ಶಿಕ್ಷಕರ ನೇಮಕಾತಿ ತಾತ್ಕಾಲಿಕ ಪಟ್ಟಿ ಪ್ರಕಟ ಇನ್ನಷ್ಟು ದಿನ ತಡ

ಶಿಕ್ಷಕರ ನೇಮಕಾತಿ ತಾತ್ಕಾಲಿಕ ಪಟ್ಟಿ ಪ್ರಕಟ ಇನ್ನಷ್ಟು ದಿನ ತಡ.
(PSGadyal Teacher Vijayapur )

ಎರಡೇ ದಿನದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಪಟ್ಟಿ ಘೋಷಣೆ ಮಾಡುವುದಾಗಿ ಸಚಿವರೇ ಹೇಳಿಕೆ ನೀಡಿದ್ದರೂ, ಪಟ್ಟಿ ಪ್ರಕಟವಾಗಿಲ್ಲ. ಸಚಿವರ ಹೇಳಿಕೆಗೂ ಅಧಿಕಾರಗಳು ಬೆಲೆ ಕೊಡದ ಸ್ಥಿತಿ ಬಂದರೆ? ದಾಖಲೆ ಪರಿಶೀಲಿಸಿಕೊಂಡ ಅಭ್ಯರ್ಥಿಗಳ ಗತಿಯೇನು? ಎಂದು ರಾಜ್ಯದ ವಿವಿಧ ಭಾಗದ ಅಭ್ಯರ್ಥಿಗಳು ವಿಜಯವಾಣಿ ಸಹಾಯವಾಣಿಗೆ ಕರೆಮಾಡಿ ಅಳಲು ಹೇಳಿಕೊಂಡಿದ್ದರು. ಅಧಿಕಾರಿಗಳಿಂದ, ಸಚಿವರ ಆಪ್ತ ವಲಯದಿಂದ ಮಾಹಿತಿ ಪಡೆದು ನಮ್ಮ ವರದಿಗಾರ ರಾಜು ಖಾರ್ವಿ ಈ ವರದಿ ಸಿದ್ಧಪಡಿಸಿದ್ದಾರೆ.

****

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಹಾಗೂ ಹೈಕೋರ್ಟ್​ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿ ಇರುವುದರಿಂದ ಶಿಕ್ಷಕರ ತಾತ್ಕಾಲಿಕ ಪಟ್ಟಿಯ ಘೊಷಣೆ ಇನ್ನಷ್ಟು ವಿಳಂಬವಾಗಲಿದೆ.

ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಕೆಲವು ಅಭ್ಯರ್ಥಿಗಳ ಇಂಗ್ಲಿಷ್ ಮತ್ತು ಭಾಷಾ ವಿಷಯದ ಸಮಸ್ಯೆ ಪರಿಹಾರಕ್ಕಾಗಿ ಕೆಎಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣಾ ಹಂತದಲ್ಲಿದ್ದು, ಶಿಕ್ಷಕರ ನೇಮಕ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಸಂಬಂಧ ಕೇಂದ್ರೀಕೃತ ದಾಖಲಾತಿ ಘಟಕ(ಸಿಎಸಿ) ನಡೆಸಿದ್ದ ಸಿಇಟಿಯಲ್ಲಿ ಕೆಲವು ಪ್ರಶ್ನೆಗೆ ಉತ್ತರವನ್ನೇ ತಪ್ಪಾಗಿ ನೀಡಿದ್ದಾರೆ. ಉತ್ತರ ತಪ್ಪಾಗಿ ನೀಡಿರುವ ಪ್ರಶ್ನೆಗೆ ಕೃಪಾಂಕ ನೀಡಬೇಕು ಎಂದು ಕೋರಿ ಹಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶಿಕ್ಷಕರ ನೇಮಕ ಪ್ರಕ್ರಿಯೆಗೆ ತಡೆ ನೀಡಿದೆ. ಕೆಎಟಿ ಹಾಗೂ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸದೆ, ಅರ್ಹ ಶಿಕ್ಷಕರ ಪಟ್ಟಿ ಪ್ರಕಟವಾಗುವುದಿಲ್ಲ.

ಪಟ್ಟಿ ಸಿದ್ಧ:

ಶಾಲಾ ಶಿಕ್ಷಕರ ಹುದ್ದೆಯ ಭರ್ತಿಗಾಗಿ ಒಂದು ಹುದ್ದೆಗೆ ಇಬ್ಬರನ್ನು ಆಯ್ಕೆಮಾಡಿಕೊಂಡು ದಾಖಲಾತಿ ಪರಿಶೀಲನೆ ನಡೆಸಿ ತಿಂಗಳು ಕಳೆದಿದೆ. ಇಬ್ಬರಲ್ಲಿ ಅರ್ಹರು ಯಾರೆಂಬುದನ್ನು ದಾಖಲಾತಿ ಪರಿಶೀಲನೆ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೇಂದ್ರೀಕೃತ ದಾಖಲಾತಿ ಘಟಕಕ್ಕೆ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯವು ತಡೆಯಾಜ್ಞೆ ತೆರವುಗೊಳಿಸಿದ ಕೂಡಲೇ ತಾತ್ಕಾಲಿಕ ಪಟ್ಟಿ ಪ್ರಕಟ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶಿಸಲಾಗಿದೆ ಎಂದು ಸಚಿವರ ಆಪ್ತರೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.

ಎರಡು ದಿನದಲ್ಲಿ 1150 ಪ್ರೌಢಶಾಲಾ ಸಹ ಶಿಕ್ಷಕರ ಹಾಗೂ 10 ದಿನದೊಳಗೆ ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅ.13ರಂದು ಹೇಳಿದ್ದರು. ಈ ಮಧ್ಯೆ, ಕಳೆದ ನಾಲ್ಕೈದು ದಿನದಿಂದ ಶಿಕ್ಷಣ ಸಚಿವರ ಮೊಬೈಲ್ ಸಂಖ್ಯೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಚಿವರು ಸೇರಿ ಅರ್ಹ ಅಭ್ಯರ್ಥಿಗಳನ್ನು ಅಧಿಕಾರಿಗಳು ಗೊಂದಲಕ್ಕೆ ಸಿಲುಕಿಸಿದ್ದಾರೆ.

10 ದಿನ ವಿಳಂಬ ಸಾಧ್ಯತೆ:

ಅ.28ರವರೆಗೆ ಶಾಲೆಗಳಿಗೆ ಸರ್ಕಾರಿ ರಜೆ ಹಾಗೂ ಹೈಕೋರ್ಟ್​ಗೂ ದಸರಾ ರಜೆ ಇರುವುದರಿಂದ ನ.1ರ ನಂತರವೇ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಅಲ್ಲಿಯವರೆಗೂ ಅರ್ಹ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇಲ್ಲ. ಫಲಿತಾಂಶಕ್ಕಾಗಿ ಇನ್ನೂ 10 ದಿನ ಕಾಯಲೇಬೇಕು.

****

ಶಿಕ್ಷಕರ ನೇಮಕ ಪ್ರಕರಣಕ್ಕೆ ಹೈಕೋರ್ಟ್ ಮತ್ತು ಕೆಎಟಿಯಲ್ಲಿ ತಡೆ ನೀಡಿರುವುದರಿಂದ ಪಟ್ಟಿ ಬಿಡುಗಡೆ ಸಾಧ್ಯವಾಗುತ್ತಿಲ್ಲ. 34 ಜಿಲ್ಲೆಯ ಅರ್ಹರ ಪಟ್ಟಿ ಸಿದ್ಧವಾಗಿದೆ. ಸರ್ಕಾರದ ಸೂಚನೆಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ.

– ಕೆ.ರತ್ನಯ್ಯ, ಉಪನಿರ್ದೇಶಕ, ಸಿಎಸಿ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023