16 ವರ್ಷದ ಮಕ್ಕಳಿಗೂ ದೊಡ್ಡವರ ರೀತಿ ಶಿಕ್ಷೆ: ಲೋಕಸಭೆ ಸಮ್ಮತಿ


 
ಉದಯವಾಣಿ, May 08, 2015, 3:40 AM IST

ನವದೆಹಲಿ: ಘೋರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ 16ರಿಂದ 18 ವರ್ಷದೊಳಗಿನ ಬಾಲಾರೋಪಿಗಳನ್ನು ವಯಸ್ಕರ ಕಾನೂನಿನಡಿ ವಿಚಾರಣೆಗೆ ಒಳಪಡಿಸಿ, ಶಿಕ್ಷಿಸುವ ಮಹತ್ವದ ಮಸೂದೆಗೆ ಲೋಕಸಭೆಗೆ ಗುರುವಾರ ಅನುಮೋದನೆ ನೀಡಿದೆ. ಇನ್ನು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಬಾಕಿ ಇದೆ.

ಆದರೆ, 16ರಿಂದ 18 ವರ್ಷದ ವಯೋಮಾನ ದಲ್ಲಿದ್ದಾಗ ಘೋರ ಅಪರಾಧವೆಸಗಿ 21 ವರ್ಷ ತುಂಬಿದ ಬಳಿಕ ಪೊಲೀಸರಿಗೆ ಸಿಕ್ಕಿಬೀಳುವ ವ್ಯಕ್ತಿಯನ್ನು ವಯಸ್ಕ ಕಾನೂನುಗಳಡಿಯೇ ವಿಚಾರಣೆನಡೆಸತಕ್ಕದ್ದು ಎಂಬ ಅಂಶವನ್ನು ವಿಧೇಯಕದಿಂದ ತೆಗೆದು ಹಾಕಿದ ಬಳಿಕ "ಬಾಲಾರೋಪಿ ನ್ಯಾಯ (ಮಕ್ಕಳ ಕಾಳಜಿ ಮತ್ತು ಸಂರಕ್ಷಣೆ) ಮಸೂದೆ'ಗೆ ಲೋಕಸಭೆ ತನ್ನ ಒಪ್ಪಿಗೆ ನೀಡಿತು.

ಇದೇ ವೇಳೆ, ಸರ್ಕಾರ ವಿಧೇಯಕಕ್ಕೆ ಸೂಚಿಸಿದ 42 ತಿದ್ದುಪಡಿಗಳಿಗೆ ಸದನ ಅನು ಮೋದನೆ ನೀಡಿತು. ಆದರೆ ಕಾಂಗ್ರೆಸ್ಸಿನ ಶಶಿ ತರೂರ್‌ ಹಾಗೂ ಆರ್‌ಎಸ್‌ಪಿಯ ಎನ್‌.ಕೆ. ಪ್ರೇಮಚಂದ್ರನ್‌ ಅವರು ಮಂಡಿಸಿದ ತಿದ್ದುಪಡಿ ಗಳನ್ನು ತಿರಸ್ಕರಿಸಲಾಯಿತು.

2012ರ ದೆಹಲಿ ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ತರಲಾಗುತ್ತಿರುವ ಈ ವಿಧೇಯಕ ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ದುರ್ಬಳಕೆಗೆ ಕಾರಣವಾಗಬಹುದು ಎಂದು ಇದೇ ವೇಳೆ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ಮಸೂದೆ ಮಕ್ಕಳ ಪರವಾಗಿರುವಂತೆ ಮಾಡಲು ಪ್ರಯತ್ನಿಸಿದ್ದೇನೆ. ಮಕ್ಕಳ ಹಕ್ಕುಗಳು ಹಾಗೂ ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ಸಿಗಬೇಕಿರುವ ನ್ಯಾಯ ವಿಚಾರದಲ್ಲಿ ಅತ್ಯುತ್ತಮ ಸಮತೋಲನ ಸಾಧಿಸಲಾಗಿದೆ ಎಂದು ಅವರು ಹೇಳಿದರು.

ಈ ವೇಳೆ, ಸಚಿವರಿಗೆ ಮಕ್ಕಳಿಗಿಂತ ಪ್ರಾಣಿಗಳ ಮೇಲೆಯೇ ಪ್ರೀತಿ ಜಾಸ್ತಿ ಎಂದು ಪ್ರತಿಪಕ್ಷಗಳ ಸದಸ್ಯರು ಕುಟುಕಿದರು. ಅದನ್ನು ತಿರಸ್ಕರಿಸಿದ ಮನೇಕಾ, ಅಪರಾಧ ಕೃತ್ಯಗಳಿಂದ ದೂರ ಉಳಿದು, ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದಂತೆ ಮಕ್ಕಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಈ ಕಾಯ್ದೆ ರೂಪಿಸಲಾಗಿದೆ ಎಂದರು. ರಾಷ್ಟ್ರೀಯ ಅಪರಾಧ ಬ್ಯೂರೋ ಪ್ರಕಾರ, 2013ರಲ್ಲಿ ಬಾಲಾರೋಪಿಗಳು 28000 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆ ಪೈಕಿ 3887 ಪ್ರಕರಣಗಳು ಘೋರವಾಗಿವೆ. ಅಲ್ಲದೆ ಹೇಯ ಅಪರಾಧ ಕೃತ್ಯಗಳಲ್ಲಿ ಮಕ್ಕಳು ಭಾಗಿಯಾಗುವ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾನೂನಿನ ಬಗ್ಗೆ ಪುನಾಪರಿಶೀಲಿಸಿ ಎಂದು ಸುಪ್ರೀಂಕೋರ್ಟ್‌ ಕೂಡ ಹೇಳಿದೆ ಎಂದು ವಿಧೇಯಕವನ್ನು ಸಮರ್ಥಿಸಿಕೊಂಡರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023