Drop


Tuesday, December 22, 2015

ಇಂದು ಗಣಿತ ಪ್ರಪಂಚದ ಅನರ್ಘ್ಯ ರತ್ನ ರಾಮಾನುಜನ್ ಅವರ ಜನ್ಮದಿನಾಂಕ::*


BY ವಿಜಯವಾಣಿ ನ್ಯೂಸ್
· DEC 22, 2015
ಬಡತನ, ಅನಾರೋಗ್ಯ ಇವು ಯಾವುವೂ ಮಹಾಸಾಧಕನ ಆಂತರಿಕ
ಜ್ಯೋತಿಯನ್ನು ನಂದಿಸಲಾಗಲಿಲ್ಲ. 'ಸಾಮಾನ್ಯರ ದೃಷ್ಟಿಗೆ
ನಿಲುಕದ ಬಲು ಎತ್ತರದ ಶಿಖರಗಳಲ್ಲಿ ವಿಹರಿಸುವ ಮಹಾಮನಸ್ಸುಗಳು
ಯಾವ ಪ್ರತಿಕೂಲಗಳನ್ನೂ ಲೆಕ್ಕಿಸುವುದಿಲ್ಲ' ಅನ್ನುವುದಕ್ಕೆ
ಶ್ರೀನಿವಾಸ ರಾಮಾನುಜನ್ರೇ ಸಾಕ್ಷಿ.
"ಸ ರ್ಕಾರಿ ಕಚೇರಿಗಳಲ್ಲಿ ರೇಷ್ಮೆ ವಸಗಳನ್ನು ಜೋಡು ಒರೆಸುವುದಕ್ಕೆ
ಉಪಯೋಗಿಸುವುದೂ ತೊಗಲಿನ ರಟ್ಟನ್ನು
ಕರವಸವೆಂದು ಉಪಯೋಗಿಸುವುದೂ ಅಪರೂಪವಲ್ಲ"- ಆಗರ್ಭ
ವಿದ್ವಾಂಸ, ಗ್ರಂಥಶೋಧಕ ಎ.ಆರ್. ಕೃಷ್ಣ ಶಾಸಿ ಅವರಿಗೆ
ಓರಿಯಂಟಲ್ ಲೈಬ್ರರಿಯಲ್ಲಿ ಒದಗಿಬಂದ
ಡಿಸ್ಪ್ಯಾಚಿಂಗ್ ಗುಮಾಸ್ತಗಿರಿ ನೌಕರಿಯ ಬಗ್ಗೆ ಪರಿತಾಪಪಟ್ಟು
ಡಿವಿಜಿಯವರು ಹೇಳಿದ ಮಾತಿದು. ಯಾವ ವಿಧವಾದ
ವಿದ್ವತ್ಸಂಪರ್ಕವೂ ಇಲ್ಲದ ಯಾವಾಗಲೂ ಕತ್ತರಿ, ಟ್ವೈನ್ ದಾರ,
ಗೋಂದುಗಳಲ್ಲಿ ಕೈಯಾಡಿಸುವ ಆ ನೌಕರಿಯ ಬಗ್ಗೆ ಖೇದಪಟ್ಟು
ಹೇಳಿದ ಆ ಮಾತನ್ನು ಗಣಿತ ಪ್ರಪಂಚದ ಅನರ್ಘ್ಯರತ್ನ,
ಬೌದ್ಧಿಕ ವಿಸ್ಮಯ ಶ್ರೀನಿವಾಸ ರಾಮಾನುಜನ್ರಿಗೂ
ಯಥಾವತ್ತಾಗಿ ಅನ್ವಯಿಸಿ ಹೇಳಬಹುದು.
ಶ್ರೀನಿವಾಸ ರಾಮಾನುಜನ್ ಹುಟ್ಟಿದ್ದು ತಮಿಳುನಾಡಿನ
ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿ, 1887
ಡಿಸೆಂಬರ್ 22ರಂದು. ತುಂಬಾ ಬಡತನದ
ಕುಟುಂಬ. ಶ್ರೀವೈಷ್ಣವ ಬ್ರಾಹ್ಮಣ
ಸಂಪ್ರದಾಯದ ಕುಟುಂಬದಲ್ಲಿ ಜನ್ಮವೆತ್ತ
ರಾಮಾನುಜನ್ರಿಗೆ ಕಟ್ಟಾ ಮಡಿವಂತಿಕೆ, ಸಂಪ್ರದಾಯ
ಶರಣತೆ, ಆಸ್ತಿಕತೆ ರೂಢಿಗತವಾಗಿದ್ದವು. "ಇಂತಹ ವಾತಾವರಣದ
ಮನೆತನದಲ್ಲಿ ಗಣಿತದ ಪವಾಡ ಪುರುಷನೊಬ್ಬನ
ಉಗಮವಾದದ್ದು ನಿಸರ್ಗದ ವಿಸ್ಮಯಗಳಲ್ಲಿ ಒಂದು"
ಎಂದು ಖ್ಯಾತ ಖಗೋಳ ಶಾಸಜ್ಞ, ಕಲಾವಿಮರ್ಶಕ
ಪ್ರೊ.ಜಿ.ಟಿ.ನಾರಾಯಣ ರಾವ್ ಹೇಳುತ್ತಾರೆ.
ಚಿಕ್ಕಂದಿನಿಂದಲೂ ಅಂತರ್ಮುಖಿಯಾಗಿಯೇ
ಇರುತ್ತಿದ್ದ ಶ್ರೀನಿವಾಸ ರಾಮಾನುಜನ್ ಸದಾ ಓದು, ಬರಹ,
ಚಿಂತನೆಗಳಲ್ಲೇ ಮುಳುಗಿರುತ್ತಿದ್ದರು. ಗಣಿತದಲ್ಲೂ
ಸತ್ಯಾನ್ವೇಷಣೆಗೆ ತುಡಿಯುತ್ತಿದ್ದ ಅವರ ಮನಸ್ಸು ನಿಜಕ್ಕೂ ಒಬ್ಬ
ತತ್ತ್ವಜ್ಞಾನಿಯದಾಗಿತ್ತು. ಔಪಚಾರಿಕ ಶಿಕ್ಷಣದಿಂದ ಅವರು
ಪಡೆದದ್ದು ಅತ್ಯಲ್ಪ. ಯಾದೃಚ್ಛಿಕವಾಗಿ ದೊರೆತ
ಕೆಲವು ಪುಸ್ತಕಗಳಿಂದ, ಅವುಗಳ ಅನುಸಂಧಾನದಿಂದ,
ಸ್ವಂತ ಪರಿಶ್ರಮದಿಂದ ಮತ್ತು ಸತತ ತಪಸ್ಸಿನಿಂದ
ಅವರ ಗಣಿತದ ತಳಪಾಯ ನಿರ್ಮಾಣಗೊಂಡಿತು.
ಬೀಜಗಣಿತ, ಜ್ಯಾಮಿತಿ, ತ್ರಿಕೋಣಮಿತಿ, ಕಲನ ಶಾಸ,
ವಿಶ್ಲೇಷಣ ಗಣಿತಗಳು ಅವರು ವಿಹರಿಸಿದ ಕ್ಷೇತ್ರಗಳು.
ರಾಮಾನುಜನ್ ಮದರಾಸು ವಿಶ್ವವಿದ್ಯಾಲಯ ನಡೆಸುತ್ತಿದ್ದ
ಮೆಟ್ರಿಕ್ಯುಲೇಷನನ್ನು (1903) ಪ್ರಥಮ ಶ್ರೇಣಿಯಲ್ಲಿ ಪಾಸು
ಮಾಡಿದರೂ ಸರ್ಕಾರಿ ಕಾಲೇಜಿನ F.A. (First Year of Arts)
ಪರೀಕ್ಷೆಯನ್ನು ಎರಡು ಸಲ ಎದುರಿಸಿದರೂ ಪಾಸು
ಮಾಡಲಾಗಲಿಲ್ಲ. ಅಲ್ಲಿ ಅವರು ಗಣಿತದ ಜತೆಗೆ ಸಂಸ್ಕೃತ,
ಇಂಗ್ಲಿಷ್, ಗ್ರೀಸ್ ಮತ್ತು ರೋಮ್ ದೇಶಗಳ ಇತಿಹಾಸ,
ದೇಹವಿಜ್ಞಾನ ಮುಂತಾದ ವಿಷಯಗಳನ್ನೂ ಓದಬೇಕಿತ್ತು. ಆದರೆ
ಅವರ ಏಕೈಕ ಆಸಕ್ತಿ ಗಣಿತವಾಗಿತ್ತು. ಅದರಿಂದಾಗಿ ಅವರಿಗೆ
ಅದುವರೆಗೂ ಬರುತ್ತಿದ್ದ ವಿದ್ಯಾರ್ಥಿವೇತನವೂ ರದ್ದಾಗಿಹೋಯಿತು.
ಮನೆಯ ಜವಾಬ್ದಾರಿ ಹೊತ್ತ 22 ವರ್ಷದ ಈ
ತರುಣನಿಗೆ ಜಾನಕಿ ಅಮ್ಮಾಳ್ ಎಂಬ 9 ವರ್ಷದ
ಕನ್ಯೆಯೊಂದಿಗೆ ಮದುವೆಯೂ ಆಗಿಹೋಗಿತ್ತು.
ಅವರು ಉದ್ಯೋಗ ಹುಡುಕಿಕೊಂಡು ಮದ್ರಾಸಿಗೆ
ಹೋದರು.
ಮದರಾಸು ಪೋರ್ಟು ಟ್ರಸ್ಟಿನಲ್ಲಿ ತಿಂಗಳಿಗೆ 25 ರೂಪಾಯಿ
ಸಂಬಳದಂತೆ ಹಂಗಾಮಿ ಕೆಲಸ ಸಿಕ್ಕಿತು. ಮುಂದೆ
ಅವರು ಆ ಕೆಲಸವನ್ನು ಬಿಟ್ಟು, 1913 ಮೇ 1ರಂದು ಮದರಾಸು
ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ
ಸೇರಿಕೊಂಡರು. ಅದು ಅವರ ಜೀವನದ
ಬಹುದೊಡ್ಡ ತಿರುವಿಗೆ
ಕಾರಣವಾಯಿತು.ಶ್ರೀನಿವಾಸ ರಾಮಾನುಜನ್ರ ಪ್ರತಿಭೆಯ
ಆವಿಷ್ಕಾರಕ್ಕೆ ಪ್ರೊ.ವಿ.ರಾಮಸ್ವಾಮಿ ಅಯ್ಯರ್ರ
ಕೊಡುಗೆ ಬಹಳ ದೊಡ್ಡದು.
ರಾಮಾನುಜನ್ರ ಗಣಿತ ಸಾಮರ್ಥ್ಯ ವಿಕಾಸವಾಗಲು ಬ್ರಿಟಿಷ್ ಗಣಿತ
ವಿದ್ವಾಂಸರು ಮತ್ತು ಕೆಲವು ಅಧಿಕಾರಿಗಳಿಂದ
ಒದಗಿಬಂದ ನೆರವನ್ನಂತೂ ಮರೆಯಲು ಸಾಧ್ಯವಿಲ್ಲ.
ಮದರಾಸು ಇಂಜಿನಿಯರಿಂಗ್ ಕಾಲೇಜಿನ
ಪ್ರೊ-ಸರ್ ಸಿ.ಎಲ್.ಟಿ. ಗ್ರಿಫಿತ್, ಮದ್ರಾಸ್ ಪೋರ್ಟ್
ಟ್ರಸ್ಟಿನ ಅಧ್ಯಕ್ಷ ಸರ್ -ನ್ಸಿಸ್ ಸ್ಪ್ರಿಂಗ್, ಲಂಡನ್ನ
ಗಣಿತ ವಿದ್ವಾಂಸ ಎಂ.ಜಿ.ಎಂ ಹಿಲ್, ಡಾ. ಜಿ.ಟಿ.
ವಾಕರ್, ಇ.ಎಚ್. ನೆವಿಲ್ ಮೊದಲಾದವರು
ತೆಗೆದುಕೊಂಡ ಕಾಳಜಿ ರಾಮಾನುಜನ್ರ
ಜೀವನದ ದಿಕ್ಕನ್ನೇ ಬದಲಿಸಿತು. ಮುಂದೆ
ಅಂತಾರಾಷ್ಟ್ರೀಯ ಖ್ಯಾತ ಗಣಿತಜ್ಞ,
ಕ್ರೇಂಬಿಡ್ಜಿನ ಟ್ರಿನಿಟಿ ಕಾಲೇಜಿನ ಗಣಿತ ಪ್ರಾಧ್ಯಾಪಕ
ಪ್ರೊ. ಜಿ.ಹೆಚ್.ಹಾರ್ಡಿ ಅವರೊಡನೆ
ರಾಮಾನುಜನ್ ಅವರು ಸ್ನೇಹ ಸೇತುವೆ ನಿರ್ಮಿಸಲೂ ಕಾರಣವಾಯಿತು.
ತನ್ಮಧ್ಯೆ ರಾಮಾನುಜನ್ರು ತಾವು ಆವಿಷ್ಕರಿಸಿದ ಗಣಿತ ಪ್ರಮೇಯ,
ಸೂತ್ರ, ಸಿದ್ಧಾಂತಗಳನ್ನು ಜಿ.ಹೆಚ್.ಹಾರ್ಡಿ ಮತ್ತು ಇತರ ಗಣಿತ
ವಿದ್ವಾಂಸರಿಗೆ ಕಳುಹಿಸಿದ್ದರು. ಅವನ್ನು ಓದಿದ
ಹಾರ್ಡಿಯವರಂತೂ 'ಇದು ದೇವಲೋಕದಿಂದ ಇಳಿದುಬಂದ
ಪಾರಿಜಾತ. ಕಾಡಲ್ಲಿ ಬೆಳೆದಿದೆ ಅಷ್ಟೆ! ಅದನ್ನು ಎತ್ತಿತಂದು
ಉದ್ಯಾನದಲ್ಲಿ ನೆಟ್ಟು ಬೆಳೆಸುವ ಜವಾಬ್ದಾರಿ ತನ್ನದು' ಎಂದು
ನಿರ್ಧರಿಸಿ ಅವರನ್ನು ಲಂಡನ್ನಿಗೆ ಕರೆಸಿಕೊಳ್ಳಲು
ತತ್ಕ್ಷಣ ಕಾರ್ಯೋನ್ಮುಖರಾದರು.
1914ರ ಮಾರ್ಚ್ 17ರಂದು ಶ್ರೀನಿವಾಸ ರಾಮಾನುಜನ್
ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ಅವರು ಅಲ್ಲಿ ಐದು
ವರ್ಷಗಳ ಕಾಲ ಇದ್ದರು. ಅಲ್ಲಿ ಇರುವಷ್ಟು ದಿನಗಳೂ ಅವರಿಗೆ ಹಲವು
ವಿಧದ ಸಹಾಯವೆಸಗಿದವರು ಮತ್ತು ಅವರ ವಿದ್ಯಾಭ್ಯಾಸದ
ಹೊಣೆ ಹೊತ್ತವರು ಹಾರ್ಡಿ, ಲಿಟ್ಲ್ವಡ್
ಮತ್ತು ನೇವಿಲ್ ಅವರು.
ಇಂಗ್ಲೆಂಡಿನಲ್ಲಿ ರಾಮಾನುಜನ್ನರು ಗಣಿತ ಸಮಸ್ಯೆಗಳ
ಮೇಲೆ ಬಿರುಸಾಗಿ ಕೆಲಸ ಮಾಡಿದರು. 24 ಸಂಶೋಧನಾ
ಪ್ರಬಂಧಗಳನ್ನೂ, ಸಾವಿರಾರು ಲೇಖನಗಳನ್ನೂ ಬರೆದರು.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು 1916ರಲ್ಲಿ ಅವರಿಗೆ
ಬಿ.ಎ. ಪದವಿ ನೀಡಿ ಗೌರವಿಸಿತು. ಲಂಡನ್ನಿನ ರಾಯಲ್
ಸೊಸೈಟಿ ಅವರನ್ನು ಫೋಲೋ ಆಗಿ ಆಯ್ಕೆ ಮಾಡಿತು.
ಲಂಡನ್ನಿನಲ್ಲಿರುವಾಗಲೇ ರಾಮಾನುಜನ್ ಅವರ ಆರೋಗ್ಯ
ಕ್ಷೀಣಿಸತೊಡಗಿತ್ತು. 1919 ಏಪ್ರಿಲ್
2ರಂದು ಭಾರತಕ್ಕೆ ಹಿಂತಿರುಗಿದರು. ಬರುವಾಗಲೇ
ಅರೆಜೀವದಂತಾಗಿದ್ದರು. 1920 ಏಪ್ರಿಲ್
26ರಂದು 33ನೇ ವಯಸ್ಸಿನಲ್ಲಿ ಶ್ರೀನಿವಾಸ
ರಾಮಾನುಜನ್ ಇಹಲೋಕಯಾತ್ರೆಯನ್ನು ಮುಗಿಸಿಬಿಟ್ಟರು.
(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)