ಪೋಷಕಾಂಶದ ಕಣಜ ಸಪೋಟಾ:*


ಪ.ರಾಮಕೃಷ್ಣ ಶಾಸ್ತ್ರಿ
ನಾವು ತಿನ್ನುವ ಹಣ್ಣುಗಳಲ್ಲಿ ಅತ್ಯಂತ ಕಡಿಮೆ ರಾಸಾಯನಿಕ
ಮತ್ತು ವಿರಳವಾಗಿ ಕೀಟನಾಶಕಗಳ ಬಳಕೆಯಿಂದ
ಬೆಳೆಯುವ ಹಣ್ಣು ಚಿಕ್ಕು ಅಥವಾ ಸಪೋಟಾ. ಚೆನ್ನಾಗಿ ಮಾಗಿದ ಹಣ್ಣು
ಬಹು ಸಿಹಿ, ಅಷ್ಟೇ ರುಚಿಕರವೂ ಆಗಿದೆ. ಹಾಗೆಯೇ ತಿನ್ನಲು ಸ್ವಾದಿಷ್ಟ.
ಜ್ಯೂಸ್, ಮಿಲ್ಕ್ ಷೇಕ್ ತಯಾರಿಸಿ ಕುಡಿದರೆ ದೇಹಕ್ಕೆ ಇನ್ನೂ
ಶಕ್ತಿದಾಯಕ. ಆಹಾರ ತಜ್ಞರು ಇದನ್ನು ಪೌಷ್ಟಿಕಾಂಶಗಳ
ಕಣಜವೆಂದೇ ಹೇಳುತ್ತಾರೆ. ಸಪೋಟಾ ಹಣ್ಣುಗಳನ್ನು ತಿನ್ನಲು ಬಿರುಕು,
ಸುಕ್ಕು, ಗಾಯಗಳಿಲ್ಲದ ತಾಜಾ ಮಾಗಿದ ಗುಣಲಕ್ಷಣಗಳಿರುವುದನ್ನೇ
ಆರಿಸಿಕೊಳ್ಳಬೇಕು.
ನೂರು ಗ್ರಾಂ ಸಪೋಟಾ ಹಣ್ಣಿನಲ್ಲಿ 83
ಕ್ಯಾಲೊರಿಗಳಿವೆ. ಇದು ಬಾಳೆಹಣ್ಣು ಮತ್ತು ಸಿಹಿ
ಗೆಣಸಿಗೆ ಸಮನಾದುದು. ದಾಳಿಂಬೆ, ದ್ರಾಕ್ಷಿ ಮತ್ತು ಪರ್ಸಿಮನ್
ಹಣ್ಣುಗಳಲ್ಲಿರುವಷ್ಟು ಟ್ಯಾನಿನ್ ಲಭ್ಯವಿದ್ದು ಕರುಳಿನ ಕಾಯಿಲೆ,
ಜಠರದುರಿತ ಮತ್ತಿತರ ಸಮಸ್ಯೆಗಳ ನಿವಾರಣೆಯಲ್ಲಿ ಅದು
ಸಕ್ರಿಯವಾಗಿದೆ.
'ಎ', 'ಬಿ' ಸಮೂಹ, 'ಇ' ಜೀವಸತ್ವಗಳು ಅದರಲ್ಲಿವೆ.
ಹಾಗೆಯೇ ನೂರು ಗ್ರಾಂ ಹಣ್ಣು ತಿಂದರೆ ದೇಹಕ್ಕೆ 25
ಗ್ರಾಂ 'ಸಿ' ಜೀವಸತ್ವ ಲಭಿಸುತ್ತದೆ. ಸುಣ್ಣ, ಕಬ್ಬಿಣ,
ತಾಮ್ರ, ಸತು, ರಂಜಕ, ಪ್ರೊಟೀನ್,
ಕಾರ್ಬೋಹೈಡ್ರೇಟ್ಸ್, ನಿಯಾಸಿನ್, ಪ್ಯಾಂಥೋಟಿಕ್ ಮತ್ತು ನಿಯಾಸಿನ್
ಆಮ್ಲಗಳು, ರೈಬೋಫ್ಲೇವಿನ್, ಥಯಾಮಿನ್, ಸೋಡಿಯಂ,
ಪೊಟಾಸಿಯಂ, ಮೆಗ್ನೇಸಿಯಂ, ಫಾಸ್ಫರಸ್
ಹೀಗೆ ಅಸಂಖ್ಯ ಸತ್ವಾಂಶಗಳು
ಸಪೋಟಾದಲ್ಲಿವೆ.
ವೈರಸ್ ಮತ್ತು ಬ್ಯಾಕ್ಟೀರಿಯಾ ನಿರೋಧಕ ಶಕ್ತಿಯಿರುವ
ಸಪೋಟಾದಲ್ಲಿರುವ ಪ್ರಕ್ಟೋಸ್ ದೇಹದ ಶಕ್ತಿಯ ಪುನಶ್ಚೇತನಕ್ಕೆ
ನೆರವಾಗುತ್ತದೆ. ಬಾಣಂತಿಯರು, ರೋಗದಿಂದ
ಚೇತರಿಸಿಕೊಂಡವರು, ವ್ಯಾಯಾಮ ಮಾಡಿದವರು
ಶಕ್ತಿ ಗಳಿಕೆಗೆ ಅದನ್ನು ವಿಪುಲವಾಗಿ ತಿನ್ನಬಹುದು. ಶ್ವಾಸಕೋಶ ಮತ್ತು
ಬಾಯಿಯ ಕುಹರದ ಕ್ಯಾನ್ಸರ್ ನಿವಾರಣೆಯಲ್ಲಿ ಅದರ
ಸಾಮರ್ಥ್ಯವನ್ನು ಗುರುತಿಸಲಾಗಿದೆ. ಎಲುಬು ಮತ್ತು ಹಲ್ಲಿನ
ಬೆಳವಣಿಗೆಗೆ ಶಕ್ತವಾದ ಸುಣ್ಣದ ಅಂಶವು ಅದರಿಂದ
ಲಭಿಸುತ್ತದೆ. ಆರೋಗ್ಯವನ್ನು ಕಾಪಾಡುವ ಔಷಧವಾಗಿಯೂ ಇದನ್ನು
ಉಪಯೋಗಿಸಬಹುದು.
* ಗರ್ಭಿಣಿಯರನ್ನು ಕಾಡುವ ವಾಂತಿ, ತಲೆಸುತ್ತು, ಆಯಾಸ
ತಡೆಯಲು, ಬೆಳಗ್ಗೆ ಇಷ್ಟವಾದಷ್ಟು ಸಪೋಟಾ ತಿನ್ನಬಹುದು. ಅದನ್ನು
ತಿಂದರೆ ಹಾಲುಣಿಸುವ ತಾಯಂದಿರಿಗೆ ಎದೆ ಹಾಲು ಹೆಚ್ಚುತ್ತದೆ.
ಆರು ತಿಂಗಳು ದಾಟಿದ ಮಕ್ಕಳಿಗೆ ಅದು ದೇಹದ ಬೆಳವಣಿಗೆಗೆ
ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ.
* ಶೇ. 5.6ರಷ್ಟು ನಾರಿನ ಅಂಶವಿರುವ ಸಪೋಟಾ ಉತ್ತಮ
ವಿರೇಚಕವೂ ಹೌದು. ರಾತ್ರಿ ಊಟವಾದ ಮೇಲೆ ಸಿಪ್ಪೆಸಹಿತ ಒಂದೆರಡು
ಹಣ್ಣುಗಳನ್ನು ತಿನ್ನುವ ಅಭ್ಯಾಸ ಜೀರ್ಣಕ್ರಿಯೆಗೆ
ನೆರವಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಮೂಲ
ವ್ಯಾಧಿಯಿಂದ ಬಳಲುವವರಿಗೆ ಸಲೀಸಾಗಿ ಮಲ
ವಿಸರ್ಜನೆಯಾಗಲು ಅದು ಉತ್ತಮ ಉಪಾಯ. ಹಣ್ಣಿನ ತಿರುಳನ್ನು
ಅರ್ಧ ಚಮಚ ಉಪ್ಪಿನೊಂದಿಗೆ ಹಿಸುಕಿ
ತಿಂದರೆ ಮಲಬದ್ಧತೆ ಕೆಲವು ನಿಮಿಷಗಳಲ್ಲಿ ದೂರವಾಗುತ್ತದೆ.
* ಎಳಸು ಕಾಯಿಗಳಿಂದ ಕಷಾಯ ತಯಾರಿಸಿ ಸೇವಿಸಿದರೆ ಅತಿಸಾರ,
ಭೇದಿ ಗುಣವಾಗುತ್ತದೆ. ಅದರ ಮರದ ತೊಗಟೆಯ
ಕಷಾಯ ಸೇವನೆಯೂ ಭೇದಿಯನ್ನು ನಿಲ್ಲಿಸಲು ಸಹಾಯಕ.
* ಮೂತ್ರ ವಿಸರ್ಜನೆಯ ಸಮಸ್ಯೆಯಿದ್ದರೆ ಅಧಿಕವಾಗಿ ಸಪೋಟಾ
ತಿನ್ನುವುದರಿಂದ ಮೂತ್ರಕೋಶದಲ್ಲಿ ನೀರಿನ ಧಾರಣಾ
ಸಾಮರ್ಥ್ಯ ಹೆಚ್ಚಿ ಸಮಸ್ಯೆಯ ಸುಗಮ ಪರಿಹಾರವಾಗುತ್ತದೆ.
ಹಲವು ಸಲ ಮೂತ್ರ ವಿಸರ್ಜನೆಯಾಗಿ ಕಿಡ್ನಿಯಲ್ಲಿ
ಸಂಗ್ರಹವಾಗಿರುವ ಅನಗತ್ಯ ಲವಣಗಳು
ಹೊರಬೀಳುತ್ತವೆ.
* ಹೃದ್ರೋಗ ತಡೆಯಲು ಶಕ್ತವಾದ 'ಇ' ಜೀವಸತ್ವ ಹಾಗೂ
ಅಲ್ಫಾಟೋ ಕೋಫೆರಾಲ್ಡ್ ರಾಸಾಯನಿಕವಿರುವ ಸಪೋಟಾ ಹೃದ್ರೋಗಿಗಳಿಗೂ ಸೇವನೆಗೆ
ಅರ್ಹವಾಗಿದೆ. ಸೋಯಾ ಹಾಲು ಮತ್ತು
ಗೋಡಂಬಿಯೊಂದಿಗೆ ಅದರಿಂದ
ತಯಾರಿಸಿದ ಪಾನೀಯವನ್ನು ಸೇವಿಸುವುದು ಮೆದುಳಿನ
ಜೀವಕೋಶಗಳಿಗೆ ಆರೋಗ್ಯಕರವಾದ
ಪ್ರೊಟೀನ್ ಮತ್ತು ಗ್ಲೂಕೋಸನ್ನು ಪೂರೈಸುತ್ತದೆ.
* ಜ್ವರ ಬಂದವರಿಗೆ ಬಾಯಿ ಒಣಗುವುದನ್ನು ತಡೆಯಲು
ಒಂದು ಹೋಳು ಸಪೋಟಾ ತಿನ್ನುವುದರಿಂದ ಸುಲಭವಾಗುತ್ತದೆ.
ನಿದ್ರಾಹೀನತೆ, ಖಿನ್ನತೆ, ನರದೌರ್ಬಲ್ಯ,
ದೀರ್ಘ ಕಾಲದಿಂದ ಕಾಡುತ್ತಿರುವ ಶೀತ,
ಶ್ವಾಸನಾಳದ ಕಫ, ಕೆಮ್ಮುಗಳನ್ನು ಗುಣಪಡಿಸಲು ಸಪೋಟಾ ತಿನ್ನುವುದು
ಒಂದು ಔಷಧವೂ ಆಗಿ ಕೆಲಸ ಮಾಡುತ್ತದೆ.
ಬೊಜ್ಜನ್ನು ಕಡಮೆ ಮಾಡಿ ದೇಹದ ತೂಕ ಇಳಿಸಲು ಅದು
ಸಹಾಯಕ.
* ರಕ್ತದ ಒತ್ತಡ, ರಕ್ತಹೀನತೆ, ರಕ್ತಸ್ರಾವ, ನೋವು,
ಸ್ನಾಯು ಸೆಳೆತ ಮುಂತಾದ ಬಾಧೆಗಳಿಗೆ ಮದ್ದೆನಿಸಿದ ಸಪೋಟಾ
ಗ್ಯಾಸ್ಟ್ರಿಕ್ ಕಿಣ್ವಗಳ ಸ್ರವಿಕೆಯನ್ನು ನಿಲ್ಲಿಸುತ್ತದೆ. 'ಎ'
ಜೀವಸತ್ವ ಸಾಕಷ್ಟಿರುವ ಸಪೋಟಾ ಹಣ್ಣುಗಳನ್ನು ನಿತ್ಯ
ಆಹಾರದಲ್ಲಿ ಬಳಸುತ್ತಿದ್ದರೆ ದೃಷ್ಟಿದೋಷ ಅಕಾಲಿಕವಾಗಿ ಬಾಧಿಸುವುದು
ಪರಿಹಾರವಾಗುತ್ತದೆ. ಚರ್ಮದ ಕಲೆ, ಸುಕ್ಕು, ಬಿರುಕು
ಮೊದಲಾದ ದೋಷಗಳನ್ನು ನಿವಾರಿಸುತ್ತದೆ. ಸೂರ್ಯನ
ಯುವಿ ಕಿರಣಗಳ ದುಷ್ಪರಿಣಾಮವನ್ನು ತಡೆಯುತ್ತದೆ. ಚರ್ಮ
ಕಾಂತಿಯುತವಾಗುತ್ತದೆ.
* ಸಪೋಟಾ ತಿರುಳನ್ನು ಮ್ಯಾಷ್ ಮಾಡಿ ನೆತ್ತಿಗೆ ತಿಕ್ಕಿ ಒಂದು ತಾಸಿನ
ಬಳಿಕ ತೊಳೆಯುವ ವಿಧಾನವನ್ನು ಕೆಲವು ದಿನ ಮಾಡಿದರೆ
ನೆತ್ತಿಯ ರಕ್ತ ಪರಿಚಲನೆ ಅಧಿಕವಾಗಿ ಕೂದಲಿನ ಬೆಳವಣಿಗೆ
ಹೆಚ್ಚುತ್ತದೆ. ಅಕಾಲಿಕ ನರೆಯಿಂದ ಮುಕ್ತವಾಗುತ್ತದೆ.
* ಸಪೋಟಾ ಬೀಜಗಳ ತಿರುಳು ಮತ್ತು ಹರಳೆಣ್ಣೆಯನ್ನು ಸೇರಿಸಿ
ಅರೆದು ಕೂದಲಿಗೆ ಹಚ್ಚುವ ಕ್ರಮದಿಂದ ನಯವಾದ,
ದೀರ್ಘ ಕೇಶರಾಶಿಯನ್ನು ಗಳಿಸಬಹುದು.
ಬೀಜಗಳಿಂದ ತಯಾರಿಸುವ ತೈಲವೂ ಕೂದಲು ಉದುರುವುದು,
ಒಣ ಕೂದಲು, ಡ್ಯಾಂಡ್ರಫ್ಗಳನ್ನು ತೊಡೆದು
ಕಾಂತಿಯುತಗೊಳಿಸುತ್ತದೆ. ಬೀಜದ
ತಿರುಳಿನ ಪೇಸ್ಟ್ ಕೀಟಗಳ ಕಡಿತವನ್ನು ಗುಣಪಡಿಸುತ್ತದೆ. ಇದು
ಕಿಡ್ನಿಯ ಕಲ್ಲುಗಳನ್ನು ಕರಗಿಸುವ ಶಕ್ತಿಯನ್ನು
ಹೊಂದಿದೆ.
* ಸಪೋಟಾ ಎಲೆಗಳಿಂದ ತಯಾರಿಸುವ ಕಷಾಯದಿಂದ ಬಾಯಿ
ಮುಕ್ಕಳಿಸಿದರೆ ಬಾಯಿಯ ಹುಣ್ಣುಗಳು ಗುಣವಾಗುತ್ತವೆ.
* ಸಪೋಟಾ ಕಾಯಿಗಳಿಂದ ಸ್ರವಿಸುವ ಮೇಣ ಚೂಯಿಂಗ್ ಗಮ್
ತಯಾರಿಕೆಗೆ ಉಪಯೋಗವಾಗುತ್ತದೆ. ಇದರಿಂದ ಹಲ್ಲಿನ
ಕುಳಿಗಳನ್ನು ತಾತ್ಕಾಲಿಕವಾಗಿ ಮುಚ್ಚಬಹುದು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023