ಪಂಚಾಯತ್ ಅಧ್ಯಕ್ಷರ ಅಧಿಕಾರಾವಧಿ 5 ವರ್ಷಕ್ಕೆ ಹೆಚ್ಚಳ

ಬುಧವಾರ - ಏಪ್ರಿಲ್ -01-2015

ಬೆಂಗಳೂರು, ಮಾ.31: ಗ್ರಾ.ಪಂ.ಚುನಾವಣೆಗಳಲ್ಲಿ ಕಡ್ಡಾಯ ಮತದಾನ, ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷಗಳಿಗೆ ಹೆಚ್ಚಿಸುವುದು ಹಾಗೂ ಎಸ್ಸಿ-ಎಸ್ಟಿ, ಒಬಿಸಿ, ಪ್ರವರ್ಗದ ಮೀಸಲಾತಿ ಸರದಿ 10ವರ್ಷಕ್ಕೆ ವಿಸ್ತರಿಸುವ ಹಾಗೂ ಮಹಿಳೆಯರಿಗೆ ಅರ್ಧದಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ್ಕೆ ಧ್ವನಿಮತದ ಅಂಗೀಕಾರ ನೀಡಲಾಯಿತು.
ಮಂಗಳವಾರ ವಿಧಾನಸಭೆಯಲ್ಲಿ ಶಾಸನ ರಚನೆ ಕಲಾಪದಲ್ಲಿ ವಿಧೇಯಕವನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದರು. ಬಳಿಕ ವಿಧೇಯಕದ ಬಗ್ಗೆ ವಿಶ್ಲೇಷಣೆ ನೀಡಿದ ಪಾಟೀಲ್, ಹಿರಿಯ ಸದಸ್ಯ ಕೆ.ಆರ್.ರಮೇಶ್ ಕುಮಾರ್ ನೇತೃತ್ವದ ಸಮಿತಿ ನೀಡಿದ್ದ ವರದಿ ಆಧರಿಸಿ ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ಐದು ಪ್ರಮುಖ ತಿದ್ದುಪಡಿ ತರಲಾಗಿದೆ ಎಂದರು. ಪಂಚಾಯತ್ ಚುನಾವಣೆಗಳಲ್ಲಿ ಕಡ್ಡಾಯ ಮತದಾನ ವ್ಯವಸ್ಥೆ ಜಾರಿ. ಗ್ರಾ.ಪಂ., ತಾ.ಪಂ., ಜಿ.ಪಂ.ಅಧ್ಯಕ್ಷೃ ಹಾಗೂ ಉಪಾಧ್ಯಕ್ಷರ ಅವಧಿಯನ್ನು 5 ವರ್ಷಗಳಿಗೆ ಹೆಚ್ಚಿಸುವುದು, ಅನುಸೂಚಿತ ಜಾತಿ-ಪಂಗಡ, ಹಿಂದುಳಿದ ವರ್ಗ ಮತ್ತು ಪ್ರವರ್ಗ ಮೀಸಲಾತಿಯ ಸರದಿ ಹತ್ತು ವರ್ಷಗಳಿಗೆ ಮುಂದುವರಿಸುವುದು, ಪಂಚಾಯತ್‌ಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಎಂಬುದರ ಬದಲಿಗೆ ಒಟ್ಟು ಸ್ಥಾನಗಳಲ್ಲಿ ಅರ್ಧದಷ್ಟು ಎಂಬ ತಿದ್ದುಪಡಿ ತರಲಾಗಿದೆ. ಅಧ್ಯಕ್ಷರ ಅವಧಿಯನ್ನು 20 ತಿಂಗಳಿಗೆ ನಿಗದಿ ಮಾಡಲಾಗಿದೆ. ಈ ನಡುವೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ತರಲು ಕೆಲವರು ಅನಾರೋಗ್ಯಕರ ರಾಜಕಾರಣ ಮಾಡುತ್ತಿದ್ದು, ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ನಗರದ ಸಮೀಪ ಇರುವ ಪಂಚಾಯತ್‌ಗಳ ಸದಸ್ಯರನ್ನು ವಿದೇಶ ಪ್ರವಾಸ ಕರೆದೊಯ್ಯದ ಉದಾಹರಣೆಗಳಿವೆ.
ಹೀಗಾಗಿ ಅವೆಲ್ಲಕ್ಕೂ ಕಡಿವಾಣ ಹಾಕಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಲು ಪಂಚಾಯತ್ ಅಧ್ಯಕ್ಷರ ಅವಧಿಯನ್ನು ಐದು ವರ್ಷಗಳಿಗೆ ಮಿತಿ ಗೊಳಿಸಬೇಕು. ಇದರಿಂದ ನಾಯಕತ್ವ ಗುಣ ಬೆಳೆಸಲು ಅನುಕೂಲ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಶೇ.50ರಷ್ಟು ಮಹಿಳಾ ಮೀಸಲಾತಿಯನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಮಹಿಳಾ ಸದಸ್ಯರಿರಬೇಕೆಂಬ ನಿಯಮವಿದೆ. ಹೀಗಾಗಿ ಮೀಸಲಾತಿ ಸೇರಿ ಶೇ.70ರಷ್ಟು ಮಹಿಳೆಯರು ಸದಸ್ಯರಾಗುತ್ತಿದ್ದು, ಪುರುಷ ನಾಯಕತ್ವಕ್ಕೆ ಧಕ್ಕೆ ಆಗುತ್ತಿದೆ. ಹೀಗಾಗಿ ಒಟ್ಟು ಸದಸ್ಯರ ಶೇ.ಅರ್ಧದಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸುಗ್ರೀವಾಜ್ಞೆ ತನ್ನಿ: ಗ್ರಾ.ಪಂ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ವಿಧೇಯಕ ಜಾರಿಗೆ ಮುಂದಾಗಿರುವುದು ಸರಿಯಲ್ಲ. ವಿಧೇಯಕದಲ್ಲಿನ ಅಂಶಗಳು ವಾಸ್ತವಕ್ಕೆ ವಿರುದ್ಧ. ಅವಿಶ್ವಾಸ ಗೊತ್ತುವಳಿ ಬಗ್ಗೆ ಸ್ಪಷ್ಟತೆಯಿಲ್ಲ. ಅಗತ್ಯವಿದ್ದರೆ ಸುಗ್ರೀವಾಜ್ಞೆ ತನ್ನಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಲಹೆ ಮಾಡಿದರು.
ಕೆ.ಆರ್. ರಮೇಶ್ ಕುಮಾರ್ ನೇತೃತ್ವದ ಸಮಿತಿಯ ಎಲ್ಲ ಶಿಫಾರಸುಗಳನ್ನು ಸರಕಾರ ಏಕೆ ಒಪ್ಪಿಕೊಂಡಿಲ್ಲ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಜಗದೀಶ್ ಶೆಟ್ಟರ್, ಚುನಾವಣೆಗೆ ಕೆಲವು ತಿಂಗಳಷ್ಟೇ ಬಾಕಿ ಇರುವ ಸಂದರ್ಭದಲ್ಲಿ ವಿಧೇಯಕವನ್ನು ತರಾತುರಿಯಲ್ಲಿ ಮಂಡಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK