ರಾಷ್ಟ್ರೀಯ ಶಿಕ್ಷಣ ನೀತಿ 2016:-


ವಿಸ್ಮಯ
ನೂತನ ಮನು ಧರ್ಮದ ನೂತನ ಶಿಕ್ಷಣ
ನೀತಿಯಲ್ಲಿ ದೇಶದ ಜನಸಂಖ್ಯೆಯ
ಶೇ.80ರಷ್ಟು ಜನರಿಗೆ ಶಿಕ್ಷಣದ ಹಕ್ಕನ್ನು
ನಿರಾಕರಿಸುವ ಮೂಲಕ ಹೊಸ ವರ್ಗದ
ಕಾರ್ಮಿಕರನ್ನು ರೂಪಿಸುವ ಸ್ಥಿತಿಯಿದೆ.
ಜ್ಞಾನಾಧಾರಿತ ಶಿಕ್ಷಣವನ್ನು ಉಳಿದ
ಶೇ.20ರಷ್ಟು ಜನರಿಗೆ
ಮೀಸಲಾಗಿಡುವ ವ್ಯವಸ್ಥೆಯಿದು.
ಸಮಾಜವನ್ನು ಬೆಳಗಿಸುವಲ್ಲಿ ಶಿಕ್ಷಣ
ಬಹುಮುಖ್ಯ ಪಾತ್ರ ವಹಿಸುತ್ತದೆ. ಶಿಕ್ಷಣ
ರಾಜ್ಯಗಳ ಕೈಯಲ್ಲಿರುವ ಒಂದು ಪ್ರಧಾನ
ಅಸ್ತ್ರವಾಗಿದ್ದು ಜ್ಞಾನವನ್ನು ಸಾಮಾನ್ಯ
ಜನತೆಗೆ ತಲುಪಿಸುವ ಸಾಧನವಾಗಿದೆ. ಮೋದಿ
ಸರಕಾರದ ನೂತನ ಶಿಕ್ಷಣ ನೀತಿ- 2016 (ಎನ್ಇಪಿ)
ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ.
ಎನ್ಇಪಿಯ ಇತ್ತೀಚಿನ ಕರಡು ಪ್ರತಿಯು ದೇಶದ
ಕಾರ್ಮಿಕರಲ್ಲಿ 'ಕೌಶಲ್ಯ ಅಭಿವೃದ್ಧಿ'ಯತ್ತ ಹೆಚ್ಚಿನ
ಒತ್ತು ನೀಡಿದೆ. ಜಾಗತಿಕ ಮಾರುಕಟ್ಟೆಗೆ
ನಿಗ್ರಹಿತ ಕುಶಲ ಕಾರ್ಮಿಕರನ್ನು ಉತ್ಪಾದಿಸುವ
ಬದ್ಧತೆಯ ಜೊತೆಗೆ ಶೇ.80ರಷ್ಟು
ಸಾಮಾನ್ಯ ದುಡಿಯುವ ವರ್ಗದ ಮಂದಿಗೆ
ಶಿಕ್ಷಣದ ಅವಕಾಶ ನಿರಾಕರಿಸಿ, ಜಾಗತಿಕ ಪ್ರಜೆಗಳು
ಎಂದು ಉಲ್ಲೇಖಿಸಲ್ಪಟ್ಟ,
ಬ್ರಾಹ್ಮಣೀಕೃತ ವೌಲ್ಯದ ಆಶಯಗಳಿಗೆ ಪುಷ್ಟಿ
ನೀಡುವ ಶಿಕ್ಷಣ ನೀತಿಯಿದು. ಕಳೆದ ವರ್ಷ
ಮಾನವ ಸಂಪನ್ಮೂಲ ಸಚಿವಾಲಯವು
(ಎಂಎಚ್ಆರ್ಡಿ) ನೂತನ ಶಿಕ್ಷಣ ನೀತಿಯ ಕರಡು
ಪ್ರತಿ ರಚಿಸಲು ಟಿ.ಎಸ್.ಆರ್. ಸುಬ್ರಮಣಿಯನ್
ನೇತೃತ್ವದಲ್ಲಿ ಐವರು
ಸದಸ್ಯರನ್ನೊಳಗೊಂಡ ಸಮಿತಿಯನ್ನು
ರಚಿಸಿತು. ಇವರಲ್ಲಿ ನಾಲ್ವರು ಅಧಿಕಾರ ವರ್ಗಕ್ಕೆ
ಸೇರಿದವರಾದರೆ, ತಮ್ಮ ಅಧ್ಯಕ್ಷಾವಧಿಯಲ್ಲಿ
ಎನ್ಸಿಇಆರ್ಟಿಯನ್ನು ಆರೆಸ್ಸೆಸ್ನ
ಕಾರ್ಯಕ್ಷೇತ್ರವನ್ನಾಗಿಸಿದ್ದ
ಜೆ.ಎಸ್.ರಾಜ್ಪುತ್ ಓರ್ವರು ಮಾತ್ರ
ಶಿಕ್ಷಣತಜ್ಞರಾಗಿದ್ದರು.
ಎಪ್ರಿಲ್ 30ರಂದು ಸಮಿತಿಯು ತನ್ನ ವರದಿ
ಸಲ್ಲಿಸಿದ್ದು ಇದರಂತೆ ಎಂಎಚ್ಆರ್ಡಿ 'ನೂತನ
ಶಿಕ್ಷಣ ನೀತಿ 2016ಕ್ಕೆ ಕೆಲವು ಸೇರ್ಪಡೆಗಳು'
ಎಂಬ ತಲೆಬರಹದಡಿ 43 ಪುಟಗಳ ದಾಖಲೆಯನ್ನು
ಬಿಡುಗಡೆ ಮಾಡಿತು.
ಶಾಲಾ ಹಂತದಲ್ಲಿ, ಅದರಲ್ಲೂ ವಿಶೇಷವಾಗಿ
ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ
ಅತ್ಯಂತ ಕಳಪೆಯಾಗಿದೆ ಎಂದು ಸಮಿತಿಯ
ವರದಿಯಲ್ಲಿ ತಿಳಿಸಲಾಗಿದೆ. ಈ ಸಮಸ್ಯೆಗೆ ಸಮಿತಿಯು
ಸೂಚಿಸಿರುವ ಪರಿಹಾರ ದಿಗಿಲು ಹುಟ್ಟಿಸುತ್ತದೆ.
ಕೊಳೆಗೇರಿ ಮತ್ತು ವಲಸಿಗರ ಮಕ್ಕಳಿಗೆ
ಪರ್ಯಾಯ ಶಾಲೆ (ಸಂಜೆ ಶಾಲೆ)
ತೆರೆಯಬೇಕೆಂಬುದು ಸಮಿತಿಯ ಶಿಫಾರಸು.
5ನೆ ತರಗತಿವರೆಗೆ ಫೇಲು ಮಾಡುವಂತಿಲ್ಲ.
ಶಾಲೆ ಬಿಟ್ಟ ಮಕ್ಕಳಿಗೆ ಮುಕ್ತ ಶಾಲಾ ಶಿಕ್ಷಣ
ವ್ಯವಸ್ಥೆ, ಎ ಮತ್ತು ಬಿ ಎಂಬ ಎರಡು
ಹಂತಗಳಲ್ಲಿ 10ನೆ ತರಗತಿ ಪರೀಕ್ಷೆ, ಉನ್ನತ
ಶಿಕ್ಷಣಕ್ಕೆ ಕೇವಲ 10 ಲಕ್ಷ ಸ್ಕಾಲರ್ಶಿಪ್..
ಇತ್ಯಾದಿ ಶಿಫಾರಸು ಮಾಡಿದೆ.
ಆರ್ಟಿಎ (ಶಿಕ್ಷಣದ ಹಕ್ಕು) ಕಾಯ್ದೆ 2009ರ
ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ 14ರ
ವಯೋಮಾನದವರೆಗಿನ ಮಕ್ಕಳ ಹಕ್ಕಾಗಿದೆ. ಆದರೆ
ನೂತನ ಶಿಕ್ಷಣ ನೀತಿ ಕೊಳೆಗೇರಿ ಮಕ್ಕಳಿಗೆ ಈ
ಹಕ್ಕನ್ನು ನಿರಾಕರಿಸುತ್ತದೆ. ಶೈಕ್ಷಣಿಕ ಸ್ಥಿತಿಯ
ವಾರ್ಷಿಕ ವರದಿ ಪ್ರಕಾರ 5ನೆ ತರಗತಿವರೆಗಿನ
ಸುಮಾರು ಶೇ.50ರಷ್ಟು ಮತ್ತು 8ನೆ
ತರಗತಿಯ ಶೇ.25ರಷ್ಟು ಮಕ್ಕಳು 2ನೆ ತರಗತಿ
ಹಂತದ ಪಠ್ಯಪುಸ್ತಕ ಅರ್ಥ ಮಾಡಿಕೊಳ್ಳಲು
ಶಕ್ತರಾಗಿಲ್ಲ. ಈ ಮಕ್ಕಳ ಗಣಿತದ ಜ್ಞಾನವಂತೂ
ಅತ್ಯಂತ ಕೆಳಮಟ್ಟದ್ದು. 5ನೆ ತರಗತಿ ಬಳಿಕ
ಮಕ್ಕಳನ್ನು ಫೇಲು ಮಾಡಬಹುದು ಎಂಬ
ನಿಯಮ ಜಾರಿಯಾದರೆ ಶಾಲೆಯಿಂದ
ಹೊರಗುಳಿಯುವ ಮಕ್ಕಳ ಸಂಖ್ಯೆ
ಹೆಚ್ಚಬಹುದು. 10ನೆ ತರಗತಿ ಬಳಿಕ ಉನ್ನತ ಶಿಕ್ಷಣ
ಫೆಲೋಶಿಪ್ ಪಡೆಯಬೇಕಿದ್ದರೆ ರಾಷ್ಟ್ರೀಯ
ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ
ತೇರ್ಗಡೆಯಾಗಬೇಕು ಎಂದು ನೂತನ
ನೀತಿಯಲ್ಲಿ ಶಿಫಾರಸು ಮಾಡಲಾಗಿದೆ.
ಪ್ರಸ್ತುತ ದೇಶದಲ್ಲಿ 33.3 ಮಿಲಿಯನ್
ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ
ದಾಖಲಾಗುತ್ತಾರೆ. ಆದರೆ ನೂತನ
ನೀತಿಯಲ್ಲಿ ಕೇವಲ 1 ಮಿಲಿಯನ್ ಫೆಲೋಶಿಪ್ಗೆ
ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಈ ಪರೀಕ್ಷೆಗಳು
ಸಿಬಿಎಸ್ಇ ಮಾದರಿಯಲ್ಲಿ ನಡೆಯುತ್ತಿದ್ದು ಇದು
ನಗರಪ್ರದೇಶದ ವಿದ್ಯಾರ್ಥಿಗಳಿಗೆ
ಅನುಕೂಲಕರವಾಗಿದೆ. ಜಿಲ್ಲಾ ಶೈಕ್ಷಣಿಕ
ಮಾಹಿತಿ ವ್ಯವಸ್ಥೆ-2014ರ ಅಂಕಿಅಂಶದ ಪ್ರಕಾರ
ಶಾಲೆ ಬಿಡುವ ಮಕ್ಕಳ ವಿವರ: 1ರಿಂದ 5ನೆ ತರಗತಿ,
1ರಿಂದ 7 ಮತ್ತು 1ರಿಂದ 10ರವರೆಗೆ -
ಅನುಕ್ರಮವಾಗಿ ಶೇ.20, ಶೇ.36.3 ಮತ್ತು
ಶೇ.47.4. ಆಗಿರುತ್ತದೆ. ಈ ಅನುಪಾತವನ್ನು
ಕಡಿಮೆ ಮಾಡುವ ಬದಲು ದ್ವಿಗುಣಗೊಳಿಸುವ
ಅಪಾಯವನ್ನು ನೂತನ ನೀತಿ ಹೊಂದಿದೆ.
ಇದೇ ರೀತಿ ಮೋದಿ ಸರಕಾರವು ಬಾಲ
ಕಾರ್ಮಿಕ ನಿರ್ಮೂಲನೆ ತಿದ್ದುಪಡಿ ಮಸೂದೆ
2016ನ್ನು ಜಾರಿಗೆ ತಂದಿದೆ. ಇದು ಮಕ್ಕಳು
ಶಾಲಾ ಅವಧಿಯ ಬಳಿಕ ಅಥವಾ ರಜಾದಿನಗಳಲ್ಲಿ
ಹೊಲದಲ್ಲಿ ತಮ್ಮ ಕುಟುಂಬದವರಿಗೆ ಸಹಾಯ
ಮಾಡಲು, ಗೃಹ ಆಧರಿತ ಕಾರ್ಯ ನಿರ್ವಹಿಸಲು
ಅಥವಾ ಕಾಡಿನಲ್ಲಿ ಕೆಲಸ ಮಾಡಲು ಅನುವು
ಮಾಡಿಕೊಡುತ್ತದೆ.
ಮನೋರಂಜನಾತ್ಮಕ ಉದ್ದಿಮೆಗಳಲ್ಲಿ
ಮಕ್ಕಳು ದುಡಿಯಲು ಅವಕಾಶವಿದೆ. ಇಲ್ಲಿ ಗೃಹ
ಆಧರಿತ ಕೆಲಸವೆಂದರೆ ಅದು ಜಾತಿ, ವರ್ಣ ಆಧರಿತ
ಕೆಲಸವೆಂದು ಪ್ರತ್ಯೇಕವಾಗಿ
ಹೇಳಬೇಕಿಲ್ಲ. ಪುರಾತನ ಮನುಧರ್ಮವು
ಪಂಚಮರು ಮತ್ತು ಶೂದ್ರರಿಗೆ ಶಿಕ್ಷಣದ
ಹಕ್ಕನ್ನು ನಿರಾಕರಿಸಿ, ಬ್ರಾಹ್ಮಣರಿಗೆ ಮಾತ್ರ
ಶಿಕ್ಷಣದ ಹಕ್ಕು ನೀಡಲಾಗಿತ್ತು. ಇದರಿಂದ
ಊಳಿಗಮಾನ್ಯ ವ್ಯವಸ್ಥೆಯಲ್ಲಿ ಬ್ರಾಹ್ಮಣರು
ಆಳುವ ವರ್ಗಕ್ಕೆ ಸೇರಿಹೋಗಿದ್ದರು. ಇದೇ
ರೀತಿ ನೂತನ ಮನು ಧರ್ಮದ ನೂತನ ಶಿಕ್ಷಣ
ನೀತಿಯಲ್ಲಿ ದೇಶದ ಜನಸಂಖ್ಯೆಯ
ಶೇ.80ರಷ್ಟು ಜನರಿಗೆ ಶಿಕ್ಷಣದ ಹಕ್ಕನ್ನು
ನಿರಾಕರಿಸುವ ಮೂಲಕ ಹೊಸ ವರ್ಗದ
ಕಾರ್ಮಿಕರನ್ನು ರೂಪಿಸುವ ಸ್ಥಿತಿಯಿದೆ.
ಜ್ಞಾನಾಧಾರಿತ ಶಿಕ್ಷಣವನ್ನು ಉಳಿದ
ಶೇ.20ರಷ್ಟು ಜನರಿಗೆ ಮೀಸಲಾಗಿಡುವ
ವ್ಯವಸ್ಥೆಯಿದು. ಡಬ್ಲುಟಿಒ -ಜಿಎಟಿಎಸ್
ಒಪ್ಪಂದದ ಅನುಸಾರ ಉನ್ನತ ಶಿಕ್ಷಣ
ವ್ಯವಸ್ಥೆಯನ್ನು ನೂತನ ನೀತಿ ಶಿಫಾರಸು
ಮಾಡಿದೆ. ಆಡಳಿತ ಮಂಡಳಿಯಲ್ಲಿ ಸಿಇಒ, ಶಿಕ್ಷಣ
ನ್ಯಾಯಮಂಡಳಿ, ಶಾಲಾ ಕ್ಯಾಂಪಸ್ಗಳಲ್ಲಿ
ರಾಜಕೀಯ ನಿಷೇಧ, ವಿದೇಶಿ
ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ
ಸೇರ್ಪಡೆಗೊಳಿಸುವುದು
ಇತ್ಯಾದಿಗಳನ್ನು ನೂತನ ಶಿಕ್ಷಣ ನೀತಿ
ಹೊಂದಿದೆ.
ಮೆಕಾಲೆ ಶಿಕ್ಷಣ ವ್ಯವಸ್ಥೆಯಡಿ
ಭಾರತೀಯರನ್ನು ಬ್ರಿಟಿಷ್ ಸಾಮ್ರಾಜ್ಯದ
ಸೇವಕರನ್ನಾಗಿಸುವ ಶಿಕ್ಷಣ
ನೀಡಲಾಗುತ್ತಿತ್ತು. ಇದೀಗ ನವ ಮೆಕಾಲೆ
ಶಿಕ್ಷಣ ನೀತಿಯು ಮಿಲಿಯಗಟ್ಟಲೆ ಕುಶಲ
ಕಾರ್ಮಿಕರನ್ನು ಜಾಗತಿಕ ಮಾರುಕಟ್ಟೆಗೆ
ಒದಗಿಸುವ ಮತ್ತು ವಿದೇಶದ ಶಿಕ್ಷಣ
ಸಂಸ್ಥೆಗಳನ್ನು ರತ್ನಗಂಬಳಿ ಹಾಸಿ ಸ್ವಾಗತಿಸುವ
ಮೂಲಕ ಭಾರತೀಯ ಶೈಕ್ಷಣಿಕ
ವ್ಯವಸ್ಥೆಯನ್ನು ಲೂಟಿ ಮಾಡಲು
ಅನುಕೂಲ ಮಾಡಿಕೊಡುತ್ತಿದೆ.
ಕೊನೆಯದಾಗಿ, ಶಿಕ್ಷಣ ನೀತಿಯು
ಸಂಸ್ಕೃತವನ್ನು ಒಂದು ಕಡ್ಡಾಯ
ವಿಷಯವನ್ನಾಗಿಸುವ ಶಿಫಾರಸು ಮಾಡಿದೆ.
ಈಗಾಗಲೇ ಎಂಎಚ್ಆರ್ಡಿ ಈ ನಿಟ್ಟಿನಲ್ಲಿ
ಕೆಲವೊಂದು ಉಪಕ್ರಮಗಳನ್ನು
ಕೈಗೊಂಡಿದೆ. ಕೇಂದ್ರ ಸರಕಾರದ ಆಡಳಿತದ
ಶಾಲೆಗಳಲ್ಲಿ ಸಂಸ್ಕೃತವನ್ನು ಒಂದು
ಭಾಷೆಯಾಗಿ ಸೇರಿಸಲಾಗಿದೆ. ಐಐಟಿಗಳಲ್ಲಿ
ಸಂಸ್ಕೃತ ವಿಭಾಗ ಆರಂಭಿಸಲಾಗಿದೆ. ಇದೆಲ್ಲದರ
ಹಿಂದೆ ಒಂದು ಕಾರ್ಯಸೂಚಿ ಸದ್ದಿಲ್ಲದೆ
ನುಸುಳಿದೆ. ಅದುವೇ ಹಿಂದು- ಹಿಂದಿ-
ಹಿಂದೂರಾಷ್ಟ್ರ. ಈ ನಿಟ್ಟಿನಲ್ಲಿ ನೂತನ ಶಿಕ್ಷಣ
ನೀತಿಯನ್ನು ಯಾವುದೇ ಕಾರಣಕ್ಕೂ
ಜಾರಿಯಾಗಲು ಬಿಡಬಾರದು.
ಯಾವುದೇ ಬೆಲೆ ತೆತ್ತಾದರೂ ಅದನ್ನು
ಸುಟ್ಟು ಹಾಕಬೇಕಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023