ಪ್ರತಿ ತಿಂಗಳು ಐದರೊಳಗೆ ಶಿಕ್ಷಕರಿಗೆ ಸಂಬಳ

ಪ್ರತಿ ತಿಂಗಳು ಐದರೊಳಗೆ ಶಿಕ್ಷಕರಿಗೆ ಸಂಬಳ
PSGadyal

ಪ್ರತಿ ತಿಂಗಳು ಐದರೊಳಗೆ ಶಿಕ್ಷಕರಿಗೆ ಸಂಬಳ
20ರೊಳಗೆ ವೇತನ ಬಿಲ್ ತಯಾರಿ ಕಡ್ಡಾಯ ವಿಳಂಬವಾದರೆ ಬಟವಾಡೆ ಅಧಿಕಾರಿಯೇ ಹೊಣೆ

ರಾಜ್ಯದ ಸರಕಾರಿ ಶಾಲೆಗಳ ಶಿಕ್ಷಕರಿಗೆ ಇಲ್ಲೊಂದು ಸಿಹಿ ಸುದ್ದಿ. 2015-16ನೇ ಸಾಲಿನಿಂದ ಅವರಿಗೆಲ್ಲ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಸಿಗಲಿದೆ. ಒಂದು ವೇಳೆ ವೇತನ ಸಕಾಲಕ್ಕೆ ಪಾವತಿಯಾಗದಿದ್ದರೆ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಯೇ ಹೊಣೆ ಹೊರಬೇಕು.

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್) ತಂತ್ರಾಂಶದಿಂದ ಶಿಕ್ಷಕರ ವೇತನದ ಬಿಲ್‌ಗಳನ್ನು ಪ್ರತಿ ತಿಂಗಳು 20ನೇ ತಾರೀಖಿನೊಳಗೆ ಸಿದ್ಧಪಡಿಸುವಂತೆ ಇಲಾಖೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ಈ ತಂತ್ರಾಂಶದ ಮೂಲಕ ಬಿಲ್‌ಗಳನ್ನು ಜನರೇಟ್ ಮಾಡಿದ ಮಾಹಿತಿ ಬೆಂಗಳೂರಿನಲ್ಲಿ ಲಭ್ಯವಾಗುತ್ತದೆ. ಬಿಲ್ ತಯಾರಿ ವಿಳಂಬವಾದ ಸಂದರ್ಭದಲ್ಲಿ ಸಂಬಂಧಿಸಿದ ಬಟವಾಡೆ ಅಧಿಕಾರಿಗಳ ಲೋಪ ಪತ್ತೆಹಚ್ಚಲು ಹಾಗೂ ಅವರನ್ನೇ ಹೊಣೆಗಾರರನ್ನಾಗಿ ಮಾಡಲು ಈ ತಂತ್ರಾಂಶ ನೆರವಾಗಲಿದೆ.

ನೋಡಲ್ ಅಧಿಕಾರಿ ನೇಮಕ: ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಶಿಕ್ಷಕರಿಗೆ ವೇತನವನ್ನು ನಿಗದಿತ ದಿನಾಂಕದಂದು ಪಾವತಿಸಲು ಉಪನಿರ್ದೇಶಕ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಹಂತದಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಈ ನೋಡಲ್ ಅಧಿಕಾರಿ, ಎಚ್‌ಆರ್‌ಎಂಎಸ್‌ನಿಂದ ಬಿಲ್ ಪಡೆಯಬೇಕು. ಲೆಕ್ಕ ಶೀರ್ಷಿಕೆಯ ಬದಲಾವಣೆ ಗಮನಿಸಿ ಅನುದಾನ ನಮೂದಿಸಬೇಕು. ನಿಗದಿತ ದಿನಾಂಕದಂದು ಖಜಾನೆಗೆ ಬಿಲ್ ಸಲ್ಲಿಸಬೇಕು. ಸಂಬಂಧಿಸಿದ ಬ್ಯಾಂಕ್‌ಗಳಲ್ಲಿ ಶಿಕ್ಷಕರ ಖಾತೆಗಳಲ್ಲಿ ಹಣ ಜಮಾ ಆಗುವವರೆಗೆ ನಿಗಾ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಶಿಕ್ಷಕರ ವೇತನ ಪಾವತಿ ವಿಳಂಬವಾಗುತ್ತಿರುವ ವಿಷಯ ಈ ಹಿಂದೆ ವಿಧಾನ ಮಂಡಲ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಸಕಾಲದಲ್ಲಿ ಶಿಕ್ಷಕರಿಗೆ ವೇತನ ನೀಡುವ ಬಗ್ಗೆ ಕ್ರಮ ವಹಿಸುವಂತೆ ರಾಜ್ಯದ ಎಲ್ಲ ಉಪನಿರ್ದೇಶಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಿಂದಿನ ಸಭೆಯಲ್ಲಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕರ ವೇತನ ಪಾವತಿಯಲ್ಲಿ ಆಗುತ್ತಿದ್ದ ವಿಳಂಬ ತಡೆಗೆ ಸರಕಾರ ಮುಂದಾಗಿದೆ.
-----

ಶಿಕ್ಷಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಆಯಾ ತಿಂಗಳ 10ನೇ ತಾರೀಖಿನೊಳಗೆ ವೇತನ ಬಟವಾಡೆಯಾದ ಕುರಿತು ಆಯುಕ್ತರ ಕಚೇರಿಗೆ ಮಾಹಿತಿ ಸಲ್ಲಿಸಬೇಕು. ವಿಳಂಬವಾದರೆ ಸಂಬಂಧಿಸಿದ ಬಟವಾಡೆ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.
-ಮೊಹಮ್ಮದ್ ಮೊಹಸಿನ್, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023