Drop


Wednesday, May 27, 2015

ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ


Written by: ಬಿ.ಎಂ. ಲವಕುಮಾರ್, ಮೈಸೂರು
| Wed, May 27, 2015, 14:56 [IST]
ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಸುಮಾರು ಅರ್ಧ
ಸಹಸ್ರಮಾನಕ್ಕೂ ಹೆಚ್ಚು ಕಾಲ ಕರ್ನಾಟಕವನ್ನು, ಸಂಸ್ಕೃತಿಯನ್ನು,
ಶ್ರೀಮಂತಿಕೆಯನ್ನು ಮೆರೆದಾಡಿಸಿದ ಹೆಗ್ಗಳಿಕೆ ಮೈಸೂರು
ಅರಸರದು. ಈ ಅವಧಿಯಲ್ಲಿ ಯಾವ್ಯಾರ ರಾಜರು ಮೈಸೂರು
ಪ್ರಾಂತ್ಯವನ್ನು ಆಳಿ ಮೆರೆದಾಡಿದರು ಎಂಬುದರತ್ತ
ಒಂದು ನೋಟ ಇಲ್ಲಿದೆ. ಶ್ರೀಕಂಠದತ್ತ
ಒಡೆಯರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ
ಸ್ಥಾನವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ತುಂಬುತ್ತಿದ್ದು, ಮೈಸೂರಿನ ಭವ್ಯ ಪರಂಪರೆ
ಮುಂದುವರಿಯುತ್ತಿದೆ. ಮೈಸೂರು ಮಹಾರಾಜರ ಭವ್ಯ ಇತಿಹಾಸದ
ಪುಟಗಳನ್ನು ಇಲ್ಲಿ ಓದಿರಿ - ಸಂಪಾದಕ.
***
ಮೈಸೂರು ರಾಜರ ಆಡಳಿತಾವಧಿ ಚರಿತ್ರೆ ಪ್ರಕಾರ 1399ರಿಂದ
ಆರಂಭವಾಗುತ್ತದೆ. ಯದುರಾಯರನ್ನು ಯದುವಂಶದ
ಸ್ಥಾಪಕರೆಂದು ಹೇಳಲಾಗುತ್ತದೆ. ಯದುರಾಯ ಮತ್ತು
ಕೃಷ್ಣರಾಯರು ಉತ್ತರದ ದ್ವಾರಕಾಪಟ್ಟಣದ ರಾಜದೇವನ
ಮಕ್ಕಳಾಗಿದ್ದು, ಇವರು ಪುರಾಣ ಪ್ರಸಿದ್ಧ ಯಾದವಗಿರಿ(ಮೇಲುಕೋಟೆ)ಗೆ
ತಮ್ಮ ಮನೆ ದೇವರಾದ ಚೆಲುವನಾರಾಯಣ ಸ್ವಾಮಿಯ ದರ್ಶನ
ಮಾಡಲು ಆಗಮಿಸುತ್ತಾರೆ. ದರ್ಶನ ಮುಗಿಸಿಕೊಂಡು
ಕಾವೇರಿ ನದಿ ದಾಟಿ ಮೈಸೂರನ್ನು ತಲುಪುತ್ತಾರೆ.
ಈ ಸಂದರ್ಭ ಮೈಸೂರಿನಲ್ಲಿ ಪಾಳೆಗಾರರಾಗಿದ್ದ ಚಾಮರಾಜ
ಎಂಬುವರು ಆಡಳಿತ ನಡೆಸಿ
ತೀರಿಕೊಂಡಿದ್ದರು. ಇವರಿಗೆ
ಹೆಂಡತಿ ಹಾಗೂ ಸುಂದರ ಮಗಳಿದ್ದರು. ಪಾಳೆಗಾರ ಚಾಮರಾಜರು
ಕಾಲವಾದ ಬಳಿಕ ಮೈಸೂರು ಸೀಮೆಯ ದಳವಾಯಿಯಾಗಿದ್ದ
ಕೊರಗಳ್ಳಿ ಮಾರನಾಯಕ ಇವರಿಗೆ ಹಿಂಸೆ
ನೀಡಲು ಆರಂಭಿಸಿದನಲ್ಲದೆ, ಚಾಮರಾಜರ ಪುತ್ರಿ
ರಾಜಕುಮಾರಿ ದೇವಾಜಮ್ಮಣಿಯನ್ನು ತನಗೆ ವಿವಾಹ
ಮಾಡಿಕೊಡುವಂತೆ
ಪೀಡಿಸತೊಡಗಿದನು.
ಈತನ ಹಿಂಸೆಯಿಂದ ಬೇಸತ್ತ ಮಹಾರಾಣಿ ಜಂಗಮರ
ಸಹಾಯದಿಂದ ಯದುರಾಯ ಮತ್ತು ಕೃಷ್ಣರಾಯರ ಮಧ್ಯೆ
ಸಂಧಾನ ನಡೆಸಿ ಅವರ ಸಹಕಾರದಿಂದ ಮಾರನಾಯಕನನ್ನು
ಕೊಂದು ಬಳಿಕ ಯದುರಾಯನಿಗೆ ತನ್ನ ಮಗಳು
ದೇವಾಜಮ್ಮಣಿಯನ್ನು ಕೊಟ್ಟು ವಿವಾಹ ಮಾಡುವ
ಮೂಲಕ ಮೈಸೂರಿನಲ್ಲಿ ಯದುವಂಶದ ಹುಟ್ಟಿಗೆ ಕಾರಣರಾದರು.
ಅಲ್ಲಿಂದ ಮುಂದಕ್ಕೆ 1423ರಿಂದ 1459ರವರೆಗೆ
ಒಂದನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್,
1459ರಿಂದ 1478ರವರೆಗೆ ಹಿರಿಯ ಬೆಟ್ಟದ ಚಾಮರಾಜ
ಒಡೆಯರ್ ಪುತ್ರ ತಿಮ್ಮರಾಜ ಒಡೆಯರ್ ಆಡಳಿತ ನಡೆಸಿದರೆ,
ನಂತರ 1478ರಿಂದ 1513ರವರೆಗೆ ಎರಡನೇ ಹಿರಿಯ
ಚಾಮರಾಜ ಒಡೆಯರ್, 1513ರಿಂದ 1553ರವರೆಗೆ ಮೂರನೇ
ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಆಡಳಿತ ನಡೆಸಿದರು.
1553ರಿಂದ 1572ರವರೆಗೆ ಆಡಳಿತ ನಡೆಸಿದ ಎರಡನೆಯ
ತಿಮ್ಮರಾಜ ಒಡೆಯರ್ ಮೈಸೂರನ್ನು ವಿಸ್ತರಿಸಿದರು. ಸುತ್ತಲಿನ
ಪಾಳೇಗಾರರನ್ನು ಗೆದ್ದು ಅವರಿಂದ ಆನೆ, ಕುದುರೆ
ಮೊದಲಾದವುಗಳನ್ನು ಪಡೆದರಲ್ಲದೆ
'ಬಿರುದೆಂತೆಂಬರ ಗಂಡ' ಎಂಬ ಬಿರುದಿಗೂ
ಪಾತ್ರರಾದರು.
-----
1572ರಿಂದ 1576ರವರೆಗೆ ನಾಲ್ಕನೇ
ಬೋಳಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಇವರ
ಆಡಳಿತಾವಧಿಯಲ್ಲಿ ಒಂದು ವಿಸ್ಮಯ ನಡೆಯಿತು.
ಅದೇನೆಂದರೆ ಚಾಮುಂಡೇಶ್ವರಿಯ ದರ್ಶನ ಪಡೆಯಲು
ಚಾಮುಂಡಿಬೆಟ್ಟಕ್ಕೆ ತೆರಳಿದಾಗ ಇವರ ತಲೆ ಮೇಲಾಗಿ ಸಿಡಿಲು
ಬಡಿಯಿತು. ಆದರೆ ಇವರಿಗೆ ಅದರಿಂದ ಯಾವುದೇ
ತೊಂದರೆಯಾಗದೆ ತಲೆಕೂದಲು ಮಾತ್ರ ಉದುರಿತು.
ಮುಂದೆ ಬೋಳಚಾಮರಾಜ ಒಡೆಯರ್ ಎಂದೇ ಹೆಸರಾದರು. ಇವರು
'ಸುಗುಣ ಗಂಭೀರ' ಎಂಬ ಬಿರುದು ಪಡೆದಿದ್ದರು.
ಐದನೇ ಬೆಟ್ಟದ ಚಾಮರಾಜ ಒಡೆಯರ್ 1576ರಿಂದ
1578ರವರೆಗೆ ಕೇವಲ ಎರಡು ವರ್ಷಗಳ ಕಾಲ ಆಡಳಿತ
ನಡೆಸಿದರಲ್ಲದೆ, ವೈರಾಗ್ಯ ತಾಳಿದ ಅವರು ಆಡಳಿತವನ್ನು ತನ್ನ
ಸಹೋದರರಿಗೆ ವಹಿಸಿಕೊಟ್ಟರು. ಆ ನಂತರ
ಆಡಳಿತ ವಹಿಸಿಕೊಂಡ ಒಂದನೇ ರಾಜ
ಒಡೆಯರ್ 1578ರಿಂದ 1617ರವರೆಗೆ ಆಡಳಿತ ನಡೆಸಿದರು.
ಇವರ ಕಾಲದಲ್ಲಿ ಅಂದರೆ 1610ರಲ್ಲಿ ರಾಜಧಾನಿಯನ್ನು
ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ
ವರ್ಗಾಯಿಸಲಾಯಿತಲ್ಲದೆ, ದಸರಾ ಆಚರಣೆಯೂ ಜಾರಿಗೆ ಬಂದಿತು.

1617ರಿಂದ 1637ರವರೆಗೆ ಆರನೇ ಚಾಮರಾಜ ಒಡೆಯರ್
ಆಡಳಿತ ನಡೆಸಿದರು. ಇವರ ಕಾಲದಲ್ಲಿ ಮೈಸೂರು ರಾಜ್ಯ ಇನ್ನಷ್ಟು
ವಿಸ್ತಾರಗೊಂಡಿತು. ಇವರು ಸಾಹಿತ್ಯದ ಅಭಿರುಚಿ
ಹೊಂದಿದ್ದರು. 1637ರಲ್ಲಿ ಪಟ್ಟಕ್ಕೆ
ಬಂದ ಇಮ್ಮಡಿರಾಜ ಒಡೆಯರ್
ವೀರರಾಗಿದ್ದರಲ್ಲದೆ ಒಂದೇ ವರ್ಷದಲ್ಲಿ
ಮಲೆವರಗಂಡ, ಸಂಗೀತಲೋಲ, ವೀರ
ಶೂರ, ಸಾಹಿತ್ಯ ರತ್ನಾಕರ, ಅಭಯ ಪ್ರತಾಪಾಧೀಶ್ವರ
ಮುಂತಾದ ಬಿರುದು ಪಡೆದು 1638ರವರೆಗೆ ಆಡಳಿತ ನಡೆಸಿದರು.
1638ರಿಂದ 1659 ರಣಧೀರ
ಕಂಠೀರವ ನರಸರಾಜ ಒಡೆಯರ್ ಆಡಳಿತ ನಡೆಸಿದರು.
ಇವರು ಮಹಾವೀರರಾಗಿದ್ದು, 25 ಜಟ್ಟಿಗಳ ಸಂಗಡ
ಹೋರಾಡಿ ಗೆದ್ದ ಖ್ಯಾತಿಯೂ ಇವರದಾಗಿತ್ತು. ಸುಮಾರು 20 ವರ್ಷಗಳ ಕಾಲ
ಆಡಳಿತ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
1659ರಿಂದ 1672ರವರೆಗೆ ಆಡಳಿತ ನಡೆಸಿದ
ದೊಡ್ಡ ದೇವರಾಜ ಒಡೆಯರ್ ಪರಾಕ್ರಮಿಯಾಗಿದ್ದು,
ಇವರ ಕಾಲದಲ್ಲಿ ಭಕ್ತರ ಅನುಕೂಲಕ್ಕಾಗಿ ಚಾಮುಂಡಿಬೆಟ್ಟಕ್ಕೆ
ಮೆಟ್ಟಿಲುಗಳನ್ನು ಸ್ಥಾಪಿಸಲಾಯಿತು. ಅಲ್ಲದೆ, ಅನ್ನಛತ್ರ, ಸಾಲುಮರ,
ನೀರಿನಕೊಳ ಮತ್ತು ಅಗ್ರಹಾರಗಳನ್ನು
ನಿರ್ಮಿಸಿದರು. ಇವರು ರಾಜಕುಲತಿಲಕ, ರಾಜಮಾರ್ತಾಂಡ, ರಾಜಾಧಿರಾಜ,
ಪರಮೇಶ್ವರ ಮುಂತಾದ ಬಿರುದಿಗೆ ಪಾತ್ರರಾಗಿದ್ದರು.
---
1672ರಿಂದ 1704ರವರೆಗೆ
ರಾಜ್ಯಭಾರ ಮಾಡಿದ ಚಿಕ್ಕದೇವರಾಜ ಒಡೆಯರ್ ಪಂಡಿತರೂ,
ಮಹಾಪರಾಕ್ರಮಿಯೂ ಆಗಿದ್ದರು. ಇವರು ಶಿವಾಜಿ ಮತ್ತು
ಔರಂಗಜೇಬನ ಸಮಕಾಲೀನರಾಗಿದ್ದರು. ರಾಜ್ಯಭಾರ
ವಹಿಸಿಕೊಂಡ ಐದು ದಿನದಲ್ಲಿ ದಂಡೆತ್ತಿ
ಬಂದ ಮಧುರೆಯ ಚೊಕ್ಕನಾಯಕನೆಂಬ
ಪಾಳೇಗಾರನನ್ನು ಎದುರಿಸಿ ಜಯಪಡೆದರಲ್ಲದೆ, ಸತ್ಯಮಂಗಲ
ಮತ್ತು ಧರ್ಮಪುರಂ ಎಂಬ ಎರಡು ಚಿಕ್ಕ ರಾಜ್ಯವನ್ನು
ತಮ್ಮ ವಶ ಮಾಡಿಕೊಂಡರು.
ಚಿಕ್ಕದೇವರಾಜ ಒಡೆಯರ್ ಪುತ್ರರಾದ ಕಂಠೀರವ
ಮಹಾರಾಜ ಒಡೆಯರ್ 1704ರಿಂದ 1713ರವರೆಗೆ ಆಡಳಿತ
ನಡೆಸಿದರು. ಇವರ ಕಾಲದಲ್ಲಿ ಔರಂಗಜೇಬನ ಆಡಳಿತದಲ್ಲಿ
ದಕ್ಷಿಣ ಭಾರತದ ಗೌರ್ನರ್ ಶ್ರೀರಂಗಪಟ್ಟಣದ
ಮೇಲೆ ದಂಡೆತ್ತಿ ಬಂದಿದ್ದರು. ಈ ಸಂದರ್ಭ
ಕಂಠೀರವ ಮಹಾರಾಜ ಒಡೆಯರ್ ಒಂದೂವರೆ ಕೋಟಿ
ರೂ.ಗಳ ಕಪ್ಪಕಾಣಿಕೆ ಸಲ್ಲಿಸಿ ಸಂಧಾನ
ಮಾಡಿಕೊಂಡರು.
ಇವರ ಪುತ್ರ ದೊಡ್ಡ ಕೃಷ್ಣರಾಜ ಒಡೆಯರ್ ಕೇವಲ
ಹನ್ನೆರಡು ವರ್ಷಕ್ಕೆ ಪಟ್ಟಕ್ಕೇರಿದರು. 1714ರಿಂದ
1732ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ನಿಜಾಂ,
ಆರ್ಕಾಟ್ ನವಾಬ್, ಸಿರಾ ಕಡಪ, ಕರ್ನೂಲ್, ಸವಾನೂರ್ ಮತ್ತು ಇಕ್ಕೇರಿ ರಾಜರು
ಒಟ್ಟಾಗಿ ಯುದ್ಧಕ್ಕೆ ಬಂದಿದ್ದರಿಂದ ಒಂದು ಕೋಟಿ
ರು. ಕಾಣಿಕೆ ನೀಡಿ ಸಂಧಾನ
ಮಾಡಿಕೊಳ್ಳಲಾಯಿತು.
ದೊಡ್ಡ ಕೃಷ್ಣರಾಜ ಒಡೆಯರ್ ಮಕ್ಕಳಿಲ್ಲದ ಕಾರಣ
ಚಾಮರಾಜ ಒಡೆಯರ್ ಅವರನ್ನು ದತ್ತು
ತೆಗೆದುಕೊಂಡರು. ಚಾಮರಾಜ ಒಡೆಯರ್
1732ರಿಂದ 1734ರವರೆಗೆ ರಾಜ್ಯವಾಳಿದರು. ಅವರ ಬಳಿಕ
ಎರಡನೇ ಇಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದು
1734ರಿಂದ 1766ರವರೆಗೆ ಸುದೀರ್ಘಕಾಲ
ರಾಜ್ಯಭಾರ ನಡೆಸಿದರು. ಇವರ ಕಾಲದಲ್ಲಿ ಶತ್ರುಗಳ ಸೈನ್ಯ ಆಗಾಗ್ಗೆ
ಯುದ್ಧ ಸಾರುತ್ತಿದ್ದುದನ್ನು ಗಮನಿಸಿ ಫ್ರೆಂಚರ ಸಹಾಯ ಪಡೆದು
ಮೈಸೂರಿನ ಗಡಿಯನ್ನು ಭದ್ರಪಡಿಸಿಕೊಂಡರು.
ಇಮ್ಮಡಿ ಕೃಷ್ಣರಾಜ ಒಡೆಯರ್ ನಂತರ ನವಾಬ್ ಹೈದರಾಲಿ
ಖಾನರ ಸಲಹೆ ಮೇರೆಗೆ ಚಲುವಾಜಮ್ಮಣ್ಣಿ ಅವರು ನಂಜರಾಜ
ಒಡೆಯರ್ಗೆ ಪಟ್ಟ ಕಟ್ಟಿದರು. ಅವರು 1766ರಿಂದ
1770ರವರೆಗೆ ರಾಜ್ಯಭಾರ ನಡೆಸಿದರು. 1770ರಿಂದ
1776ರವರೆಗೆ ಎಂಟನೇ ಬೆಟ್ಟದ ಚಾಮರಾಜ ಒಡೆಯರ್ ಆಡಳಿ
ನಡೆಸಿದರಾದರೂ ಹೈದರಾಲಿಯೇ ಸರ್ವಾಧಿಕಾರಿಯಾಗಿದ್ದನು.
1776ರಿಂದ 1796ರವರೆಗೆ ಒಂಬತ್ತನೇ ಖಾಸಾ ಚಾಮರಾಜ
ಒಡೆಯರ್ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಬಹಳಷ್ಟು
ಐತಿಹಾಸಿಕ ಘಟನೆಗಳು ನಡೆದವು. ಟಿಪ್ಪು ಸುಲ್ತಾನ್ ರಾಜ
ಕುಟುಂಬವನ್ನು ಅರಮನೆಯಿಂದ ಸ್ಥಳಾಂತರಿಸಿದನು.
ಆಂಗ್ಲರೊಡನೆ ನಡೆದ ಯುದ್ದದಲ್ಲಿ ಟಿಪ್ಪು
ಮೃತಪಟ್ಟ ಬಳಿಕ ರಾಜಧಾನಿಯನ್ನು
ಶ್ರೀರಂಗಪಟ್ಟಣದಿಂದ ಮೈಸೂರಿಗೆ
ವರ್ಗಾಯಿಸಲಾಯಿತು.
-------

ಮೂರನೇ ಮುಮ್ಮಡಿ ಕೃಷ್ಣರಾಜ ಒಡೆಯರ್
1799ರಿಂದ 1863ರವರೆಗೆ ಆಡಳಿತ ನಡೆಸಿದರು. ಇವರ ಹುಟ್ಟು
ಹೆಸರು ನಂಜರಾಜ ಒಡೆಯರ್. ನಂಜುಂಡೇಶ್ವರ
ಅನುಗ್ರಹದಿಂದ ಜನಿಸಿದ್ದರಿಂದ ಆ ಹೆಸರು ಇಡಲಾಯಿತು
ಎನ್ನಲಾಗಿದೆ. ಪಟ್ಟಾಭಿಷೇಕದ ಸಮಯದಲ್ಲಿ ಮುಮ್ಮಡಿ ಕೃಷ್ಣರಾಜ
ಒಡೆಯರ್ ಎಂದು ಕರೆಯಲಾಯಿತು.
1863ರಿಂದ 1894ರವರೆಗೆ ರಾಜ್ಯವಾಳಿದ
ಚಾಮರಾಜೇಂದ್ರ ಒಡೆಯರ್ ಅವರು ಮುಮ್ಮಡಿ ಕೃಷ್ಣರಾಜ
ಒಡೆಯರ್ ಅವರ ದತ್ತುಪುತ್ರನಾಗಿದ್ದು, 18ನೇ ವಯಸ್ಸಲ್ಲೇ
ರಾಜ್ಯಭಾರವನ್ನು ವಹಿಸಿಕೊಂಡಿದ್ದರು.
1884ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ 1940ರಲ್ಲಿ
ಕಾಲವಾದರು. ಇವರ ಆಡಳಿತದ ವೈಖರಿಯನ್ನು ಕಂಡು ಇವರನ್ನು
ರಾಜರ್ಷಿ ಕರೆಯಲಾಗಿತ್ತು.
1919ರಲ್ಲಿ ಜನಿಸಿದ ಜಯಚಾಮರಾಜೇಂದ್ರ ಒಡೆಯರ್
1974ರಲ್ಲಿ ಕಾಲವಾದರು. ಇವರು ತತ್ವಜ್ಞಾನಿಗಳೂ ಮೇಧಾವಿಗಳೂ
ಆಗಿದ್ದರು. ಇವರಿಗೆ 1940ರಲ್ಲಿ ಪಟ್ಟಾಭಿಷೇಕ ನಡೆಯಿತು. ಇವರು
ರಾಜ್ಯಭಾರ ವಹಿಸಿಕೊಂಡ ಏಳು ವರ್ಷಕ್ಕೆ ಭಾರತ
ಸ್ವತಂತ್ರವಾಯಿತು.
ಆ ನಂತರ 1950ರಲ್ಲಿ ಜಾರಿಗೆ ಬಂದ ರಾಜ್ಯಾಂಗ
ರಚನೆಯ ಪ್ರಕಾರ ರಾಜತ್ವ
ಕೊನೆಗೊಂಡು, ಅಖಂಡ
ಭಾರತದಲ್ಲಿ ಲೀನವಾಯಿತು. 1950ರಿಂದ
1956ರವರೆಗೆ ಜಯಚಾಮರಾಜೇಂದ್ರ ಒಡೆಯರ್ ಮೈಸೂರಿನ
ಗೌವರ್ನರ್ ಆಗಿ ಸೇವೆ ಸಲ್ಲಿಸಿದರು. ಅಲ್ಲಿಗೆ ಸುಮಾರು 550 ವರ್ಷಗಳ
ಮೈಸೂರು ರಾಜರ ರಾಜ್ಯಭಾರವೂ
ಕೊನೆಗೊಂಡಿತು.

ಆ ನಂತರ 1974ರ ಅಕ್ಟೋಬರ್ 16ರಂದು
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಅವರ ಪಟ್ಟಾಭಿಷೇಕ ನಡೆದು ರಾಜಮನೆತನ ಮುಂದುವರೆಯಿತು.
ಅವರ ನಿಧನದ ಬಳಿಕ ರಾಜಮನೆತನದ ಉತ್ತರಾಧಿಕಾರಿ ಯಾರು
ಎಂಬ ಜಿಜ್ಞಾಸೆ ಮೂಡಿತ್ತಾದರೂ ಅದಕ್ಕೆಲ್ಲ ತೆರೆಬಿದ್ದು
ಇದೀಗ ಯದುವೀರ ಕೃಷ್ಣದತ್ತ ಚಾಮರಾಜ
ಒಡೆಯರ್ ರಾಜಮನೆತನದ ಸಾರಥ್ಯ ವಹಿಸಿದ್ದು ಪಟ್ಟಾಭಿಷೇಕಕ್ಕೆ
ತಯಾರಿಗಳು ನಡೆಯುತ್ತಿವೆ.