Drop


Tuesday, April 14, 2015

Now Sania on First Rank(officially)

ಸಾನಿಯಾ ನಂ. ವನ್‌ ಅಧಿಕೃತ

ಉದಯವಾಣಿ, Apr 14, 2015, 3:45 AM IST

ಹೊಸದಿಲ್ಲಿ: ಸಾನಿಯಾ ಮಿರ್ಜಾ ಅವರು ಅಧಿಕೃತವಾಗಿ ಡಬಲ್ಸ್‌ನಲ್ಲಿ ವಿಶ್ವದ ನಂಬರ್‌ ವನ್‌ ಸ್ಥಾನ ಪಡೆದ ಭಾರತದ ಪ್ರಪ್ರಥಮ ವನಿತಾ ಟೆನಿಸ್‌ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಸೋಮವಾರ ಬಿಡುಗಡೆಗೊಂಡ ನೂತನ ಡಬ್ಲ್ಯುಟಿಎ ರ್‍ಯಾಂಕಿಂಗ್‌ನ ಡಬಲ್ಸ್‌ ವಿಭಾಗದಲ್ಲಿ ಅವರು ನಂಬರ್‌ ವನ್‌ ಅಲಂಕರಿಸಿದ್ದಾರೆ.

ಒಟ್ಟಾರೆ 7660 ಅಂಕ ಗಳಿಸಿದ ಸಾನಿಯಾ ಅವರು ಇಟಲಿಯ ಸಾರಾ ಇರಾನಿ (7640 ಅಂಕ) ಅವರನ್ನು ಹಿಂದಿಕ್ಕಿ ನಂಬರ್‌ ವನ್‌ ಸ್ಥಾನಕ್ಕೇರಿದರು. ಅಮೆರಿಕದ ಚಾರ್ಲ್ಸ್‌ಟನ್‌ನಲ್ಲಿ ನಡೆದ ಡಬ್ಲ್ಯುಟಿಎ ಫ್ಯಾಮಿಲಿ ಸರ್ಕಲ್‌ ಕಪ್‌ ಟೆನಿಸ್‌ ಕೂಟದ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸಾನಿಯಾ ಈ ಸಾಧನೆ ಮಾಡಿದರು. ಅಗ್ರ ಶ್ರೇಯಾಂಕದ ಸಾನಿಯಾ-ಮಾರ್ಟಿನ್‌ ಹಿಂಗಿಸ್‌ ಅವರು ಫೈನಲ್‌ ಹೋರಾಟದಲ್ಲಿ ಕ್ಯಾಸಿ ಡೆಲ್ಲಾಕ್ವಾ ಮತ್ತು ದಾರಿಜಾ ಜುರಾಕ್‌ ಅವರನ್ನು 6-0, 6-4 ನೇರ ಸೆಟ್‌ಗಳಿಂದ ಉರುಳಿಸಿದ್ದರು. ಈ ಗೆಲುವಿನಿಂದ ಸಾನಿಯಾ 470 ಅಂಕ ಪಡೆದಿದ್ದರು.

ಸಾನಿಯಾ ಅವರಿಗಿಂತ ಮೊದಲು ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ ಅವರು ಡಬಲ್ಸ್‌ನಲ್ಲಿ ವಿಶ್ವದ ನಂಬರ್‌ ವನ್‌ ಸ್ಥಾನ ಅಲಂಕರಿಸಿದ್ದರು. 90ರ ದಶಕದಲ್ಲಿ ಪುರುಷರ ಡಬಲ್ಸ್‌ನಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದ ವೇಳೆ ಇವರಿಬ್ಬರು ನಂಬರ್‌ ವನ್‌ ಸ್ಥಾನ ಪಡೆದಿದ್ದರು.

ಸಾನಿಯಾ ಗ್ರ್ಯಾನ್‌ ಸ್ಲಾಮ್‌ ಕೂಟದ ಪ್ರಶಸ್ತಿ ಗೆದ್ದ ದೇಶದ ಪ್ರಥಮ ವನಿತಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಮಾರ್ಟಿನಾ ಹಿಂಗಿಸ್‌ ಜತೆಗೂಡಿ ಸಾನಿಯಾ ಅಮೋಘ ನಿರ್ವಹಣೆ ನೀಡುತ್ತಿದ್ದಾರೆ ಮತ್ತು ಒಂದೇ ಒಂದು ಪಂದ್ಯ ಕಳೆದುಕೊಳ್ಳದೇ ಸತತ ಮೂರನೇ ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. ಇಂಡಿಯನ್‌ ವೇಲ್ಸ್‌ನಲ್ಲಿ ಈ ವರ್ಷ ಜತೆಯಾಗಿ ಆಡಿದ ಮೊದಲ ಕೂಟದಲ್ಲಿಯೇ ಅವರು ಪ್ರಶಸ್ತಿ ಜಯಿಸಿದ್ದರು. ಆಬಳಿಕ ಮಿಯಾಮಿನಲ್ಲಿ ಕೂಡ ಪ್ರಶಸ್ತಿ ಪಡೆದರು. ಫ್ಯಾಮಿಲಿ ಕಪ್‌ ಸಾನಿಯಾ ಅವರ ಸತತ ಮೂರನೇ ಪ್ರಶಸ್ತಿಯಾಗಿದೆ. ಮೂರು ಕೂಟಗಳಲ್ಲಿ ಆಡಿದ 14 ಪಂದ್ಯಗಳಲ್ಲಿ ಅವರಿಬ್ಬರು ಕೇವಲ ಮೂರು ಸೆಟ್‌ ಕಳೆದುಕೊಂಡಿದ್ದರು.

ಅದ್ಭುತ ಅನುಭವ

ವಿಶ್ವದ ನಂಬರ್‌ ವನ್‌ ಸ್ಥಾನ ಪಡೆದಿರುವುದಕ್ಕೆ ನಿಜವಾಗಿಯೂ ರೋಮಾಂಚನವಾಗುತ್ತಿದೆ. ಇದೊಂದು ಅದ್ಭುತ ಅನುಭವ. ನನ್ನ ಟೆನಿಸ್‌ ಬಾಳ್ವೆ ವೇಳೆ ಈ ಸಾಧನೆ ಮಾಡಬೇಕೆಂದು ಕನಸು ಕಂಡಿದ್ದೆ. ಸಾಧನೆ ಮಾಡಿದ್ದರಿಂದ ನಿಜವಾಗಿಯೂ ಖುಷಿಯಾಗುತ್ತಿದೆ ಎಂದು ಸಾನಿಯಾ ಹೇಳಿದ್ದಾರೆ. ಸಾನಿಯಾ ತನ್ನ 12 ವರ್ಷಗಳ ದೀರ್ಘ‌ ಟೆನಿಸ್‌ ಬಾಳ್ವೆ ವೇಳೆ ಹಲವು ಪ್ರಥಮಗಳನ್ನು ಸಾಧಿಸಿದ್ದಾರೆ. ನಂಬರ್‌ ವನ್‌ ಸ್ಥಾನ ಮತ್ತು ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವುದು ಇದರಲ್ಲಿ ಪ್ರಮುಖವಾಗಿವೆ.