ಕರಿಯರ್‌ ಬೇಡ, ಅನುಭವ ಕೊಡಿ ಸಾಕು:- RBI GOVERNOR

ಉದಯವಾಣಿ, May 15, 2015, 3:40 AM IST
ನಾನು ಡಿಗ್ರಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಓದುವಾಗ ಒಂಥರಾ "ಕೆಟ್ಟ' ಹುಡುಗನಾಗಿದ್ದೆ. ಯಾಕೆಂದರೆ ಯಾವ ಸಿದ್ಧಾಂತವನ್ನೂ ಮೇಲ್ನೋಟಕ್ಕೆ ಒಪ್ಪಿಕೊಳ್ಳುತ್ತಿರಲಿಲ್ಲ. ನಿಜಕ್ಕೂ ಈ ಸಿದ್ಧಾಂತದಲ್ಲಿ ಏನಾದರೂ ಹುರುಳಿದೆಯೇ, ಇದರಿಂದ ಜನರಿಗೆ ಲಾಭವಿದೆಯೇ ಎಂದು ಪರೀಕ್ಷೆ ಮಾಡುತ್ತಿದ್ದೆ. ಹಾಗೆ ಮಾಡುವಾಗ ಶಿಕ್ಷಕರಿಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದೆ. ಅರ್ಥಶಾಸ್ತ್ರವೆಂದರೆ ಮಾದರಿಗಳ ಮೇಲೆ ನಿಂತಿರುವ ಶಾಸ್ತ್ರ. ಬೇರೆ ದೇಶಗಳಿಗೆ ಹೊಂದಿಕೆಯಾದ ಮಾದರಿ ನಮ್ಮ ದೇಶಕ್ಕೂ ಹೊಂದಿಕೆಯಾಗಬೇಕು ಎಂದೇನಿಲ್ಲ. ಅವುಗಳನ್ನು ಪ್ರಶ್ನೆ ಮಾಡುತ್ತ ಹೋಗಿದ್ದರಿಂದಲೇ ಈ ಕ್ಷೇತ್ರದಲ್ಲಿ ಅಷ್ಟಿಷ್ಟು ಸಾಧನೆ ಮಾಡಲು ನನ್ನಿಂದ ಸಾಧ್ಯವಾಯಿತು.

ನನಗೊಬ್ಬ ಜಗತøಸಿದ್ಧ ಅರ್ಥಶಾಸ್ತ್ರಜ್ಞ ಸ್ನೇಹಿತನಿದ್ದಾನೆ. ಜಾನ್‌ ಕಾಕ್ರೇನ್‌ ಅಂತ ಅವನ ಹೆಸರು. ಅವನು ಯಾವಾಗಲೂ "ನಾನೊಬ್ಬ ಸ್ಟುಪಿಡ್‌' ಎಂದು ಹೇಳಿಕೊಳ್ಳುತ್ತಿರುತ್ತಾನೆ. ತನಗೆ ಏನೂ ತಿಳಿಯುವುದಿಲ್ಲ, ಎಲ್ಲವನ್ನೂ ಆರಂಭದಿಂದ ಅರ್ಥಮಾಡಿಕೊಳ್ಳಬೇಕಾದಷ್ಟು ದಡ್ಡ ತಾನು ಎಂಬುದು ಅವನ ಭಾವನೆ. ಆದ್ದರಿಂದಲೇ ಅವನು ಅಷ್ಟು ದೊಡ್ಡ ಅರ್ಥಶಾಸ್ತ್ರಜ್ಞನಾಗಿದ್ದಾನೆ ಎಂಬುದು ನನ್ನ ಭಾವನೆ. ಏಕೆಂದರೆ ನನಗೇನೂ ಗೊತ್ತಿಲ್ಲ ಎಂದು ಎಲ್ಲವನ್ನೂ ಆಮೂಲಾಗ್ರವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನವಿದೆಯಲ್ಲ, ಅದೇ ನಮ್ಮನ್ನು ಯಾವುದೇ ಕ್ಷೇತ್ರದಲ್ಲಿ ಮೇಲಕ್ಕೆ ಕೊಂಡೊಯ್ಯುತ್ತದೆ. ಆಳಕ್ಕಿಳಿದರೆ ಯಾವ ವಿದ್ಯೆಯೂ ಬೋರು ಹೊಡೆಸುವುದಿಲ್ಲ.

ಹಿಂದೆಲ್ಲ ನಾವು 21ಕ್ಕೆ ವೃತ್ತಿಜೀವನ ಶುರುಮಾಡಿ 60ಕ್ಕೆ ನಿವೃತ್ತಿಯಾಗುತ್ತಿದ್ದೆವು. ಈಗಿನ ಹುಡುಗರು 21ರಿಂದ 60ರ ವರೆಗಿನ ಕರಿಯರ್‌ ಬಗ್ಗೆ ಯೋಚನೆ ಮಾಡುವುದಿಲ್ಲ. ಅವರು 21ರಿಂದ 25ರ ವರೆಗೆ ಯೋಚಿಸುತ್ತಾರೆ! ಏಕೆಂದರೆ 30 ವರ್ಷಕ್ಕೇ ಅವರಿಗೆ ವಯಸ್ಸಾಯಿತು ಅನ್ನಿಸುತ್ತದೆ. ನನ್ನ ಮಗಳಿಗೂ ತನಗೆ 30 ವರ್ಷವಾಗುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. "ಅಯ್ಯೋ, ಮೂವತ್ತು ವರ್ಷವಾ' ಅನ್ನುತ್ತಾಳೆ! ಹೀಗಾಗಬಾರದು ಅಂದರೆ ಕೆಲಸದಲ್ಲಿ ನಾವೆಲ್ಲ ಹೊಸತನ ಹುಡುಕಿಕೊಳ್ಳಬೇಕು. ಹೊಸತನ್ನು ಕಲಿಯಬೇಕು. ನನ್ನ ಪ್ರಕಾರ ಕಾರ್ಪೊರೇಟ್‌ ಕಂಪನಿಗಳು ತಮ್ಮಲ್ಲಿಗೆ ಬರುವವರಿಗೆ "ಕರಿಯರ್‌' ನೀಡುತ್ತೇವೆ ಎಂದು ಹೇಳಬಾರದು. ಅನುಭವ ಕೊಡುತ್ತೇವೆ ಎನ್ನಬೇಕು. ಆ ಅನುಭವ ಬಳಸಿಕೊಂಡು ಯುವಕರು ತಮಗಿಷ್ಟವಾದ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಬಹುದು.

4 ಸಂಗತಿ ಬದಲಾಗಬೇಕು

ದೇಶದ ಯುವಕರ ಬಗ್ಗೆ ಮಾತಾಡುವಾಗಲೆಲ್ಲ ನಾವು ಅವರನ್ನು ಡೆಮಾಗ್ರಫಿಕ್‌ ಡಿವಿಡೆಂಡ್‌ ಎಂದು ಕರೆಯುತ್ತೇವೆ. ಅಂದರೆ ನಾಳೆ ಅವರು ದೇಶಕ್ಕೆ ಲಾಭ ತರುವವರು ಎಂದರ್ಥದಲ್ಲಿ. ನಿಜಕ್ಕೂ ಅವರು ಲಾಭ ತರುವವರೇ ಆಗಬೇಕಾದರೆ ನಮ್ಮ ದೇಶದಲ್ಲಿ 4 ಸಂಗತಿಗಳು ಬದಲಾಗಬೇಕು ಅಥವಾ ಸುಧಾರಿಸಬೇಕು.

1. ಮೂಲಸೌಕರ್ಯ. ಯುವಕರು ಚೆನ್ನಾಗಿ ದುಡಿದು ದೇಶಕ್ಕೆ ಲಾಭ ತರಬೇಕಂದರೆ ಅವರಿಗೆ ದುಡಿಯಲು ಜಾಗ ಬೇಕು. ದೇಶದಲ್ಲೀಗ ಇಂತಹ ಸ್ಥಳಗಳು ಬೇಕಾದಷ್ಟು ತಲೆಯೆತ್ತುತ್ತಿವೆ.

2. ಮಾನವ ಬಂಡವಾಳ. ಇದು ನಮ್ಮಲ್ಲಿ ಸಾಕಷ್ಟಿದೆ. ಆದರೆ ಈ ಬಂಡವಾಳಕ್ಕೆ ಬುದ್ಧಿವಂತಿಕೆ ಬೇಕು. ಅದು ಸಿಗುವುದು ಒಳ್ಳೆಯ ಶಿಕ್ಷಣದಿಂದ. ಆದರೆ ನಮ್ಮ ದೇಶದಲ್ಲಿ ಶಿಕ್ಷಣದ ಗುಣಮಟ್ಟ ಶ್ರೀಮಂತರಿಗೆ ಚೆನ್ನಾಗಿದೆ, ಬಡವರಿಗೆ ಚೆನ್ನಾಗಿಲ್ಲ ಎಂಬಂತಹ ಸ್ಥಿತಿಯಿದೆ.

3. ಔದ್ಯೋಗಿಕ ವಾತಾವರಣ. ಇದು ಬಹಳ ಮುಖ್ಯ. ಕೈಗಾರಿಕೆಗೆ ಉತ್ತಮ ಅವಕಾಶ ಸಿಕ್ಕರೆ ಯುವಕರಿಗೆ ಕೆಲಸ ಸಿಗುತ್ತದೆ, ದೇಶವೂ ಬೆಳೆಯುತ್ತದೆ. ಆದರೆ ಪರಿಸರಕ್ಕೆ ಇದು ಮಾರಕವಾಗದಂತೆ ನೋಡಿಕೊಳ್ಳುವುದೂ ಮುಖ್ಯ.

4. ಉತ್ತಮ ಹಣಕಾಸು ವ್ಯವಸ್ಥೆ. ಪ್ರತಿಯೊಬ್ಬರಿಗೂ ಹಣ ರವಾನಿಸುವ, ಹಣ ಉಳಿಸುವ ಹಾಗೂ ಹಣ ಗಳಿಸುವ ಸುಲಭದ ದಾರಿ ಸಿಗಬೇಕು. ಏಕೆಂದರೆ ದಿನದ ಕೊನೆಯಲ್ಲಿ ಹೊಟ್ಟೆ ತಣ್ಣಗಿರಲು ಹಣವೇ ಬೇಕು.

ಶಿಕ್ಷಣದ 2 ನೈಜ ಮುಖ

ಕೆಲ ತಿಂಗಳ ಹಿಂದೆ ಬಿಹಾರದ ಹಳ್ಳಿಯೊಂದಕ್ಕೆ ಹೋಗಿದ್ದೆ. ಅಲ್ಲೊಂದು ಹುಡುಗಿಯರ ಹಾಸ್ಟೆಲ್‌ ಇತ್ತು. ಹೆಚ್ಚಾಗಿ ಬಡ ಎಸ್‌ಸಿ, ಎಸ್‌ಟಿ ಹುಡುಗಿಯರೇ ಇರುವ ಹಾಸ್ಟೆಲ್‌ ಅದು. ಅಲ್ಲಿಗೆ ಅವರನ್ನು ಕರೆದುಕೊಂಡು ಬಂದು ಶಿಕ್ಷಣ ಕೊಡದಿದ್ದರೆ ಅವರು ಶಾಲೆ ಬಿಟ್ಟು ಊರಿನ ಹೊಲಗದ್ದೆಗಳಲ್ಲಿ ಕೆಲಸ ಮಾಡಿಕೊಂಡಿರಬೇಕಾಗುತ್ತಿತ್ತು. ಅವರಲ್ಲಿ ಕೆಲವರಿಗೆ ಅಪ್ಪ ಅಮ್ಮ ಇದ್ದರು, ಇನ್ನು ಕೆಲವರಿಗೆ ಇರಲಿಲ್ಲ. ಆ ಹಾಸ್ಟೆಲ್‌ ಹಾಗೂ ಶಾಲೆಯಲ್ಲಿ ಮಕ್ಕಳಿಗೂ, ಅವರಿಗೆ ಕಲಿಸುವ ಶಿಕ್ಷಕರಿಗೂ ಶಿಕ್ಷಣದ ಬಗ್ಗೆ ಬಹಳ ಆಸಕ್ತಿಯಿತ್ತು. ಆದರೆ ಸೌಕರ್ಯಗಳು ಸಾಕಷ್ಟಿರಲಿಲ್ಲ. ಹಾಗಾಗಿ ಶಿಕ್ಷಣದ ಗುಣಮಟ್ಟವೂ ಅಷ್ಟು ಚೆನ್ನಾಗಿರಲಿಲ್ಲ. ಇಂತಹ ಶಾಲೆಗಳು ಸುಧಾರಣೆಯಾಗದೆ ಉತ್ತಮ ಡೆಮಾಗ್ರಫಿಕ್‌ ಡಿವಿಡೆಂಡ್‌ ನಿರೀಕ್ಷಿಸಲು ಸಾಧ್ಯವೇ? ಅಲ್ಲಿದ್ದ ಒಂದು ಮಗುವನ್ನು ಮಾತಾಡಿಸಿದೆ. "8ನೇ ಕ್ಲಾಸ್‌ ನಂತರ ನಾನು ಏನು ಮಾಡಬೇಕೋ ಗೊತ್ತಿಲ್ಲ. ಯಾಕಂದ್ರೆ ಇಲ್ಲಿ ಹೈಸ್ಕೂಲ್‌ ಇಲ್ಲ' ಎಂದು ಹೇಳಿದವಳ ಕಣ್ಣಲ್ಲಿ ಆತಂಕವಿತ್ತು. ಅಂತಹ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸರಿಯಾದ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗದೆ

ಸಮಗ್ರ ಪ್ರಗತಿ ಹೇಗೆ ಸಾಧ್ಯ?

ಕೆಲ ದಿನಗಳ ನಂತರ ದೆಹಲಿ ಪಬ್ಲಿಕ್‌ ಸ್ಕೂಲ್‌ಗೆ ಹೋಗಿದ್ದೆ. ದೇಶದ ಅತ್ಯುತ್ತಮ ಶಾಲೆಗಳಲ್ಲಿ ಅದೂ ಒಂದು. ಅಲ್ಲಿರುವ ಶೈಕ್ಷಣಿಕ ವ್ಯವಸ್ಥೆ, ಕಲಿಕೆಗಿರುವ ಅದ್ಭುತ ವಾತಾವರಣ ಹಾಗೂ ಮಕ್ಕಳಿಗೆ ಅಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣವನ್ನು ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ.

ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಎರಡು ಮುಖ. ಒಂದು ತೀರಾ ಹಿಂದುಳಿದಿದೆ. ಇನ್ನೊಂದು ಅದ್ಭುತವಾಗಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಶಕ್ತಿ ನಮಗಿದೆ ಎಂಬುದು ಸಂತೋಷ. ಆದರೆ ಅದನ್ನು ಎಲ್ಲ ಮಕ್ಕಳಿಗೂ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಗಂಭೀರ ಕೊರತೆ.

ದೇಶದ ಭವಿಷ್ಯ ಮಕ್ಕಳ ಕೈಲಿದೆ ಎಂಬುದು ಕ್ಲೀಷೆಯಾದರೂ ನಿಜ. ಇಂದಿನ ಮಕ್ಕಳಲ್ಲಿರುವ ಹೊಸ ತುಡಿತ, ಹೊಸತನ್ನು ಆವಿಷ್ಕರಿಸುವ ಬುದ್ಧಿವಂತಿಕೆ ಹಾಗೂ ಹೆಚ್ಚೆಚ್ಚು ತಿಳಿದುಕೊಳ್ಳಬೇಕೆಂಬ ಕಾತುರತೆಯನ್ನು ಗಮನಿಸಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಈ ಮಕ್ಕಳು ಬೆಳೆಯುವ ಹೊತ್ತಿಗೆ ದೇಶದಲ್ಲಿ ಅವಕಾಶಗಳೂ ಸಾಕಷ್ಟು ಹೆಚ್ಚಿರುತ್ತವೆ. ಆದರೆ ಆ ಅವಕಾಶಗಳನ್ನು ಬಳಸಿಕೊಂಡು ಏನು ಮಾಡಬೇಕು ಎಂಬುದು ಪ್ರಶ್ನೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ಹಿಂದೆ ಸೀಮಿತ ಅವಕಾಶಗಳಿದ್ದವು. ದೊಡ್ಡದೇನಾದರೂ ಮಾಡಬೇಕು ಅಂದರೆ ಒಂದೋ ಡಾಕ್ಟರ್‌ ಆಗಬೇಕಿತ್ತು ಅಥವಾ ಎಂಜಿನಿಯರ್‌ ಆಗಬೇಕಿತ್ತು. ಇಂದು ನೂರೆಂಟು ಕ್ಷೇತ್ರಗಳಿವೆ. ದೇಶವಷ್ಟೇ ಅಲ್ಲ, ವಿದೇಶಗಳೂ ನಮ್ಮ ಆಟದ ಮೈದಾನವೇ.

ಇದು ಸುಗ್ಗಿಯ ಕಾಲ

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೀಗ ಫ‌ಲವತ್ತಾಗಿದೆ. ನಿಜವಾಗಿ ನೋಡಿದರೆ ಇದು ಸುಗ್ಗಿಯ ಕಾಲ. ಈ ವ್ಯವಸ್ಥೆಯಲ್ಲಿ ಏನು ಮಾಡಿದರೆ ಏನಾಗುತ್ತದೆ ಎಂಬುದು ನಮ್ಮನ್ನಾಳುವವರಿಗೆ ತಿಳಿದಿದೆ. ಹಿಂದೆ ಇದೊಂದು ಪ್ರಯೋಗಶಾಲೆಯಾಗಿತ್ತು. ಈಗ ಪ್ರಯೋಗದ ಫ‌ಲಿತಾಂಶಗಳು ನಮ್ಮ ಮುಂದಿವೆ. ಆದರೆ, ಈ ದೇಶವನ್ನು ಹೇಗೆ ರೂಪಿಸಿಕೊಳ್ಳಬೇಕು, ಪ್ರಪಂಚದಲ್ಲಿ ಇದು ಯಾವ ರೀತಿ ಗುರುತಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯೂ ನಮ್ಮ ಮೇಲೆ ಬಿದ್ದಿದೆ. ನಾವು ನಮ್ಮಷ್ಟಕ್ಕೆ ನಮ್ಮ ವ್ಯವಹಾರಗಳನ್ನು ನೋಡಿಕೊಂಡು ಇರುವ ದೇಶವಾಗಬೇಕೆ? ಅಥವಾ ಜಗತ್ತಿನ ಮೂರ್‍ನಾಲ್ಕು ಅತಿದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿದ ಮೇಲೆ ಜಗತ್ತನ್ನು ಮುನ್ನಡೆಸಲು ನಮ್ಮ ಅಧಿಕಾರ ಚಲಾಯಿಸಬೇಕೆ? ಹಾಗೆ ಅಧಿಕಾರ ಚಲಾಯಿಸುವಾಗ ಮಾನವತೆಯ ಒಳಿತನ್ನು ಗಮನದಲ್ಲಿಟ್ಟುಕೊಳ್ಳಬೇಕೆ ಅಥವಾ ನಾನು ನಡೆದಿದ್ದೇ ಹಾದಿ ಎಂದು ಧಿಮಾಕಿನಿಂದ ಮುನ್ನಡೆಯಬೇಕೆ? ಇದನ್ನೆಲ್ಲ ಯುವಕರೇ ಯೋಚಿಸಬೇಕು.

"ಬದಲಾವಣೆ ತರುವುದು' ಅಂದರೆ ಸಾರ್ವಜನಿಕ ಸೇವೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಅದು ಅಷ್ಟೇ ಅಲ್ಲ. ಬದಲಾವಣೆಯೆಂದರೆ ಅದು ನಮಗೆ ಸಿಗುವ ತೃಪ್ತಿಯೂ ಹೌದು. ಹೀಗೆ ಬದಲಾವಣೆಗಾಗಿ ಕೆಲಸ ಮಾಡುವುದು ಒಂದು ರೀತಿಯಲ್ಲಿ ಸ್ವಾರ್ಥ ಕೂಡ. ಬೇರೆಯವರ ಬದುಕಿನಲ್ಲಿ ಬದಲಾವಣೆ ತರುವುದರ ಜೊತೆಗೇ ನಾವು ನಮ್ಮ ಬದುಕಿನಲ್ಲೂ ಸುಧಾರಣೆ ತಂದುಕೊಳ್ಳುತ್ತೇವೆ. ಹಾಗಾಗಿ ವ್ಯವಸ್ಥೆಯನ್ನು ಸುಧಾರಿಸಲು ಕೆಲಸ ಮಾಡುವವರು ಬೇರೆಯವರ ಸೇವೆ ಮಾಡುತ್ತಿದ್ದೇನೆ ಎಂದಷ್ಟೇ ಅಂದುಕೊಳ್ಳಬಾರದು. ಇದರಲ್ಲಿ ನನ್ನ ಸ್ವಾರ್ಥವೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ನನಗೊಬ್ಬ ಜಗತøಸಿದ್ಧ ಅರ್ಥಶಾಸ್ತ್ರಜ್ಞ ಸ್ನೇಹಿತನಿದ್ದಾನೆ. ಜಾನ್‌ ಕಾಕ್ರೇನ್‌ ಅಂತ ಅವನ ಹೆಸರು. ಅವನು ಯಾವಾಗಲೂ "ನಾನೊಬ್ಬ ಸ್ಟುಪಿಡ್‌' ಎಂದು ಹೇಳಿಕೊಳ್ಳುತ್ತಿರುತ್ತಾನೆ. ತನಗೆ ಏನೂ ತಿಳಿಯುವುದಿಲ್ಲ, ಎಲ್ಲವನ್ನೂ ಆರಂಭದಿಂದ ಅರ್ಥಮಾಡಿಕೊಳ್ಳಬೇಕಾದಷ್ಟು ದಡ್ಡ ತಾನು ಎಂಬುದು ಅವನ ಭಾವನೆ. ಆದ್ದರಿಂದಲೇ ಅವನು ಅಷ್ಟು ದೊಡ್ಡ ಅರ್ಥಶಾಸ್ತ್ರಜ್ಞನಾಗಿದ್ದಾನೆ ಎಂಬುದು ನನ್ನ ಭಾವನೆ.

ಡಾ| ರಘುರಾಂ ರಾಜನ್‌, ಆರ್‌ಬಿಐ ಗವರ್ನರ್‌

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023