ಉನ್ನತ ಹುದ್ದೆಯಲ್ಲಿ ಕನ್ನಡಿಗರು


BY ವಿಜಯವಾಣಿ ನ್ಯೂಸ್
· NOV 21, 2015
ಕನ್ನಡ ನಾಡಿನ ಪರಂಪರೆ
ಉನ್ನತವಾದುದು. ಕರ್ನಾಟಕದಲ್ಲಿ
ಜನಿಸಿದ ಶ್ರೇಷ್ಠ ವಿಜ್ಞಾನಿಗಳು,
ಶಿಕ್ಷಣತಜ್ಞರು, ಇತರ ಕ್ಷೇತ್ರಗಳ
ಸಾಧಕರು ದೇಶಕ್ಕೆ ಅಷ್ಟೇ ಅಲ್ಲ,
ಜಗತ್ತಿಗೆ ಮಹತ್ವದ ಕೊಡುಗೆ
ನೀಡಿದವರು. ಇತ್ತೀಚೆಗೆ ದೇಶ-
ವಿದೇಶಗಳಲ್ಲಿ ಅತ್ಯುನ್ನತ
ಹುದ್ದೆಯನ್ನು ಅಲಂಕರಿಸಿದ ಏಳು
ಸಾಧನಶೀಲ ಪ್ರತಿಭಾನ್ವಿತ ಕನ್ನಡಿಗರ
ಕುರಿತ ಪುಟ್ಟ ಪರಿಚಯ
ನೀಡುತ್ತಿದ್ದೇವೆ.
ಡಾ. ಎ. ಸೂರ್ಯಪ್ರಕಾಶ್
ಪ್ರಸಾರ ಭಾರತಿ ಅಧ್ಯಕ್ಷ
ಹಾಸನ ಜಿಲ್ಲೆಯ ಅರಕಲಗೂಡು
ಮೂಲದ ಡಾ. ಸೂರ್ಯಪ್ರಕಾಶ್
ಅವರು ಅರಕಲಗೂಡು
ಸೂರ್ಯಪ್ರಕಾಶ್ ಎಂದೇ ಪರಿಚಿತರು.
ಆಕಾಶವಾಣಿ ಮತ್ತು ದೂರದರ್ಶನ
ಒಳಗೊಂಡ ದೇಶದ ಸಾರ್ವಜನಿಕ
ಪ್ರಸಾರ ಸೇವಾ ಸಂಸ್ಥೆ 'ಪ್ರಸಾರ
ಭಾರತಿ' ಅಧ್ಯಕ್ಷರು. ಕಳೆದ 44
ವರ್ಷಗಳಿಂದ ಭಾರತೀಯ
ಪತ್ರಿಕಾರಂಗದಲ್ಲಿ
ಕಾರ್ಯನಿರ್ವಹಿಸುತ್ತಿರುವ ಅವರು
ಮಾಧ್ಯಮ ಕ್ಷೇತ್ರದ ಅತ್ಯುನ್ನತ
ಹುದ್ದೆಯನ್ನು ನಿಭಾಯಿಸಿದ್ದಾರೆ.
ದೇಶದ ಜನಜೀವನದಲ್ಲಿ ಮಹತ್ವದ
ಬದಲಾವಣೆಗೆ ಅವರು ಕೈಗೊಂಡ
ಕ್ರಮಗಳು ಕಾರಣವಾಗಿವೆ.
ಲೋಕಸಭಾ ಸದಸ್ಯರ ಸ್ಥಳೀಯ
ಅಭಿವೃದ್ಧಿ ಯೋಜನೆಯ ಹಣ
ದುರ್ಬಳಕೆ ಕುರಿತು ಅವರು ನೀಡಿದ
ವರದಿಯು ಯೋಜನೆ
ಅನುಷ್ಠಾನದಲ್ಲಿನ ವಂಚನೆಯನ್ನು
ಬಯಲಿಗೆಳೆಯಿತು. ಜನಸಂಖ್ಯಾ ಹೆಚ್ಚಳ
ನಿಯಂತ್ರಿಸುವಲ್ಲಿ
ಕೈಗೊಳ್ಳಬೇಕಾದ ಕುಟುಂಬ
ಯೋಜನೆ ಕಾರ್ಯಗತಗೊಳಿಸಲು
ನಡೆಸಿದ ಆಂದೋಲನ, ಸಂಸತ್ತಿನ
ಎರಡೂ ಸದನದ ಕಲಾಪಗಳನ್ನು
ಸಾರ್ವಜನಿಕರು ವೀಕ್ಷಿಸಲು
ದೂರದರ್ಶನ ಮೂಲಕ ನೇರಪ್ರಸಾರ
ಆರಂಭಿಸುವಲ್ಲಿ ಆಗ್ರಹ, ಇತರ ಕ್ರಮಗಳು
ದೇಶದಲ್ಲಿ ಬದಲಾವಣೆಗೆ ನಾಂದಿ
ನೀಡಿದವು.
ಡಾ. ಕಿರಣ್​ಕುಮಾರ್
ಇಸ್ರೋ ಅಧ್ಯಕ್ಷ
ಹಾಸನ ಜಿಲ್ಲೆಯವರಾದ ಡಾ.
ಆಲೂರು ಸೀಳಿನ್ ಕಿರಣ್​ಕುಮಾರ್
ಭಾರತೀಯ ಬಾಹ್ಯಾಕಾಶ
ಸಂಶೋಧನೆ ಸಂಸ್ಥೆಯ
(ಇಸ್ರೋ) ಅಧ್ಯಕ್ಷರು. ಅವರು ಈ
ಹುದ್ದೆ ನಿರ್ವಹಿಸುತ್ತಿರುವ ಎರಡನೇ
ಕನ್ನಡಿಗ. ದೇಶದ ಪ್ರತಿಷ್ಠಿತ
ಚಂದ್ರಯಾನ-1 ಮತ್ತು
ಮಂಗಳಯಾನ ಕಾರ್ಯ
ಯೋಜನೆಯಲ್ಲಿ ಮಹತ್ವದ ಪಾತ್ರ
ಇವರದು. 1979ರಲ್ಲಿ ಭಾರತದ
ಮೊದಲ ದೂರಸಂವೇದಿ ಉಪಗ್ರಹ
'ಭಾಸ್ಕರ' ವಿನ್ಯಾಸ ಮತ್ತು
ಅಭಿವೃದ್ಧಿಯ ಯಶಸ್ಸು ಕಿರಣ್​ಕುಮಾರ್​
ಗೆ ಸಲ್ಲುತ್ತದೆ. ಹವಾಮಾನ, ಸಮುದ್ರ
ಮತ್ತು ಭೂದೃಶ್ಯ ಚಿತ್ರಣ,
ದೂರಸಂಪರ್ಕ ಕುರಿತ ತಂತ್ರಜ್ಞಾನ
ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ
ನಿರ್ವಹಿಸಿದ್ದಾರೆ. ಇನ್​ಸ್ಯಾಟ್-3ಡಿ
ಯೋಜನೆಯಲ್ಲೂ ಕಿರಣ್​ಕುಮಾರ್
ಪ್ರತಿಭೆ ಅನಾವರಣಗೊಂಡಿದೆ.
ಮಂಗಳಗ್ರಹದ ಕಕ್ಷೆಯಲ್ಲಿ
ಉಪಗ್ರಹವನ್ನು ನಿಲ್ಲಿಸಿದ ಐದು
ಸಾಧನಗಳ ಪೈಕಿ ಮೂರನ್ನು ಇವರ
ನೇತೃತ್ವದ ಐವರು ವಿಜ್ಞಾನಿಗಳ
ಗುಂಪು ಅಭಿವೃದ್ಧಿಪಡಿಸಿದೆ. ದೇಶದ
ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ
ಒಂದಾದ 'ಪದ್ಮಶ್ರೀ'
ಪುರಸ್ಕಾರವನ್ನು ಕೇಂದ್ರ
ಸರ್ಕಾರ 2014ರಲ್ಲಿ ಡಾ.ಕಿರಣ್​ಕುಮಾರ್
ಅವರಿಗೆ ನೀಡಿ ಗೌರವಿಸಿದೆ.
ಎಚ್.ಎಲ್. ದತ್ತು
ಸುಪ್ರಿಂಕೋರ್ಟ್ ಮುಖ್ಯ
ನ್ಯಾಯಾಧೀಶ
ಸುಪ್ರಿಂಕೋರ್ಟ್ ಮುಖ್ಯ
ನ್ಯಾಯಾಧೀಶ ಹಂದ್ಯಾಲ
ಲಕ್ಷ್ಮೀನಾರಾಯಣಸ್ವಾಮಿ ದತ್ತು
ಅವರು ಚಿಕ್ಕಮಗಳೂರಿನ ಚಿಕ್ಕಪಟ್ಟಣಗೆರೆ
ಗ್ರಾಮದವರು. 1975ರ ಅಕ್ಟೋಬರ್
23ರಂದು ವಕೀಲರಾಗಿ
ಸೇವಾಕಾರ್ಯ ಆರಂಭಿಸಿದ ದತ್ತು
ಸಿವಿಲ್, ಕ್ರಿಮಿನಲ್, ಸಂವಿಧಾನ, ತೆರಿಗೆ
ವಿಷಯಗಳಲ್ಲಿ ಪ್ರಭುತ್ವ ಪಡೆದಿದ್ದಾರೆ.
1995ರಲ್ಲಿ ಕರ್ನಾಟಕ ಹೈಕೋರ್ಟ್
ನ್ಯಾಯಮೂರ್ತಿಯಾಗಿ
ನೇಮಕಗೊಂಡರು. 2007ರಲ್ಲಿ
ಛತ್ತೀಸ್​ಘಡ ಹೈಕೋರ್ಟ್
ಮುಖ್ಯ ನ್ಯಾಯಮೂರ್ತಿ ಹುದ್ದೆ
ಸ್ವೀಕರಿಸಿದರು. ಅದೇ ವರ್ಷ ಕೇರಳ
ಹೈಕೋರ್ಟ್ ಮುಖ್ಯ
ನ್ಯಾಯಮೂರ್ತಿಯಾಗಿ
ವರ್ಗಾವಣೆಗೊಂಡರು. 2014ರ
ಸೆಪ್ಟಂಬರ್ 5ರಂದು
ಸುಪ್ರಿಂಕೋರ್ಟ್ ಮುಖ್ಯ
ನ್ಯಾಯಾಧೀಶರಾಗಿ ರಾಷ್ಟ್ರಪತಿ
ಅವರಿಂದ ನೇಮಕಗೊಂಡರು.
ನ್ಯಾ. ದತ್ತು ದೇಶದ 42ನೇ
ಮುಖ್ಯ ನ್ಯಾಯಾಧೀಶರು
(ಸಿಜೆಐ). ಅವರು 2015ರ ಡಿಸೆಂಬರ್
2ರಂದು ನಿವೃತ್ತರಾಗಲಿದ್ದಾರೆ.
ಮಾನವೀಯ ಮೌಲ್ಯದ ತೀರ್ಪಗಳು
ಇವರ ಹೆಸರನ್ನು ಉಜ್ವಲಗೊಳಿಸಿವೆ.
ಗಣಪತಿ, ತಿರುಪತಿ ತಿಮ್ಮಪ್ಪನ ಭಕ್ತರೂ
ಆಗಿರುವ ನ್ಯಾಯಮೂರ್ತಿ ದತ್ತು
ಅವರು ಕರ್ನಾಟಕ ಸಂಗೀತ
ಪ್ರಿಯರು.
ಕೆ.ವಿ. ಕಾಮತ್
ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ
ಕುಂದಾಪುರ ವಾಮನ ಕಾಮತ್
2015ರ ಜೂನ್ 5ರಂದು ಪ್ರತಿಷ್ಠಿತ ಬ್ರಿಕ್ಸ್
ಬ್ಯಾಂಕ್ ಅಧ್ಯಕ್ಷರಾದರು.
ಅವರು ಉಡುಪಿ ಜಿಲ್ಲೆಯ
ಕುಂದಾಪುರದವರು.
ಮಂಗಳೂರಿನ ಸೇಂಟ್
ಅಲೋಶಿಯಸ್ ಕಾಲೇಜಿನಲ್ಲಿ ಓದಿದ
ಬಳಿಕ ಸುರತ್ಕಲ್​ನ ಎನ್​ಐಟಿಕೆಯಲ್ಲಿ
ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ
ಪಡೆದರು. ನಂತರ ಅಹ್ಮದಾಬಾದ್​ನ
ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್
ಮ್ಯಾನೇಜ್​ವೆುಂಟ್​ನಲ್ಲಿ
ಸ್ನಾತಕೋತ್ತರ ಡಿಪ್ಲೊಮಾ
ಪದವಿ ಪಡೆದರು. ಏಷ್ಯನ್ ಡೆವಲಪ್​ವೆುಂಟ್
ಬ್ಯಾಂಕ್(ಎಡಿಬಿ)ನಲ್ಲಿ ಸೇವೆ
ಸಲ್ಲಿಸಿರುವ ಕೆ.ವಿ. ಕಾಮತ್ ಇನ್​
ಫೋಸಿಸ್ ಅಧ್ಯಕ್ಷರಾಗಿ, ಐಸಿಐಸಿಐ
ಬ್ಯಾಂಕ್ ಆಡಳಿತ ನಿರ್ದೇಶಕ
ಸೇರಿದಂತೆ ಹಲವು ಪ್ರಮುಖ
ಹುದ್ದೆಗಳನ್ನು ಯಶಸ್ವಿಯಾಗಿ
ನಿರ್ವಹಿಸಿದ್ದಾರೆ. ನ್ಯಾಷನಲ್ ಕೌನ್ಸಿಲ್ ಆಫ್
ಕಾನ್​ಫೆಡರೇಶನ್ ಆಫ್ ಇಂಡಿಯನ್
ಇಂಡಸ್ಟ್ರಿ (ಸಿಐಐ) ಸೇರಿದಂತೆ ಹಲವು
ಅತ್ಯುನ್ನತ ಸಂಸ್ಥೆಯ ಆಡಳಿತ
ಮಂಡಳಿಯ ಸದಸ್ಯತ್ವವನ್ನು ಕಾಮತ್
ಹೊಂದಿದ್ದಾರೆ. ಕೇಂದ್ರ ಸರ್ಕಾರ
ಅವರಿಗೆ 'ಪದ್ಮಭೂಷಣ' ಪುರಸ್ಕಾರ
ನೀಡಿ ಗೌರವಿಸಿದೆ. (ಆರ್ಥಿಕತೆಯಲ್ಲಿ
ಪ್ರಮುಖವಾಗಿ
ಹೊರಹೊಮ್ಮುತ್ತಿರುವ ಐದು
ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ,
ಇಂಡಿಯಾ, ಚೀನಾ ಮತ್ತು ಸೌಥ್
ಆಫ್ರಿಕಾ ರಾಷ್ಟ್ರಗಳು ತಮ್ಮ
ಮೊದಲಿನ ಅಕ್ಷರದ ಹೆಸರಿನಲ್ಲಿ (ಚ್ಟಿಜ್ಚಿಠ)
ಆರಂಭಿಸಿರುವ ಅಂತಾರಾಷ್ಟ್ರೀಯ
ಬ್ಯಾಂಕ್- ಬ್ರಿಕ್ಸ್ ಬ್ಯಾಂಕ್).
ಡಾ. ಅನಿಲ್ ಸಹಸ್ರಬುದ್ಧೆ
ಎಐಸಿಟಿಇ ಅಧ್ಯಕ್ಷ
ಡಾ.ಅನಿಲ್ ದತ್ತಾತ್ರೇಯ ಸಹಸ್ರಬುದ್ಧೆ
ಅವರು 2015ರ ಜುಲೈ 17ರಂದು
ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್
ಎಜುಕೇಶನ್ (ಎಐಸಿಟಿಇ) ಅಧ್ಯಕ್ಷರಾಗಿ
ನೇಮಕಗೊಂಡರು. ಮೂಲತಃ
ಹುಬ್ಬಳ್ಳಿಯವರಾದ ಅನಿಲ್
ಸಹಸ್ರಬುದ್ಧೆ ಅಲ್ಲಿನ ಬಿವಿಬಿ
ಇಂಜಿನಿಯರಿಂಗ್ ಕಾಲೇಜಿನಲ್ಲಿ
ಓದಿದವರು. ಕರ್ನಾಟಕ ವಿವಿಯಲ್ಲಿ
ಮೆಕ್ಯಾನಿಕಲ್ ಇಂಜಿನಿಯರಿಂಗ್​ನಲ್ಲಿ
ಸ್ನಾತಕೋತ್ತರ ಪದವಿಯನ್ನು
ಚಿನ್ನದ ಪದಕದೊಂದಿಗೆ ಪಡೆದರು.
ಬೆಂಗಳೂರಿನ ಇಂಡಿಯನ್ ಇನ್​
ಸ್ಟಿಟ್ಯೂಟ್ ಆಫ್ ಸೈನ್ಸ್
ಸಂಸ್ಥೆಯಿಂದ ಡಾಕ್ಟರೇಟ್
ಪಡೆದರು. ಗುವಾಹಟಿಯ ಐಐಟಿಯಲ್ಲಿ
11ವರ್ಷ ಸೇವೆ ಸಲ್ಲಿಸಿದ ಬಳಿಕ ಪುಣೆಯ
ಇಂಜಿನಿಯರಿಂಗ್ ಕಾಲೇಜಿನ
ನಿರ್ದೇಶಕರಾಗಿದ್ದರು. ಎರಡು
ದಶಕಗಳಿಗೂ ಹೆಚ್ಚು ಕಾಲದಿಂದ
ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ
ಡಾ. ಅನಿಲ್ ಸಹಸ್ರಬುದ್ಧೆ ಸೇವೆ
ಸಲ್ಲಿಸಿದ್ದಾರೆ. ಇಂಜಿನಿಯರಿಂಗ್ ಮತ್ತು
ಉದ್ಯಮಶೀಲತೆ ಕುರಿತ ಅನೇಕ
ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.
ಡಾ. ವಿವೇಕ್ ಮೂರ್ತಿ
ಅಮೆರಿಕದ ಪ್ರಧಾನ ವೈದ್ಯಾಧಿಕಾರಿ
ಅಮೆರಿಕದ ಪ್ರಧಾನ ವೈದ್ಯಾಧಿಕಾರಿ
(ಸರ್ಜನ್ ಜನರಲ್) ಆಗಿರುವ ಡಾ. ವಿವೇಕ್
ಹಲ್ಲೇಗೆರೆ ಮೂರ್ತಿ ಮಂಡ್ಯ ಜಿಲ್ಲೆಯ
ಹಲ್ಲೇಗೆರೆ ಮೂಲದವರು. ಅವರು
ಅಮೆರಿಕದ 19ನೇ ಸರ್ಜನ್ ಜನರಲ್.
ಅಧ್ಯಕ್ಷ ಬರಾಕ್ ಒಬಾಮರ ತಂಡದ
ವೈದ್ಯರಲ್ಲಿ ಒಬ್ಬರು. ಅವರು
ತಂಡದ ಕಿರಿಯ ವೈದ್ಯ. ಭಾರತ,
ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ
ಎಚ್​ಐವಿ/ಏಯ್್ಡ್ಸ ಕುರಿತು ಜಾಗೃತಿ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುತ್ತಿರುವ 'ವಿಜನ್ಸ್'
ಸಂಸ್ಥೆಯನ್ನು 1995ರಲ್ಲಿ ಆರಂಭಿಸಲು
ಶ್ರಮಿಸಿದ ಮೂರ್ತಿ 2000ವರೆಗೆ ಅದರ
ಅಧ್ಯಕ್ಷರಾಗಿದ್ದರು. ಡಾ. ಮೂರ್ತಿ
ಅವರು 'ಡಾಕ್ಟರ್ಸ್ ಫಾರ್ ಅಮೆರಿಕ'
ಸೇವಾ ಸಂಘಟನೆಯನ್ನೂ
ಆರಂಭಿಸಿದ್ದಾರೆ. ರಾಜ್ಯದ
ಶೃಂಗೇರಿಯಲ್ಲಿ ಇತರ ಸಂಸ್ಥೆಯ
ಸಹಯೋಗದಲ್ಲಿ ಮೂಲ
ಆರೋಗ್ಯ ಶಿಕ್ಷಣ, ಚಿಕಿತ್ಸೆ
ಕೈಗೊಳ್ಳಲು 'ಸ್ವಾಸ್ಥ್ಯ
ಸಂಸ್ಥೆಯನ್ನು ಡಾ. ಮೂರ್ತಿ
ಆರಂಭಿಸಿದ್ದಾರೆ.
ಡಾ. ಎಂ.ಕೆ. ಶ್ರೀಧರ್
ಸಿಎಬಿಇ ಸದಸ್ಯ
ಬೆಂಗಳೂರಿನ ಶಿಕ್ಷಣ ತಜ್ಞ, ಸಾಮಾಜಿಕ
ಕಾರ್ಯಕರ್ತ ಡಾ. ಎಂ.ಕೆ. ಶ್ರೀಧರ್
ಅವರು ಕೇಂದ್ರಿಯ ಶಿಕ್ಷಣ ಸಲಹಾ
ಮಂಡಳಿ (ಸಿಎಬಿಇ) ಸದಸ್ಯರು. ಶಿಕ್ಷಕರು
ಮತ್ತು ಶಿಕ್ಷಣ ನೀಡಿಕೆ ಕುರಿತ ಪಂ.
ಮದನ್​ವೋಹನ್ ಮಾಳವೀಯ
ರಾಷ್ಟ್ರೀಯ ಕಾರ್ಯಕ್ರಮದ
ಯೋಜನಾ ಮಂಡಳಿಯ
ಸದಸ್ಯರು ಸಹ. ತಮ್ಮ ಎರಡೂ
ಕಾಲುಗಳು ನಿಶ್ಯಕ್ತಿಯಾಗಿ
ಅಂಗವಿಕಲರಾಗಿದ್ದರೂ ಶಿಕ್ಷಣ,
ಸಂಶೋಧನೆ ಕ್ಷೇತ್ರದಲ್ಲಿ ಅವರು
ನಿರ್ವಹಿಸುತ್ತಿರುವ ಕಾರ್ಯ
ಶ್ಲಾಘನೀಯ. ಬೆಂಗಳೂರು ವಿವಿಯ
ಪ್ಲೇಸ್​ವೆುಂಟ್ ವಿಭಾಗದ
ಮುಖ್ಯಸ್ಥರಾಗಿ, ವಾಣಿಜ್ಯ ಮತ್ತು
ಆಡಳಿತ ನಿರ್ವಹಣೆ ವಿಭಾಗದಲ್ಲಿ ಡೀನ್ ಆಗಿ,
ಅಲ್ಲದೇ ಇದೇ ವಿವಿಯ ಕೆನರಾ
ಬ್ಯಾಂಕ್ ಸ್ಕೂಲ್ ಆಫ್
ಮ್ಯಾನೇಜ್​ವೆುಂಟ್ ಸ್ಟಡೀಸ್​ನ
ನಿರ್ದೇಶಕರಾಗಿಯೂ ಅವರು
ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ
ಸರ್ಕಾರ ಸ್ಥಾಪಿಸಿರುವ, ಹಿರಿಯ
ಬಾಹ್ಯಾಕಾಶ ವಿಜ್ಞಾನಿ ಡಾ.
ಕೆ.ಕಸ್ತೂರಿ ರಂಗನ್ ನೇತೃತ್ವದ
ಜ್ಞಾನ ಆಯೋಗದಲ್ಲಿ ಡಾ.
ಶ್ರೀಧರ್ ಅವರು 2008ರಿಂದ 2013ರವರೆಗೆ
ಕಾರ್ಯನಿರ್ವಾಹಕ ನಿರ್ದೇಶಕರಾಗಿ
ಸೇವೆ ಸಲ್ಲಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023