ಏನಿದು ಕಳಸಾ-ಬಂಡೂರಿ ಯೋಜನೆ...?"

ಮಹಾದಾಯಿ ನದಿಯನ್ನು ಗೋವಾದ ಜೀವನದಿ ಎಂದು ಕರೆಯುತ್ತಾರೆ.
ಸುಮಾರು 77 ಕಿ.ಮೀ. ಇರುವ ಈ ನದಿಯು ಕರ್ನಾಟಕದಲ್ಲಿ ಸುಮಾರು 29 ಕಿ.ಮೀ.ಹರಿಯುತ್ತದೆ.
ರಾಜ್ಯದ ಬೆಳಗಾವಿಯ ಮೂಲಕ ಈ ನದಿ ಹರಿದು ಸಮುದ್ರ ಸೇರಿಕೊಳ್ಳುತ್ತದೆ.

ಕರ್ನಾಟಕದ ಮೂಲಕ ಹರಿದು ಹೋಗುವ ನೀರನ್ನು ಬಳಸಿಕೊಂಡು, ನೀರನ್ನು ಮಲಪ್ರಭಾ ಡ್ಯಾಂನಲ್ಲಿ ಸಂಗ್ರಹಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಮಹಾದಾಯಿ ಅಥವ ಕಳಸಾ-ಬಂಡೂರಿ ಯೋಜನೆ.

* ಕಳಸಾ-ಬಂಡೂರಿ ಹೆಸರೇಕೆ..?
ಈ ಹೋರಾಟಕ್ಕೆ ಕಳಸಾ-ಬಂಡೂರಿ ಮತ್ತು ಮಹಾದಾಯಿ ಹೋರಾಟ ಎಂಬ ಹೆಸರಿದೆ.
ನೀರನ್ನು ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಲು ಯೋಜನೆ ರೂಪಿಸಲಾಗಿದೆ.
ಆದ್ದರಿಂದ, ಕಳಸಾ-ಬಂಡೂರಿ ಎಂಬ ಹೆಸರೂ ಇದೆ.

1978 ರಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾಯಿತು.
ಆಗ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು

1980 ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು.
ಕರ್ನಾಟಕ ಸರ್ಕಾರ 1988 ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು.
ಆದರೆ, ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತು.

ಮಹಾದಾಯಿ ಯೋಜನೆಯ ವರದಿ ನೀಡಿದ್ದ ಸಮಿತಿಯಲ್ಲಿದ್ದ ಎಸ್‌.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಸಿಎಂ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಆಗ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು.

2000 ದಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ನೀಡಿತು.
ಬಂಡೂರಿ ನಾಲಾ ಯೋಜನೆಗೆ 49.20 ಕೋಟಿ ರೂ., ಕಳಸಾ ನಾಲಾ ಯೋಜನೆಗೆ 44.78 ಕೋಟಿ ರೂ. ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿತು.

ಕೇಂದ್ರ ಸರ್ಕಾರ 2002 ರಲ್ಲಿ ಯೋಜನೆಗೆ ಒಪ್ಪಿಗೆ ಕೊಟ್ಟಿತು.
2002 ರ ಏ.30 ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು.
ಆದರೆ, 2002ರ ಮೇನಲ್ಲಿ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ಎತ್ತಿತು.

ಈ ನದಿ ವಿವಾದದ ಬಗ್ಗೆ ನ್ಯಾಯಾಧೀಕರಣ ರಚಿಸುವಂತೆ ಗೋವಾ ಸರ್ಕಾರ 2002ರಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆಯಿತು.
2002 ರ ಸೆಪ್ಟೆಂಬರ್‌ನಲ್ಲಿ ಯೋಜನೆಗೆ ಕೇಂದ್ರ ಜಲ ಆಯೋಗ ತಡೆ ನೀಡಿತು.
ನಂತರ ದೆಹಲಿಯಲ್ಲಿ ಕರ್ನಾಟಕ-ಗೋವಾ ಸಚಿವರ ಸಭೆ ನಡೆಯಿತು.

ಬೆಳಗಾವಿಯ ಜಿಲ್ಲೆಯ ಕಣಕುಂಬಿಯಲ್ಲಿ ಜಲಾಶಯ ನಿರ್ಮಿಸಲು 2006 ರ ಸೆಪ್ಟೆಂಬರ್‌ನಲ್ಲಿ ಭೂಮಿ ಪೂಜೆ ಮಾಡಲಾಯಿತು.
2006 ರ ನವೆಂಬರ್‌ನಲ್ಲಿ ಗೋವಾ ಸರ್ಕಾರ ಈ ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.

ಕಾಮಗಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. 2010ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಾಧೀಕರಣವನ್ನು ನೇಮಕ ಮಾಡಲಾಯಿತು.
2014ರಲ್ಲಿ ನ್ಯಾಯಾಧೀಕರಣದ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 2015ರ ಜೂನ್​ನಿಂದ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭವಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023