Drop


Friday, November 27, 2015

ಬಾಡದ ಅರಮನೆ ಕನಕನ ನೆನಪು:-


BY ವಿಜಯವಾಣಿ ನ್ಯೂಸ್
· NOV 26, 2015
'ತಲ್ಲಣಿಸದಿರು ಕಂಡ್ಯ ತಾಳು ಮನವೆ'
ಎಂದು ಹಾಡಿದ ದಾಸಶ್ರೇಷ್ಠ ಕನಕದಾಸರ
ಹುಟ್ಟೂರು ಬಾಡ. ಇಲ್ಲಿ ನಡೆದ ಉತ್ಖನನದಲ್ಲಿ
ಕನಕದಾಸರು ಹಾಗೂ ಅವರ ಪೂರ್ವಿಕರು ವಾಸಿಸುತ್ತಿದ್ದ
ಅರಮನೆಯ ಕುರುಹುಗಳು ಲಭ್ಯವಾಗಿದ್ದವು. ಈ
ಅರಮನೆಯ ಅವಶೇಷಗಳನ್ನು ರಕ್ಷಿಸಿ ಅದರ
ಪ್ರತಿರೂಪವಾಗಿ ಬಾಡ ಗ್ರಾಮದ ಗುಡ್ಡದ ಮೇಲೆ
ವಿಜಯನಗರ ಶಿಲ್ಪಕಲಾ ಶೈಲಿಯಲ್ಲಿ ಸುಂದರ
ಅರಮನೆಯನ್ನು ನಿರ್ವಿುಸಲಾಗಿದೆ. ಈ ಅರಮನೆಯ
ಒಳಭಾಗದಲ್ಲಿ ಕನಕದಾಸರ ಸಾಹಿತ್ಯದ ವಿಶೇಷ
ಸನ್ನಿವೇಶಗಳನ್ನು ತೈಲವರ್ಣ ಚಿತ್ರಗಳಲ್ಲಿ
ಚಿತ್ರಿಸಲಾಗಿದೆ. ಪ್ರವಾಸಿಕೇಂದ್ರವಾಗಿ
ರೂಪುಗೊಂಡಿರುವ ಈ ತಾಣದ
ಪರಿಚಯಾತ್ಮಕ ಬರಹವಿದು.
– ಐ. ಸೇಸುನಾಥನ್, ಚಿತ್ರ-ಲೇಖನ
ಕನ್ನಡನಾಡಿನ ಸಾಂಸ್ಕೃತಿಕ
ಪರಂಪರೆಯಲ್ಲಿ ಅಚ್ಚಳಿಯದ ಛಾಪು
ಮೂಡಿಸಿದವರು ಕನಕದಾಸರು. ನಡುಗನ್ನಡ ಸಾಹಿತ್ಯದ
ಪ್ರಮುಖ ಕೀರ್ತನೆಕಾರ, ಸಾಮಂತ,
ಸಂತ, ಜ್ಞಾನಿ, ದಾರ್ಶನಿಕರಾಗಿ ಅವರು
ನೀಡಿದ ಕೊಡುಗೆ ಅಪಾರ.
'ಕುಲ ಕುಲ ಕುಲವೆಂದು
ಹೊಡೆದಾಡದಿರಿ, ನಿಮ್ಮ ಕುಲದ
ನೆಲೆಯೇನಾದರೂ ಬಲ್ಲಿರಾ?' ಎಂದು ವರ್ಗ
ತಾರತಮ್ಯದ ವಿರುದ್ಧ ದನಿ ಎತ್ತಿದ್ದ ಶ್ರೇಷ್ಠ
ಸಮಾಜಸುಧಾರಕರೂ ಹೌದು.
ಕನಕದಾಸರು 16ನೇ ಶತಮಾನದ ಪೂರ್ವಾರ್ಧದಲ್ಲಿ
ಈಗಿನ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ
ಎಂಬಲ್ಲಿ ಬೀರಪ್ಪನಾಯಕ-
ಬಚ್ಚಮ್ಮ ದಂಪತಿಯ ಮಗನಾಗಿ ಜನಿಸಿದರು.
ತಿಮ್ಮಪ್ಪನಾಯಕ ಎಂಬುದು ಅವರ
ಮೊದಲ ಹೆಸರು. ಭೂಮಿ ಅಗೆಯುವಾಗ
ಚಿನ್ನ ಸಿಕ್ಕಿದ್ದರಿಂದ ಕನಕನಾಯಕ ಎಂದು
ಪ್ರಸಿದ್ಧರಾದರು. ತಂದೆ
ಬೀರಪ್ಪನಾಯಕ ಆಗಿನ ವಿಜಯನಗರ
ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿದ್ದ ಬಾಡ
ಸುತ್ತಮುತ್ತಲಿನ ಪ್ರದೇಶಕ್ಕೆ ಡಣ್ಣಾಯಕ
(ಮಾಂಡಲೀಕ)ರಾಗಿದ್ದರು.
ತಂದೆಯ ಬಳಿಕ ಡಣ್ಣಾಯಕನಾದ ಕನಕದಾಸರು
ವಿಜಯನಗರ ಅರಸರ ಪರವಾಗಿ
ಯುದ್ಧವೊಂದರಲ್ಲಿ
ಪಾಲ್ಗೊಂಡಿದ್ದಾಗ,
ಮಾರಣಾಂತಿಕ ಹೊಡೆತ ಅನುಭವಿಸಿ
ಆಶ್ಚರ್ಯಕರ ರೀತಿಯಲ್ಲಿ
ಬದುಕುಳಿದರು. ದೈವಾನುಗ್ರಹದಿಂದಲೇ
ಪ್ರಾಣಾಪಾಯದಿಂದ ಪಾರಾದೆನೆಂದು ಭಾವಿಸಿದ
ಅವರು ಡಣ್ಣಾಯಕ ಪದವಿಯನ್ನು ತ್ಯಜಿಸಿ
ಆಧ್ಯಾತ್ಮಿಕಲೋಕ
ಪ್ರವೇಶಿಸಿದರು. ಕನಕದಾಸರು ಕಾಗಿನೆಲೆ ಆದಿಕೇಶವನ
ಅಂಕಿತದಲ್ಲಿ ಹಲವಾರು
ಕೀರ್ತನೆಗಳಲ್ಲದೆ
ಮೋಹನ ತರಂಗಿಣಿ,
ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ
ಮುಂತಾದ ಕಾವ್ಯಗಳನ್ನೂ ರಚಿಸಿದ್ದಾರೆ.
ಕರ್ನಾಟಕ ಸರ್ಕಾರ ಕನಕದಾಸರಿಗೆ
ಸಂಬಂಧಿಸಿದ ಸ್ಥಳಗಳ ಸಂರಕ್ಷಣೆ
ಮತ್ತು ಅಭಿವೃದ್ಧಿಗಾಗಿ 'ಕಾಗಿನೆಲೆ ಅಭಿವೃದ್ಧಿ
ಪ್ರಾಧಿಕಾರ', ಹಾಗೂ ಕನಕದಾಸರ ಸಾಹಿತ್ಯಪ್ರಸಾರಕ್ಕಾಗಿ
'ಸಂತಕವಿ ಕನಕದಾಸ ಅಧ್ಯಯನ ಮತ್ತು
ಸಂಶೋಧನಾ
ಕೇಂದ್ರ'ವನ್ನು ಸ್ಥಾಪಿಸಿದೆ. ಕನಕದಾಸರ
ಜನ್ಮಸ್ಥಳವಾದ ಬಾಡ ಗ್ರಾಮವನ್ನು ಕಾಗಿನೆಲೆ
ಅಭಿವೃದ್ಧಿ ಪ್ರಾಧಿಕಾರವು ಪ್ರವಾಸಿತಾಣವನ್ನಾಗಿ
ಅಭಿವೃದ್ಧಿಪಡಿಸಿದೆ. ಬಾಡ ಗ್ರಾಮದಲ್ಲಿ ಉತ್ಖನನ
ಕಾರ್ಯ ಕೈಗೊಂಡಾಗ ಕನಕದಾಸರ
ಆರಾಧ್ಯದೈವ ಆದಿಕೇಶವ ದೇವಸ್ಥಾನದ ಕುರುಹುಗಳು
ದೊರೆತಿವೆ. ಅಲ್ಲದೆ ಕನಕದಾಸರು ಹಾಗೂ
ಅವರ ಪೂರ್ವಜರು ವಾಸಿಸುತ್ತಿದ್ದ ಬೃಹತ್ ಪ್ರಮಾಣದ
ಅರಮನೆಯ ಅವಶೇಷಗಳು ಸಿಕ್ಕಿವೆ. ಇದು ಕರ್ನಾಟಕದ
ಮಧ್ಯಕಾಲೀನ ನಿವಾಸ ಕಟ್ಟಡಗಳಲ್ಲಿ
ಅತಿ ದೊಡ್ಡದು ಎಂಬುದು ಇತಿಹಾಸ
ತಜ್ಞರ ಅಭಿಮತ. ಮೂಲ ಅರಮನೆಯ
ಅವಶೇಷಗಳನ್ನು ಹಾಗೆಯೇ ಸಂರಕ್ಷಿಸಿ,
ಸನಿಹದಲ್ಲಿ ಸುಂದರವಾದ ಉದ್ಯಾನ
ನಿರ್ವಿುಸಲಾಗಿದೆ.
ಬಾಡದಲ್ಲಿ ದೊರೆತಿರುವ ಮೂಲ
ಅರಮನೆಯ ಪ್ರತಿರೂಪವಾಗಿ ಅಲ್ಲಿಂದ
ಒಂದು ಫರ್ಲಾಂಗು ದೂರದಲ್ಲಿ ಗುಡ್ಡದ
ಮೇಲೆ ಭವ್ಯವಾದ
ಅರಮನೆಯೊಂದನ್ನು
ನಿರ್ವಿುಸಲಾಗಿದೆ. ಕನಕದಾಸರು ಡಣ್ಣಾಯಕರಾಗಿದ್ದಾಗ
ವಿಜಯನಗರದೊಂದಿಗೆ
ಸಂಪರ್ಕ ಹೊಂದಿದ್ದರು.
ವಿಜಯನಗರ ಸಾಮ್ರಾಜ್ಯದ ರಾಜವೈಭವವನ್ನು
ಅವರ 'ಮೋಹನ ತರಂಗಿಣಿ'
ಕೃತಿಯಲ್ಲಿ ಕಾಣಬಹುದು. ಆದ್ದರಿಂದ ಬಾಡ
ಅರಮನೆಯನ್ನು 2013ರಲ್ಲಿ ವಿಜಯನಗರ
ಶಿಲ್ಪಕಲಾ ಶೈಲಿಯಲ್ಲಿ ಮರುನಿರ್ವಣ ಮಾಡಲಾಗಿದೆ.
ಅರಮನೆಯ ಸುತ್ತ ಸುಂದರವಾದ ಬೃಹತ್
ಕೋಟೆಯನ್ನು ನಿರ್ವಿುಸಲಾಗಿದೆ.
ಅರಮನೆಯ ಒಳಾಂಗಣದ ಭಿತ್ತಿಗಳಲ್ಲಿ
ಕನಕದಾಸರ ಜೀವನದ ಘಟನೆಗಳನ್ನು
ವಿವರಿಸುವ ತೈಲವರ್ಣ ಹಾಗೂ ಉಬ್ಬುಚಿತ್ರಗಳನ್ನು
ರೂಪಿಸಲಾಗಿದೆ. ಗೋಡೆಯ
ಮೇಲೆ ಗ್ರಾನೈಟ್ ಶಿಲೆಯಲ್ಲಿ ಕನಕದಾಸರ
ಕೀರ್ತನೆಗಳನ್ನು ಕೆತ್ತಿಸಲಾಗಿದೆ. ಕನಕದಾಸರ
ಕುರಿತ ಚಿತ್ರಗಳು ಹಾಗೂ ಕೀರ್ತನೆಗಳು
ನಮ್ಮನ್ನು ಮಧ್ಯಯುಗದ ಕಾಲಕ್ಕೆ
ಕೊಂಡೊಯ್ಯು
ತ್ತವೆ. ಮಹಡಿಯಲ್ಲಿರುವ ಬೃಹದಾಕಾರದ
ಕಂಬಗಳು ಹಾಗೂ ಮೇಲ್ಛಾವಣಿಯ ಕುಸುರಿ
ಕೆತ್ತನೆಗಳು ಮನಮೋಹಕವಾಗಿವೆ.
ಕನಕದಾಸರು ಕುಳಿತ ಭಂಗಿಯಲ್ಲಿ
ಬರವಣಿಗೆಯಲ್ಲಿ
ತೊಡಗಿರುವಂತೆ ಕಂಡು
ಬರುವ ಪ್ರತಿಮೆ ಅತ್ಯಾಕರ್ಷಕವಾಗಿದೆ.
ಅರಮನೆಯ ಮೇಲಂತಸ್ತಿನಿಂದ ಬಾಡ
ಗ್ರಾಮದ ಪಕ್ಷಿನೋಟ
ಕಾಣಸಿಗುತ್ತದೆ. ಅರಮನೆಯ ಬಲಕ್ಕೆ ಅನತಿ
ದೂರದಲ್ಲಿ ಕಂಡು ಬರುವ ಬೃಹತ್ ಕೆರೆ ಊರಿನ
ಸೌಂದರ್ಯವನ್ನು ಇಮ್ಮಡಿಸಿದೆ.
ಬಾಡ ಗ್ರಾಮದ ಗತವೈಭವವನ್ನು ಸಾರುವ ಈ ಆಧುನಿಕ
ಅರಮನೆಯಿಂದಾಗಿ ಕನಕದಾಸರ ಜನ್ಮಭೂಮಿ
ಈಗ ಕರ್ನಾಟಕದ ಪ್ರಮುಖ ಪ್ರವಾಸಿತಾಣವಾಗಿದೆ. ಬಾಡ
ಬೆಂಗಳೂರಿನಿಂದ 361 ಕಿ.ಮೀ.,
ಹುಬ್ಬಳ್ಳಿಯಿಂದ 53 ಕಿ.ಮೀ.
ದೂರದಲ್ಲಿದೆ. ಇತಿಹಾಸ ಪ್ರಸಿದ್ಧ ಬಂಕಾಪುರವು
ಬಾಡದಿಂದ ಕೇವಲ 6 ಕಿ.ಮೀ. ದೂರದಲ್ಲಿದ್ದು
ಪ್ರವಾಸಿಗರು ಇಲ್ಲಿಗೂ ಭೇಟಿ ನೀಡಬಹುದು.