Drop


Saturday, December 19, 2015

ಕನ್ನಡಕ್ಕೆ ಕಿರೀಟ ತೊಡಿಸಿರುವ “ಜ್ಞಾನಪೀಠ ಪ್ರಶಸ್ತಿ”ಯ ಪಕ್ಷಿನೋಟ

ಕನ್ನಡಕ್ಕೆ ಕಿರೀಟ ತೊಡಿಸಿರುವ "ಜ್ಞಾನಪೀಠ ಪ್ರಶಸ್ತಿ"ಯ ಪಕ್ಷಿನೋಟ

ವಿಶೇಷ ಲೇಖನ: ಬಿ. ಕೆ. ಗಣೇಶ್ ರೈ, ದುಬೈ.

ಆತ್ಮೀಯರೇ, ನವೆಂಬರ್ ತಿಂಗಳು ಮುಗಿಯಿತು ನೂತನ ವರ್ಷದ ಬರುವಿಕೆಯ ನಿರೀಕ್ಷೆಯಲ್ಲಿರುವ ಕನ್ನಡಿಗರು  ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ತಿಂಗಳು ಪೂರ್ತಿ ಕನ್ನಡದ ಬಾವುಟ ಹಾರಿಸಿಯಾಯಿತು. ರಸಮಂಜರಿ, ಹಾಸ್ಯ, ನಾಟಕ, ಕನ್ನಡ ಜನಪದ ಗೀತೆಗಳು ಧ್ವನಿವರ್ಧಕಕದ ಮೂಲಕ ಆಲಿಸಿ ಮೈಮನ ಮುದಗೊಳಿಸಿ ಕೊಂಡಾಯಿತು. ವೇದಿಕೆಯ ಮೇಲೆ ಭಾಷಣಕಾರರ ಕನ್ನಡ ಅಭಿಮಾನವನ್ನು ಜಾಗೃತಿಗೊಳಿಸುವ ವೀರಾವೇಶದ ಮಾತುಗಳು. ಕನ್ನಡಕ್ಕೆ ದೊರೆತಿರುವ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಎದೆಯುಬ್ಬಿಸಿ ಮಾತಾನಾಡದಿದ್ದರೆ ಕನ್ನಡ ಭಾಷಣ ಅಪೂರ್ಣವಾಗುತ್ತದೆ. ಇಂತಹ ಜ್ಞಾನ ಪೀಠ ಪ್ರಶಸ್ತಿ ಇನ್ನಿತರ ಪ್ರಶಸ್ತಿಗಳಿಗಿಂತ ಎತ್ತರದ ಸ್ಥಾನದಲ್ಲಿದ್ದು ಹೆಚ್ಚು ಗೌರವವನ್ನು ಪಡೆದಿದೆ. ಈ ಶುಭ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಬೆಳಕು ಚೆಲ್ಲುವ ಅಪೂರ್ವ ಲೇಖನ…..

 

"ಜ್ಞಾನ ಪೀಠ ಪ್ರಶಸ್ತಿ"

ವಿಶ್ವದಲ್ಲಿ ಅತ್ಯುನ್ನತ ಪುರಸ್ಕಾರ ನೋಬೆಲ್ ಪ್ರಶಸ್ತಿಯಾದರೆ, ಭಾರತದಲ್ಲಿ ನೋಬೆಲ್ ಪುರಸ್ಕಾರದಷ್ಟೆ ಉನ್ನತ ಸ್ಥಾನದಲ್ಲಿರುವುದು 'ಜ್ಞಾನಪೀಠ ಪ್ರಶಸ್ತಿ'. ಭಾರತ ಸರ್ಕಾರವು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅತ್ಯುತ್ಕೃಷ್ಟ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಭಾರತ ರಾಷ್ಟ್ರ ಭಾಷೆ ಹಿಂದಿ ಮತ್ತು ಉಳಿದ ಭಾಷೆಗಳಾದ ಕನ್ನಡ, ತಮಿಳು ತೆಲುಗು, ಮಲಯಾಳಂ, ಮರಾಠಿ, ಬಂಗಾಳಿ, ಅಸ್ಸಾಮಿ, ಗುಜರಾತಿ, ರಾಜಸ್ಥಾನಿ, ಕಾಶ್ಮೀರಿ, ಉರ್ದು, ಸಂಸ್ಕೃತ, ಪಂಜಾಬಿ ಇತ್ಯಾದಿ ಹದಿನೆಂಟು ಭಾಷೆಗಳಲ್ಲಿ ರಚಿತವಾಗಿರುವ ಅಮೂಲ್ಯ ಕೃತಿಗಳು  'ಜ್ಞಾನಪೀಠ ಪ್ರಶಸ್ತಿ'ಗೆ  ಆರ್ಹತೆಯನ್ನು ಪಡೆಯುತ್ತದೆ.

 

"ಜ್ಞಾನಪೀಠ ಸಂಸ್ಥೆ"

 

ಭಾರತೀಯ ಜ್ಞಾನಪೀಠ ಸಂಸ್ಥೆಯಾಗಿ ಸ್ಥಾಪನೆಯಾಗಿದ್ದು 1944 ರಲ್ಲಿ. ಅದೇ ವರ್ಷ ಫೆಬ್ರವರಿ 18 ರಂದು ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ, ಭಾರತೀಯ ಭಾಷೆಗಳಲ್ಲಿ ಉತ್ಕೃಷ್ಟ ಕೃತಿ ರಚನೆ ಮಾಡಿದ ಸಾಹಿತಿಯನ್ನು ಗುರುತಿಸುವ ಉದ್ಧೇಶದಿಂದ 'ಜ್ಞಾನಪೀಠ' ಎಂಬ ಹೆಸರಿನಿಂದ ಸಂಸ್ಥೆ ಕಾರ್ಯಾರಂಭ ಮಾಡಿ ಉತ್ಕೃಷ್ಟ ಕೃತಿಗಳನ್ನು ಪ್ರಕಟಿಸುವ ಮೂಲಕ ಭಾರತೀಯ ಸಾಹಿತ್ಯಕ್ಕೆ ಭದ್ರ ಬುನಾದಿಯನ್ನು ಹಾಕಲಾಯಿತು.

 

"ಜ್ಞಾನ ಪೀಠ" ಸ್ಥಾಪಕರು

ಶ್ರೀ ಶಾಂತಿ ಪ್ರಸಾದ್ ಜೈನ್

ಆಲ್ಫ್ರೆಡ್ ಬೆರ್ನಾರ್ಡ್ ನೋಬೆಲ್ ಪ್ರಶಸ್ತಿಯ ಜನಕನಾದರೆ, ಭಾರತದ ಪ್ರಖ್ಯಾತ ಕೈಗಾರಿಕೋಧ್ಯಮಿ ಶ್ರೀ ಶಾಂತಿ ಪ್ರಸಾದ್ ಜೈನ್ 'ಜ್ಞಾನಪೀಠ ಪ್ರಶಸ್ತಿ' ಯ ಸ್ಥಾಪಕರಾಗಿದ್ದಾರೆ. ಇವರ ಧರ್ಮಪತ್ನಿ ಶ್ರೀಮತಿ ರಮಾಜೈನ್ ಜ್ಞಾನಪೀಠ ಸಂಸ್ಥೆಯ ಸಂಚಾಲಕರಾಗಿದ್ದಾರೆ. ಭಾರತೀಯ ಭಾಷೆಗಳಲ್ಲಿ ರಚಿತವಾಗಿರುವ ಅತ್ಯುತ್ಕೃಷ್ಟ  ಕೃತಿಗಳಿಗೆ ಸಲ್ಲಿಸ ಬೇಕಾದ ಗೌರವ 'ಜ್ಞಾನಪೀಠ' ಪ್ರಶಸ್ತಿ ನೀಡುವುದನ್ನು 1965 ರಿಂದ ಪ್ರಾರಂಭಿಸಲಾಯಿತು.

 

ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ

ಭಾರತದ ಅಂದಿನ ರಾಷ್ಟಪತಿಗಳಾಗಿದ್ದ ಡಾ. ರಾಜೇಂದ್ರ ಪ್ರಸಾದ್ ರವರ ಘನ ಅಧ್ಯಕ್ಷತೆಯಲ್ಲಿ ಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ಮಲಯಾಳಂ ಭಾಷೆಯ ಕೃತಿ ರಚನೆಕಾರ ಶ್ರೇಷ್ಟ ಸಾಹಿತಿ ಗೋವಿಂದ ಕುರೂಪ್ ರವರಿಗೆ ನೀಡಿ ಗೌರವಿಸಲಾಯಿತು. ಶಾರದ ದೇವಿಯ ಆಕರ್ಷಕ ವಿಗ್ರಹ, ಶಾಲು, ಫಲತಾಂಬೂಲ, ಪ್ರಶಸ್ತಿ ಪತ್ರ ಮತ್ತು ಒಂದೂವರೆ ಲಕ್ಷ ನಗದು ರೂಪಾಯಿಯನ್ನು ನೀಡಲಾಗುತಿದ್ದು ನಂತರ ನಗದು ಗೌರವ ಧನವನ್ನು ಐದು ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿತ್ತು, ಪ್ರಸ್ತುತ ಏಳು ಲಕ್ಷ ರೂಪಾಯಿ ನೀಡಲಾಗುತಿದೆ.

 

"ಜ್ಞಾನಪೀಠ"  ಪುರಸ್ಕಾರಕ್ಕೆ ಕೃತಿಗಳ ಆಯ್ಕೆ

ಭಾರತೀಯ ಹದಿನೆಂಟು ಭಾಷೆಗಳಲ್ಲಿ ರಚಿತವಾದ ಅಮೂಲ್ಯ ಕೃತಿಗಳನ್ನು ಆಯ್ಕೆ ಮಾಡುವಾಗ, ಆಯ್ಕೆ ಸಮಿತಿಯವರು ವಿದ್ಯುನ್ಮಣಿಗಳಾಗಿರುತ್ತಾರೆ. ಪುರಸ್ಕಾರಕ್ಕೆ ಆಯ್ಕೆಯಾಗುವವರು ಪ್ರತಿಭಾನ್ವಿತ, ಪ್ರತಿಷ್ಠಿತ ಹಾಗೂ ಶೃಜನಶೀಲ ಸಾಹಿತಿಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ವಿಧಾನಗಳಲ್ಲಿ ಸಾಹಿತ್ಯ ಕೃಷಿಮಾಡಿ ಯಶಸ್ವಿಯಾಗಿರಬೇಕು. ಹದಿನೆಂಟು ಭಾಷೆಗಳಲ್ಲಿ ಅತ್ಯುನ್ನತ ಸ್ಥಾನ ಅಭಿಸಿದರೆ ಮಾತ್ರ 'ಜ್ಞಾನಪೀಠ ಪ್ರಶಸ್ತಿ'ಗೆ ಕೃತಿ ಕರ್ತ ಆಯ್ಕೆಯಾಗುತ್ತಾರೆ. 'ಜ್ಞಾನಪೀಠ ಪ್ರಶಸ್ತಿ' ಪಡೆಯುವಾಗ ಸಾಹಿತಿಯ ಜೊತೆಗೆ ರಚಿತವಾದ ಭಾಷೆ ಮತ್ತು ಆತನ ಪ್ರಾಂತ್ಯಕ್ಕೆ ಗೌರವ ಸಲ್ಲುತ್ತದೆ.

 

ಜ್ಞಾನಪೀಠ ಪ್ರಶಸ್ತಿಯ ನಿಯಮಗಳು

* ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವವನು ಭಾರತೀಯನೇ ಆಗಿರಬೇಕು.

* ಆತನು ತನಗೆ ಸಂಬಂಧಿಸಿದ ಭಾಷೆಯ ಬಗ್ಗೆ ಸಾಕಷ್ಟು ಪಾಂಡಿತ್ಯವನ್ನು, ಪರಿಣಿತಿಯನ್ನು ಪಡೆದಿರಬೇಕು.

* ಪ್ರಶಸ್ತಿ ನೀಡುವ ಸಮಯದಲ್ಲಿ ಆತನು ಜೀವಂತನಾಗಿರಬೇಕು.

* ಒಂದು ಬಾರಿ ಪ್ರಶಸ್ತಿ ಪಡೆದ ಪುರಸ್ಕೃತನಿಗೆ ಯಾವುದೇ ಕಾರಣಗಳಿಂದ ಮತ್ತೊಮ್ಮೆ ಪ್ರಶಸ್ತಿ ನೀಡಲಾಗದು.

* ಒಂದು ಬಾರಿ ಯಾವುದಾದ್ರೂ ಒಂದು ಭಾಷೆಗೆ ಪ್ರಶಸ್ತಿ  ಬಂದರೆ ನಂತರ ಮೂರು ವರ್ಷಗಳ ಕಾಲ ಆದೇ ಭಾಷೆಯ ಯಾವ ಸಾಹಿತಿಗೂ ಪುರಸ್ಕಾರ ಲಭ್ಯವಾಗದು.

 

ಭಾರತದಲ್ಲಿ ಇಲ್ಲಿಯವರೆಗೆ ಹದಿನೆಂಟು ಭಾಷೆಗಳಲ್ಲಿ ನೀಡಲಾದ ಜ್ಞಾನಪೀಠ ಪ್ರಶಸ್ತಿಗಳಲ್ಲಿ ಹಿಂದಿ ಭಾಷೆಯ ನಂತರ ಅತೀ ಹೆಚ್ಚು ಪ್ರಶಸ್ತಿ ಕನ್ನಡ ಭಾಷೆಗೆ ಲಭ್ಯವಾಗಿದ್ದು, ಕನ್ನಡದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದಿದೆ.

 

ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುಸ್ಕೃತರಿವರು.

 

* ರಾಷ್ಟ್ರ ಕವಿ ಡಾ. ಕೆ. ವಿ. ಪುಟ್ಟಪ್ಪ (ಕುವೆಂಪು) – 1969 ರಲ್ಲಿ  – ಶ್ರೀ ರಾಮಾಯಣ ದರ್ಶನಂ  – ಕೃತಿ

ರಾಮಾಯಣ ದರ್ಶನಂ :

ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ.

 

 

* ಡಾ| ದ. ರಾ. ಬೇಂದ್ರೆ – 1974 – ನಾಕು ತಂತಿ (ಕವನ ಸಂಕಲನ)

ಜ್ಞಾನಪೀಠ ಪಡೆದ 2ನೆಯ ಕನ್ನಡಿಗ .ಅವರು ಅಂಬಿಕಾತನಯದತ್ತ ಅನ್ನುವ ಹೆಸರಿಂದಕೂಡ ಬರೆದಿದ್ದಾರೆ.  .ಭಾರತ ಸರ್ಕಾರದಿಂದ ಅವರಿಗೆ ಪದ್ಮ  ಶ್ರೀ ಪ್ರಶಸ್ತಿ ಕೂಡ ದೊರಕಿತ್ತು .

 

* ಡಾ. ಕೆ. ಶಿವರಾಮ ಕಾರಂತ – 1978 – ಮೂಕಜ್ಜಿಯ ಕನಸುಗಳು

ಜ್ಞಾನಪೀಠ ಪಡೆದ 3ನೆ ಕನ್ನಡಿಗ  ಪದ್ಮಭೂಷಣ ಪ್ರಶಸ್ತಿ  ಬಂದರೂ ಅದನ್ನು ತುರ್ತು ಪರಿಸ್ಥಿತಿ ಹೇರಿದ (ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ) ಕಾರಣ  ಪ್ರಶಸ್ತಿಯನ್ನು ಹಿಂತಿರಿಗಿಸಿದ ಧೀಮಂತ ವ್ಯಕ್ತಿ.

 

* ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ – 1983 – ಚಿಕ್ಕ ವೀರ ರಾಜೇಂದ್ರ

ಕನ್ನಡದಲ್ಲಿ ಜ್ಞಾನಪೀಠ ಪಡೆದವರಲ್ಲಿ  ನಾಲ್ಕನೆಯವರು (ಮಾಸ್ತಿ ಕನ್ನಡದ ಆಸ್ತಿ)

ಅವರು ಸಣ್ಣ ಕಥೆಗಳಿಂದಲೇ ಚಿರಪರಿಚಿತರು

 

* ಡಾ. ವಿ. ಕೃ. ಗೋಕಾಕ್ – 1991 – ಭಾರತ ಸಿಂಧು ರಶ್ಮಿ

5ನೇ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗ

 

* ಯು. ಆರ್. ಅನಂತ ಮೂರ್ತಿ – 1994 – ಕನ್ನಡ ಸಾಹಿತ್ಯದಲ್ಲಿ ಸಲ್ಲಿಸಿದ ಸೇವೆ.

ಜ್ಞಾನಪೀಠ ಪ್ರಶಸ್ತಿ ಪಡೆದ 6ನೇ ಕನ್ನಡಿಗ . ಯಾವಾಗಲು ಸುದ್ದಿಯಲ್ಲಿದ್ದು , ಬೇರೆ ಬೇರೆ ವಿಷಯಗಲ್ಲಿ ಸ್ಪಂದಿಸುವ ಚಲನಶೀಲ ,ಬುದ್ದಿವಂತ ವ್ಯಕ್ತಿ . ಹಲವು ಬಾರಿ ವಿವಾದಕ್ಕೆ ಸಿಕ್ಕಿ ಕೊಂಡಿದ್ದರು

 

* ಗಿರೀಶ ಕಾರ್ನಾಡ್ – 1998 – ಕನ್ನಡ ಸಾಹಿತ್ಯ, ನಾಟಕ ರಂಗದ ಸಾಧನೆ.

ಜ್ಞಾನಪೀಠ ಪಡೆದ 7ನೇ ಕನ್ನಡಿಗ. ಇವರಿಗೆ ಭಾರತ ಸರಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಬಂದಿದೆ

 

* ಚಂದ್ರಶೇಖರ ಕಂಬಾರ : 2010 ಜ್ಞಾನಪೀಠ ಪಡೆದ 8ನೇ ಕನ್ನಡಿಗ.

ಕನ್ನಡದ ಒಬ್ಬ ಪ್ರತಿಭಾವಂತ ಕವಿ, ನಾಟಕಕಾರ, ಜಾನಪದ ತಜ್ಞ, ಸಿನಿಮಾ  ನಿರ್ದೇಶಕ ಮತ್ತು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಥಮ ಕುಲಪತಿಗಳು. ನಮ್ಮದೇ ರಾಜ್ಯ ಕರ್ನಾಟಕದ ಬೆಳಗಾವಿಯಲ್ಲಿ, ರಾಷ್ಟ್ರಪತಿ ಪ್ರಣಬ್ ಮುಖರ್ಜೀಯವರಿಂದ ಪಡೆದದ್ದು ಕನ್ನಡಿಗರು ಹೆಮ್ಮೆ  ಪಡುವ ವಿಷಯ

ಕನ್ನಡದಲ್ಲಿ  ಇನ್ನಷ್ಟು ಉತ್ಕೃಷ್ಟ ಕೃತಿ ರಚನೆಯಾಗಿ ಮುಂದಿನ ಬಾರಿಯ ಜ್ಞಾನ ಪೀಠ ಪುರಸ್ಕಾರ ಲಭಿಸುವಂತಾಗಲಿ ಎಂದು ಹಾರೈಸೋಣ.

ಭಾರತದಲ್ಲಿ ಹಿಂದಿ ಭಾಷೆಯ ನಂತರ ಇನ್ನಿತರ ಯಾವುದೇ ಭಾಷೆಗಳಿಗೆ ಸಿಗದಷ್ಟು ಜ್ಞಾನ ಪೀಠ ಪ್ರಶಸ್ತಿ ಕನ್ನಡ ಭಾಷೆಗೆ ದೊರೆತ್ತಿದ್ದು, ಕನ್ನಡಿಗರು ಅಭಿಮಾನ ಪಡುವಂತಾಗಿದೆ. ಕನ್ನಡಿಗರಲ್ಲಿ ಕನ್ನಡ ಭಾಷೆಯ ಮೇಲೆ ಅಪಾರ ಪ್ರೇಮ ಸದಾ ಹಸಿರಾಗಿರಲಿ.

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"

ಬಿ. ಕೆ. ಗಣೇಶ್ ರೈ

ಅರಬ್ ಸಂಯುಕ್ತ ಸಂಸ್ಥಾನ