Thursday, May 14, 2015

ಸಾಮಾಜಿಕ ಭದ್ರತಾ ಯೋಜನೆಗೆ ಒಂದೇ ದಿನ 7ಕೋಟಿ ಜನ ನೋಂದಣಿ.

ಸಾಮಾಜಿಕ ಭದ್ರತಾ ಯೋಜನೆಗೆ ಒಂದೇ ದಿನ 7ಕೋಟಿ ಜನ ನೋಂದಣಿ.
(PSGadyal Teacher Vijayapur)

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ -ಪಿಟಿಐ ಚಿತ್ರ
ನವದೆಹಲಿ(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಚಾಲನೆ ನೀಡಿದ ಮೂರು ಸಾಮಾಜಿಕ ಭದ್ರತಾ ಯೋಜನೆಗಳಿಗೆ ರಾಷ್ಟ್ರಾದ್ಯಂತ ಒಂದೇ ದಿನ ಏಳು ಕೋಟಿ ಜನ ನೋಂದಣಿ ಮಾಡಿಸಿದ್ದಾರೆ.

ದಿನಕ್ಕೆ ಒಂದು ರೂಪಾಯಿ ಪಾವತಿಸಿ ವಿಮಾ ರಕ್ಷಣೆ ಪಡೆಯುವುದೂ ಸೇರಿದಂತೆ ಮೂರು ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಅಟಲ್‌ ಪಿಂಚಣಿ ಯೋಜನೆಗೆ ನರೇಂದ್ರ ಮೋದಿ ಅವರು ಈಚೆಗೆ ಚಾಲನೆ ನೀಡಿದ್ದರು.

'ಯೋಜನೆಗೆ ಮೇ 9ರಂದು ಚಾಲನೆ ನೀಡಲಾಗಿದ್ದು, ಮೇ 13ರ ಸಂಜೆವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ 5.19 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ರಾಷ್ಟ್ರದೆಲ್ಲೆಡೆ ಜಿಲ್ಲೆಗಳಲ್ಲಿ ಇದು ಯಶಸ್ಸಿನತ್ತ ಸಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಅಟಲ್‌ ಪಿಂಚಣಿ ಯೋಜನೆಗಳಿಗೆ 6.7 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ(ಎಲ್ ಐಸಿ) ನಿರ್ವಹಿಸುತ್ತಿದ್ದು, ಐದು ದಿನಗಳಲ್ಲಿ 1.59 ಕೋಟಿ ಜನರ ನೋಂದಣಿ ಮಾಡಿಸಿದ್ದಾರೆ. ಅಟಲ್‌ ಪಿಂಚಣಿ ಯೋಜನೆಯನ್ನು ಎಪಿವೈ ನಿರ್ವಹಿಸುತ್ತಿದ್ದು, 70 ಸಾವಿರ ಜನ ನೋಂದಣಿ ಮಾಡಿಸಿದ್ದಾರೆ. ಈ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿ ಯಶಸ್ಸಿನತ್ತ ಮುನ್ನಡೆಯುತ್ತಿದ್ದು, ಭವಿಷ್ಯದಲ್ಲಿ ಜನರಿಗೆ ಭದ್ರತೆ ಒದಗಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಯೋಜನೆಗಳ ವಿವರ: ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯು ₹ 2 ಲಕ್ಷ  ಪರಿಹಾರ ನೀಡುವ ಅಪಘಾತ ವಿಮೆಯಾಗಿದೆ. ಗ್ರಾಹಕರು ವಾರ್ಷಿಕ ₹ 12 ಪ್ರೀಮಿಯಂ ಸಂದಾಯ ಮಾಡಬೇಕು. 18ರಿಂದ 70 ವರ್ಷದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಅಪಘಾತದಲ್ಲಿ ಮೃತಪಟ್ಟರೆ ಅವರ ವಾರಸುದಾರರಿಗೆ ₹ 2 ಲಕ್ಷ ಅಥವಾ ಅಪಘಾತದಿಂದ ಶಾಶ್ವತ ಅಂಗವೈಕಲ್ಯತೆಗೆ ಒಳಗಾದರೆ ₹ 2 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯತೆಗೆ ಒಳಗಾದರೆ ₹ 1 ಲಕ್ಷ ಪರಿಹಾರ ಸಿಗುತ್ತದೆ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯು ₹ 2 ಲಕ್ಷದ ಜೀವ ವಿಮೆಯಾಗಿದೆ. 18ರಿಂದ 50 ವರ್ಷದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ವಾರ್ಷಿಕ ₹ 330 ಪ್ರೀಮಿಯಂ ಪಾವತಿಸಬೇಕು. ಸಹಜ ಅಥವಾ ಅಸಜವಾಗಿ ಸಾವು ಸಂಭವಿಸಿದರೂ ಅವರ ವಾರಸುದಾರರಿಗೆ ₹ 2 ಲಕ್ಷ ಪರಿಹಾರ ಸಿಗುತ್ತದೆ.

ಅಟಲ್‌ ಪಿಂಚಣಿ ಯೋಜನೆಯು ಅಸಂಘಟಿತ ವಲಯದ ಗ್ರಾಹಕರಿಗಾಗಿ  ರೂಪಿಸಲಾಗಿದೆ. 18ರಿಂದ 40 ವರ್ಷದವರು ಈ ಸೌಲಭ್ಯ  ಪಡೆದುಕೊಳ್ಳಬಹುದು 20 ವರ್ಷ ಪ್ರೀಮಿಯಂ ಸಂದಾಯ ಮಾಡಬೇಕು. ಗ್ರಾಹಕರ ವಯಸ್ಸಿಗೆ ಅನುಗುಣವಾಗಿ ವಾರ್ಷಿಕ ₹ 42 ರಿಂದ ₹ 210 ಪ್ರೀಮಿಯಂ ಕಟ್ಟಬಹುದಾಗಿದೆ. ಗ್ರಾಹಕರಿಗೆ 60 ವರ್ಷ ತುಂಬಿದ ನಂತರ ಪ್ರೀಮಿಯಂ ಮೊತ್ತಕ್ಕನುಗುಣವಾಗಿ ₹ 1 ಸಾವಿರದಿಂದ ₹ 5 ಸಾವಿರದವರೆಗೆ ಪಿಂಚಣಿ ಪಡೆಯಬಹುದಾಗಿದೆ.