BGS Global Hospitals successfully performs 100th liver transplant ...

100 ಲಿವರ್‌ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ: ಬಿಜಿಎಸ್‌ ಸಾಧನೆ
ಉದಯವಾಣಿ, May 13, 2015, 3:40 AM IST

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ 100 ಯಕೃತ್‌ (ಲಿವರ್‌) ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿರುವ ರಾಜ್ಯದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ಪಾತ್ರವಾಗಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್‌.ಕೆ. ವೆಂಕಟರಮಣ, 2011ರ ಬಳಿಕ ಆಸ್ಪತ್ರೆಯ "ಗ್ಲೋಬಲ್‌ ಇಂಟಿಗ್ರೇಟೆಡ್‌ ಲಿವರ್‌' ತಂಡ ಈ ಸಾಧನೆ ಮಾಡಿದೆ. 100 ಲಿವರ್‌ ಕಸಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ರಾಜ್ಯದಲ್ಲಿ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ಹೊಸ ಸಾಧನೆ ಮಾಡಿದೆ ಎಂದರು.

ಲಿವರ್‌ ಕಸಿಗಾಗಿ ದಾನ ಮಾಡಿದವರು ಮತ್ತು ಕಸಿ ಮಾಡಿಸಿಕೊಂಡವರು ಹೆಚ್ಚಾಗಿ ಕರ್ನಾಟಕದವರಾಗಿದ್ದಾರೆ. ಲಿವರ್‌ ಕಸಿ ತಂಡದಲ್ಲಿ ಹೆಪಟಾಲಜಿಸ್ಟ್‌ಗಳು, ನುರಿತ ಅರಿವಳಿಕೆ ತಜ್ಞರು ಮತ್ತು ಇಂಟೆನ್ಸಿವ್‌ ಕೇರ್‌ ತಜ್ಞರು, ವಿಶೇಷ ತರಬೇತಿ ಹೊಂದಿರುವ ಶುಶ್ರೂಷಕಿಯರು ಇದ್ದಾರೆ ಎಂದು ಹೇಳಿದರು.

ರಾಜ್ಯದ ಜನರಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಘಟಿತ ತಂಡವಾಗಿ ಕಾರ್ಯನಿರ್ವಹಿಸುವ ಮೂಲಕ ಸಾವಿನ ನಂತರವೂ ಜೀವನ ಎನ್ನುವ ಪರಿಕಲ್ಪನೆಗೆ ವಾಸ್ತವತೆಯನ್ನು ನೀಡಲಾಗಿದೆ. ರಾಜ್ಯದಲ್ಲಿ ಲಿವರ್‌ ಕಸಿ ಶಸ್ತ್ರಚಿಕಿತ್ಸೆಗಾಗಿ ನೋಂದಾಯಿತ ರೋಗಿಗಳ ಸಂಖ್ಯೆ 200ಕ್ಕೂ ಹೆಚ್ಚಿದೆ. ಪ್ರತಿಯೊಬ್ಬರೂ ತಮ್ಮ ಅಂಗಾಂಗಗಳನ್ನು ದಾನ ಮಾಡಲು ಮುಂದಾದಲ್ಲಿ ಮಾತ್ರ ಕಸಿ ಶಸ್ತ್ರಚಿಕಿತ್ಸೆ ಸಫ‌ಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಹು ಅಂಗ ಕಸಿ ತಜ್ಞ ಡಾ. ಸೋನಲ್‌ ಅಸ್ಥಾನ ಮಾತನಾಡಿ, 100 ಲಿವರ್‌ ಮರುಜೋಡಣೆಗಳ ಪೈಕಿ 64 ಮರುಜೋಡಣೆಗಳು ಮೆದುಳು ನಿಷ್ಕಿೃಯವಾಗಿರುವ ದಾನಿಗಳಿಂದಾಗಿವೆ. ಉಳಿದ 36 ಶಸ್ತ್ರಚಿಕಿತ್ಸೆಗಳನ್ನು ಸಂಬಂಧಿಗಳು ದಾನ ಮಾಡಿರುವ ಅಂಗಾಂಗಳನ್ನು ಬಳಸಿಕೊಂಡು ಮಾಡಲಾಗಿದೆ. ಮರುಜೋಡಣೆಗಳ ಪೈಕಿ ಬಹುಪಾಲು ವಯಸ್ಕರಿದ್ದರೆ, ಶೇ.7ರಷ್ಟು ಮರುಜೋಡಣೆಗಳನ್ನು ಲಿವರ್‌ ವೈಫ‌ಲ್ಯತೆಯಿಂದ ಬಳಲುತ್ತಿದ್ದ ಮಕ್ಕಳು ಸೇರಿದ್ದಾರೆ. ಒಟ್ಟಾರೆ ಯಶಸ್ಸಿನ ಪ್ರಮಾಣ ಶೇ.92ರಷ್ಟಿದೆ ಎಂದರು.

ಡಾ. ರಾಜೀವ್‌ಲೋಚನ ಮಾತನಾಡಿ, ಮನುಷ್ಯನ ದೇಹದಲ್ಲಿ ಲಿವರ್‌ ಅತಿ ವಿಶೇಷ ಅಂಗವಾಗಿದ್ದು, ಆರೋಗ್ಯಯುತ ಲಿವರ್‌ ಒಮ್ಮೆ ಕತ್ತರಿಸಿದರೆ ಪುನಃ ಬೆಳೆಯುತ್ತದೆ. ಕಸಿ ಮಾಡಿದವರ ದೇಹದಲ್ಲಿಯೂ ಬೆಳೆಯುತ್ತದೆ. ಯಾವುದೇ ತೊಂದರೆ ಇಲ್ಲದಿರುವುದರಿಂದ ಸಾರ್ವಜನಿಕರು ಈ ಕುರಿತು ಆತಂಕ ಮತ್ತು ಅನುಮಾನ ಪಡಬೇಕಾದ ಅಗತ್ಯ ಇಲ್ಲ. ಮೃತಪಟ್ಟವರಿಂದ ಅಂಗಾಂಗಳ ದಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆಯಾದರೂ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾದ ಅಗತ್ಯ ಇದೆ ಎಂದು ತಿಳಿಸಿದರು.

ಇದೇ ವೇಳೆ ಲಿವರ್‌ ಕಸಿ ಶಸ್ತ್ರಚಿಕಿತ್ಸೆಗೊಳಗಾದ 52 ವರ್ಷದ ಗಣೇಶ್‌ ಕಾಮತ್‌ ಹಾಗೂ 10 ವರ್ಷದ ಬಾಲಕ ಇಸ್ಮಾಯಿಲ್‌ ತಮ್ಮ ಅನುಭವ ಹಂಚಿಕೊಂಡರು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ತಜ್ಞ ವೈದ್ಯರಾದ ಕೈಸರ್‌ ರಾಜ, ಮ್ಯಾಥ್ಯೂ ಜಾಕೊಬ್‌ ಇತರರು ಉಪಸ್ಥಿತರಿದ್ದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023