Drop


Friday, May 8, 2015

ಶತ್ರು ವಿನಾಶಕ 'ಆಕಾಶ್‌'ಭಾರತೀಯ ಭೂಸೇನೆಗೆ..

ಶತ್ರು ವಿನಾಶಕ 'ಆಕಾಶ್‌'
 
ಉದಯವಾಣಿ, May 08, 2015, 3:40 AM IST

ಶತ್ರು ವಿಮಾನಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯದ ಆಕಾಶ್‌ ಕ್ಷಿಪಣಿ ಇದೀಗ ಭಾರತೀಯ ಭೂಸೇನೆ ಬತ್ತಳಿಕೆಗೂ ಸೇರಿದೆ. ಈ ಮೊದಲು ವಾಯುಪಡೆಗೆ ಮಾತ್ರ ಸೇರಿದ್ದ ಈ ಕ್ಷಿಪಣಿ, ತಾಂತ್ರಿಕ ಬದಲಾವಣೆಗಳೊಂದಿಗೆ ಭೂ ಸೇನೆಗೂ ಸೇರಿಕೊಂಡಿದೆ. ಇದರಿಂದಾಗಿ ಶತ್ರು ವಿಮಾನ ನಾಶಕದ ಕೊರತೆ ಅನುಭವಿಸುತ್ತಿದ್ದ ಭೂ ಸೇನೆಗೆ ಮತ್ತಷ್ಟು ಬಲ ತುಂಬಿದೆ. ಈ ಹಿನ್ನೆಲೆಯಲ್ಲಿ ಆಕಾಶ್‌ ಕ್ಷಿಪಣಿ ವೈವಿಧ್ಯತೆ ಏನು? ಅದಕ್ಕೇಕೆ ಅಷ್ಟೊಂದು ಮಹತ್ವ ಇತ್ಯಾದಿ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ.

ಆಕಾಶಕ್ಕೆ ಆಕಾಶವೇ ಸರಿಸಾಟಿ

ಆಕಾಶ್‌ ಕ್ಷಿಪಣಿ ಲಘು ಮತ್ತು ಕಿರು ವ್ಯಾಪ್ತಿಯ ಕ್ಷಿಪಣಿಗಳಲ್ಲಿ ಅತ್ಯಾಧುನಿಕವಾದದ್ದು. ಪ್ರಮುಖವಾಗಿ ಇದು ನೆಲದಿಂದ ಆಗಸಕ್ಕೆ ಉಡಾಯಿಸಬಲ್ಲ (ಎಸ್‌ಎಎಮ್‌) ಕ್ಷಿಪಣಿ. ವಿವಿಧ ಗುರಿಗಳನ್ನು ಏಕಕಾಲದಲ್ಲಿ ಛಿದ್ರ ಮಾಡಬಲ್ಲ ವ್ಯವಸ್ಥೆ ಇದರಲ್ಲಿದೆ. ವಿಶ್ವದಲ್ಲಿ ಅಮೆರಿಕ, ರಷ್ಯಾ, ಕೆಲವು ಯುರೋಪಿಯನ್‌ ದೇಶಗಳು, ಇಸ್ರೇಲ್‌ ಮತ್ತು ಜಪಾನ್‌ ಈ ತಂತ್ರಜ್ಞಾನದ ಕ್ಷಿಪಣಿಯನ್ನು ಹೊಂದಿವೆ.

ಭಾರತದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಇದನ್ನು ನಿರ್ಮಿಸಿದ್ದು, ಇದೀಗ ಸೇನಾ ಆವೃತ್ತಿಯನ್ನೂ ಯಶಸ್ವಿಯಾಗಿ ಪರೀಕ್ಷಿಸಿ ಸೇರ್ಪಡೆಗೊಳಿಸಲಾಗಿದೆ. ಆಕಾಶ್‌ ಕ್ಷಿಪಣಿಯಲ್ಲಿ ಸದ್ಯ ವಾಯು ಮತ್ತೂ ಭೂ ಸೇನೆಗೆ ಹೊಂದಿಕೆಯಾಗುವ ಎರಡು ಮಾದರಿಗಳಿವೆ. ಇದರಲ್ಲಿ ನೆಲದಿಂದ ಆಗಸಕ್ಕೆ ಮತ್ತು ಆಗಸದಿಂದ ಆಗಸಕ್ಕೆ ದಾಳಿ ನಡೆಸಬಹುದು.

ಆಕಾಶ್‌ ಕಾರ್ಯಾಚರಣೆ ಹೇಗೆ?

ಆಕಾಶ್‌ ಕ್ಷಿಪಣಿಯನ್ನು ಯುದ್ಧ ಸಂದರ್ಭಗಳಲ್ಲಿ ಅಥವಾ ಗಡಿಗಳಲ್ಲಿ ಸ್ಥಾಪಿಸುತ್ತಾರೆ. ಈ ವ್ಯವಸ್ಥೆ ಸಂಪೂರ್ಣ ಸ್ವಯಂಚಾಲಿತ. ಸಾಮಾನ್ಯವಾಗಿ ನಾಲ್ಕು ಲಾಂಚರ್‌ಗಳಿದ್ದರೆ, ಅದರಲ್ಲಿ ತಲಾ ಮೂರು ಕ್ಷಿಪಣಿಗಳಿರುತ್ತವೆ. ಈ ಕ್ಷಿಪಣಿಗಳು ಪರಸ್ಪರ ಸಂಪರ್ಕ ಹೊಂದಿರುತ್ತವೆ. ಶತ್ರು ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋನ್‌, ಹಾರುವ ವಸ್ತು ಇತ್ಯಾದಿಗಳು ವ್ಯಾಪ್ತಿಗೆ ಬರುತ್ತಿದ್ದಂತೆ ಇವುಗಳಿಗೆ ಅಳವಡಿಸಿದ ಎಲೆಕ್ಟ್ರಾನಿಕ್‌ ರಾಡಾರ್‌ಗಳು ಎಚ್ಚರಿಕೆ ಸಂದೇಶ ರವಾನಿಸುತ್ತವೆ.

ಸುಮಾರು 64 ಗುರಿಗಳನ್ನು ಇವುಗಳು ಗುರುತಿಸಿ, ಅವುಗಳಲ್ಲಿ 12 ವಿವಿಧ ಗುರಿಗಳಿಗೆ ಏಕಕಾಲಕ್ಕೆ ಇವುಗಳು ದಾಳಿ ಮಾಡಬಲ್ಲವು. 360 ಡಿಗ್ರಿಯಲ್ಲಿ ಅಪಾಯದ ಮುನ್ಸೂಚನೆ ಗ್ರಹಿಸಿ ದಾಳಿ ಮಾಡುವ ಸಾಮರ್ಥ್ಯ ಇವುಗಳದ್ದು. ಇದರಲ್ಲಿ ಎಲೆಕ್ಟ್ರಾನಿಕ್‌ ಕೌಂಟರ್‌ ಕೌಂಟರ್‌ ಮೆಷರ್ (ಇಸಿಸಿಎಮ್‌) )ಪ್ರತಿ ದಾಳಿ ಸಾಮರ್ಥ್ಯ)ವನ್ನೂ ಹೊಂದಿವೆ.

ಆಕಾಶ್‌ ಹೆಚ್ಚುಗಾರಿಕೆ ಏನು?

ಆಕಾಶ್‌ ವಿಶ್ವದ ಪ್ರಮುಖ ಕ್ಷಿಪಣಿಗಳ ಸಾಲಿನಲ್ಲಿ ಕಾರಣ ಅದರ ವಿಶಿಷ್ಟತೆ. ಕೇವಲ 720 ಕೇಜಿಯಷ್ಟು ಭಾರ ಹೊಂದಿರುವ ಈ ಕ್ಷಿಪಣಿ 60 ಕೇಜಿಯಷ್ಟು ಸಿಡಿತಲೆಯನ್ನು ಹೊತ್ತೂಯ್ಯುತ್ತದೆ. ಅತ್ಯಂತ ನಿಖರವಾಗಿ ಗುರಿ ಛೇದಿಸುವ ಸಾಮಥœì ಹೊಂದಿದ ಈ ಕ್ಷಿಪಣಿ ಭೂಮಿಯಿಂದ 25 ಕಿ.ಮೀ. ಎತ್ತರದ ಗುರಿಯನ್ನು ಪುಡಿಗಟ್ಟಬಲ್ಲದು. ಇದನ್ನು ವಿಮಾನದಿಂದಲೂ, ಭೂಮಿಯಿಂದಲೂ ಅಷ್ಟೇ ಅಲ್ಲದೇ ಭೂಮಿಯಲ್ಲಿ ಚಲಿಸುತ್ತಲೇ ಇರುವಾಗ ಕ್ಷಿಪಣಿ ಉಡ್ಡಯನದ ಟ್ರಕ್‌ ಒಂದರಿಂದಲೂ ಉಡಾಯಿಸಬಹುದು. ಇದು ಶೇ.96ರಷ್ಟು ಸ್ವದೇಶಿ ನಿರ್ಮಿತ ಎನ್ನುವುದು ಹೆಚ್ಚುಗಾರಿಕೆ.

ಹಳೆಯ ಕನಸಿಗೆ ಕೊನೆಗೂ ಜೀವ

ಆಕಾಶ್‌ ಕ್ಷಿಪಣಿಗಾಗಿ ಸೇನೆ ಸುಮಾರು 50 ವರ್ಷದಿಂದ ಕಾದಿತ್ತು. ರಷ್ಯಾದಿಂದ ಖರೀದಿಸಿದ ಇದೇ ಮಾದರಿಯ ಕ್ಷಿಪಣಿ ಸೇನೆಯಲ್ಲಿದ್ದು ಅದು ಈಗಾಗಲೇ ತುಂಬಾ ಹಳತಾಗಿತ್ತು. ಪರಿಣಾಮ 1990ರ ದಶಕದಲ್ಲಿ ಸ್ವದೇಶಿ ನಿರ್ಮಿತ ಆಕಾಶ್‌ ಕ್ಷಿಪಣಿಗೆ ಡಿಆರ್‌ಡಿಓ ಶ್ರಮಿಸುತ್ತಿದ್ದು, ಮೊದಲ ಪ್ರಯೋಗ ನಡೆಸಿತ್ತು. 1997ರಲ್ಲಿ ಇದರ ಸುಧಾರಿತ ಆವೃತ್ತಿ ಬಿಡುಗಡೆಯಾಗಿದ್ದು, 2005ರಲ್ಲಿ ಶತ್ರು ಕ್ಷಿಪಣಿ ಧ್ವಂಸಗೊಳಿಸುವ ಮಾದರಿ ಮತ್ತು ಅತಿ ನಿಖರವಾಗಿ ಗುರಿ ಛೇದಿಸಬಲ್ಲ 3ಡಿ ಸೆಂಟ್ರಲ್‌ ಅಕ್ವೆಸಿಷನ್‌ ರಾಡಾರ್‌ ನೆರವಿನ ಆಕಾಶ್‌ ಪ್ರಯೋಗಿಸಲಾಗಿತ್ತು.

ಆದರೆ ಇದೆಲ್ಲ ವಾಯುಪಡೆ ಆವೃತ್ತಿ ಮಾತ್ರವಾಗಿತ್ತು. 2010ರಲ್ಲಿ ಆಕಾಶ್‌ ಹೊಸ ಆವೃತ್ತಿ ಪರಿಚಯಿಸಲಾಗಿತ್ತು. 2009ರಲ್ಲಿ ವಾಯುಪಡೆ ಬತ್ತಳಿಕೆಗೆ ಸೇರಿದ್ದ ಈ ಕ್ಷಿಪಣಿ ಬಳಿಕ ಸೇನಾಪಡೆ ಅಗತ್ಯ ಪೂರೈಸಲು ಪರೀಕ್ಷೆಗಳನ್ನು ನಡೆಸಲಾಗಿತ್ತು. ಅದರಂತೆ 2015ರಲ್ಲಿ ಸೇನೆಗೆ ಕ್ಷಿಪಣಿ ಪಡೆ ಸೇರ್ಪಡೆಗೊಳಿಸಲಾಗಿದೆ. ಸದ್ಯ ಸೇನೆಗೆ ಮೊದಲ ಹಂತದಲ್ಲಿ 2 ರೆಜಿಮೆಂಟ್‌ ಕ್ಷಿಪಣಿ ಸೇರ್ಪಡೆಗೆ ಉದ್ದೇಶಿಸಲಾಗಿದೆ. (6 ಲಾಂಚರ್‌ಗಳು, ಪ್ರತಿ ಲಾಂಚರ್‌ನಲ್ಲಿ ಮೂರು ಕ್ಷಿಪಣಿಗಳು) ಇದರ ಒಟ್ಟು ವೆಚ್ಚ 19 ಸಾವಿರ ಕೋಟಿ ರೂ. ಆಗಿರಲಿದೆ.

ಆಕಾಶ್‌ ವಿಶೇಷತೆಗಳು
720 ಕೆ.ಜಿ. ಭಾರ
5.78 ಮೀ. ಉದ್ದ
3.5 ಮೀ. ಸುತ್ತಳತೆ
60 ಕೆ.ಜಿ. ಸ್ಫೋಟಕ ಸಾಗಿಸುವ ಸಾಮರ್ಥ್ಯ
25 ಕಿ.ಮೀ. ದೂರದ ಅಪಾಯ ಛೇದಿಸುವ ಸಾಮರ್ಥ್ಯ
2009ರಲ್ಲಿ ಮೊದಲು ತಯಾರಿ
ಭಾರತ್‌ ಡೈನಾಮಿಕ್ಸ್‌ ಲಿ. (ಬಿಡಿಎಲ್‌) ತಯಾರಿ