Drop


Monday, July 27, 2015

ಟಿಇಟಿ ಪರೀಕ್ಷೆ: ಅರ್ಜಿ ಸಲ್ಲಿಸಲು ಪರದಾಟ!


ಹುಬ್ಬಳ್ಳಿ: ಶಿಕ್ಷಕರ ಅರ್ಹತಾ ಪರೀಕ್ಷೆ
(ಟಿಇಟಿ)ಗೆ ಇಲಾಖೆಯು ಅರ್ಜಿ ಆಹ್ವಾನಿಸಿದೆ. ಆದರೆ,
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು
ಪರದಾಡುವಂತಾಗಿದೆ. ಪ್ರಾಥಮಿಕ ಹಾಗೂ ಹಿರಿಯ
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ
ಪರೀಕ್ಷೆಗೆ ಹಾಜರಾಗಬೇಕು ಎಂದರೆ
ಟಿಇಟಿಯಲ್ಲಿ ಉತ್ತೀರ್ಣರಾಗಬೇಕಿರುವುದು
ಕಡ್ಡಾಯವಾಗಿದೆ.
'ಅರ್ಜಿ ಸಲ್ಲಿಸಲು ಒಂದು ವಾರದಿಂದ
ಪ್ರಯತ್ನಿಸುತ್ತಿದ್ದೇವೆ. ಎಲ್ಲ ವಿವರಗಳನ್ನು ಭರ್ತಿ
ಮಾಡಿದ ನಂತರ, 'ಸಬ್ಮಿಟ್' ಬಟನ್ ಒತ್ತಿದರೆ,
'ರಿ ಸಬ್ಮಿಟ್' ಎಂಬ ಸೂಚನೆ ಕಾಣುತ್ತದೆ. ಪದೇ
ಪದೇ ಇದೇ ಸೂಚನೆ ಬರುತ್ತದೆ. ನಂತರ
ಕಂಪ್ಯೂಟರ್
ಸ್ಥಗಿತಗೊಳ್ಳುತ್ತದೆ. ಅರ್ಜಿ
ಸ್ವೀಕೃತವಾಗುತ್ತಲೇ ಇಲ್ಲ' ಎಂದು
ದೂರುತ್ತಾರೆ ಅಭ್ಯರ್ಥಿ ಫಕ್ಕೀರಪ್ಪ
ಮುದಗುರಿ.
'ಸೈಬರ್ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು
ಹೋಗುತ್ತೇವೆ. ನಾಲ್ಕರಿಂದ ಐದು ಗಂಟೆಗಳ
ಕಾಲ ಪ್ರಯತ್ನಿಸಿದರೂ ಅರ್ಜಿ
ಸ್ವೀಕೃತವಾಗುತ್ತಿಲ್ಲ. ನಮ್ಮ ಹಣ ಮತ್ತು
ಸಮಯ ಎರಡೂ ವ್ಯರ್ಥವಾಗುತ್ತಿದೆ. ಓದುವುದಕ್ಕೂ
ಆಗುತ್ತಿಲ್ಲ. ಸಹಾಯವಾಣಿಗೆ ಕರೆ ಮಾಡಿದರೆ,
ಕಾರ್ಯನಿರತವಾಗಿದೆ ಎಂಬ ಉತ್ತರ ಬರುತ್ತದೆ.
ರಿಂಗಣಿಸುತ್ತಿದ್ದರೂ ಯಾರೂ ಕರೆ
ಸ್ವೀಕರಿಸುತ್ತಿಲ್ಲ' ಎಂದು
ಧಾರವಾಡದಲ್ಲಿರುವ ರೇಣುಕಪ್ಪ ಗೋಡಿ ದೂರುತ್ತಾರೆ.
'ಅರ್ಜಿ ಸಲ್ಲಿಸಲು ಆ. 3 ಕೊನೆಯ
ದಿನವಾಗಿದೆ. ಮುಂದಿನ ವಾರ ಇನ್ನೂ
ವಿಳಂಬವಾಗಬಹುದು ಎಂಬ
ಕಾರಣದಿಂದ ರಾತ್ರಿ 2 ಗಂಟೆಯವರೆಗೂ
ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೇವೆ. ಆದರೂ
ಸ್ವೀಕೃತವಾಗುತ್ತಿಲ್ಲ' ಎಂದು ಅವರು
ಅಲವತ್ತುಕೊಂಡರು.