Drop


Thursday, June 18, 2015

ಬನ್ನೇರುಘಟ್ಟ ಉದ್ಯಾನಕ್ಕೆ ಐಎಸ್ಒ ಮಾನ್ಯತೆ:


ಪ್ರಜಾವಾಣಿ ವಾರ್ತೆ
ಬನ್ನೇರುಘಟ್ಟ ಜೈವಿಕ ಉದ್ಯಾನದ ಸಂಗ್ರಹ ಚಿತ್ರ
ಬೆಂಗಳೂರು: ಪ್ರಾಣಿ ಸಂಗ್ರಹಾಲಯದ ವೈಜ್ಞಾನಿಕ
ನಿರ್ವಹಣೆ ಹಾಗೂ ಸಮರ್ಪಕ ಆಡಳಿತಕ್ಕಾಗಿ ಬನ್ನೇರುಘಟ್ಟ ಜೈವಿಕ
ಉದ್ಯಾನವು 'ಐಎಸ್ಒ 9001: 2008' ಪ್ರಮಾಣಪತ್ರವನ್ನು
ಪಡೆದಿದೆ.
'ಅಂತರರಾಷ್ಟ್ರೀಯ ಮಾನ್ಯತೆ ಸಂಸ್ಥೆ
(ಐಎಎಫ್), ಭಾರತ ಗುಣಮಟ್ಟ ಮಂಡಳಿ ಮತ್ತು ಟಿಯುವಿ
ಇಂಟರ್ಸರ್ಟ್ ಸಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
ಜತೆಯಾಗಿ ಜೈವಿಕ ಉದ್ಯಾನದಲ್ಲಿ ನಾಲ್ಕು ತಿಂಗಳ ಕಾಲ
ಪರಿಶೀಲನೆ ನಡೆಸಿ, ಗುಣಮಟ್ಟ
ಖಚಿತಪಡಿಸಿಕೊಂಡ ಬಳಿಕ ಈ ಪ್ರಮಾಣ
ಪತ್ರವನ್ನು ನೀಡಿವೆ' ಎಂದು ಉದ್ಯಾನದ ನಿರ್ದೇಶಕ
ರಂಗೇಗೌಡ 'ಪ್ರಜಾವಾಣಿ'ಗೆ ತಿಳಿಸಿದರು.
'ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿ
ಪಾಲನೆ, ಪ್ರಾಣಿಗಳಿಗೆ ಒದಗಿಸಲಾದ ಸೌಲಭ್ಯ, ಸ್ವಚ್ಛತಾ ವ್ಯವಸ್ಥೆ
ನಿರ್ವಹಣೆ, ವೈದ್ಯರ ವ್ಯವಸ್ಥೆ, ಪ್ರವಾಸಿಗರಿಗೆ ಒದಗಿಸಲಾದ
ಸೌಲಭ್ಯ ಇವೇ ಮೊದಲಾದ ಸಂಗತಿಗಳನ್ನು
ಪರಿಶೀಲಿಸಿ ಗುಣಮಟ್ಟ ಖಚಿತ
ಮಾಡಿಕೊಳ್ಳಲಾಗಿದೆ' ಎಂದು ಮಾಹಿತಿ
ನೀಡಿದರು.
'ಎರಡು ತಿಂಗಳ ಹಿಂದೆ ಪರಿಶೀಲನೆ ನಡೆಸಿದ
ತಜ್ಞರು ಮಾರ್ಗಸೂಚಿ ಪಾಲನೆಯಲ್ಲಿ ಕೆಲವು ನ್ಯೂನತೆಗಳು
ಇರುವುದನ್ನು ಪತ್ತೆ ಮಾಡಿದರು. ಆ ನ್ಯೂನತೆಗಳನ್ನು
ಸರಿಪಡಿಸಿಕೊಳ್ಳಲು ಸಲಹೆ ನೀಡಿದ್ದರು.
ಅದರಂತೆ ಅಗತ್ಯ ಮಾರ್ಪಾಡು
ಮಾಡಿಕೊಂಡೆವು' ಎಂದು ಅವರು ತಿಳಿಸಿದರು.
'ಸಿಂಹದ ದಾಳಿ ಘಟನೆಯ ನಿರ್ವಹಣೆ ಸೇರಿದಂತೆ ಜೈವಿಕ
ಉದ್ಯಾನ ನಿಭಾಯಿಸಿದ ಕೆಲವು ಪ್ರಕರಣಗಳ ಅಧ್ಯಯನವನ್ನೂ
ತಜ್ಞರ ತಂಡ ಮಾಡಿತು.
ವಾರದ ಹಿಂದೆ ಎಲ್ಲ ಪರಿಶೀಲನಾ ಪ್ರಕ್ರಿಯೆ ಪೂರೈಸಿದ
ತಂಡ ಮೃಗಾಲಯ ನಿರ್ವಹಣೆ ಗುಣಮಟ್ಟದ ಬಗೆಗೆ ತೃಪ್ತಿ
ವ್ಯಕ್ತಪಡಿಸಿತು. ಜೂನ್ 12ರಂದು ಐಎಸ್ಒ ಪ್ರಮಾಣ
ಪತ್ರವನ್ನು ನೀಡಲಾಗಿದ್ದು, ಮೂರು ವರ್ಷದ ಕಾಲಾವಧಿ
ಹೊಂದಿದೆ' ಎಂದು ವಿವರಿಸಿದರು.
'ಪ್ರಮಾಣಪತ್ರದ ಈ ಅವಧಿಯಲ್ಲಿ ಗುಣಮಟ್ಟ
ಖಚಿತಪಡಿಸಿಕೊಳ್ಳಲು ತಜ್ಞರು ಆಗಾಗ ಮೃಗಾಲಯಕ್ಕೆ
ಭೇಟಿ ನೀಡಲಿದ್ದಾರೆ. ಪ್ರವಾಸಿಗರಿಂದಲೂ ಅಭಿಪ್ರಾಯ
ಸಂಗ್ರಹಿಸಲಿದ್ದಾರೆ' ಎಂದರು. ದೇಶದಲ್ಲಿ ಬನ್ನೇರುಘಟ್ಟ
ಜೈವಿಕ ಉದ್ಯಾನ ಮತ್ತು ಮೈಸೂರು ಮೃಗಾಲಯ ಮಾತ್ರ ಐಎಸ್ಒ
ಪ್ರಮಾಣಪತ್ರ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿವೆ.