Drop


Monday, May 11, 2015

ಹೊಸ ಮಾದರಿಯಲ್ಲಿ ಬ್ಯಾಂಕಿಂಗ್ ಪರೀಕ್ಷೆ (full details)

ಎ.ಎಂ. ಸುರೇಶ
Mon, 05/11/2015 - 01:00

ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡುತ್ತಿರುವ ಬ್ಯಾಂಕಿಂಗ್ ಕ್ಷೇತ್ರ ನಿರುದ್ಯೋಗಿಗಳ ಪಾಲಿನ ಕಾಮಧೇನು ಎಂದರೆ ತಪ್ಪಾಗಲಾರದು. ಅರ್ಥ ವ್ಯವಸ್ಥೆಯ ವಿಸ್ತಾರ ಹಾಗೂ ಸರ್ಕಾರಗಳ ಸಕಾರಾತ್ಮಕ ಧೋರಣೆಯಿಂದಾಗಿ ಬ್ಯಾಂಕಿಂಗ್ ಮತ್ತು ವಿಮಾ ವಲಯ ಇಂದು ಅಗಾಧವಾಗಿ ಬೆಳವಣಿಗೆಯಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೊಸದಾಗಿ ಬ್ಯಾಂಕ್ ಶಾಖೆಗಳು ಆರಂಭವಾಗುತ್ತಿದ್ದು, ಜನರಿಗೆ ಸೇವೆ ನೀಡುವುದರ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುತ್ತಿವೆ.

ಸರ್ಕಾರಿ ಸ್ವಾಮ್ಯದ 27 ಬ್ಯಾಂಕ್‌ಗಳು ಸೇರಿದಂತೆ ದೇಶದಲ್ಲಿ 143 ವಾಣಿಜ್ಯ ಬ್ಯಾಂಕುಗಳಿವೆ. 20 ಖಾಸಗಿ ಬ್ಯಾಂಕ್‌ಗಳು ಹಾಗೂ 40 ವಿದೇಶಿ ಬ್ಯಾಂಕ್‌ಗಳು ದೇಶದಲ್ಲಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಉದ್ಯಮವಾಗಿದೆ. ಸುಮಾರು 12 ಲಕ್ಷ ಮಂದಿಗೆ ಉದ್ಯೋಗ ನೀಡಿದ್ದು, ವಾರ್ಷಿಕ ಒಂದು ಲಕ್ಷ ಮಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ವರ್ಷಕ್ಕೆ ಎರಡು ಲಕ್ಷ ನೇಮಕಾತಿ ನಡೆಯಲಿದ್ದು, ಒಂದು ಅಂದಾಜಿನ ಪ್ರಕಾರ 2022ರ ವೇಳೆಗೆ ಹದಿನಾಲ್ಕು ಲಕ್ಷ ಜನರ ನೇಮಕವಾಗಲಿದೆ.

ನಿವೃತ್ತಿಯ ಅಂಚಿನಲ್ಲಿ ಇರುವವರ ಸಂಖ್ಯೆ ಹೆಚ್ಚಾಗಿದ್ದು, 3-4 ವರ್ಷಗಳಲ್ಲಿ ನಾಲ್ಕು ಲಕ್ಷ ಮಂದಿ ನಿವೃತ್ತಿಯಾಗಲಿದ್ದಾರೆ. ಈ ಹುದ್ದೆಗಳನ್ನು ತುಂಬುವುದರ ಜೊತೆಗೆ ಹೊಸದಾಗಿ ಸೃಷ್ಟಿಯಾಗುವ ಹುದ್ದೆಗಳನ್ನು ಭರ್ತಿ ಮಾಡಬೇಕಾಗುತ್ತದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ನೇಮಕಾತಿ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರಿಗೆ ಅವಕಾಶಗಳು ಹೆಚ್ಚಾಗುತ್ತಿವೆ ಎಂಬುದು ಬ್ಯಾಂಕಿಂಗ್ ಕ್ಷೇತ್ರದ ತಜ್ಞರ ಅಭಿಮತ.

ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇದುವರೆಗೆ 200 ಅಂಕಗಳ ಒಂದೇ ಪರೀಕ್ಷೆ ಇರುತ್ತಿತ್ತು. ಆದರೆ, ಈ ವರ್ಷದಿಂದ ಪರೀಕ್ಷಾ ಪದ್ಧತಿ ಬದಲಾಗಿದೆ. ಐಎಎಸ್, ಕೆಎಎಸ್ ಮೊದಲಾದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲೇ ಬ್ಯಾಂಕಿಂಗ್ ಪರೀಕ್ಷೆ ನಡೆಯಲಿದೆ. ಅಂದರೆ ಪೂರ್ವಭಾವಿ, ಮುಖ್ಯಪರೀಕ್ಷೆ ಮತ್ತು ಸಂದರ್ಶನ. ಹೀಗೆ ಒಟ್ಟು ಮೂರು ಹಂತಗಳಲ್ಲಿ ಆಯ್ಕೆ ನಡೆಯಲಿದೆ.

ಪೂರ್ವಭಾವಿ ಪರೀಕ್ಷೆ: ಪೂರ್ವಭಾವಿ ಪರೀಕ್ಷೆಯು 100 ಅಂಕಗಳ ಒಂದೇ ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿರುತ್ತದೆ. ಇದನ್ನು ಮೂರು ಭಾಗವಾಗಿ ವಿಂಗಡಿಸಿದ್ದು, ಇಂಗ್ಲಿಷ್ ಭಾಷೆಗೆ 30 ಅಂಕ, ತುಲನಾತ್ಮಕ ಕೌಶಲಕ್ಕೆ ಹಾಗೂ ತಾರ್ಕಿಕ ಸಾಮರ್ಥ್ಯಕ್ಕೆ ತಲಾ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಮೊದಲ ಹಂತದ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾದವರಿಗೆ ಮಾತ್ರ ಮುಖ್ಯಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ.

ಮುಖ್ಯಪರೀಕ್ಷೆ: ಇಲ್ಲಿ ಬಹುಆಯ್ಕೆ ಮಾದರಿಯ ಮತ್ತು ವಿವರಣಾತ್ಮಕ ರೂಪದ ಪ್ರಶ್ನೆಗಳನ್ನು ನೀಡಲಾಗುತ್ತದೆ. ಬಹುಆಯ್ಕೆ ಮಾದರಿಯ ಪ್ರಶ್ನೆಗಳಿಗೆ 200 ಅಂಕಗಳನ್ನು ಹಾಗೂ ವಿವರಣಾತ್ಮಕ ರೂಪದ ಪ್ರಶ್ನೆಗಳಿಗೆ 50 ಅಂಕಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಇಂಗ್ಲಿಷ್ ಮತ್ತು ಪ್ರಬಂಧ ಬರೆಯುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

ಬಹುಆಯ್ಕೆ ಮಾದರಿಯಲ್ಲಿ ಒಟ್ಟು ನಾಲ್ಕು ವಿಭಾಗಗಳಿದ್ದು, ಪ್ರತಿಯೊಂದಕ್ಕೂ ತಲಾ 50 ಅಂಕಗಳನ್ನು ನಿಗದಿಪಡಿಸಲಾಗಿದೆ.
1.ಇಂಗ್ಲಿಷ್ ವ್ಯಾಕರಣ.
2.ಮಾರುಕಟ್ಟೆ, ಗಣಕಯಂತ್ರ ಹಾಗೂ ಸಾಮಾನ್ಯ ಜ್ಞಾನ.
3.ದತ್ತಾಂಶಗಳು ಮತ್ತು ಅರ್ಥವಿವರಣೆ.
4.ತಾರ್ಕಿಕ ಪ್ರತಿಪಾದನೆ. ಪ್ರತಿಯೊಂದು ವಿಭಾಗದಲ್ಲೂ ಕನಿಷ್ಠ ಅಂಕಗಳನ್ನು ಪಡೆಯಲೇಬೇಕು. ಒಟ್ಟಾರೆ ಯಾರು ಹೆಚ್ಚು ಅಂಕಗಳನ್ನು ಪಡೆಯುತ್ತಾರೊ ಅಂತಹವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

ಸಂದರ್ಶನ: ಮೂರನೇ ಹಂತದಲ್ಲಿ ಸಂದರ್ಶನಕ್ಕೆ ಆಯ್ಕೆಯಾದವರಿಗೆ ಮೊದಲು ಸಮೂಹ (ಗ್ರೂಪ್) ಚರ್ಚೆ ಏರ್ಪಡಿಸಲಾಗುತ್ತದೆ. ಇದಕ್ಕೆ 20 ಅಂಕಗಳನ್ನು ನಿಗದಿಪಡಿಲಾಗಿದೆ. ಬಳಿಕ 30 ಅಂಕಗಳ ಸಂದರ್ಶನ ಇರುತ್ತದೆ.

ಆನ್‌ಲೈನ್ ಪರೀಕ್ಷೆ: ಎಲ್ಲ ಬ್ಯಾಂಕಿಂಗ್ ಪರೀಕ್ಷೆಗಳು ಆನ್‌ಲೈನ್ ಮೂಲಕವೇ ನಡೆಯುತ್ತವೆ. ರಾಷ್ಟ್ರೀಕೃತ ಮತ್ತು ಕೆಲವೊಂದು ಖಾಸಗಿ ಬ್ಯಾಂಕ್‌ಗಳಲ್ಲಿನ ನೇಮಕಾತಿಗೆ ಐಬಿಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಖಾಲಿ ಇರುವ ಹುದ್ದೆಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ ಐಬಿಪಿಎಸ್ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಸಂಬಂಧಪಟ್ಟ ಬ್ಯಾಂಕ್‌ಗೆ ನೀಡುತ್ತದೆ. ಇದಾದ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕ್ ಮೂಲಕ ನೇಮಕಾತಿ ಆದೇಶ ನೀಡಲಾಗುತ್ತದೆ.

ಸಾಮಾನ್ಯವಾಗಿ ಒಂದು ಕೋಟಿ ಮಂದಿ ಅರ್ಜಿ ಸಲ್ಲಿಸಲಿದ್ದು, ನಾಲ್ಕು ಲಕ್ಷ ಮಂದಿ ಪಾಸಾಗುತ್ತಾರೆ. ಸಂದರ್ಶನದ ನಂತರ ಒಂದು ಲಕ್ಷ ಮಂದಿ ಆಯ್ಕೆಯಾಗುತ್ತಾರೆ. ಇದರಲ್ಲಿ ಕರ್ನಾಟಕದವರು ಬೆರಳೆಣಿಕೆಯಷ್ಟು ಮಂದಿ ಇರುತ್ತಾರೆ. ಬ್ಯಾಂಕಿಂಗ್ ಪರೀಕ್ಷೆಗಳ ಬಗ್ಗೆ ಅರಿವು ಇಲ್ಲದೆ ಇರುವುದು ಹಾಗೂ ಭಾಷಾ ಸಮಸ್ಯೆ ಇದಕ್ಕೆ ಕಾರಣ ಎನ್ನುತ್ತಾರೆ ಬ್ಯಾಂಕಿಂಗ್ ಪರೀಕ್ಷೆಗೆ ಆನ್‌ಲೈನ್ ತರಬೇತಿ ನೀಡುತ್ತಿರುವ ಬ್ರೆಟ್ ಸೆಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ. ಅಶೋಕ ಹೆಗ್ಡೆ.

ಬ್ಯಾಂಕಿಂಗ್ ಪರೀಕ್ಷೆ ಹಿಂದಿ, ಇಂಗ್ಲಿಷ್‌ನಲ್ಲಿ ಇರುತ್ತದೆ. ಉತ್ತರ ಭಾರತದವರು ಹಿಂದಿಯಲ್ಲಿ ಬರೆದು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ. ಆದರೆ, ಕರ್ನಾಟದವರಿಗೆ ಹಿಂದಿ ಬರುವುದಿಲ್ಲ. ಇನ್ನು ಗ್ರಾಮೀಣ ಭಾಗದವರಿಗೆ ಇಂಗ್ಲಿಷ್ ಕಷ್ಟ. ಚೆನ್ನಾಗಿ ಇಂಗ್ಲಿಷ್ ಬಲ್ಲವರು ಸಾಫ್ಟ್‌ವೇರ್, ಹಾರ್ಡ್‌ವೇರ್ ಕ್ಷೇತ್ರಗಳತ್ತ ಹೋಗುತ್ತಾರೆ. ಅವರು ಇತ್ತ ಬರುವುದಿಲ್ಲ. ಸಾಮಾನ್ಯ ದರ್ಜೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಪರೀಕ್ಷೆ ಎದುರಿಸುವುದು ಕಷ್ಟವಾಗುತ್ತದೆ. ಇದರಿಂದಾಗಿ ಕರ್ನಾಟಕದವರು ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಿಲ್ಲ ಎಂಬುದು ಅವರ ವಿಶ್ಲೇಷಣೆ.