRIAS: Assume The Robot Is A Sphere) ಎಂಬ ಹೆಸರಿನ ಇಂತಹದ್ದೊಂದು ಅದ್ಭುತ ರೊಬೊವನ್ನು ಅಮೆರಿಕದ 'ಒರೆಗಾನ್ ಸ್ಟೇಟ್ ಯೂನಿವರ್ಸಿಟಿ ಆಫ್‌ ಎಂಜನಿಯರಿಂಗ್‌'ನ (ಒಎಸ್‌ಯು) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದುವರೆಗೂ ಕೇವಲ ಮನುಷ್ಯನಷ್ಟೆ ಇಂತಹ ರೊಬೊ ನಿರ್ಮಾಣಕ್ಕೆ ಮಾದರಿಯಾಗಿದ್ದ. ಆದರೆ, 'ಏಟ್ರಿಯಾಸ್‌'  ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳು ಮಾತ್ರ,  ತಮ್ಮ ಈ ವಿನೂತನ ರೊಬೊಗೆ ಮನುಷ್ಯನ ಜತೆಗೆ ಪಕ್ಷಿಯ ಮಾದರಿಯನ್ನೂ ಆಧಾರವಾಗಿಟ್ಟುಕೊಂಡು ರೂಪಿಸಿದ್ದಾರೆ.

ಎರಡು ಕಾಲುಗಳುಳ್ಳ ಈ 'ಏಟ್ರಿಯಾಸ್‌' ಅಭಿವೃದ್ಧಿಪಡಿಸುವ ಕಾರ್ಯ 'ಅಂತರರಾಷ್ಟ್ರೀಯ ಹ್ಯೂಮನ್ ಸೈನ್ಸ್‌ ಪ್ರೋಗ್ರಾಮ್‌ ಆರ್ಗನೈಸೈಷನ್‌' (ಎಚ್‌ಎಫ್‌ಎಸ್‌ಪಿಒ)  ಬೆಂಬಲದೊಂದಿಗೆ 2009ರಲ್ಲಿ ಆರಂಭವಾಯಿತು. ಈ ಯೋಜನಗೆ ಅಮೆರಿಕ ಸರ್ಕಾರದ ಅಂಗಸಂಸ್ಥೆ 'ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ' (ಡಿಎಆರ್‌ಪಿಎ) ಧನಸಹಾಯ ಒದಗಿಸಿದೆ.

ವೇಗದ ಓಟಗಾರ
ಈ ಹಿಂದಿನ ಎಲ್ಲ ರೊಬೊಗಳಿಗೆ ಹೋಲಿಸಿದರೆ, 'ಏಟ್ರಿಯಾಸ್' ಅತ್ಯಂತ ವೇಗವಾಗಿ ನಡೆಯಬಲ್ಲದು ಮತ್ತು ಓಡಬಲ್ಲದು. ಇದರ ನಡಿಗೆ ಮತ್ತು ಓಟಕ್ಕೆ ಸಮತಟ್ಟಾದ ನೆಲವೇ ಇರಬೇಕೆಂದೇನಿಲ್ಲ. ತಗ್ಗು, ದಿಬ್ಬ ಇರುವ ಜಾಗಗಳಲ್ಲೂ ನಡೆಯುವ ಮತ್ತು ಓಡುವ ಸಾಮರ್ಥ್ಯ ಇದಕ್ಕಿದೆ!

ಕಡಿಮೆ ಭಾರವುಳ್ಳ ಕಾರ್ಬನ್‌ ಫೈಬರ್‌ನಿಂದ ನಿರ್ಮಿತವಾಗಿರುವ ಇದರ ಕಾಲುಗಳಿಗೆ ಎಲಾಸ್ಟಿಕ್‌ ಫೈಬರ್‌ಗ್ಲಾಸ್‌ನ ಸ್ಪ್ರಿಂಗ್‌ಗಳನ್ನು ಅಳವಡಿಸಲಾಗಿದೆ. ಈ ಕಾಲುಗಳು ನೋಡಲು ಒಂದು ರೀತಿ ಕೊಕ್ಕರೆಯ ಕಾಲುಗಳಂತೆ ಕಂಡುಬಂದರೆ ಆಶ್ಚರ್ಯವೇನಲ್ಲ. ಇದರಲ್ಲಿರುವ ಮೆಕ್ಯಾನಿಕಲ್ ಎನರ್ಜಿ ಸ್ಪೋರೇಜ್‌, ಚಿಕ್ಕ ಬ್ಯಾಟರಿಯ ಸಾಮರ್ಥ್ಯದಿಂದ ಸುತ್ತಲೂ ಓಡಾಡಲು ನೆರವಾಗುತ್ತದೆ.

ಪ್ರತಿರೋಧಕ ಗುಣ!
'ಕೊನೆಯ ಹಂತದ ಅಭಿವೃದ್ಧಿ ಕಾರ್ಯ ಮುಗಿದ ನಂತರ, 'ಏಟ್ರಿಯಾಸ್‌'ನನ್ನು ಒಂದೆಡೆ ನಿಲ್ಲಿಸಿ ಅದರ ಮೈಮೇಲೆ ಒದ್ದಾಗ ಮತ್ತು ತಳ್ಳಿದಾಗ ದುತ್ತನೇ ನೆಲಕ್ಕೆ ಬೀಳಲಿಲ್ಲ. ಬದಲಿಗೆ ಬಾಕ್ಸಿಂಗ್‌ ಪಟುಗಳ ಹಾಗೆ ಪ್ರತಿರೋಧ ತೋರಿದೆ. ಜತೆಗೆ ದಪ್ಪನೆಯ ಚೆಂಡುಗಳನ್ನು ಮೈ ಮೇಲೆ ಎಡೆಬಿಡದೆ ಎಸೆದರೂ, ನೆಲಕ್ಕುರಳದೆ ಪ್ರತಿರೋಧ ವ್ಯಕ್ತಪಡಿಸಿದೆ. ಇಂತಹದ್ದೊಂದು  ವಿಶೇಷವಾದ ಸ್ವರಕ್ಷಣಾತ್ಮಕ ಗುಣವನ್ನು 'ಏಟ್ರಿಯಸ್‌' ಹೊಂದಿದೆ' ಎಂದು ಬಹಳ ಖುಷಿಯಿಂದ ವಿವರಿಸುತ್ತಾರೆ ಒರೆಗಾನ್ ಸ್ಟೇಟ್ ಯೂನಿವರ್ಸಿಟಿ ಆಫ್‌ ಎಂಜನಿಯರಿಂಗ್‌'ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಜೋನಾಥನ್ ಹಸ್ಟ್‌.

ವಿಕೋಪಗಳಲ್ಲಿ ನೆರವಾಗಬಲ್ಲದು
ವೇಗವಾದ ನಡಿಗೆ, ಓಟ ಹಾಗೂ ತನ್ನ ಮೇಲೆರಗುವ ಯಾವುದೇ ವಸ್ತು ಅಥವಾ ವ್ಯಕ್ತಿಗೆ ಪ್ರತಿರೋಧ ತೋರುವ ವಿಶೇಷ ಲಕ್ಷಣಗಳನ್ನು ಹೊಂದಿರುವ 'ಏಟ್ರಿಯಸ್‌'ನನ್ನು ಮನುಷ್ಯರು ತೆರಳಲು ಸಾಧ್ಯವಾಗದ ಪ್ರದೇಶಗಳಿಗೆ, ಪ್ರಾಕೃತಿಕ ವಿಪತ್ತು ನಡೆದ ಸ್ಥಳಗಳಿಗೆ ಕಾರ್ಯಾಚರಣೆಗೆ ಕಳುಹಿಸಬಹುದು ಎನ್ನುತ್ತಾರೆ ಸಂಶೋಧಕರು.