Drop


Saturday, January 16, 2016

ಧಾರವಾಡಕ್ಕೆ ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ ಸಂಶೋಧನಾ ಕೇಂದ್ರ ಮಂಜೂರು:-


Published 16-Jan-2016 20:12 IST
ಬೆಂಗಳೂರು: ಐಐಟಿ ಪಡೆದುಕೊಳ್ಳುವಲ್ಲಿ
ಯಶಸ್ವಿಯಾಗಿದ್ದ ಧಾರವಾಡಕ್ಕೆ ಮತ್ತೊಂದು
ಬಂಪರ್ ಕೊಡುಗೆ ಸಿಕ್ಕಿದೆ. ರಾಷ್ಟ್ರೀಯ
ಗ್ರಾಹಕ ವ್ಯವಹಾರಗಳ ಸಂಶೋಧನಾ
ಕೇಂದ್ರವನ್ನ ಧಾರವಾಡದಲ್ಲಿ ಸ್ಥಾಪಿಸಲು
ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಕೇಂದ್ರ
ಸಚಿವ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದಲ್ಲಿ
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು
ನಾಗರಿಕ ಸರಬರಾಜು ದಕ್ಷಿಣ ಪ್ರಾದೇಶಿಕ
ಸಮಾಲೋಚನೆ ಸಭೆ ನಡೆಯಿತು. ಬಳಿಕ
ಮಾತನಾಡಿದ ಅವರು, ರಾಷ್ಟ್ರೀಯ ಗ್ರಾಹಕ
ವ್ಯವಹಾರಗಳ ಸಂಶೋಧನಾ ಕೇಂದ್ರ
ಧಾರವಾಡದಲ್ಲಿ ತೆರೆಯುವಂತೆ ರಾಜ್ಯ ಸರ್ಕಾರ
ಮನವಿ ಮಾಡಿಕೊಂಡಿತ್ತು. ಅದರಂತೆ
ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ
ಸಂಶೋಧನಾ ಕೇಂದ್ರ ಸ್ಥಾಪನೆಗೆ
ಕೇಂದ್ರ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರ
ಆದಷ್ಟು ಬೇಗ ಡಿಪಿಆರ್ ಸಲ್ಲಿಸಿದರೆ. ಕೇಂದ್ರ
ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ದೇಶದಲ್ಲಿ ವಾರ್ಷಿಕ 226 ಲಕ್ಷ ಟನ್ ಆಹಾರ
ಧಾನ್ಯ ಬೇಕಾಗಿದೆ, ಆದರೆ 40 ಲಕ್ಷ ಟನ್ ಆಹಾರ
ಧಾನ್ಯಗಳ ಕೊರತೆ ಉಂಟಾಗಿದೆ. ಉತ್ಪಾದನೆ
ಕುಂಠಿತವಾಗಿರುವುದರಿಂದ ಆಹಾರ ಧಾನ್ಯದ
ಬೆಲೆ ಗಗನಕ್ಕೇರಿದೆ. ಕಾಳಸಂತೆಯಲ್ಲಿ ಆಹಾರ
ಧಾನ್ಯದ ಮಾರಾಟವೂ ಇದಕ್ಕೆ ಕಾರಣವಾಗಿದೆ.
ಹೀಗಾಗಿ ಕೇಂದ್ರ ಸರ್ಕಾರ ಅಕ್ರಮ ಆಹಾರ
ದಾಸ್ತಾನು ಪತ್ತೆ ಹಚ್ಚುವ ಅಭಿಯಾನ
ಮುಂದುವರೆಸಿದೆ ಎಂದರು.
ಕಾಳಸಂತೆಯಲ್ಲಿ ಆಹಾರ ಧಾನ್ಯ
ಮಾರುವುದನ್ನು ತಡೆಗಟ್ಟಲು ಕೇಂದ್ರದ
ಜೊತೆ ರಾಜ್ಯ ಸರ್ಕಾರ
ಕೈಜೋಡಿಸಬೇಕು. ಎಲ್ಲ ರಾಜ್ಯಗಳಲ್ಲೂ
ಪ್ರತ್ಯೇಕ ಗ್ರಾಹಕ ವ್ಯಾಜ್ಯಗಳ ಇಲಾಖೆ
ಸ್ಥಾಪನೆ ಬಗ್ಗೆ ಚಿಂತನೆ ನಡೆದಿದೆ. ಮನೆಯಿಂದಲೇ
ಗ್ರಾಹಕರು ದೂರು ನೀಡಲು ಅವಕಾಶ
ಕಲ್ಪಿಸುವ ಬಗ್ಗೆಯೂ ಸರ್ಕಾರ ಕ್ರಮ
ಕೈಗೊಳ್ಳಲು ಮುಂದಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ದಿನೇಶ್
ಗುಂಡೂರಾವ್, ಧಾರವಾಡದಲ್ಲಿ
ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ
ಕುರಿತು ಸಂಶೋಧನಾ ಕೇಂದ್ರ ತೆರೆಯಲು
ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.
ಅದರಂತೆ ಈಗ ಮಂಜೂರಾತಿ ಸಿಕ್ಕಿದೆ. ಹುಬ್ಬಳ್ಳಿ -
ಧಾರವಾಡದಲ್ಲಿ ಎಲ್ಲ ರೀತಿಯ ಸೌಕರ್ಯವಿದ್ದು,
ಅಗತ್ಯ ಜಮೀನು ಹಾಗೂ ಸಹಕಾರವನ್ನು
ರಾಜ್ಯ ಸರ್ಕಾರ ನೀಡಲಿದೆ ಎಂದು ಕೇಂದ್ರ
ಸರ್ಕಾರಕ್ಕೆ ಭರವಸೆ ನೀಡಿದರು.