Thursday, October 1, 2015

ಬರೋಡದಲ್ಲಿ 12ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

ಬರೋಡ: ಹೊರನಾಡು ಕನ್ನಡಿಗರು ವಿಶಾಲ
ಮನೋ ಧರ್ಮದವರು. ಅವರು ನಾಡು ನುಡಿಗೆ ತೋರುವ ಗೌರವ
ಅಪಾರವಾದುದು. ನಿಮ್ಮೆಲ್ಲರ ಏಕತೆ ತಾಯಿನಾಡಿಗೆ
ಪರೋಕ್ಷವಾಗಿ ಬಲವರ್ಧನೆ ನೀಡುತ್ತದೆ. ತಾವು
ಇನ್ನೂ ಹೆಚ್ಚಿನ ರೀತಿಯಲ್ಲಿ
ಒಗ್ಗಟ್ಟನ್ನು ಪ್ರದರ್ಶಿಸಿ ಮುನ್ನಡೆಯಬೇಕು. ಅದು
ತಾಯ್ನಾಡಿಗೆ ಮತ್ತು ದೇಶಕ್ಕೆ ನೀವು
ನೀಡುವ ಕೊಡುಗೆ ಎನ್ನುವುದು ನನ್ನ ಭಾವನೆ
ಎಂದು ಕರ್ನಾಟಕ ಸಚಿವ ಬಿ. ರಮಾನಾಥ್ ರೈ
ಅಭಿಪ್ರಾಯಪಟ್ಟರು.
ಸೆ. 27ರಂದು ಬರೋಡಾದ ಸಿ. ಸಿ. ಮೆಹ್ತಾ
ಸಭಾಂಗಣದ ಡಾ| ಕಯ್ನಾರ ಕಿಂಞಣ್ಣ ರೈ
ವೇದಿಕೆಯಲ್ಲಿ ನಡೆದ 12ನೇ ರಾಷ್ಟ್ರೀಯ
ಕನ್ನಡ ಸಂಸ್ಕೃತಿ ಸಮ್ಮೇಳನವನ್ನು
ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಕನ್ನಡ ಅಭಿವೃದ್ಧಿ
ಪ್ರಾಧಿಕಾರದ ಅಧ್ಯಕ್ಷ ಡಾ| ಎಲ್.
ಹನುಮಂತಯ್ಯ ಮಾತನಾಡಿ, ಇತಿಹಾಸ
ಕಾಲದಿಂದಲೂ ಕನ್ನಡಕ್ಕೆ ತನ್ನದೇ ಆದ
ಪರಂಪರೆಯಿದೆ. ವಿಶೇಷ ಸ್ಥಾನಮಾನ ಪಡೆದ
ಜಗತ್ತಿನ 20 ಭಾಷೆಗಳಲ್ಲಿ ಕನ್ನಡವೂ ಒಂದು
ಎಂದು ನಾವು ನಮ್ಮ ತಾಯಿ ನುಡಿಯ ಬಗ್ಗೆ
ಹೆಮ್ಮೆಯಿಂದ ಹೇಳಿಕೊಳ್ಳಬಹುದು
ಎಂದರು.
ಸಮ್ಮೇಳನಾಧ್ಯಕ್ಷ ಖ್ಯಾತ ಲೇಖಕ ಕಾ. ತ.
ಚಿಕ್ಕಣ್ಣ ಮಾತನಾಡಿ, ಕನ್ನಡ ನಾಡು ಮತ್ತು ಕನ್ನಡ
ನುಡಿ ಅತ್ಯಂತ
ಶ್ರೀಮಂತವಾದುದು. ದಾಸ ಸಾಹಿತ್ಯ
ಮತ್ತು ವಚನ ಸಾಹಿತ್ಯ ಮಾನವೀಯ
ಮೌಲ್ಯಗಳನ್ನು ಎತ್ತಿ ಹಿಡಿದಿವೆ. ಹಾಗೂ ಇವು
ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ಮನುಕೂಲದ
ಮೂಲ ಮಂತ್ರವಾಗಬೇಕೆಂದು ಸಾರುತ್ತವೆ
ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಭಾಷಾ ಸಂಶೋಧಕ
ಪದ್ಮಶ್ರೀ ಪ್ರೊ| ಗಣೇಶ್
ಎನ್. ದೇವಿ, ಮಾತನಾಡಿ, ಕರ್ನಾಟಕದ ಹಲವು
ವಿದ್ವಾಂಸರಿಂದ ಕನ್ನಡ ನಾಡಿನ ಸಾಹಿತ್ಯ
ಇತಿಹಾಸ ಮತ್ತು ಭಾಷೆಯ ಬಗ್ಗೆ ಸಾಕಷ್ಟು
ವಿಷಯವನ್ನು ಅರಿತುಕೊಂಡಿದ್ದೇನೆ. ನನಗೆ
ಕನ್ನಡ ಭಾಷೆ ಬರದಿದ್ದರೂ ಒಂದು
ರೀತಿಯಲ್ಲಿ ಕರ್ನಾಟಕದ ಭಾಗವಾಗಿದ್ದೇನೆ
ಎಂದರು.
ರಾಷ್ಟ್ರೀಯ ಕನ್ನಡ ಸಂಸ್ಕೃತಿ
ಸಮ್ಮೇಳನದ ಸ್ಥಾಪಕಾಧ್ಯಕ್ಷ ಇ. ಕೆ. ಪಿ.
ಮಂಜುನಾಥ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ,
ಪ್ರತೀ ವರ್ಷ ಈ ಸಮ್ಮೇಳನ
ಹಮ್ಮಿಕೊಳ್ಳುವ ಉದ್ದೇಶ ಹೊರನಾಡು
ಕನ್ನಡಿಗರು ತಾಯ್ನಾಡಿನೊಂದಿಗೆ
ಸಂಬಂಧವನ್ನು
ಬಲಪಡಿಸಿಕೊಳ್ಳಬೇಕೆಂಬುದಾಗಿದೆ.
ಅಲ್ಲದೆಕಲಾವಿದರು, ಸಾಹಿತಿಗಳಿಗೆ ಅಪಾರ ಪ್ರತಿಭೆ
ಇದ್ದರೂ ಅವಕಾಶ ವಂಚಿತರಾಗಿರುತ್ತಾರೆ.
ಅಂಥವರಿಗೆ ರಾಷ್ಟ್ರೀಯ
ಮಟ್ಟದಲ್ಲಿ ವೇದಿಕೆ ಕಲ್ಪಿಸುವುದು ನಮ್ಮ
ಆಶಯವಾಗಿದೆ ಎಂದರು.
ರಾಷ್ಟ್ರೀಯ ಕನ್ನಡ ಸಂಸ್ಕೃತಿ
ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಡಾ| ವಿ.
ನಾಗರಾಜ್ ನಾಯಕ್ ಮಾತನಾಡಿ, ಕರ್ನಾಟಕದಲ್ಲಿ ಮತ್ತು
ಕನ್ನಡ ಸಂಘಟನೆಗಳು ನವೆಂಬರ್ನಲ್ಲಿ
ಅಬ್ಬರದಿಂದ ಕಾರ್ಯಕ್ರಮಗಳನ್ನು
ಆಯೋಜಿಸುತ್ತಾರೆ. ಆ ತಿಂಗಳು
ಮುಗಿಯುತ್ತಿದ್ದಂತೆ ನಿಶ್ಶಬ್ಧವಾಗಿ ಬಿಡುತ್ತವೆ.
ಈ ಮನೋಭಾವದಿಂದ ಹೊರ
ಬರಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಕನ್ನಡ ಅಭಿ ವೃದ್ಧಿ
ಪ್ರಾಧಿಕಾರದ ಕಾರ್ಯದರ್ಶಿ ಡಾ| ಕೆ.
ಮುರಳೀಧರ್, ಕರ್ನಾಟಕ ಸಂಘ,
ಬರೋಡಾದ ಮುಖ್ಯ ಟ್ರಸ್ಟಿ ಎನ್. ಆರ್. ಮುಕ್ತಾಲಿ
ಮತ್ತು ಕಾರ್ಯಾಧ್ಯಕ್ಷ ಜಯರಾಮ ಶೆಟ್ಟಿ
ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ
ಮಾಡಿದ ಎಸ್. ಜಯರಾಂ ಶೆಟ್ಟಿ, ಎನ್. ಆರ್.
ಮುಕ್ತಾಲಿ, ಅಲೆವೂರು ಶೇಖರ ಪೂಜಾರಿ, ದಯಾನಂದ
ಬೋಂಟ್ರಾ, ಲಕ್ಷ್ಮಣ ಪೂಜಾರಿ ಅವರಿಗೆ
ಹೃದಯವಂತ-2015 ಪ್ರಶಸ್ತಿ
ನೀಡಿ ಗೌರವಿಸಲಾಯಿತು. ಕನ್ನಡ
ಸೇವೆಯಲ್ಲಿ ತೊಡಗಿಸಿಕೊಂಡಿರುವ ಹನ್ನೆರಡು
ಮಹಾನೀಯರಿಗೆ ರಾಷ್ಟ್ರೀಯ
ಕನ್ನಡ ಸಮ್ಮೇಳನ ಪ್ರಶಸ್ತಿ ನೀಡಿ
ಗೌರವಿಸಲಾಯಿತು.
ನೂಪುರ ಕಲಾಸಂಸ್ಥೆ ದಾವಣಗೆರೆ ಮತ್ತು ಕರ್ನಾಟಕ
ಸಂಘ ಬರೋಡಾ ಕಲಾವಿದರಿಂದ ಜಾನಪದ
ಕಂಸಾಳೆ, ಸ್ವಾಗತ ನೃತ್ಯ
ಪ್ರದರ್ಶನಗೊಂಡಿತು. ವಾಪಿಯ ಪಿ. ಎಸ್.
ಕಾರಂತ್ ಅಧ್ಯಕ್ಷತೆಯಲ್ಲಿ
ಹೊರನಾಡ ಕನ್ನಡಿಗರು ಮತ್ತು
ಮಾಧ್ಯಮ ಗೋಷ್ಠಿ ನಡೆಯಿತು. ಸಂಪನ್ಮೂಲ
ವ್ಯಕ್ತಿಗಳಾಗಿ ಪ್ರವಾಸೋದ್ಯಮ ಸಚಿವಾಲಯದ
ಮಾಧ್ಯಮ ಕಾರ್ಯದರ್ಶಿ ರಾಜು ಅಡಕಳ್ಳಿ ಮತ್ತು
ಬರೋಡದ ಉದ್ಯಮಿ ಶಶಿಧರ ಶೆಟ್ಟಿ ಸಂವಾದ
ನಡೆಸಿಕೊಟ್ಟರು. ಎಚ್ಎಎಲ್ ಬೆಂಗಳೂರು
ಕೇಂದ್ರಿಯ ಕನ್ನಡ ಸಂಘದಿಂದ
ಬದುಕು ನಮ್ಮ ಕೈಯಲ್ಲಿ ಮತ್ತು ಜಾನಪದ
ಗೀತೆಗಳ ಗಾಯನ ನಡೆಯಿತು.
ಹಿರಿಯ ಕವಿ ಭಗವಾನ್ ಅಧ್ಯಕ್ಷತೆಯಲ್ಲಿ ನಡೆದ
ಕವಿಗೋಷ್ಠಿಯಲ್ಲಿ ಗೀತಾ
ಶ್ರೀನಿವಾಸ್ ಬರೋಡಾ, ಬಾಲಕೃಷ್ಣ ಶೆಟ್ಟಿ ವಾಪಿ,
ಮಹಮ್ಮದ್ ಮುಸ್ತಾಫ ಬೆಳ್ಳಾರೆ, ಮಮತಾ ಮಲ್ಲಾರ್
ವಾಪಿ ಪಾಲ್ಗೊಂಡಿದ್ದರು. ರೂಪಾ
ಗಿರೀಶ್ ಬೆಂಗಳೂರು
ತಂಡದಿಂದ ನೃತ್ಯರೂಪಕ ನಡೆಯಿತು.
ಬರೋಡಾ ಕರ್ನಾಟಕ ಸಂಘದ ಮಹಿಳಾ
ವಿಭಾಗದಿಂದ ಕಿರು ಹಾಸ್ಯ ಪ್ರಹಸನ, ಗರ್ಭಾ
ನೃತ್ಯ ಇತ್ಯಾದಿಗಳು ಪ್ರದರ್ಶನಗೊಂಡವು.
ಬರೋಡಾ ಕರ್ನಾಟಕ ಸಂಘದ ಕಾರ್ಯದರ್ಶಿ
ರಾಘವೇಂದ್ರ ಆರ್. ವಂದಿಸಿದರು. ಕನ್ನಡ
ಕಿರುತೆರೆ ಖ್ಯಾತಿಯ ಗೋ. ನಾ. ಸ್ವಾಮಿ ನಿರೂಪಿಸಿದರು.
TAGS:
Baroda
12th National Kannada Cultural
Convention