ಮರಾಠಿ ದೇಸಿ ಚಿಂತಕ ಶ್ಯಾಮ ಮನೋಹರರಿಗೆ ಕುವೆಂಪು ಪ್ರಶಸ್ತಿ

ಹೊಸದಿಲ್ಲಿ: ಈ ಸಾಲಿನ (2015-16)
ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ
ಹಿರಿಯ ಮರಾಠಿ ಸಾಹಿತಿ-ಚಿಂತಕ
ಪ್ರೊ.ಶ್ಯಾಮ್ ಮನೋಹರ್ ಅವರನ್ನು
ಆಯ್ಕೆ ಮಾಡಲಾಗಿದೆ.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ
ಡಾ.ಹಂಪ ನಾಗರಾಜಯ್ಯ, ಕಾರ್ಯದರ್ಶಿ
ಕಡಿದಾಳು ಪ್ರಕಾಶ್, ತೀರ್ಪುಗಾರರ ಸಮಿತಿಯ
ಸದಸ್ಯರಾದ ಪ್ರೊ.ಪುರುಷೋತ್ತಮ
ಬಿಳಿಮಲೆ ಅವರು ಗುರುವಾರ ಇಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಈ ಸಂಗತಿಯನ್ನು
ಪ್ರಕಟಿಸಿದರು.
ಐದು ಲಕ್ಷ ರುಪಾಯಿ ನಗದನ್ನು
ಒಳಗೊಂಡ ಈ ಪ್ರಶಸ್ತಿಯ
ವಿತರಣೆ ಕುವೆಂಪು ಅವರ ಹುಟ್ಟಿದ ದಿನವೂ ಆದ
ಮುಂಬರುವ ಡಿಸೆಂಬರ್ 29ರಂದು
ಕುಪ್ಪಳಿಯಲ್ಲಿ ನಡೆಯಲಿದೆ.
''ಸಮಕಾಲೀನ ಕಾಲಘಟ್ಟದಲ್ಲಿ ಭಾರತಕ್ಕೆ
ದೊರೆಯುತ್ತಿರುವ ಜ್ಞಾನವು ಪಶ್ಚಿಮ
ದೇಶಗಳ ಬಂಡವಾಳಶಾಹಿ ಮತ್ತು
ತಂತ್ರಜ್ಞಾನದ ಚಿಂತನಕ್ರಮವನ್ನು
ಆಧರಿಸಿದ್ದು. ಇಂತಹ ಜ್ಞಾನವು ಮನುಷ್ಯನ
ಆತ್ಮವನ್ನು ಮತ್ತು ಸೃಜನಶೀಲತೆಯನ್ನು
ನಾಶ ಮಾಡುತ್ತದೆ ಎಂಬುದು ಶ್ಯಾಮ್ ಮನೋಹರ
ಅವರ ಕೃತಿಗಳ ಕೇಂದ್ರ ನೆಲೆ. ಪಶ್ಚಿಮದ
ಬೌದ್ಧಿಕ ದಾಳಿಯ ವಿರುದ್ಧ ನಿರಂತರ
ಬರೆದವರು. ಈ ಅರ್ಥದಲ್ಲಿ ಕನ್ನಡದ
ಯಶವಂತ ಚಿತ್ತಾಲರ
ಬರವಣಿಗೆಯೊಂದಿಗೆ ಶ್ಯಾಮ್
ಅವರನ್ನು ಹೋಲಿಸಬಹುದು,'' ಎಂದು
ಪ್ರೊ.ಬಿಳಿಮಲೆ ಬಣ್ಣಿಸಿದರು.
ಶ್ಯಾಮ್ ಮನೋಹರ್ ಅವರು ಎಂಟು
ಕಾದಂಬರಿಗಳು, ಎಂಟು ನಾಟಕಗಳು ಹಾಗೂ
ವಿಮರ್ಶಾ ಪ್ರಬಂಧಗಳನ್ನು ರಚಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ
ಸೇರಿದಂತೆ ಹತ್ತಾರು ಸಾಹಿತ್ಯ ಪ್ರಶಸ್ತಿಗಳು
ಈವರೆಗೆ ಅವರ ಕೃತಿಗಳಿಗೆ ಸಂದಿವೆ.
1941ರಲ್ಲಿ ಜನಿಸಿದ ಅವರು ಪುಣೆಯ
ಎಸ್.ಪಿ.ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು.
ಮಹಾರಾಷ್ಟ್ರದ ಬಹುತೇಕ
ವಿಶ್ವವಿದ್ಯಾಲಯಗಳಲ್ಲಿ ಇವರ ಕೃತಿಗಳನ್ನು
ಪಠ್ಯಪುಸ್ತಕಗಳನ್ನಾಗಿ ಓದಿಸಲಾಗಿದೆ. ಕನ್ನಡ,
ಗುಜರಾತಿ, ಬಂಗಾಳಿ, ಉರ್ದು, ಹಿಂದಿ,
ಸಿಂಧಿ, ಇಂಗ್ಲಿಷಿಗೆ ಅವರ ಕೃತಿಗಳು
ಅನುವಾದಗೊಂಡಿವೆ.
ಪ್ರೊ.ಎಚ್.ಎಸ್.ಶಿವಪ್ರಕಾಶ್,
ಮಲೆಯಾಳಂ ಬರೆಹಗಾರ
ಡಾ.ಕೆ.ಸಚ್ಚಿದಾನಂದನ್, ಡಾ.ಪುರುಷೋತ್ತಮ
ಬಿಳಿಮಲೆ ಅವರನ್ನು
ಒಳಗೊಂಡ
ತೀರ್ಪುಗಾರರ ಸಮಿತಿಯು ಶ್ಯಾಮ್
ಮನೋಹರ್ ಅವರನ್ನು ಸರ್ವಾನುಮತದಿಂದ
ಆಯ್ಕೆ ಮಾಡಿದೆ. ಈ ಬಾರಿ ಪಶ್ಚಿಮ ಭಾರತದ
(ಕೊಂಕಣಿ, ಮರಾಠಿ, ಗುಜರಾತಿ)
ಬರೆಹಗಾರರನ್ನು ಈ ಪುರಸ್ಕಾರಕ್ಕೆ ಪರಿಗಣಿಸಲಾಗಿತ್ತು.
ಈ ಹಿಂದಿನ ಎರಡು ಪುರಸ್ಕಾರಗಳನ್ನು
ಅನುಕ್ರಮವಾಗಿ ದಕ್ಷಿಣದ
ಡಾ.ಕೆ.ಸಚ್ಚಿದಾನಂದನ್ ಮತ್ತು ಉತ್ತರದ
ಹಿಂದೀ ಸಾಹಿತಿ-ಚಿಂತಕ
ಪ್ರೊ.ನಾಮವರ್ ಸಿಂಗ್ ಅವರಿಗೆ
ನೀಡಲಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023