Drop


Friday, August 14, 2015

●ದಯಾಮರಣಕ್ಕೆ ಶಿಕ್ಷಕರ ಮನವಿ

●ದಯಾಮರಣಕ್ಕೆ ಶಿಕ್ಷಕರ ಮನವಿ

ಚನ್ನಪಟ್ಟಣ: ಪಟ್ಟಣದ ಕಾಳಿದಾಸ ಪ್ರೌಢಶಾಲೆ ಶಿಕ್ಷಕರು ದಯಾ ಮರಣಕ್ಕೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಶಾಲೆಯನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಲು ಶಾಲೆಯ ಆಡಳಿತ ಮಂಡಳಿ ಮೀನಮೇಷ ಮಾಡುತ್ತಿದೆ. ಇದರಿಂದ ಶಾಲೆಯಲ್ಲಿ ಹಲವು ವರ್ಷಗಳಿಂದ ದುಡಿದ ಶಿಕ್ಷಕರ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಕಾಳಿದಾಸ ಕುರುಬರ ಸಂಘದ ವತಿಯಿಂದ 1989-90ರಲ್ಲಿ ಪ್ರಾರಂಭವಾದ ಶಾಲೆಯು ಸರ್ಕಾರದ ಅನುದಾನಕ್ಕೆ ಒಳಪಡಿಸಲು ಕಳೆದ ಎಂಟು ವರ್ಷದ ಹಿಂದೆಯೇ ಆದೇಶ ಬಂದಿದ್ದರೂ ಆಡಳಿತ ಮಂಡಳಿ ಅಗತ್ಯ ದಾಖಲಾತಿಗಳನ್ನು ಇಲಾಖೆಗೆ ಸಲ್ಲಿಸದೆ ಇರುವುದರಿಂದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ದಯಾ ಮರಣಕ್ಕೆ ಅವಕಾಶ ನೀಡಿ ಎಂದು ಮುಖ್ಯಶಿಕ್ಷಕ ಡಿ. ರಾಮಕೃಷ್ಣ, ಶಿಕ್ಷಕರಾದ ಸಿ.ಎಂ. ಕುಮಾರ್, ಎಂ.ಆರ್.ಪುಟ್ಟೇಗೌಡ, ಶಿವಬೀರಯ್ಯ, ಗುಮಾಸ್ತರಾದ ಎಸ್.ಎಂ.ರಾಜಶೇಖರ್, ಲತಾ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

1994ರವರೆಗೆ ಆರಂಭವಾದ ಶಾಲಾ-ಕಾಲೇಜುಗಳಿಗೆ ವೇತನಾನುದಾನ ನೀಡುವಂತೆ 2007ರಲ್ಲಿ ಅಕ್ಟೋಬರ್‌ 6ರಂದು ಆದೇಶಿಸಿದೆ. ಆದರೆ ಇಷ್ಟು ವರ್ಷವಾದರೂ ಆಡಳಿತ ಮಂಡಳಿ ಶಾಲೆಯನ್ನು ಅನುದಾನಕ್ಕೆ ಒಳಪಡಿಸಲು ಮನಸ್ಸು ಮಾಡುತ್ತಿಲ್ಲ. ಹಲವು ಬಾರಿ ಈ ಬಗ್ಗೆ ಮನವಿ ಮಾಡಿದ್ದರೂ ಮನವಿಗೆ ಬೆಲೆ ನೀಡುತ್ತಿಲ್ಲ. 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಕೇಳುವವರೇ ಇಲ್ಲದಂತಾಗಿದೆ ಎಂದು ವಿವರಿಸಿದ್ದಾರೆ. ವೈಯಕ್ತಿಕ ಹಿತಾಸಕ್ತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳು ಶಾಲೆಯನ್ನು ಮುಚ್ಚಿ, ಈ ಕಟ್ಟಡದಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಉದ್ದೇಶಿಸಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಅವರು ದೂರಿದ್ದಾರೆ.

ಮುಂದಾದರೂ ಆಡಳಿತ ಮಂಡಳಿಯವರು ಶೀಘ್ರ ದಾಖಲೆಗಳನ್ನು ಸಲ್ಲಿಸಿ ಶಾಲೆಯನ್ನು ವೇತನಾನುದಾನಕ್ಕೆ ಒಳಪಡಿಸಬೇಕು. ಇಲ್ಲದಿದ್ದರೆ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರು ಶಾಲೆಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ