NASA's MESSENGER Mission To Crash Into Mercury in two weeks.

ಬುಧ ಗ್ರಹಕ್ಕೆ ಅಪ್ಪಳಿಸಲಿದೆ ನಾಸಾ ನೌಕೆ

Sat, 04/18/2015 - 01:00

ವಾಷಿಂಗ್ಟನ್ (ಐಎಎನ್ಎಸ್): ಇಂದಿಗೆ ಸರಿಯಾಗಿ ಎರಡು ವಾರಗಳಲ್ಲಿ ನಾಸಾದ ಮೆಸೆಂಜರ್ ಬಾಹ್ಯಾಕಾಶ ನೌಕೆಯು ಪ್ರತಿ ಗಂಟೆಗೆ 14,080 ಕಿ. ಮೀ. ವೇಗದಲ್ಲಿ ಸಾಗಿ  ಸೂರ್ಯಗ್ರಹಕ್ಕೆ ಅತೀ ಸಮೀಪದಲ್ಲಿ ಇರುವ ಬುಧಗ್ರಹವನ್ನು ಅಪ್ಪಳಿಸಿ ಅಂತ್ಯ ಕಾಣಲಿದೆ.

ಈ ಬಾಹ್ಯಾಕಾಶ ನೌಕೆಯು ಅಪ್ಪಳಿಸುವ ಹೊಡೆತಕ್ಕೆ ಬುಧಗ್ರಹದಲ್ಲಿ 52 ಅಡಿ ಅಗಲದ ದೊಡ್ಡ ಗುಳಿ ಉಂಟಾಗಲಿದೆ. ಈ ತಿಂಗಳ 30ರಂದು ಮಧ್ಯಾಹ್ನ 3.25 ಗಂಟೆ ಸುಮಾರಿಗೆ (ವಿಶ್ವದ ಪೂರ್ವ ಭಾಗದ ಹಗಲು ವೇಳೆ)ಬಾಹ್ಯಾಕಾಶ ನೌಕೆಯು ಬುಧ ಗ್ರಹವನ್ನು ಅಪ್ಪಳಿಸುವಂತೆ  ಮಾಡುತ್ತೇವೆ ಎಂದು ಈ ಯೋಜನೆಯ ಎಂಜಿನಿಯರ್ ಡಾನ್ ಒ' ಶುಂಗ್‌ನೆಸ್ಸಿ ಅವರು ತಿಳಿಸಿದ್ದಾರೆ.

ಬುಧಗ್ರಹದ ಮೇಲ್ಮೈ ವಾತಾವರ ಣವನ್ನು ಅಧ್ಯಯನ ಮಾಡಲು 2004ರಲ್ಲಿ  ಉಡಾವಣೆ ಮಾಡಲಾಗಿದ್ದ ಈ ಬಾಹ್ಯಾಕಾಶ ನೌಕೆಯ ಒಟ್ಟು 7.9 ಶತಕೋಟಿ ಕಿ.ಮೀ. ಕ್ರಮಿಸಿದ್ದು, ಈ ಸಂದರ್ಭದಲ್ಲಿ ಸೂರ್ಯನ ಸುತ್ತ 15 ಸುತ್ತು ಹಾಕಿದೆ. ಇದಲ್ಲದೆ ಭೂಮಿಯ ಸಮೀಪ ಒಂದು ಬಾರಿ, ಶುಕ್ರ ಗ್ರಹದ ಬಳಿ ಎರಡು ಬಾರಿ ಹಾಗೂ ಬುಧ ಗ್ರಹದ ಬಳಿ ಮೂರು ಬಾರಿಗೆ ಹಾದು ಹೋಗಿದೆ.

ನಾಸಾದ ಮೆರಿನರ್ ಬಾಹ್ಯಾಕಾಶ ನೌಕೆಯು  1974ರಿಂದ 75ರ ಅವಧಿಯಲ್ಲಿ ಮೂರು ಬಾರಿ ಬುಧ ಗ್ರಹಕ್ಕೆ ಹೋಗಿ ಬಂದಿತ್ತು. ಬುಧ ಗ್ರಹದ ತುಂಬಾ ಕುಳಿಗಳು (ಹೊಂಡ) ಇವೆ ಎಂದು ಹೇಳಲಾಗಿದ್ದು, ಮೆಸೆಂಜರ್ ಬಾಹ್ಯಾಕಾಶ ನೌಕೆಯು ಉಂಟು ಮಾಡುವ ಕುಳಿಯು ಆ ಗ್ರಹದ ಅಧ್ಯಯನಕ್ಕೆ ತುಂಬಾ ಸಹಕಾರಿ ಆಗಲಿದೆ ಎಂದು ಶುಂಗ್‌ನೆಸ್ಸಿ ತಿಳಿಸಿದ್ದಾರೆ.

ಪ್ರತಿ ಸೆಕೆಂಡ್‌ಗೆ 3.91 ಕಿಲೋ ಮೀಟರ್‌ ವೇಗದಲ್ಲಿ ಭೂಮಿಗೆ ವಿರುದ್ಧವಾದ ದಿಕ್ಕಿನಲ್ಲಿರುವ ಬುಧನ  ಮತ್ತೊಂದು ಮೇಲ್ಮೈಗೆ ಈ ನೌಕೆ ಅಪ್ಪಳಿಸಲಿದೆ. ಇದರಿಂದಾಗಿ ಘಟನೆಯ ವೀಕ್ಷಣೆ ಹಾಗೂ ನಿಖರವಾದ ಸಮಯ ನಿರ್ಧಾರ ಖಗೋಳ ವಿಜ್ಞಾನಿಗಳಿಗೆ ಕಷ್ಟವಾಗಲಿದೆ.

ನಾಲ್ಕು ವರ್ಷಗಳ  ಕಾಲ  ಬುಧ ಗ್ರಹವನ್ನು ಸುತ್ತು ಹಾಕಿದ ನೌಕೆಯ ಕೊನೆಯ ಸುತ್ತಿನ ಪರಿಭ್ರಮಣ ಏಪ್ರಿಲ್‌ 24ರಂದು ಆರಂಭವಾಗಲಿದೆ.  ಅಲ್ಲಿಯ ನಂತರ ನೌಕೆಯಲ್ಲಿನ ಅನಿಲ ರೂಪದ ಹೀಲಿಯಂ ಇಂಧನ ಸಂಪೂರ್ಣವಾಗಿ ಖಾಲಿಯಾಗುತ್ತ ಸಾಗುತ್ತದೆ.  2004ರಲ್ಲಿ ಉಡಾವಣೆಯಾದ ಬಳಿಕ 6 ವರ್ಷಕ್ಕೂ ಹೆಚ್ಚು  ದೀರ್ಘ ಪಯಣ ಕೈಗೊಂಡ ಮೆಸೆಂಜರ್‌ ನೌಕೆ 2011, ಮಾರ್ಚ್‌ 18ರಂದು  ಬುಧ ಗ್ರಹದ ಕಕ್ಷೆಯನ್ನು ಸೇರಿತು.

ಅಮೆರಿಕದ ಮೇರಿಲ್ಯಾಂಡ್‌ನ ಲೌರೆಲ್‌ನಲ್ಲಿರುವ ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ ಆನ್ವಯಿಕ ಭೌತವಿಜ್ಞಾನ ಪ್ರಯೋಗಾಲಯದ ತಂತ್ರಜ್ಞರು ನೌಕೆಯ ಅಂತಿಮ ಸುತ್ತಿನ ಪರಿಭ್ರಮಣದ ಕರಾರುವಾಕ್ಕಾದ ನಿರ್ವಹಣೆಗೆ ಸಜ್ಜಾಗಿದ್ದಾರೆ.  ಬುಧ ಗ್ರಹ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹಗಳಲ್ಲಿ ಒಂದಾದರೂ ಆ ಗ್ರಹ ಇನ್ನೂ ಕೂಡ ನಿಗೂಢವಾಗಿಯೇ ಉಳಿದುಕೊಂಡಿದೆ. ಮೆಸೆಂಜರ್‌ ನೌಕೆಯ ಪಯಣ ಆರಂಭಿಸುವ ಮುನ್ನ ಆ ಗ್ರಹದ ಬಗ್ಗೆ ಗೊತ್ತಿದ್ದ ಮಾಹಿತಿ ಅತ್ಯಂತ ಕಡಿಮೆ. 

ಬುಧ ಗ್ರಹದ ಧ್ರುವ ಮತ್ತು ಸಮೀಪದ ಹೊಂಡಗಳಲ್ಲಿ ಅಪಾರ ಪ್ರಮಾಣದ ಘನೀಕರಿಸಿದ ರೂಪದ ನೀರಿನ ಮೂಲವಿದೆ ಎಂಬ ಮಾಹಿತಿಯನ್ನು ಮೊದಲು ನೀಡಿದ ಹೆಗ್ಗಳಿಕೆ ಮೆಸೆಂಜರ್ ನೌಕೆಗೆ ಸಲ್ಲುತ್ತದೆ.
ಹೀಗಾಗಿ ತನ್ನ ಯೋಜನೆಗಳ ಪೈಕಿ ಮೆಸೆಂಜರ್‌  ಅತ್ಯಂತ ಯಶಸ್ವಿ ಯೋಜನೆ ಎಂದು ನಾಸಾ ತಿಳಿಸಿದೆ.

MESSENGER ಎಂದರೇನು?
ME- MErcury
(ಬುಧ)
SS– Surface, Space
(ಮೇಲ್ಮೈ, ಬಾಹ್ಯಾಕಾಶ)
EN- ENvironment
(ಪರಿಸರ)
GE-GEo-chemistry
(ಭೂ–ರಸಾಯನಿಕ)
R- Ranging
(ಸಂಚಾರ )

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023