Drop


Thursday, April 9, 2015

South India's First Canal(Alamatti Left Bank) Solar Panel Unveiled Today

ದಕ್ಷಿಣ ಭಾರತದ ಮೊದಲ ಕಾಲುವೆ ಸೌರಫ‌ಲಕ ಇಂದು ಲೋಕಾರ್ಪಣೆ

ಉದಯವಾಣಿ, Apr 09, 2015, 3:40 AM IST

ಬಾಗಲಕೋಟೆ: ಆಲಮಟ್ಟಿ ಬಲದಂಡೆ ಕಾಲುವೆ ಮೇಲೆ ನಿರ್ಮಿಸಿದ ಸೌರಶಕ್ತಿ ವಿದ್ಯುತ್‌ ಉತ್ಪಾದನೆಯ ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ನಡೆಯಲಿದೆ. ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನೀರಾವರಿ ಕಾಲುವೆಯೊಂದರ ಮೇಲೆ ಸ್ಥಾಪಿಸಿದ ಸೌರಶಕ್ತಿ ವಿದ್ಯುತ್‌ ಉತ್ಪಾದನಾ ಘಟಕ ಎಂಬ ಖ್ಯಾತಿಗೆ ಇದು ಒಳಗಾಗಲಿದೆ. ಇದೇ ವೇಳೆ, ಆಲಮಟ್ಟಿ ಜಲಾಶಯದಲ್ಲಿ ನೂತನವಾಗಿ ಅಳವಡಿಸಿದ "ಲಾಲ್‌ ಬಹದ್ದೂರ್‌ ಶಾಸ್ತ್ರೀ ಸಾಗರ' ಮೆಟ್ಯಾಲಿಕ್‌ ನಾಮಫಲಕ ಅನಾವರಣ ಕಾರ್ಯಕ್ರಮ ಕೂಡ ನಡೆಯಲಿದೆ.

ಗುರುವಾರ ಸಂಜೆ 4:30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಯನ್ನು ಲೋಕಾರ್ಪಣೆಗೈಯಲಿದ್ದು, ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಐಟಿ-ಬಿಟಿ ಸಚಿವ ಎಸ್‌.ಆರ್‌.ಪಾಟೀಲ ಉಪಸ್ಥಿತರಿರಲಿದ್ದಾರೆ.

ದಕ್ಷಿಣ ಭಾರತದಲ್ಲಿಯೇ ಮೊದಲು: ಗುಜರಾತ್‌ನಲ್ಲಿ ಕಾಲುವೆಗಳ ಮೇಲೆ ನಿರ್ಮಿಸಲಾದ ಸೌರ ವಿದ್ಯುತ್‌ ಉತ್ಪಾದನಾ ಘಟಕ ಮಾದರಿಯಲ್ಲೇ ಬಾಗಲಕೋಟೆ ತಾಲೂಕಿನ ರಾಮಪುರ ಬಳಿ ಇರುವ ಆಲಮಟ್ಟಿ ಬಲದಂಡೆ ಕಾಲುವೆಯ ಮೇಲೆ ಈ ಘಟಕ ಸ್ಥಾಪಿಸಲಾಗಿದೆ. ದಕ್ಷಿಣ ಭಾರತದಲ್ಲಿಯೇ ಇಂತಹ ಘಟಕ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು. ಕಾಲುವೆ ಆರಂಭದ 8ನೇ ಕಿ.ಮೀ.ನಿಂದ 10.50 ಕಿಮೀ.ವರೆಗೆ ಸುಮಾರು 2.50 ಕಿ.ಮೀ.ದೂರ ಈ ಘಟಕ ನಿರ್ಮಾಣವಾಗಿದೆ. ಒಟ್ಟು 3,280 ಸೌರಫಲಕಗಳನ್ನು ಅಳವಡಿಸಲಾಗಿದ್ದು, ವರ್ಷದ 225 ದಿನಗಳ ಕಾಲ ಈ ಘಟಕ ವಿದ್ಯುತ್‌ ಉತ್ಪಾದಿಸಲಿದೆ. ಪ್ರತಿನಿತ್ಯ 7 ತಾಸುಗಳ ಕಾಲ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, 1 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ. ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ನಿರಂತರ ಜ್ಯೋತಿಗೆ ಬಳಕೆ: ಪ್ರಾಯೋಗಿಕವಾಗಿ ಸೌರ ವಿದ್ಯುತ್‌ ಉತ್ಪಾದನೆ ಯೋಜನೆಯನ್ನು ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್‌) ಕೈಗೊಂಡಿದೆ. ತಮಿಳುನಾಡಿನ ಸನ್‌ ಎಡಿಸನ್‌ ಕಂಪನಿ, ಈ ಸೌರ ಘಟಕ ನಿರ್ಮಿಸಿದೆ. ಉತ್ತರಪ್ರದೇಶದ ಲಖನೌದ ಸುಮಾರು 23 ನುರಿತ ತಜ್ಞ ಎಂಜಿನಿಯರ್‌ಗಳು, ಕೇವಲ 11 ತಿಂಗಳಲ್ಲಿ ಈ ಸೌರ ಘಟಕ ಸ್ಥಾಪಿಸಿದ್ದಾರೆ.

ಯೋಜನೆ ಯಶಸ್ವಿಯಾದರೆ ಕೆಬಿಜೆಎನ್‌ಎಲ್‌ ವ್ಯಾಪ್ತಿಯ ಮುಖ್ಯ ಕಾಲುವೆಗಳ ಮೇಲೆ ಇಂತಹುದೇ ಘಟಕ ಸ್ಥಾಪಿಸುವ ಪ್ರಸ್ತಾವನೆ ಇದೆ. ಇಲ್ಲಿ ಉತ್ಪಾದನೆಯಾಗಲಿರುವ ವಿದ್ಯುತ್ತನ್ನು ರಾಮಪುರ ಹೋಬಳಿ ವ್ಯಾಪ್ತಿಯ 32 ಹಳ್ಳಿಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ನೀಡಲು ಉದ್ದೇಶಿಸಲಾಗಿದೆ. ಉತ್ಪಾದನೆಯಾದ ವಿದ್ಯುತ್ತನ್ನು ಕೆಪಿಟಿಸಿಎಲ್‌ಗೆ ಕಳಿಸಿ ಬಳಿಕ ರಾಮಪುರ ಉಪ ವಿದ್ಯುತ್‌ ವಿತರಣಾ ಕೇಂದ್ರದಿಂದ ಈ ಎಲ್ಲ ಹಳ್ಳಿಗಳಿಗೆ ಪೂರೈಸಲಾಗುವುದು. ಕಳೆದೊಂದು ತಿಂಗಳಿಂದ ಪ್ರಾಯೋಗಿಕವಾಗಿ ವಿದ್ಯುತ್‌ ಉತ್ಪಾದನೆಯ ಪರೀಕ್ಷೆಯನ್ನೂ ನಡೆಸಲಾಗಿದೆ.