Drop


Wednesday, April 15, 2015

VENKATESH GODKINDI IS NO MORE:


ವೇಣುವಾದಕ ವೆಂಕಟೇಶ‌ ಗೋಡ್ಖಿಂಡಿ ಇನ್ನಿಲ್ಲ

Wed, 04/15/2015 - 01:00

ಬೆಂಗಳೂರು: ಪ್ರಸಿದ್ಧ ವೇಣುವಾದಕ ಪಂಡಿತ‌ ವೆಂಕಟೇಶ‌ ಗೋಡ್ಖಿಂಡಿ (74) ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನರಾದರು.ಅವರಿಗೆ ಪತ್ನಿ ಪದ್ಮಜಾ, ಪುತ್ರರಾದ ತಬಲಾ ವಾದಕ ಕಿರಣ್‌ ಗೋಡ್ಖಿಂಡಿ, ಅಂತರರಾಷ್ಟ್ರೀಯ ಖ್ಯಾತಿಯ ಬಾನ್ಸುರಿ  ವಾದಕ ಪ್ರವೀಣ್‌ ಗೋಡ್ಖಿಂಡಿ ಇದ್ದಾರೆ.

ಮೂಲತಃ ಧಾರವಾಡದವರಾದ ಅವರು ಆಕಾಶವಾಣಿಯ 'ಎ' ಗ್ರೇಡ್‌ ಕಲಾವಿದರಾಗಿದ್ದರು. ಧಾರವಾಡ ಆಕಾಶವಾಣಿಯಲ್ಲಿ ನಿಲಯ ನಿರ್ದೇಶಕ, ವಿಶೇಷ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಕಳೆದ 15 ವರ್ಷಗಳಿಂದ ಬೆಂಗಳೂರಿನ ವಿದ್ಯಾನಗರದಲ್ಲಿ ನೆಲೆಸಿದ್ದರು. ಈ ಸಂದರ್ಭದಲ್ಲಿ ಅವರು ನೂರಾರು ಶಿಷ್ಯರನ್ನು ತಯಾರು ಮಾಡಿದರು.  ಅವರ  ಅನೇಕ ಶಿಷ್ಯರು ಸ್ವಂತ ಸಂಗೀತ ಶಾಲೆಗಳನ್ನು ಆರಂಭಿಸಿದ್ದಾರೆ.

'ಕರ್ನಾಟಕಕ್ಕೆ ಬಾನ್ಸುರಿ ವಾದ್ಯವನ್ನು ಪರಿಚಯಿಸಿದ ಮೊದಲ ವ್ಯಕ್ತಿ ಅವರು. ಬಾನ್ಸುರಿಯಲ್ಲಿ ಅನೇಕ ಪ್ರಯೋಗ ಮಾಡಿ ರಾಜ್ಯದಲ್ಲಿ ಜನಪ್ರಿಯಗೊಳಿಸಿದ್ದರು. ಅವರು ಧಾರವಾಡ ಆಕಾಶವಾಣಿಯಲ್ಲಿ ಸಂಗೀತ ಪ್ರಧಾನ ನಾಟಕ ಪ್ರಯೋಗವನ್ನು ಆರಂಭಿಸಿದ್ದರು. ಅವರ ಶಿಷ್ಯ ವರ್ಗ ಬಹಳ ದೊಡ್ಡದು' ಎಂದು ಲೇಖಕ ಗೋಪಾಲ್‌ ವಾಜಪೇಯಿ ನೆನಪಿಸಿಕೊಂಡಿದ್ದಾರೆ.

'ಅವರದು ಮೂರು ತಲೆಮಾರಿನ ಸಂಗೀತ ಕುಟುಂಬ. ಪ್ರವೀಣ್‌ ಅವರಿಗೆ ತಂದೆಯೇ ಮೊದಲ ಗುರು ಆಗಿದ್ದರು. ವೆಂಕಟೇಶ್‌ ಗೋಡ್ಖಿಂಡಿ, ಮಗ ಪ್ರವೀಣ್‌ ಗೋಡ್ಖಿಂಡಿ ಹಾಗೂ ಮೊಮ್ಮಗ ಷಡ್ಜ ಅವರು ಕೆಲವು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಕಾರ್ಯಕ್ರಮ ನೀಡಿದ್ದರು. ಅದೊಂದು ಅಪೂರ್ವ ಕಾರ್ಯಕ್ರಮ' ಎಂದು ವೆಂಕಟೇಶ್‌ ಗೋಡ್ಖಿಂಡಿ ಅವರ ಶಿಷ್ಯರು ಸ್ಮರಿಸಿದ್ದಾರೆ.

ಅಂತ್ಯಕ್ರಿಯೆ: ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯ ವರೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನೂರಾರು ಅಭಿಮಾನಿಗಳು  ಅಂತಿಮ ನಮನ ಸಲ್ಲಿಸಿದರು. ಬಳಿಕ ಬನಶಂಕರಿಯ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.