Drop


Thursday, May 7, 2015

ವಿಮೆ, ಪಿಂಚಣಿಗೆ ನೋಂದಣಿ ಶುರು ಕೇಂದ್ರದ ಯೋಜನೆಗೆ 9ರಂದು ಉದ್ಘಾಟನೆ, ರಾಜ್ಯದಲ್ಲೂ ಅಂದೇ ಚಾಲನೆ

Published: 07 May 2015 11:37 AM ISTವಿಮೆ, ಪಿಂಚಣಿ ಯೋಜನೆ
ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ವಿಮೆ ಮತ್ತು ಪಿಂಚಣಿ ಯೋಜನೆಗಳಿಗೆ ನೋಂದಣಿ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದೆ.
ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳ 8500 ಶಾಖೆಗಳಲ್ಲಿ ಆಂದೋಲನ ರೀತಿಯಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಯೋಜನೆಗೆ ನೋಂದಾಯಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಯೋಜನೆಯ ಅಧಿಕೃತ ಉದ್ಘಾಟನೆ ಮೇ 9ರಂದು ಕೋಲ್ಕತಾದಲ್ಲಿ ನಡೆಯಲಿದ್ದು, ಅಂದೇ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು.
ಯೋಜನೆ ಅನುಷ್ಠಾನ ಪೂರ್ವತಯಾರಿ ಕುರಿತು ಮಾಹಿತಿ ನೀಡಿದ ರಾಜ್ಯ ಬ್ಯಾಂಕರ್ಸ್ ಗಳಳ ಸಮಿತಿಯ ಮುಖ್ಯ ವ್ಯವಸ್ಥಾಪಕ ಸುರೇಶ್, `ನೂತನವಾಗಿ ಜಾರಿಗೆ ಬರುತ್ತಿರುವ ಜೀವ ಅಪಘಾತ ವಿಮೆ ಹಾಗೂ ಪಿಂಚಣಿ ಯೋಜನೆಗೆ ನೋಂದಣಿ ಕಾರ್ಯ ಭರದಿಂದ ನಡೆಯುತ್ತಿದೆ. ಬ್ಯಾಂಕಿನ ಗ್ರಾಹಕರು ತಮ್ಮ ಶಾಖೆಗಳಿಗೆ ತೆರಳಿ ಯೋಜನೆಗೆ ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಯೋಜನೆಯ ಕುರಿತಾಗಿ ಅಧಿಕಾರಿಗಳ ಸಭೆ ನಡೆದಿದ್ದು, ಬ್ಯಾಂಕುಗಳು ಯೋಜನೆ ಅನುಷ್ಠಾನದಲ್ಲಿ ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಮಾರ್ಗದರ್ಶನ ಮಾಡಲಾಗಿದೆ. ಜನಧನದಿಂದ ಇದೀಗ ಜನ ಸುರಕ್ಷಾ ಯೋಜನೆಗೆ ವಿಸ್ತರಣೆಗೊಳ್ಳುತ್ತಿದ್ದು, ಬ್ಯಾಂಕ್ ಉಳಿತಾಯ ಖಾತೆ ಹೊಂದಿದ ಅರ್ಹರು ಯೋಜನೆಯ ಲಾಭಪಡೆದುಕೊಳ್ಳಬೇಕು ಎಂದರು.
ಬ್ಯಾಂಕುಗಳ ಭರಾಟೆ: ಯೋಜನೆಗೆ ಖಾತೆದಾರರನ್ನು ನೊಂದಾಯಿಸಲು ಬ್ಯಾಂಕುಗಳು ಕಾರ್ಯೋನ್ಮುಖವಾಗಿವೆ. ಗ್ರಾಹಕರ ಮೊಬೈಲ್‍ಗಳಿಗೆ ಎಸ್‍ಎಂಎಸ್ ಕಳುಹಿಸುವುದು ಸೇರಿದಂತೆ ಜಾಹಿರಾತಿನ ಮೂಲಕ ಮಾಹಿತಿ ತಲುಪಿಸುವ ಕೆಲಸ ಮಾಡುತ್ತಿವೆ. ಹಾಗೆಯೇ ಬ್ಯಾಂಕಿನಲ್ಲಿ ಪ್ರತ್ಯೇಕ ಘಟಕ ಆರಂಭಿಸಿ ಗ್ರಾಹಕರಿಂದ ಅಗತ್ಯ ಮಾಹಿತಿ-ಸಹಿ ಪಡೆದುಕೊಂಡು ಯೋಜನೆಗೆ ಸೇರ್ಪಡೆ ಕಾರ್ಯ ಆರಂಙಿಸಿವೆ. ಪ್ರತಿ ಬ್ಯಾಂಕಿನ ಶಾಖೆಯಲ್ಲಿ ಈ ಯೋಜನೆಗಳಿಗೆ ಪ್ರತ್ಯೇಕ ಅರ್ಜಿ ದೊರೆಯುತ್ತದೆ. ಅದರಲ್ಲಿ ಮಾಹಿತಿ ತುಂಬಿಸಿ, ನಾಮಿನಿಯನ್ನು ಸೂಚಿಸುವ ಜೊತೆಗೆ  ಯೋಜನೆಗಳಿಗೆ ಉಳಿತಾಯ ಖಾತೆಯಿಂದ ನೇರವಾಗಿ ಪ್ರೀಮಿಯಂ ಹಣ ವರ್ಗವಾಗುವಂತೆ (ಆಟೋ ಡೆಬಿಟ್) ಒಪ್ಪಿಗೆ ಸೂಚಿಸಲು ಸಹಿ ಹಾಕಿದರೆ ಖಾತೆದಾರನ ಕೆಲಸ ಮುಗಿದಂತೆ. ಈ ಸಂದರ್ಭದಲ್ಲಿ ಬ್ಯಾಂಕಿನ ಕಡೆಯಿಂದ ಸ್ವೀಕೃತಿ ಪತ್ರ ನೀಡಲಾಗುತ್ತದೆ.
Posted by: Srinivasamurthy VN | Source: Online Desk