ಐಎನ್‌ಎಸ್ ಸರ್ದಾರ್ ಪಟೇಲ್ ನೂತನ ನೌಕಾನೆಲೆ ಉದ್ಘಾಟನೆ


ರವಿವಾರ - ಮೇ -10-2015
ಪೋರಬಂದರ್, ಮೇ 9: ರಕ್ಷಣಾತ್ಮಕವಾಗಿ ಪ್ರಾಮುಖ್ಯವಾದ ಹೊಸ ನೌಕಾನೆಲೆ-ಐಎನ್‌ಎಸ್ ಸರ್ದಾರ್ ಪಟೇಲ್-ಇಂದಿಲ್ಲಿ ಲೋಕಾರ್ಪಣಗೊಂಡಿದೆ. ಅದು ಗುಜರಾತ್‌ನ 1,600 ಕಿ.ಮೀ. ಉದ್ದದ ಕರಾವಳಿಯ ರಕ್ಷಣೆಯನ್ನು ಹೆಚ್ಚಿಸಲು ನೆರವಾಗಲಿದೆಯೆಂದು ಸಮಾರಂಭದಲ್ಲಿ ಭಾಗವಹಿಸಿದ್ದ ಜಲಸೇನಾ ದಂಡನಾಯಕ ಆರ್.ಕೆ.ಧವನ್ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಈ ನೌಕಾನೆಲೆಯನ್ನು ಉದ್ಘಾಟಿಸಿದರು. ಈ ಸಂದರ್ಭವನ್ನು ಹಿಂದಿನ ಯುಪಿಎ ಸರಕಾರದ ವಿರುದ್ಧ ವಾಗ್ದಾಳಿಗೆ ಬಳಸಿಕೊಂಡ ಅವರು, ಅದು ರಾಜ್ಯದ ಕರಾವಳಿಯ ಭದ್ರತಾ ಕಳವಳವನ್ನು ನಿರ್ಲಕ್ಷಿಸಿತ್ತೆಂದು ಆರೋಪಿಸಿದರು.
ಆನಂದಿ ಬೆನ್ ಫಲಕವೊಂದನ್ನು ಅನಾವರಣಗೊಳಿಸಿ, ನೂತನ ನೆಲೆಯ ಕಾರ್ಯಾರಂಭದ ಆದೇಶವನ್ನು ಓದಿದರು. ಓಖಾದ ಬಳಿಯ ಐಎನ್‌ಎಸ್ ದ್ವಾರಕಾದ ಬಳಿಕ ಇದು ರಾಜ್ಯದಲ್ಲಿ ಭಾರತೀಯ ನೌಕಾಪಡೆಯ ಎರಡನೆಯ ನೆಲೆಯಾಗಿದೆ. ಹೊಸ ನೆಲೆಯು ತನ್ನ ಕರಾವಳಿಯಲ್ಲಿ ಭದ್ರತೆಯನ್ನು ಬಲಗೊಳಿಸಲು ಗುಜರಾತ್‌ಗೆ ನೆರವಾಗಲಿದೆಯೆಂದು ಧವನ್ ಹೇಳಿದರು.
ಗುಜರಾತ್ ವೇಗವಾಗಿ ಬೆಳೆಯುತ್ತಿರುವ ಸಮುದ್ರಯಾನ ರಾಜ್ಯವಾಗಿದ್ದು, 1,600 ಕಿ.ಮೀ. ಕರಾವಳಿಯನ್ನು ಹೊಂದಿದೆ. ರಾಜ್ಯವು 43 ಖಾಸಗಿ ಹಾಗೂ ಸಾರ್ವಜನಿಕ ಬಂದರುಗಳನ್ನು ಹೊಂದಿದ್ದು, ದೇಶದ ಸಾಗರೋದ್ಯಮಗಳಲ್ಲಿ ಶೇ.50ರಷ್ಟು ಕೊಡುಗೆ ನೀಡುತ್ತಿವೆ. ಕಛ್ ಕೊಲ್ಲಿಯಿಂದ ಗುಜರಾತ್‌ನ ಬೇರೆ ಬೇರೆ ಸಂಸ್ಕರಣಾಗಾರಗಳಿಗೆ ಸುಮಾರು 12 ಕೋಟಿ ಟನ್ ಕಚ್ಚಾ ತೈಲ ತಲುಪುತ್ತದೆಂದು ನೌಕಾಪಡೆಯ ಐಎನ್‌ಎಸ್ ಕೋಲ್ಕತಾ ಹಡಗಿನಲ್ಲಿ ಧವನ್ ಪತ್ರಕರ್ತರಿಗೆ ತಿಳಿಸಿದರು.
ಅಲ್ಲದೆ, ಖಾಸಗಿ ಹಾಗೂ ಸಾರ್ವಜನಿಕ ಹಡಗುಕಟ್ಟೆಗಳನ್ನೊಳಗೊಂಡ ಬೆಳವಣಿಗೆ ಹೊಂದುತ್ತಿರುವ ಹಡಗು ನಿರ್ಮಾಣ ಕೈಗಾರಿಕೆ ಗುಜರಾತ್‌ನಲ್ಲಿದೆ. ದೊಡ್ಡ ಮೀನುಗಾರಿಕೆ ಕಂಪೆನಿಗಳಿವೆ. ಗುಜರಾತ್ ತೀರದ ಸಾಗರ ಬ್ಲಾಕ್‌ಗಳಲ್ಲಿ ಸಾಗರಾಂತರ ತೈಲಾಭಿವೃದ್ಧಿ ವಲಯವಿದೆಯೆಂದು ಅವರು ಹೇಳಿದರು.
ಜಲಸೇನೆಯು ನಮ್ಮ ಸಾಗರ ಗಡಿಗಳ ರಕ್ಷಣೆಯ ಹೊಣೆಗಾರಿಕೆ ಹೊಂದಿದೆ. ಇಂದು ನಾವು ''ಐಎನ್‌ಎಸ್ ಸರ್ದಾರ್ ಪಟೇಲ್'' ಅನ್ನು ಕಾರ್ಯಗತಗೊಳಿಸಿದ್ದೇವೆ. ಅದು ಗುಜರಾತ್ ಕರಾವಳಿಯಲ್ಲಿ ನಿಯೋಜಿಸಲಾಗಿರುವ ನಮ್ಮ ನೌಕೆಗಳು, ಜಲಾಂತರ್ಗಾಮಿಗಳು ಹಾಗೂ ವಿಮಾನಗಳಿಗೆ ಸಮನ್ವಯದ ಅಗತ್ಯಗಳನ್ನು ಖಚಿತಪಡಿಸಲಿದೆಯೆಂದು ಧವನ್ ತಿಳಿಸಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK