Drop


Friday, July 17, 2015

ಹಂಪಿಯ ಕಲ್ಲಿನ ತೇರಿನ ಸ್ಮಾರಕ, ಇನ್ಮುಂದೆ 10 ರೂ. ಮುಖಬೆಲೆಯ ನೋಟಿನಲ್ಲಿ ರಾರಾಜಿಸಲಿದೆ.


10 ರೂ. ನೋಟಿನಲ್ಲಿ ಹಂಪಿ ಕಲ್ಲಿನ ತೇರು
-ವಿಶ್ವಪಾರಂಪರಿಕ ತಾಣಕ್ಕೆ ಆರ್‌ಬಿಐ ಮನ್ನಣೆ-
* ಕೃಷ್ಣ ಎನ್.ಲಮಾಣಿ, ಹೊಸಪೇಟೆ ವಿಶ್ವ ವಿಖ್ಯಾತ ಹಂಪಿಯ ಕಲ್ಲಿನ ತೇರಿನ ಸ್ಮಾರಕ, ಇನ್ಮುಂದೆ 10 ರೂ. ಮುಖಬೆಲೆಯ ನೋಟಿನಲ್ಲಿ ರಾರಾಜಿಸಲಿದೆ. ದೇಶದ ಆಯ್ದ ಎಂಟು ಸ್ಮಾರಕಗಳ ಚಿತ್ರಗಳನ್ನು ನಾನಾ ಮುಖಬೆಲೆಯ ನೋಟುಗಳಲ್ಲಿ ಮುದ್ರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಧರಿಸಿದ್ದು, ಹಂಪಿ ಸ್ಮಾರಕಗಳ ಗುಚ್ಛಕ್ಕೆ ಮತ್ತೊಂದು ರಾಷ್ಟ್ರೀಯ ಮನ್ನಣೆ ದೊರೆಯಲಿದೆ.

ಹೊಸದಿಲ್ಲಿಯ ಕೆಂಪುಕೋಟೆ (ರಾಷ್ಟ್ರಧ್ವಜ ಸಹಿತ), ಕೊನಾರ್ಕ್‌ನ ಸೂರ್ಯ ದೇಗುಲ, ಆಗ್ರಾದ ತಾಜ್‌ಮಹಲ್ (ಮುಂಭಾಗ), ಗೋವಾದ ಪುರಾತನ ಚರ್ಚ್ ಮತ್ತು ಕಾನ್ವೆಂಟ್ಸ್ , ಅಜಂತಾ ಗುಹಾಲಯ ಮತ್ತು ಗುಹಾಲಯದ ಪದ್ಮಪಾಣಿ ಚಿತ್ರಗಳು, ಭಾರತೀಯ ಕರೆನ್ಸಿ ನೋಟುಗಳಲ್ಲಿ ಕೆಲವೇ ದಿನಗಳಲ್ಲಿ ಕಾಣಸಿಗಲಿವೆ.

ಕಲ್ಲಿನ ತೇರಿನ ವಿಶೇಷತೆ: ಹಂಪಿಯ ಕಲ್ಲಿನ ತೇರು, ವಿಜಯನಗರ ಸಾಮ್ರಾಜ್ಯದ ಅಪರೂಪದ ಸ್ಮಾರಕಗಳಲ್ಲಿ ಒಂದಾಗಿದೆ. ಹಂಪಿಯ ಸ್ಮಾರಕಗಳನ್ನು ಯುನೆಸ್ಕೊ 1986ರಲ್ಲೇ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿತ್ರಗಳ ಸಂಗ್ರಹ ಚುರುಕು: ನೋಟುಗಳಲ್ಲಿ ಸ್ಮಾರಕಗಳ ಚಿತ್ರಗಳನ್ನು ಅಳವಡಿಸಲು, ಈಗಾಗಲೇ ಹಲವು ಸುತ್ತುಗಳ ಮಾತುಕತೆ ನಡೆದಿದೆ. ಕೇಂದ್ರ ಪುರಾತತ್ವ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೂ ಆರ್‌ಬಿಐ ಅಧಿಕಾರಿಗಳು ಚರ್ಚಿಸಿದ್ದಾರೆ.

ಇತರ ಸ್ಮಾರಕಗಳು ಈ ನೋಟುಗಳಲ್ಲಿ: ಹೊಸದಿಲ್ಲಿಯ ಕೆಂಪುಕೋಟೆ 20ರೂ. ನೋಟಿನಲ್ಲಿ, ಕೊನಾರ್ಕ್‌ದ ಸೂರ್ಯದೇಗುಲ 50 ರೂ. ನೋಟಿನಲ್ಲಿ, ಆಗ್ರಾದ ತಾಜ್‌ಮಹಲ್ 100ರೂ. ಮುಖಬೆಲೆಯ ನೋಟಿನಲ್ಲಿ ಕಾಣಸಿಗಲಿವೆ. ಗೋವಾದ ಚರ್ಚ್ ಮತ್ತು ಕಾನ್ವೆಂಟ್ಸ್ 500 ರೂ. ಮುಖಬೆಲೆಯ ನೋಟಿನಲ್ಲಿ ಮುದ್ರಣಗೊಳ್ಳಲಿದೆ. ಸಾವಿರ ರೂ. ಮುಖಬೆಲೆಯ ನೋಟಿನಲ್ಲಿ ಅಜಂತಾದ ಗುಹಾಲಯ ಮತ್ತು ಪದ್ಮಪಾಣಿ ಚಿತ್ರವನ್ನು ಮುದ್ರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ---

ಹಂಪಿಯ ಕಲ್ಲಿನ ತೇರಿನ ಚಿತ್ರವನ್ನು 10ರೂ. ಮುಖಬೆಲೆಯ ನೋಟಿನಲ್ಲಿ ಮುದ್ರಿಸಲು ಕೇಂದ್ರ ಪುರಾತತ್ವ ಇಲಾಖೆಯ ಹೊಸದಿಲ್ಲಿಯ ಮುಖ್ಯ ಕಚೇರಿಯಿಂದ ಛಾಯಾಚಿತ್ರಗಳನ್ನು ಕೇಳಲಾಗಿತ್ತು. ಹೀಗಾಗಿ ನಾನಾ ಕೋನಗಳಲ್ಲಿ ಕಲ್ಲಿನ ತೇರಿನ ಚಿತ್ರಗಳನ್ನು ಕಳುಹಿಸಿಕೊಡಲಾಗಿದೆ. -ಎನ್.ಸಿ. ಪ್ರಕಾಶ್ ನಾಯ್ಕಂಡ, ಉಪ ಅಧೀಕ್ಷಕ, ಕೇಂದ್ರ ಪುರಾತತ್ವ ಇಲಾಖೆ, ಹಂಪಿ ವಲಯ