 ರಾಷ್ಟ್ರಕವಿ ಪ್ರಶಸ್ತಿ ಬೇಡ : ಸರ್ಕಾರಕ್ಕೆ ಆಯ್ಕೆ ಸಮಿತಿ ಶಿಫಾರಸು

ಈಗ ರಾಷ್ಟ್ರಕವಿ ಶೂನ್ಯ ಸಿಂಹಾಸನ


ಬೆಂಗಳೂರು, ಮೇ ೭- ಅರಸೊತ್ತಿಗೆ ಪ್ರತೀಕದಂತಿರುವ ರಾಷ್ಟ್ರಕವಿ ಬಿರುದನ್ನು ಯಾವ ಕವಿಗೂ ನೀಡದಂತೆ ಹಿರಿಯ ನ್ಯಾಯವಾದಿ ಕೋ. ಚೆನ್ನಬಸಪ್ಪ ನೇತೃತ್ವದ ಆಯ್ಕೆ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಅಂತಿಮ ವರದಿ ಸಲ್ಲಿಸಿದೆ.
ಸಂವಿಧಾನ ಜಾರಿಗೆ ಬಂದಮೇಲೆ ರಾಷ್ಟ್ರಕವಿ ಅಭಿದಾನ ಸೇರಿದಂತೆ ಇತ್ಯಾದಿ ಪುರಸ್ಕಾರಗಳನ್ನು ಗಣತಂತ್ರ ರಾಜ್ಯದಲ್ಲಿ ನೀಡಬಾರದು. ಹಾಗಾಗಿ ರಾಷ್ಟ್ರಕವಿ ಸ್ಥಾನಕ್ಕೆ ಯಾರನ್ನೂ ಸೂಚಿಸದಿರಲು 12 ಜನರ ಆಯ್ಕೆ ಸಮಿತಿ ಒಮ್ಮತದ ನಿರ್ಧಾರಕ್ಕೆ ಬಂದಿದೆ.
ಆಯ್ಕೆ ಸಮಿತಿ ರಾಷ್ಟ್ರಕವಿ ಆಯ್ಕೆಗೆ ಸಂಬಂಧಿಸಿದಂತೆ ನಾಡಿನ ಗಣ್ಯರು, ಸಾಹಿತಿಗಳು, ಕಲಾವಿದರು, ಚಿಂತಕರಿಂದ ಮಾಹಿತಿ ಸಂಗ್ರಹಿಸಿ ಅದರಲ್ಲಿ ಪ್ರೊ.ಕೆ.ಎಸ್. ನಿಸಾರ್ ಅಹಮದ್, ಡಾ. ಚಂದ್ರಶೇಖರ ಕಂಬಾರ ಮತ್ತು ಡಾ. ಚೆನ್ನವೀರ ಕಣವಿಯವರ ಹೆಸರುಗಳು ಕೇಳಿಬಂದಿದ್ದವು. ಆಯ್ಕೆ ಸಮಿತಿ ಸದಸ್ಯರಲ್ಲಿ ರಾಷ್ಟ್ರಕವಿ ಬಿರುದಿಗೆ ಹಿರಿಯ ಕವಿಯೊಬ್ಬರನ್ನು ಆಯ್ಕೆ ಮಾಡುವ ವಿಷಯದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಅಧ್ಯಕ್ಷರ ಹೆಗಲಿಗೆ ಸಂಪೂರ್ಣ ಜವಾಬ್ದಾರಿ ಹಾಕಲಾಗಿತ್ತು. ಅಂತಿಮವಾಗಿ ಕೋ. ಚನ್ನಬಸಪ್ಪ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರಕವಿ ಬಿರುದಿಗೆ ಯಾರನ್ನೂ ಆಯ್ಕೆ ಮಾಡದಿರುವ ನಿರ್ಧಾರಕ್ಕೆ ಬಂದು ಸಮಿತಿ ತನ್ನ ವರದಿಯನ್ನು ಮುಖ್ಯಮಂತ್ರಿಗಳಿಗೆ ಇಂದು ಸಲ್ಲಿಸಿತು.
ಕೋ. ಚೆನ್ನಬಸಪ್ಪ ನೇತೃತ್ವದಲ್ಲಿ ಡಾ.ಎಲ್. ಹನುಮಂತಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಡಾ. ಮಾಲತಿ ಪಟ್ಟಣ ಶೆಟ್ಟಿ, ಪುಂಡಲೀಕ ಹಾಲಂಬಿ, ಪ್ರೊ.ಎಸ್.ವಿ. ಸಿದ್ದರಾಮಯ್ಯ, ಡಾ. ರೂಪ ಹಾಸನ, ಡಾ. ಕಾಳೇಗೌಡ ನಾಗವಾರ, ಡಾ. ಗಿರಟ್ಟಿ ಗೋವಿಂದರಾಜು, ಡಾ.ಹೆಚ್.ಎಸ್. ಪುಷ್ಪ, ಡಾ. ವಿಷ್ಣುನಾಯಕ್, ಪ್ರಭು ಖಾನಾಪುರೆ, ಡಾ. ಕೆ. ಶರೀಫ ಹಾಗೂ ಸದಸ್ಯ ಕಾರ್ಯದರ್ಶಿ ಕೆ. ದಯಾನಂದ್ ನೇತೃತ್ವದ ಸಮಿತಿ ಅಳೆದು ತೂಗಿ ರಾಷ್ಟ್ರಕವಿ ನಾಮಾಂಕಿತಕ್ಕೆ ಯಾರ ಹೆಸರನ್ನೂ ಶಿಫಾರಸು ಮಾಡದಿರುವ ನಿರ್ಧಾರಕ್ಕೆ ಬಂದಿದೆ.
ಸುಮಾರು 18 ಪುಟಗಳಷ್ಟು ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಕೋ. ಚೆನ್ನಬಸಪ್ಪ, ರಾಷ್ಟ್ರಕವಿ ಎನ್ನುವುದು ಅರಸೊತ್ತಿಗೆಯ ಸಂಕೇತ. ಇದಕ್ಕೆ ಒಬ್ಬರನ್ನು ಆಯ್ಕೆ ಮಾಡಿದರೆ, ಬಹುಜನರಿಗೆ ಅನ್ಯಾಯವಾಗಲಿದೆ. ಜೊತೆಗೆ ಸಂವಿಧಾನದಲ್ಲೂ ಇಂತಹ ಪದವಿ ಪ್ರದಾನ ಮಾಡಲು ಅವಕಾಶಗಳಿಲ್ಲ. ಈ ಹಿನ್ನಲೆಯಲ್ಲಿ ಯಾರ ಹೆಸರನ್ನೂ ಶಿಫಾರಸು ಮಾಡದಿರಲು ಆಯ್ಕೆ ಸಮಿತಿ ನಿರ್ಧಾರಕ್ಕೆ ಬಂದು ಇಂದು ತನ್ನ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದರು.
ಅರಸೊತ್ತಿಗೆ ಆಸ್ಥಾನದ ಪಳಯುಳಿಕೆಯಾದ ರಾಷ್ಟ್ರಕವಿ ಮುಂತಾದ ಪುರಸ್ಕಾರಗಳು ಸಂಪೂರ್ಣವಾಗಿ ಜನತಂತ್ರ ರಾಜ್ಯ ಜಾರಿಯಾದ ನಂತರ ತಿರಸ್ಕೃತವಾಗಿವೆ. ಇಂತಹ ಪ್ರಶಸ್ತಿಗಳನ್ನು ಪ್ರದಾನ ಮಾಡುವುದು ಸಂವಿಧಾನದ ವಿರೋಧವಾಗಿರುವುದರಿಂದ ರಾಜ್ಯ ಸರ್ಕಾರ ಈ ಅಭಿದಾನವನ್ನು ಪ್ರದಾನ ಮಾಡುವ ಅಗತ್ಯವಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ಪದ್ಮಶ್ರೀ ಸೇರಿದಂತೆ ಮುಂತಾದ ಪುರಸ್ಕಾರಗಳನ್ನು ಕೈಬಿಟ್ಟಿತ್ತು ಎನ್ನುವುದನ್ನು ವರದಿಯಲ್ಲಿ ತಿಳಿಸಿ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದರು.
ಒಂದು ರಾಜ್ಯ ಸರ್ಕಾರ ಇಡೀ ರಾಷ್ಟ್ರಕ್ಕೆ ಅನ್ವಯಿಸುವ ರಾಷ್ಟ್ರಕವಿ ಪುರಸ್ಕಾರವನ್ನು ಪ್ರದಾನ ಮಾಡುವುದು ಉಚಿತವಲ್ಲ. ಈ ಹಿನ್ನಲೆಯಲ್ಲಿ ಸಮಿತಿ ಸಪ್ತ ಸೂತ್ರಗಳನ್ನು ಗಮನದಲ್ಲಿಟ್ಟುಕೊಂಡು ಯಾರ ಹೆಸರನ್ನೂ ಶಿಫಾರಸು ಮಾಡದಿರಲು ನಿರ್ಧರಿಸಿದೆ ಎಂದರು.
ರಾಷ್ಟ್ರಕವಿ ಆಯ್ಕೆಗೆ ಜಾತಿ, ಮತ, ಪಂಥ, ಧರ್ಮ, ಭಾಷೆ, ಪ್ರದೇಶ ಇವುಗಳ ಮೇಲೆ ಆಯ್ಕೆ ಮಾಡಬಾರದು. ಧರ್ಮ ಅಥವಾ ಭಾಷಾ ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ದೊರಕಿಸಬೇಕೆಂಬುದು ತಾವು ನಿರೂಪಿಸಿದ ಮಾನದಂಡಕ್ಕೆ ವಿರೋಧವಾಗಿರುತ್ತದೆ. ಹೀಗಾಗಿ ಯಾರನ್ನಾದರೂ ಆಯ್ಕೆ ಮಾಡಿದರೆ, ಉಳಿದವರಿಗೆ ಆ ಸ್ಥಾನ ದೊರೆಯಲಿಲ್ಲ ಎಂಬ ಭಾವನೆ ಬರಬಹುದು. ಹೀಗಾಗಿ ಯಾರಿಗೂ ಪ್ರಶಸ್ತಿ ನೀಡುವುದು ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಸಮಿತಿ ರೂಪಿಸಿದ ಸಪ್ತ ಸೂತ್ರದ ಅನ್ವಯ ಆಯ್ಕೆ ಮಾಡಿದರೆ, ಜಾತ್ಯತೀತವಾದ ರಾಷ್ಟ್ರದಲ್ಲಿ ಮುಂದೊಂದು ದಿನ ರಾಷ್ಟ್ರಕವಿ ಆಯ್ಕೆಯಲ್ಲಿಯೂ ಕೂಡ ಮೀಸಲಾತಿ, ರೊಟೇಷನ್ ಸೇರಿದಂತೆ ಇತರ ಬೇಡಿಕೆಗಳು ಬಂದರೆ, ರಾಜ್ಯ ಹಾಗೂ ರಾಷ್ಟ್ರದ ಗತಿ ಏನಾಗಬೇಕು. ಇದೆಲ್ಲವೂ ದೊಡ್ಡ ಗೊಂದಲ ಹಾಗೂ ಅನೈಕ್ಯತೆಗೆ ಕಾರಣವಾದೀತು ಎನ್ನುವ ಆಯ್ಕೆ ಸಮಿತಿ ಸದಸ್ಯರ ಸಂದೇಹದ ಹಿನ್ನಲೆಯಲ್ಲಿ ಪ್ರಶಸ್ತಿಯನ್ನು ಯಾರಿಗೂ ನೀಡಬಾರದು ಎಂದು ನಿರ್ಧರಿಸಲಾಗಿದೆ ಎಂದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023