Drop


Friday, July 17, 2015

ಭಾರತ ಮೂಲದ ಅಹ್ಮದ್‌ ಕಥ್ರಡಗೆ ಫ್ರಾನ್ಸ್‌ನ ‘ನೈಟ್‌ಹುಡ್‌’ ಪ್ರದಾನ


ಜೋಹಾನ್ಸ್‌ಬರ್ಗ್‌ (ಪಿಟಿಐ): ದಕ್ಷಿಣ ಆಫ್ರಿಕಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ವರ್ಣಭೇದ ನೀತಿ ವಿರುದ್ಧ ಚಳವಳಿಯ ರೂವಾರಿ ನೆಲ್ಸನ್‌ ಮಂಡೇಲ ಅವರ ಆಪ್ತ ಭಾರತ ಮೂಲದ ಅಹ್ಮದ್‌ ಕಥ್ರಡ ಅವರು ಪ್ರೆಂಚ್‌ ಸರ್ಕಾರದ ‘ನೈಟ್‌ಹುಡ್‌’ ಗೌರವಕ್ಕೆ ಪಾತ್ರರಾಗಿದ್ದರೆ.
ದಕ್ಷಿಣ ಆಫ್ರಿಕಾದಲ್ಲಿನ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಫ್ರಾನ್ಸ್‌ ಸರ್ಕಾರ ಅಹ್ಮದ್‌ ಅವರಿಗೆ ನೈಟ್‌ಹುಡ್‌ ಪ್ರಶಸ್ತಿ ನೀಡಿ ಗೌರವಿಸಿದೆ.
ನೈಟ್‌ಹುಡ್‌ ಪುರಸ್ಕಾರಕ್ಕೆ ಭಾಜನರಾಗಿದ್ದ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್‌ ಮಂಡೇಲ, ಆರ್ಚ್‌ ಬಿಷಪ್‌ ಡೆಸ್ಮಂಡ್‌ ಟುಟು ಮತ್ತು ಲೇಖಕ ನಾದಿನ್‌ ಗಾರ್ಡಿಮರ್‌ ಅವರ ಸಾಲಿನಲ್ಲಿ ಇದೀಗ ಭಾರತ ಮೂಲದ ಅಹ್ಮದ್‌ ಕಥ್ರಡ ಅವರೂ ಸೇರಿದ್ದಾರೆ. ರಾಷ್ಟ್ರೀಯ ದಿನದ ಅಂಗವಾಗಿ ಫ್ರಾನ್ಸ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಹ್ಮದ್‌ ಕಥ್ರಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣಾ ಆಫ್ರಿಕಾದಲ್ಲಿನ ಫ್ರಾನ್ಸ್ ರಾಯಭಾರಿ ಎಲಿಜಬೆತ್‌ ಬಾರ್ಬಿಯರ್‌ ಅವರು ಮಾತನಾಡಿ, ‘ದಕ್ಷಿಣಾ ಆಫ್ರಿಕಾದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಅಹ್ಮದ್‌ ಅವರ ಪಾತ್ರ ಅವಿಸ್ಮರಣೀಯ’ ಎಂದು ಬಣ್ಣಿಸಿದರು. ಅಹ್ಮದ್‌ ಕಥ್ರಡ ಅವರು ದಕ್ಷಿಣಾ ಆಫ್ರಿಕಾದ ಸ್ವಾತಂತ್ರ್ಯ ಚಳವಳಿಯಲ್ಲಿ ಹುತಾತ್ಮರಾದವರಿಗೆ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.