ವರ್ಷದೊಳಗೆ ನಿಮ್ಮ ಆಸ್ತಿ ಸಕ್ರಮಗೊಳಿಸಿಕೊಳ್ಳಿ.:

ಬೆಂಗಳೂರು: ರಾಜ್ಯದ ನಾಗರಿಕರ ಬಹುವರ್ಷಗಳ ಕನಸಿನ `ಅಕ್ರಮ-ಸಕ್ರಮ'ಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಸೆಟ್‍ಬ್ಯಾಕ್ ಉಲ್ಲಂಘನೆ, ಭೂಮಿ ಬಳಕೆ ಬದಲು, ಪರಿವರ್ತನೆಯಾಗದ ಭೂಮಿಯ ಸಕ್ರಮಕ್ಕೆ ಮಾ.23ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ.
ಅಂದಿನಿಂದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಿದರೆ `ಸಕ್ರಮ ಭಾಗ್ಯ'. ಇಲ್ಲದಿದ್ದರೆ `ಎತ್ತಂಗಡಿ ಭಾಗ್ಯ'. ಬಿಬಿಎಂಪಿ ಸೇರಿ ರಾಜ್ಯದ ಎಲ್ಲ ಪಾಲಿಕೆಗಳು, ನಗರಸಭೆ, ಪುರಸಭೆಗಳಲ್ಲಿ ನಾಗರಿಕರು ತಮ್ಮ ಆಸ್ತಿಗಳಲ್ಲಿನ ನಿಯಮ ಉಲ್ಲಂಘನೆಯನ್ನು ಸಕ್ರಮ ಮಾಡಿಕೊಳ್ಳುವ ಅವಕಾಶ ಒದಗಿಬಂದಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಮಾ.23ರಿಂದ 2016ರ ಮಾ. 22ರವರೆಗೆ ಅರ್ಜಿ ಸಲ್ಲಿಸ ಬಹುದು. 2013ರ ಅ.19ಕ್ಕಿಂತ ಮೊದಲಿನ ಅನಧಿಕೃತ ಅಭಿವೃದ್ಧಿ ಅಥವಾ ನಿರ್ಮಾಣಗಳನ್ನು ಮಾತ್ರ ಸಕ್ರಮಗೊಳಿಸಿಕೊಳ್ಳಬಹುದು. ನಾಗರಿಕರು ವಸತಿ ನಿರ್ಮಾಣದಲ್ಲಿ ಶೇ.50ರಷ್ಟು ಸೆಟ್‍ಬ್ಯಾಕ್ ಉಲ್ಲಂಘಿಸಿದರೆ ಅದನ್ನು ಸಕ್ರಮಗೊಳಿಸಿಕೊಳ್ಳಬಹುದು. ಸೆಟ್‍ಬ್ಯಾಕ್ ಉಲ್ಲಂಘನೆಯಲ್ಲಿ ಶೇ.25ಕ್ಕಿಂತ ಕಡಿಮೆ ಹಾಗೂ ಶೇ.50 ರವರೆಗಿನ ಉಲ್ಲಂಘನೆಗೆ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ. ವಸತಿಯೇತರ ಕಟ್ಟಡಗಳಲ್ಲಿ ಶೇ.25ರವರೆಗಿನ ಸೆಟ್‍ಬ್ಯಾಕ್ ಮಾತ್ರ ಸಕ್ರಮಗೊಳ್ಳಲಿದೆ. ಇದಕ್ಕಿಂತ ಹೆಚ್ಚಿನ ಉಲ್ಲಂಘನೆ ಸಕ್ರಮವಾಗುವುದಿಲ್ಲ.
ಭೂ ಬಳಕೆ ಬದಲಾಯಿಸಿಕೊಂಡ ಹಾಗೂ ಭೂಪರಿವರ್ತನೆಯಾಗದ ಕೃಷಿ ಅಥವಾ ಕಂದಾಯ ಭೂಮಿಯ ನಿವೇಶನಗಳ ಪರಿವರ್ತನೆ ಸೇರಿದಂತೆ ಅದನ್ನು ಸಕ್ರಮಗೊಳಿಸುವ ಎಲ್ಲ ಪ್ರಕ್ರಿಯೆಗಳೂ ಒಂದೇ ಅರ್ಜಿ ಮೂಲಕ ಆಗಲಿದೆ. ಆಯಾ ಸ್ಥಳೀಯ ಸಂಸ್ಥೆಗಳ ಅರ್ಜಿ ವಿತರಿಸುವುದಲ್ಲದೆ, ವೆಬ್ ಸೈಟ್ ನಲ್ಲೂ ಅರ್ಜಿಯನ್ನು ಉಚಿತವಾಗಿ ಮಾ.23ರಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಎಲ್ಲ ಸ್ಥಳೀಯ ಸಂಸ್ಥೆಗಳು ಸದ್ಯದಲ್ಲಿಯೇ ಅರ್ಜಿ ಪಡೆಯುವ ಕೇಂದ್ರಗಳನ್ನು ಪ್ರಕಟಿಸುತ್ತವೆ. ಅಲ್ಲದೆ, ಇದಕ್ಕೆ ಸಂಬಂ„ಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಿದೆ ಎಂದು ನಗರಾಭಿವೃದ್ಧಿ ಖಾತೆ ಸಚಿವ ವಿನಯ್ ಕುಮಾರ್ ಸೊರಕೆ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು. ಯಾವುದೇ ರೀತಿಯ ಉಲ್ಲಂಘನೆಗೆ ನಾಗರಿಕರು ಸ್ವಯಂ ಅರ್ಜಿ ಸಲ್ಲಿಸಬೇಕು. `ಮೊದಲು ಬಂದ ಅರ್ಜಿ'ಯ ಆದ್ಯತೆ ಮೇಲೆ ಪ್ರಕರಣವನ್ನು ಇತ್ಯರ್ಥಪಡಿಸಲಾಗುತ್ತದೆ. ಅರ್ಜಿ ಸಲ್ಲಿಸುವಾಗಲೇ ಪರಿಶೀಲನೆ ಶುಲ್ಕ ಸೇರಿದಂತೆ ಉಲ್ಲಂಘನೆಗೆ ನಮೂದಿಸಿರುವ ಎಲ್ಲ ರೀತಿಯ ಶುಲ್ಕವನ್ನೂ ಪಾವತಿಸಬೇಕು. ಒಂದು ವೇಳೆ ಅರ್ಜಿ ತಿರಸ್ಕೃತವಾದರೆ 60 ದಿನದಲ್ಲಿ ಆ ಮೊತ್ತ ಹಿಂದಿರುಗಿಸಲಾಗುತ್ತದೆ. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.
ಅಕ್ರಮ-ಸಕ್ರಮ ಯಾರಿಗೆ ಅನ್ವಯ?
* ಬಿಬಿಎಂಪಿ ಸೇರಿ ರಾಜ್ಯದ ಎಲ್ಲ ಪಾಲಿಕೆಗಳು, ನಗರಸಭೆ, ಪುರಸಭೆ ವ್ಯಾಪ್ತಿಯ ನಾಗರಿಕರ ಸ್ವತ್ತುಗಳು ಹಾಗೂ ಅದರಲ್ಲಿನ ಕಟ್ಟಡಗಳಿಗೆ ಯೋಜನೆ ಅನ್ವಯ.
* ಈ ಪ್ರದೇಶಗಳ ವ್ಯಾಪ್ತಿಯ ನಾಗರಿಕರು ತಮ್ಮ ಆಸ್ತಿಯಲ್ಲಿ ಕಟ್ಟಡ ನಿರ್ಮಿಸುವಾಗ ನಕ್ಷೆ ಉಲ್ಲಂಘಿಸಿದರೆ ಅದನ್ನು ಸಕ್ರಮ ಮಾಡಿಕೊಳ್ಳಬಹುದು.
* ಇದರಲ್ಲಿ ಸೆಟ್‍ಬ್ಯಾಕ್ ಎಂಬುದು ಪ್ರಮುಖ ಭಾಗ. ನಂತರ ಕಟ್ಟಡದ ಎತ್ತರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿದ್ದರೆ ಅದನ್ನೂ ಇಂತಿಷ್ಟು ಪ್ರಮಾಣದಲ್ಲಿ ಸಕ್ರಮಗೊಳಿಸಿಕೊಳ್ಳಬಹುದು.
* ಇನ್ನು, ವಸತಿ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಭೂ ಬಳಕೆಯನ್ನು ಬದಲಾಯಿಸಿಕೊಂಡವರು ಅದನ್ನು ಸಕ್ರಮಗೊಳಿಸಿಕೊಳ್ಳಬಹುದು.
* ಇದಲ್ಲದೆ, `ರೆವೆನ್ಯೂ ಸೈಟ್' ಎಂದೇ ಕರೆಯಲಾಗುವ ಭೂಪರಿವರ್ತನೆಯಾಗದ, ಆಗಿದ್ದರೂ ಅಭಿವೃದ್ಧಿ ಶುಲ್ಕ, ಸುಧಾರಣೆ ಶುಲ್ಕ ಸಲ್ಲಿಸದ ಬಡಾವಣೆಯ ನಿವೇಶನದಾರರು, ನಕ್ಷೆ ಪಡೆಯದೆ ಕಟ್ಟಡ ನಿರ್ಮಿಸಿರುವವರು ತಮ್ಮ ಉಲ್ಲಂಘನೆಗೆ ಶುಲ್ಕ ಪಾವತಿಸಿ ಸಕ್ರಮ ಮಾಡಿಕೊಳ್ಳಬಹುದು.
* ಇದು ನಾಗರಿಕರ ಸ್ವಂತ ಆಸ್ತಿಗೆ ಮಾತ್ರ ಅನ್ವಯ. ಯಾವುದೇ ರೀತಿಯ ಸರ್ಕಾರಿ ಅಥವಾ ಸಾರ್ವಜನಿಕ ಉಪಯೋಗದ ಭೂಮಿ ಒತ್ತುವರಿಗೆ ಅನ್ವಯವಾಗುವುದಿಲ್ಲ.
ಸೆಟ್‍ಬ್ಯಾಕ್ ಉಲ್ಲಂಘನೆ ಎಂದರೇನು?
* ಪ್ರತಿ ನಿವೇಶನದ ಅಳತೆಗೆ ಅನುಸಾರವಾಗಿ ಕಟ್ಟಡದ ಸುತ್ತಲೂ ನಿಗದಿತ ಜಾಗ ಬಿಡಬೇಕೆಂಬ ನಿಯಮವಿದೆ. ಇದೇ ಸೆಟ್‍ಬ್ಯಾಕ್.
* ನಕ್ಷೆಯಲ್ಲಿ ಇದನ್ನು ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ. ಇದನ್ನು ವಸತಿ ಪ್ರದೇಶಗಳಲ್ಲಿ ಉಲ್ಲಂಘಿಸಿದ್ದರೆ ಶೇ.50ರವರೆಗೆ ಸಕ್ರಮ ಮಾಡಿಕೊಳ್ಳಬಹುದು.
* ವಸತಿಯೇತರ ಕಟ್ಟಡಗಳಲ್ಲಿ ಈ ಉಲ್ಲಂಘನೆ ಶೇ.25ಕ್ಕಿಂತ ಹೆಚ್ಚಿದ್ದರೆ ಅದು ಸಕ್ರಮವಾಗುವುದಿಲ್ಲ.
ಎಫ್ಎಆರ್ ಎಂದರೇನು?
ಎಫ್ಎಆರ್ ಅಂದರೆ ಫ್ಲೋರ್ ಏರಿಯಾ ರೇಷಿಯೊ. ಅಂದರೆ, ಒಂದು ಪ್ರದೇಶದಲ್ಲಿರುವ ವಸತಿ ಅಥವಾ ವಸತಿಯೇತರ ಕಟ್ಟಡಗಳ ಅಂತಸ್ತುಗಳ ನಿರ್ಮಾಣವನ್ನು ಇದು ಅರ್ಥೈಸುತ್ತದೆ. ಕಟ್ಟಡಗಳ ಮುಂದಿರುವ ರಸ್ತೆಯ ಅಳತೆಯ ಅನುಸಾರ ಎಷ್ಟು ಅಂತಸ್ತು ನಿರ್ಮಿಸಬಹುದು ಎಂದು ಸೂಚಿಸಲಾಗಿರುತ್ತದೆ. ಇದಕ್ಕಿಂತ ಹೆಚ್ಚಿನ ಅಂತಸ್ತುಗಳ ನಿರ್ಮಾಣವಾಗಿದ್ದರೆ ಅದನ್ನು ವಸತಿ ಕಟ್ಟಡದಲ್ಲಿ ಶೇ.50 ಹಾಗೂ ವಸತಿಯೇತರ ಕಟ್ಟಡದಲ್ಲಿ ಶೇ.25ರಷ್ಟು ಸಕ್ರಮ ಮಾಡಿಕೊಳ್ಳಬಹುದು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023