*ಅಮೇರಿಕಾದ ನೂತನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆ, ಸೋಲುಂಡ ಹಿಲರಿ:~*

*ಶತಕೋಟ್ಯಾಧಿಪತಿಗೆ ಒಲಿದ ಶ್ವೇತಭವನ*

*ಹಿಲರಿ ಕ್ಲಿಂಟನ್ ಕನಸು ನುಚ್ಚುನೂರು*

*8 ವರ್ಷಗಳ ಡೆಮಾಕ್ರೆಟಿಕ್ ಆಡಳಿತ ಅಂತ್ಯ*

*ಮ್ಯಾಜಿಕ್ ನಂಬರ್ ಸೃಷ್ಟಿಸಿದ ಟ್ರಂಪ್ ಕಾರ್ಡ್
ವಾಷಿಂಗ್ಟನ್,ನ.9-ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರ ಹಣಾಹಣಿ ನಡುವೆ ರಿಪಬ್ಲಿಕನ್ ಪಕ್ಷದ ವಿವಾದಾತ್ಮಕ ಅಭ್ಯರ್ಥಿ ಹಾಗೂ ಶತಕೋಟ್ಯಾಧಿಪತಿ ಉದ್ಯಮಿ ಡೋನಾಲ್ಡ್ ಟ್ರಂಪ್ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿದ್ದು, 45ನೇ ಅಮೆರಿಕ ಅಧ್ಯಕ್ಷರಾಗಿ ಹೊರಹೊಮ್ಮಿ ಶ್ವೇತಭವನದ ಗದ್ದುಗೆ ಏರಲಿದ್ದಾರೆ.
ಗೆಲುವಿನ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿದ್ದ ಡೆಮೊಕ್ರಟಿಕ್ ಪಕ್ಷದ ಪ್ರತಿ ಸ್ಪರ್ಧಿ ಹಿಲರಿ ಕ್ಲಿಂಟನ್‍ಗೆ ಈ ಅಚ್ಚರಿ ಫಲಿತಾಂಶ ಭಾರೀ ಮುಖಭಂಗ ಉಂಟು ಮಾಡಿದೆ. 240 ವರ್ಷಗಳ ಅಮೆರಿಕ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ಇದೇ ಮೊದಲ ಬಾರಿ ಮಹಿಳೆಯರಿಗೆ ಒಲಿಯಲಿದೆ ಎಂಬ ರಾಜಕೀಯ ಪರಿಣಿತರ ಮತ್ತು ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಬುಡಮೇಲಾಗಿದೆ.

ಇದರೊಂದಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೇತೃತ್ವದ ಡೆಮೊಕ್ರಟಿಕ್ ಪಕ್ಷದ ಎಂಟು ವರ್ಷಗಳ ಆಡಳಿತ ಅಂತ್ಯಗೊಂಡಿದೆ.
ಇದೇ ವೇಳೆ ಭಾರತೀಯ ಮೂಲದ ಅಮೆರಿಕ್ಕನರಾದ ಕಮಲ ಹ್ಯಾರೀಸ್ ಮತ್ತು ರಾಜಕೃಷ್ಣಮೂರ್ತಿ ಸೆನೆಟ್‍ಗೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ವಿಶ್ವದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಮತ ಎಣಿಕೆ ಆರಂಭದಿಂದಲೂ ಟ್ರಂಪ್ ಮತ್ತು ಹಿಲರಿ ನಡುವೆ ತೀವ್ರ ಪೈಪೋ ಟಿ ನಡೆದು ಅಂತಿಮ ಹಂತದವರೆಗೆ ಮುಂದುವರೆದಿತ್ತು. ಕ್ಷಣ ಕ್ಷಣದ ಫಲಿತಾಂಶದ ನಿರೀಕ್ಷೆಯಲ್ಲಿದ್ದ ವಿಶ್ವವನ್ನು ಕಾತುರದಿಂದ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಒಟ್ಟು 538 ಸ್ಥಾನಗಳಲ್ಲಿ 270ರಲ್ಲಿ ಜಯ ಸಾಧಿಸಿದರೆ ಅಭ್ಯರ್ಥಿ ಅಮೆರಿಕ ಅಧ್ಯಕ್ಷನಾಗುತ್ತಾನೆ ಎಂಬುದು ದೇಶದ ಸಾಂವಿಧಾನಿಕ ನಿಯಮವಾಗಿದ್ದು, ಈ ಮ್ಯಾಜಿಕ್ ನಂಬರ್‍ನ್ನು ಗಳಿಸುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ.
ಫ್ಲಾರಿಡ, ಜಾರ್ಜಿಯಾ, ಓಹಿಒ, ನಾರ್ಥ್ ಕರೋಲಿನಾ, ನಾರ್ಥ್ ಡೆಕೋಟ, ಸೌತ್ ಡೆಕೋಟ, ನೆಬ್ರಸ್ಕ , ಕಾನ್ಸಾಸ್ , ಒಕ್ಲಹಾಮ, ಟೆಕ್ಸಾಸ್, ಇಂಡಿಯಾನ, ಕೆಂಟಕಿ, ಮಿಸಿಸಿಪಿ, ಮಿಸೌರಿ, ಲೂಸಿಯಾನ ಮೊದಲಾದ ರಾಜ್ಯಗಳಲ್ಲಿ ಟ್ರಂಪ್ ಜಯ ಸಾಧಿಸಿದ್ದಾರೆ. ಕರೋಲಿನಾ, ಹವಾಯಿ, ಇಲಿನೋಯಿಸ್, ನ್ಯೂಯಾರ್ಕ್, ನ್ಯೂಜರ್ಸಿ, ಮೇರಿಲ್ಯಾಂಡ್, ಕೊಲಂಬಿಯ, ಕನೆಕ್ಟಿಕಟ್, ಕೊಲೊರಾಡೊ, ನ್ಯೂ ಮೆಕ್ಸಿಕೊ ವರ್ಜಿನಿಯ, ಒರೆಗಾನ್, ವಾಷಿಂಗ್ಟನ್, ರೋಡ್ಸ್ ಐಲಾಂಡ್ ಮೊದಲಾದ ರಾಜ್ಯಗಳಲ್ಲಿ ಹಿಲರಿ ವಿಜಯಿಯಾಗಿದ್ದಾರೆ.
ಭಾರತೀಯರ ಪ್ರಾಬಲ್ಯ:
ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಕಮಲ ಹ್ಯಾರೀಸ್ ಸೆನೆಟ್‍ಗೆ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಸ್ಥಾನಕ್ಕೆ ಚುನಾಯಿತರಾದ ಭಾರತೀಯ ಮೂಲದ ಪ್ರಥಮ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲ ಪಾತ್ರರಾಗಿದ್ದಾರೆ. ಭಾರತೀಯ ಮೂಲದ ಮತ್ತೊಬ್ಬ ಅಮೆರಿಕನ್ ಆದ ರಾಜಕೃಷ್ಣಮೂರ್ತಿ ಇಲಿನೋಯಿಸ್‍ನಿಂದ ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದಾರೆ. ರಿಪಬ್ಲಿಕನ್ ಪಕ್ಷದ ಮಾಜಿ ಮೇಯರ್ ಪೀಟರ್ ಡಿ ಸಿಯ್ಯಾನ್ನಿ ಅವರನ್ನು ಮಣಿಸಿ ವಿಜೇತರಾಗಿ ಹೊಸ ಇತಿಹಾಸ ಸೃಷ್ಟಿಸಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023