ದೇಶದಲ್ಲೇ ಮೊದಲು: 5 ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ ಪಂಜಾಬ್‌ ಮಾತೆ


ಉದಯವಾಣಿ, May 07, 2015, 3:32 PM IST

ಭಟಿಂಡಾ, ಪಂಜಾಬ್‌: ಭಾರತದ ಮೊತ್ತ ಮೊದಲ ಐದು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ ಹೆಗ್ಗಳಿಕೆಗೆ ಪಂಜಾಬಿನ ಸಂಗ್ರೂರು ಜಿಲ್ಲೆಯ ಬಡ ದಂಪತಿ ಪಾತ್ರರಾಗಿದ್ದಾರೆ.

ಐದೂ ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ 32 ವರ್ಷ ಪ್ರಾಯದ ಕುಲದೀಪ್‌ ಕೌರ್‌ ಎಂಬವರು. ಈಕೆ ಸಂಗ್ರೂರು ಜಿಲ್ಲೆಯ ಗಿದ್ದಾರಾಣಿ ಗ್ರಾಮದ ಬಡ ರೈತನ ಪತ್ನಿ. ಭಟಿಂಡಾ ಸಮೀಪದ ಭುಕೋ ಎಂಬಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಈಕೆ ಮಂಗಳವಾರ ಐದು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದಳು. ಕಳೆದ ಎಪ್ರಿಲ್‌ 30ರಂದು ಕುಲದೀಪ್‌ ಕೌರ್‌ ಅವರನ್ನು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕುಲದೀಪ್‌ ಕೌರ್‌ ಅವರ ಅತ್ಯಂತ ಕ್ಲಿಷ್ಟಕರ ಹೆರಿಗೆಯನ್ನು ನಿಭಾಯಿಸಿದ ಆದೇಶ್‌ ಆಸ್ಪತ್ರೆಯ ಗೈನಕಾಲಜಿ ವಿಭಾಗದ ಮುಖ್ಯಸ್ಥೆ ಡಾ| ಹರಿಕಿರಣ್‌ ಕೌರ್‌ ಹೀಗೆ ಹೇಳುತ್ತಾರೆ: "ಇದು ನಿಜಕ್ಕೂ ಅತ್ಯಂತ ದೊಡ್ಡ ಸವಾಲಿನ ಕ್ಲಿಷ್ಟಕರ ಹೆರಿಗೆಯಾಗಿತ್ತು. ಯೂರು ಈ ಕೇಸನ್ನು ಕೈಗೆತ್ತಿಕೊಳ್ಳಲು ಸಿದ್ಧರಿರಲಿಲ್ಲ. ಕಾರಣ ಈ ಹೆರಿಗೆಯಲ್ಲಿ ತಾಯಿ ಕುಲದೀಪ್‌ ಅವರ ಪ್ರಾಣಕ್ಕೇ ಅಪಾಯವಿತ್ತು. ಕೇವಲ ಐದು ಗ್ರಾಮ್‌ ರಕ್ತದೊಂದಿಗೆ ಈಕೆ ಐದು ಶಿಶುಗಳನ್ನು ಹೊಂದಿದ್ದಳು. ಅಲ್ಟ್ರಾಸೌಂಡ್‌ನ‌ಲ್ಲಿ ಈಕೆಯ ಗರ್ಭದಲ್ಲಿ ನಾಲ್ಕು ಶಿಶುಗಳಿರುವುದು ವ್ಯಕ್ತವಾಗಿತ್ತು. ಆದರೆ ಆಕೆ ಐದು ಮಕ್ಕಳನ್ನು ಹೆತ್ತಳು.

ವೈದ್ಯರ ಪ್ರಕಾರ ಕುಲದೀಪ್‌ ಕೌರ್‌ ಅವರು ಯಶಸ್ವೀ ಹೆರಿಗೆಯ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಆಕೆ ಹೆತ್ತಿರುವ ಐದು ಮಕ್ಕಳಲ್ಲಿ ಎರಡು ಮಕ್ಕಳ ಸ್ಥಿತಿ ಗಂಭೀರವಿದೆ. ಗರ್ಭಧಾರಣೆಯಾದ ಏಳೇ ತಿಂಗಳಲ್ಲಿ ಈ ಹೆರಿಗೆಯು ಅವಧಿಪೂರ್ವವಾಗಿ ನಡೆದಿರುವುದರಿಂದ ಪರಿಸ್ಥಿತಿ ಸಂಕಷ್ಟಕರವಾಗಿತ್ತು. ಅವಧಿಗೆ ಮುನ್ನ ಜನಿಸಿರುವುದರಿಂದ ಶಿಶುಗಳ ತೂಕ ಕೇವಲ 850 ಗ್ರಾಂ ಇದೆ. ದಿನದ 24 ತಾಸು ಕೂಡ ನಾವು ಈ ಶಿಶುಗಳ ತೀವ್ರ ನಿಗಾ ವೈದ್ಯಕೀಯ ರಕ್ಷಣೆನ್ನು ನೀಡುತ್ತಿದ್ದೇವೆ ಎಂದು ಡಾ| ಹರಿಕಿರಣ್‌ ಕೌರ್‌ ಹೇಳಿದರು.

ಕುಲದೀಪ್‌ ಮತ್ತು ಸುಖಪಾಲ್‌ ಸಿಂಗ್‌ ದಂಪತಿಗೆ ಈಗಾಗಲೇ ನಾಲ್ಕು ಮತ್ತು ಏಳು ವರ್ಷ ಪ್ರಾಯದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಗ ಹೊಸದಾಗಿ ಹುಟ್ಟಿರುವ ಐದು ಹೆಣ್ಣುಮಕ್ಕಳಿಂದಾಗಿ ಒಟ್ಟು ಮಕ್ಕಳ ಸಂಖ್ಯೆ ಏಳಾಗಿದೆ.

ಮನೆಯಲ್ಲಿ ತೀವ್ರ ಬಡತನ ಮತ್ತು ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಇರುವ ಹೊರತಾಗಿಯೂ, ಮತ್ತೆ ಹೊಸದಾಗಿ ಐದು ಮಕ್ಕಳನ್ನು ಹೆರುವ ಕಷ್ಟವನ್ನು ಎದುರಿಸಲು ಸಿದ್ಧರಾದ ಈ ದಂಪತಿ, ತಮ್ಮ ಎಲ್ಲ ಹೆಣ್ಣು ಮಕ್ಕಳಿಗೆ ಯೋಗ್ಯ ಶಿಕ್ಷಣ ಕೊಡುವ ಸಂಕಲ್ಪ ಹೊಂದಿರುವುದು ಗಮನಾರ್ಹವಾಗಿದೆ. ಹೆಣ್ಣು ಶಿಶುಗಳನ್ನು ಭ್ರೂಣಾವಸ್ಥೆಯಲ್ಲೇ ಕೊಲ್ಲುವ ಅಮಾನುಷ ಪದ್ಧತಿ ಇರುವ ಈ ಕಾಲದಲ್ಲಿ ಕುಲದೀಪ್‌ ದಂಪತಿ ಏಳು ಹೆಣ್ಣು ಮಕ್ಕಳ ಲಾಲನೆ ಪಾಲನೆಯನ್ನು ಕರ್ತವ್ಯವೆಂದು ಬಗೆದು ಮುಂದಡಿ ಇಟ್ಟಿರುವುದು ಪ್ರಶಂಸಾರ್ಹವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಈ ಬಡ ದಂಪತಿಗೆ ಆರ್ಥಿಕವಾಗಿ ನೆರವಾಗುವಂತೆ ವೈದ್ಯರು ಜನರಿಗೆ ಮನವಿ ಮಾಡಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023