ಗ್ರಾ. ಪಂ. ಸದಸ್ಯತ್ವ ₹ 17 ಲಕ್ಷಕ್ಕೆ ಹರಾಜು!

ಗ್ರಾ. ಪಂ. ಸದಸ್ಯತ್ವ ₹ 17 ಲಕ್ಷಕ್ಕೆ ಹರಾಜು!

Fri, 05/15/2015 (PSGadyal)

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪ್ಪಾರಗಟ್ಟಿ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದ ಮುಂದೆ ಗುರುವಾರ ಗ್ರಾಮಸ್ಥರು ಸಭೆ ಸೇರಿದ್ದರು

ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ):  ತಾಲ್ಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಾದೂರು ಗ್ರಾಮ ಪಂಚಾಯ್ತಿಗೆ ಸೇರಿದ ನಾಲ್ಕು ಸದಸ್ಯ ಸ್ಥಾನಗಳನ್ನು ಉಪ್ಪಾರಗಟ್ಟಿ ಗ್ರಾಮದ ಜನರು  ₹ 16.93 ಲಕ್ಷಕ್ಕೆ ಹರಾಜು ಹಾಕಿದ್ದಾರೆ!

ಗುರುವಾರ ಸದಸ್ಯ ಸ್ಥಾನದ ಆಕಾಂಕ್ಷಿಗಳ ಸಭೆ ನಡೆಸಿದ ಗ್ರಾಮಸ್ಥರು, ಆ ಮೊತ್ತವನ್ನು ನಾಲ್ವರು ಆಕಾಂಕ್ಷಿಗಳಿಂದ ಒಂದು ವರ್ಷದೊಳಗೆ ವಸೂಲಿ ಮಾಡುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ.

ಗ್ರಾಮದ ಪ್ರಸಿದ್ಧ ಶಂಕರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯ ಏಕೈಕ ಉದ್ದೇಶದಿಂದ ಸಭೆ ಸೇರಿದ ಗ್ರಾಮಸ್ಥರು, ಚುನಾವಣೆಗೆ ಅವಕಾಶ ನೀಡದೇ ಆಕಾಂಕ್ಷಿಗಳಿಂದ ದೇಣಿಗೆ ಪಡೆದು ಅವಿರೋಧ ಆಯ್ಕೆ ಮಾಡುವ ತೀರ್ಮಾನ ಕೈಗೊಂಡರು.

ಹರಾಜು:
ಗ್ರಾಮದ 34 ಆಕಾಂಕ್ಷಿಗಳು ತಲಾ ₹500 ಪಾವತಿಸಿ ಸದಸ್ಯತ್ವ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು, ಅಂತಿಮವಾಗಿ ನಾಲ್ವರು ಆಯ್ಕೆಯಾದರು. ಸಾಮಾನ್ಯ ಕ್ಷೇತ್ರದಲ್ಲಿ ಹಿಟ್ನಾಳ್ ಉಮೇಶಪ್ಪ ₹ 5.25ಲಕ್ಷ, ರತ್ನಮ್ಮ ಸೋಮನಗೌಡ ₹ 5.25 ಲಕ್ಷ, ದಾಕ್ಷಾಯಿಣಿ ಹಳ್ಳಿ ಹನುಮಂತಪ್ಪ ₹5.42 ಲಕ್ಷ, ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಲ್ಲಿ ಎ.ಕೆ. ಬುಳ್ಳಪ್ಪ  ₹1.01ಲಕ್ಷ ಗರಿಷ್ಠ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ನೀಡಲು ಒಪ್ಪಿಗೆ ಸೂಚಿಸಿದರು.

'ದೇವಸ್ಥಾನ ಸೋರುತ್ತಿತ್ತು, ನವೀಕರಣಕ್ಕೆಂದು ಜನಪ್ರತಿನಿಧಿಗಳು ನೆರವು ನೀಡಲಿಲ್ಲ. ಗ್ರಾಮದ ಪ್ರತಿ ಮನೆಯಿಂದ ಇದುವರೆಗೂ ₹ 10 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಅದು ಸಾಕಾಗುವುದಿಲ್ಲ. ಹೀಗಾಗಿ ಚುನಾವಣಾ ಆಕಾಂಕ್ಷಿಗಳಿಂದಲೇ ಹಣ ಸಂಗ್ರಹಿಸಲಾಗುವುದು. ಅದೇ ಹಣದಿಂದ ದೇವಾಲಯ ನವೀಕರಿಸಲಾಗುವುದು' ಎಂದು ಗ್ರಾಮದ ಕೊಟ್ರೇಶ್ ಉಪ್ಪಾರ ಹೇಳಿದರು.

'ಚುನಾವಣೆ ನಡೆದರೆ ಮನಸ್ಸುಗಳು ಒಡೆಯುತ್ತವೆ. ಪಕ್ಷಗಳು, ಅಭ್ಯರ್ಥಿಗಳು ಹಣ, ಹೆಂಡ ಹಂಚುತ್ತಾರೆ. ಅದರ ಬದಲು ದೇವಾಲಯ ಕಟ್ಟಲು ನಿರ್ಧರಿಸಿದೆವು' ಎಂಬುದು ಸೋಮಶೇಖರಗೌಡ ಅವರ ನುಡಿ.
ಐದು ವರ್ಷಗಳಿಂದ ಈಚೆಗೆ ನಡೆದ ಚುನಾವಣೆಗಳಲ್ಲಿ ಗ್ರಾಮದಲ್ಲಿ ಬೂತ್ ಖರ್ಚಿಗೆಂದು ವಿವಿಧ ಪಕ್ಷಗಳ ಮುಖಂಡರು ನೀಡಿದ ಹಣವನ್ನು ದೇವಸ್ಥಾನದ ಹುಂಡಿಗೇ ಹಾಕಿದ್ದೇವೆ. ದೇವಾಲಯವೇ ನ್ಯಾಯಾಲಯ ಎಂದು ನಂಬಿದ್ದೇವೆ.

ಸರ್ಕಾರದಿಂದ ದೇವಸ್ಥಾನಕ್ಕೆ ಸೌಲಭ್ಯ ದೊರಕಿದ್ದರೆ ಚುನಾವಣೆ ನಡೆಯುತ್ತಿತ್ತು. ಈಗ ಚುನಾವಣೆ ನೆಪದಲ್ಲಿ ದುಡ್ಡು ಪೋಲು ಮಾಡುವ ಬದಲು ದೇವಸ್ಥಾನದ ಅಭಿವೃದ್ಧಿಗೆ ನೀಡಲು ಯುವಕರ ಮನವೊಲಿಸಿದ್ದೇವೆ ಎಂಬುದು ಹಿರಿಯರಾದ ಬಿ. ಈಶಪ್ಪ, ಶಿವಯ್ಯ ಮಠದ, ಎಂ. ಕೊಟ್ರಯ್ಯ, ವೀರಭದ್ರಪ್ಪ, ಉಮೇಶಪ್ಪ, ಮೃತ್ಯುಂಜಯಪ್ಪ, ಮಲ್ಲಪ್ಪ, ಮಂಜುನಾಥ, ಜಗದೀಶ್, ರಮೇಶಪ್ಪ, ಮಲ್ಲಪ್ಪ  ಅವರ ನುಡಿ.

ಮುಖ್ಯಾಂಶಗಳು

* ಅವಿರೋಧ ಆಯ್ಕೆಗೆ  ನಾಲ್ವರಿಂದ ₹ 16.93 ಲಕ್ಷ ಸಂಗ್ರಹಿಸಲು ನಿರ್ಧಾರ

* ಸದಸ್ಯತ್ವ ಹರಾಜು ಶುಲ್ಕ ₹ 500

* ಹಣ ನೀಡಲು ನಾಲ್ವರು ಒಪ್ಪಿಗೆ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023