w.e.f. May 1, BSNL(Landline ) OFFER FREE TALKTIME to any phone/mobile(9pm to 7am)

ಬಿಎಸ್ಸೆನ್ನೆಲ್‌ನಿಂದ ಫ್ರೀ ಟಾಕ್‌ಟೈಮ್: ಮೇ 1ರಿಂದ ಜಾರಿ

ಏಜೆನ್ಸೀಸ್ | Apr 23, 2015, 03.45PM IST

ಲೇಖನ

ಅನಿಸಿಕೆಗಳು (2)

2

ಸ್ಥಿರ ದೂರವಾಣಿಯ ಕರೆ ರಾತ್ರಿ ಉಚಿತ/ ದೇಶಾದ್ಯಂತ ಮೇ 1ರಿಂದ ಜಾರಿ

ಮುಖ್ಯಾಂಶಗಳು
* ಬಿಸ್ಸೆನ್ನೆಲ್ ಸ್ಥಿರ ದೂರವಾಣಿ ಗ್ರಾಹಕರಿಗೆ ಬಂಪರ್ ಕೊಡುಗೆ
* ಮೇ 1ರಿಂದ ರಾತ್ರಿ 9ರಿಂದ ಬೆಳಗ್ಗೆ 7 ಗಂಟೆ ತನಕ ಮಾತಿಗೆ ದುಡ್ಡಿಲ್ಲ
* ಯಾವುದೇ ಸ್ಥಿರ ದೂರವಾಣಿ, ಮೊಬೈಲ್‌ಗೆ ಉಚಿತ ಕರೆ
* ಬ್ರಾಡ್‌ಬಾಂಡ್ ಜತೆಗಿನ ಸ್ಥಿರ ದೂರವಾಣಿಗೂ ಅನ್ವಯ

ಹೊಸದಿಲ್ಲಿ: ನಾನಾ ಬಗೆಯ ಮೊಬೈಲ್, ಸ್ಮಾರ್ಟ್‌ಫೋನ್ ಜಮಾನ ಬಂದ ಮೇಲೆ ಜನರು ಗುಡ್‌ಬೈ ಹೇಳಿದ್ದ ಸ್ಥಿರ ದೂರವಾಣಿ ಮತ್ತೆ ಮನೆಯನ್ನು ಅಲಂಕರಿಸುವ ಕಾಲ ಬಂದಿದೆ!

ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್ ತನ್ನ ಗ್ರಾಹಕರಿಗೆ ಉಚಿತ ಕರೆಯ ಬಂಪರ್ ಕೊಡುಗೆ ನೀಡಿದೆ. ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿ ಗ್ರಾಹಕರು ಮೇ 1ರಿಂದ ರಾತ್ರಿ ಒಂಬತ್ತರಿಂದ ಬೆಳಗ್ಗೆ 7 ಗಂಟೆವರೆಗೆ ಅನಿಯಮಿತ ಉಚಿತ ಕರೆ ಮಾಡಬಹುದು. ಕರೆ ಸ್ವೀಕರಿಸುವಾತ ಯಾವ ಕಂಪನಿಯ ಯಾವ ಪೋನ್ ಬಳಸುತ್ತಿದ್ದಾನೆ ಎಂಬ ತಲೆಬಿಸಿಯಿಲ್ಲದೇ ಬಾಯಿತುಂಬಾ ಹರಟಬಹುದು. ಅಂದರೆ, ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಯಿಂದ ರಾತ್ರಿ ಒಂಬತ್ತರಿಂದ ಬೆಳಗ್ಗೆ 7 ಗಂಟೆ ಅವಧಿಯಲ್ಲಿ ಬಿಎಸ್ಸೆನ್ನೆಲ್ ಅಲ್ಲದೇ, ಇತರ ಯಾವುದೇ ಕಂಪನಿಯ ಸ್ಥಿರ ಅಥವಾ ಮೊಬೈಲ್ ದೂರವಾಣಿಗಳಿಗೆ ಮಾಡುವ ಕರೆ ಸಂಪೂರ್ಣ ಉಚಿತವಾಗಿರುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇದು ಅನ್ವಯವಾಗುತ್ತದೆ ಎಂಬುದು ಇನ್ನೊಂದು ವಿಶೇಷ.

ಪಾತಾಳಕ್ಕಿಳಿದಿದ್ದ ತನ್ನ ಸ್ಥಿರ ದೂರವಾಣಿ ವಹಿವಾಟನ್ನು ಮೇಲಕ್ಕೆತ್ತುವ ಸಲುವಾಗಿ ಹಾಗೂ ಟ್ರಾಯ್ ಇತ್ತೀಚೆಗೆ ಸ್ಥಿರ ದೂರವಾಣಿಗಳ ಅಂತರ ಸಂಪರ್ಕ ಶುಲ್ಕಗಳನ್ನು ರದ್ದುಪಡಿಸಿದ್ದರಿಂದ ಉಂಟಾಗಿದ್ದ ಅನುಕೂಲವನ್ನು ಪಡೆದು, ಬಿಎಸ್ಸೆನ್ನೆಲ್ ಗುರುವಾರ ಈ ಅಚ್ಚರಿಯ ಕೊಡುಗೆಯನ್ನು ಪ್ರಕಟಿಸಿದೆ.

ಬಿಎಸ್ಸೆನ್ನೆಲ್‌ನ ಈ ಯೋಜನೆಯಡಿಯಲ್ಲಿ ಕಂಪನಿಯ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ಸ್ಥಿರ ದೂರವಾಣಿ ಜನರಲ್ ಪ್ಲಾನ್‌ಗಳು, ಸ್ಥಿರ ದೂರವಾಣಿ ಮತ್ತು ಬ್ರಾಡ್‌ಬ್ಯಾಂಡ್ ಎರಡೂ ಒಳಗೊಂಡಿರುವ ಯೋಜನೆಗಳೂ ಅನ್ವಯವಾಗುತ್ತವೆ.

ದೂರವಾಣಿ ಮಾರುಕಟ್ಟೆಯಲ್ಲಿ ಬಿಎಸ್ಸೆನ್ನೆಲ್ ಪ್ರಾಬಲ್ಯ ಹೊಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ನಷ್ಟಕ್ಕೀಡಾಗಿತ್ತು. ಫೆಬ್ರವರಿ ಹೊತ್ತಿಗೆ ಬಿಎಸ್ಸೆನ್ನೆಲ್ 1.66 ಕೋಟಿ ಸ್ಥಿರ ದೂರವಾಣಿಗಳನ್ನು ಹೊಂದಿತ್ತು. ಈ ತಿಂಗಳಿನಲ್ಲಿ ಕಂಪನಿ 162,556 ಸ್ಥಿರ ದೂರವಾಣಿಗಳನ್ನು ಕಳೆದುಕೊಂಡಿದ್ದರೂ, ಮಾರುಕಟ್ಟೆಯಲ್ಲಿ ಶೇ.62.26ರಷ್ಟು ಪಾಲನ್ನು ಹೊಂದಿತ್ತು.ಕರ್ನಾಟಕದಲ್ಲಿ 2006ರಲ್ಲಿ ಬಿಎಸ್ಸೆನ್ನೆಲ್‌ನ ಅಂದಾಜು 28 ಲಕ್ಷ ಸ್ಥಿರ ದೂರವಾಣಿಗಳಿದ್ದವು. ಆದರೆ ಈಗ ಸುಮಾರು 13-14 ಲಕ್ಷಕ್ಕೆ ಇಳಿದಿದೆ. ಮಂಗಳೂರಿನಂತಹ ನಗರದಲ್ಲಿ ಹಿಂದೊಮ್ಮೆ ಬಿಎಸ್ಸೆನ್ನೆಲ್‌ನ 3 ಲಕ್ಷ ಸ್ಥಿರ ದೂರವಾಣಿಗಳಿತ್ತು. ಈಗ 1 ಲಕ್ಷದ ಅಸುಪಾಸಿನಲ್ಲಿದೆ.

ಬಿಎಸ್ಸೆನ್ನೆಲ್‌ನ ಈ ಘೋಷಣೆಯಿಂದ ಟೆಲಿಕಾಂ ವಲಯದಲ್ಲಿ ಮತ್ತೊಂದು ಸುತ್ತಿನ ದರ ಸಮರ ಸಾಧ್ಯತೆ ಇದೆ. ಹೀಗಿದ್ದರೂ ಸ್ಥಿರ ದೂರವಾಣಿ ಕುರಿತ ಸೇವೆಯನ್ನು ಬಿಎಸ್ಸೆನ್ನೆಲ್, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿ ಕೊಡಬೇಕಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು.

ದೂರಸಂಪರ್ಕ ನಿಯಂತ್ರಕ ಪ್ರಾಧಿಕಾರ ಟ್ರಾಯ್ ಸ್ಥಿರ ದೂರವಾಣಿಗಳಿಂದ ಬರುವ ಕರೆಗಳಿಗೆ ಅಂತರ ಸಂಪರ್ಕ ಶುಲ್ಕವನ್ನು ರದ್ದುಪಡಿಸಿದೆ. ಈಗ ಭಿನ್ನ ನೆಟ್‌ವರ್ಕ್‌ಗಳಲ್ಲಿಸ್ಥಿರ ದೂರವಾಣಿಯಿಂದ ಸ್ಥಿರ ದೂರವಾಣಿಗೆ ಮತ್ತು ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡುವಾಗ ಟೆಲಿಕಾಂ ಕಂಪನಿಗಳು ಅಂತರ ಸಂಪರ್ಕ ಶುಲ್ಕ ಪಾವತಿಸಬೇಕಿಲ್ಲ. ಟ್ರಾಯ್ ನೆಟ್‌ವರ್ಕ್ ಅಂತರ ಸಂಪರ್ಕ ಬಳಕೆ ಶುಲ್ಕವನ್ನು ಕೂಡ ಕಡಿಮೆ ಮಾಡಿದೆ. ಇದು ಬಿಎಸ್ಸೆನ್ನೆಲ್‌ಗೆ ಅನುಕೂಲಕಾರಿಯಾಗಿದೆ ಎನ್ನುತ್ತಾರೆ ವಿಶ್ಲೇಷಕರು.
-----

ದೂರಸಂಪರ್ಕ ವಲಯದಲ್ಲಿ ಇದುವರೆಗೆ ಯಾರೂ ನೀಡದಿದ್ದ ಬಂಪರ್ ಕೊಡುಗೆಯನ್ನು ಬಿಎಸ್ಸೆನ್ನೆಲ್ ತನ್ನ ಗ್ರಾಹಕರಿಗೆ ನೀಡಿದೆ. ಜನರು ಹೆಚ್ಚಾಗಿ ಪೋನ್ ಬಳಸುವ ರಾತ್ರಿ 9 ಗಂಟೆಗೇ ಈ ಉಚಿತ ಕೊಡುಗೆ ನೀಡಿರುವುದು ಗಮನಾರ್ಹ. ಇದರಿಂದ ಸ್ಥಿರ ದೂರವಾಣಿಗೆ ಮತ್ತೆ ಬೇಡಿಕೆ ಹೆಚ್ಚಲಿದೆ. ಟ್ರಾಯ್ ಅಂತರ ಸಂಪರ್ಕ ಶುಲ್ಕ ರದ್ದುಪಡಿಸಿರುವುದು ಯೋಜನೆ ಜಾರಿಗೆ ಅನುಕೂಲವಾಗಿದೆ.
* ಆರ್.ಕೆ.ಮಿಶ್ರಾ, ಮುಖ್ಯ ಪ್ರಧಾನ ವ್ಯವಸ್ಥಾಪಕರು,(ಸಿಜಿಎಂ) ಬಿಎಸ್ಸೆನ್ನೆಲ್ ಕರ್ನಾಟಕ ವೃತ್ತ

ಕರ್ನಾಟಕದಲ್ಲಿ 2006ರಲ್ಲಿದ್ದ ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿ
28 ಲಕ್ಷ

ಈಗ (2015)
14 ಲಕ್ಷ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023