Drop


Monday, December 7, 2015

KAS ತಯಾರಿ ಹೇಗೆ?


Dec 7, 2015, 04.00 AM IST
By KAS-lakshman-reddy
--------------------------
ನಿರೂಪಣೆ: ಚಿತ್ರಾ ಸಂತೋಷ್
ನನ್ನೂರು ದಾವಣಗೆರೆ ಜಿಲ್ಲೆಯ
ಹೊನ್ನಾಳಿಯ ಬಿಜೋಗಟ್ಟೆ. ಅಪ್ಪ-
ಅಮ್ಮ ಕೃಷಿಕರು. ಪ್ರೈಮರಿ ಓದಿದ್ದು ನನ್ನೂರಲ್ಲಿ.
ಡಿಗ್ರಿ ಶಿವಮೊಗ್ಗದ ಸಹ್ಯಾದ್ರಿ
ಕಾಲೇಜಿನಲ್ಲಿ. ಡಿಗ್ರಿ ಮುಗಿದ ಮೇಲೆ ಬಿ.ಎಡ್,
ಎಂ.ಎಡ್. ಮಾಡಿದ್ದೆ. ದೂರಶಿಕ್ಷಣದ ಮೂಲಕ
ಎಂ.ಎ, ಎಂ.ಫಿಲ್ ಕೂಡ
ಮುಗಿಸಿಕೊಂಡೆ. ಓದುತ್ತಿರುವಾಗಲೇ
ನಾನು ಕನಸು ಕಂಡಿದ್ದು
ಪೊಲೀಸ್ ಆಗಬೇಕೆಂದು.
ನನ್ನಣ್ಣ ಇನ್ಸ್ಪೆಕ್ಟರ್. ಖಾಕಿಧಾರಿ ಅಣ್ಣನ ನೋಡುವಾಗ
ನಾನೂ ಇನ್ಸ್ಪೆಕ್ಟರ್ ಆಗಬೇಕು ಎಂಬ ಕನಸು
ಕಟ್ಟಿದ್ದೆ. ಆವಾಗಲೇ ಓದಲು ಶುರುಮಾಡಿದ್ದೆ. ಆದರೆ,
ಆಗಿದ್ದೇ ಬೇರೆ. ಇನ್ಸ್ಪೆಕ್ಟರ್ ಆಗದೆ ಕೆಎಎಸ್
ಅಧಿಕಾರಿಯಾದೆ. ಇದನ್ನೂ ಇಷ್ಟಪಟ್ಟು
ಕಷ್ಟದಿಂದ ಜಯಿಸಿದೆ. ಈ ಬಗ್ಗೆ ಹೆಮ್ಮೆ
ಇದೆ ನನಗೆ.
ನಾನು 2010ರಲ್ಲಿ ಕೆಎಎಸ್ ಪಾಸು ಮಾಡಿರುವುದು. ಅದಕ್ಕೆ
ಮೊದಲು ಅಂದರೆ 2009ರಲ್ಲಿ
ಕರ್ನಾಟಕ ಎಜುಕೇಶನ್ ಸರ್ವೀಸ್ ನಡೆಸಿದ
ಎಗ್ಸಾಮ್ ಪಾಸು ಮಾಡಿದ್ದೆ. ಆವಾಗ ಕೆಎಎಸ್ ಕೂಡ
ಬರೆಯಬೇಕು ಅನಿಸಿತು. ಹಾಗೇ ನೋಡಿದರೆ ಕೆಎಎಸ್ಗೆ
ತಯಾರಿ ನಡೆಸಿದ್ದು ಕೇವಲ ಒಂದೇ ವರ್ಷ.
ಒಂದು ವರ್ಷದಲ್ಲಿ ಒಂದು
ಕಾಂಪಿಟೇಟಿವ್ ಎಗ್ಸಾಮ್ಗೆ ತಯಾರಿ ನಡೆಸಲು
ಸಾಧ್ಯವೇ? ಎಂಬ ಪ್ರಶ್ನೆ
ನಿಮ್ಮದಾಗಿರಬಹುದು. ಯೆಸ್, ಸಾಧ್ಯ.
ಕಾಂಪಿಟೇಟಿವ್ ಎಗ್ಸಾಮ್ ಎಂದಾಗ ಕೆಲವು
ಮಂದಿ ನಾನು ಡಿಗ್ರಿ ಆರಂಭದಿಂದಲೂ
ಓದಬೇಕಿತ್ತು. ಮೊದಲೇ ತಯಾರಿ
ನಡೆಸಿದ್ರೆ ಎಗ್ಸಾಮ್ ಬರೆಯಬಹುದಿತ್ತು. ಈಗ
ಸಮಯ ಮೀರಿ ಹೋಗಿದೆ. ಒಂದು
ವರ್ಷ ಅಥವಾ ಎರಡು ವರ್ಷದಲ್ಲಿ ಏನು ಓದೋಣ ಹೇಳಿ?
ಎಂದು ಕೇಳುತ್ತಾರೆ. ಆದರೆ, ಇಂಥ
ಅಭಿಪ್ರಾಯ ನಿಮ್ಮದಾಗಿದ್ದರೆ ಈಗಲೇ ಬಿಟ್ಟುಬಿಡಿ.
ಛಲ ಹಾಗೂ ಶ್ರಮ ಇದ್ರೆ ಯಾವುದೂ ಕಷ್ಟ ಅಲ್ಲ.
ಕಷ್ಟವಿದ್ದರೂ ನೀವದನ್ನು ಇಷ್ಟಪಟ್ಟು
ಮಾಡಿದಾಗ ಯಾವ ಸಾಧನೆಯಾದರೂ ಬಲು ಸುಲಭ.
ಕೇವಲ ಒಂದು ವರ್ಷದಲ್ಲಿ ನಾನು
ಅತ್ಯಂತ ಶ್ರದ್ಧೆಯಿಂದ ತಯಾರಿ
ನಡೆಸಿದ್ದೇನೆ. ಯಾವುದೇ ಕೋಚಿಂಗ್ ನಾನು
ಪಡೆದಿಲ್ಲ. ಹಾಗಂತ ಕೋಚಿಂಗ್
ತೆಗೆದುಕೊಳ್ಳುವುದು ತಪ್ಪು ಅಂತ
ನಾನು ಹೇಳುತ್ತಿಲ್ಲ. ಕೋಚಿಂಗ್ ಅಗತ್ಯವೇ ಅಥವಾ
ಬೇಡವೇ? ಎನ್ನುವುದು ಆಯಾ ಸ್ಪರ್ಧಾರ್ಥಿಗಳ ಕೆಪಾಸಿಟಿ
ಮೇಲೆ ಡಿಫೆಂಡ್ ಆಗಿರುತ್ತದೆ. ನಾನು ಕನಿಷ್ಠ
12-14 ಗಂಟೆಗಳ ಕಾಲ ಓದಿದ್ದೂ ಇದೆ.
ಒಟ್ಟಿನಲ್ಲಿ ಈ ಪರೀಕ್ಷೆ ನಾನು ಪಾಸು
ಮಾಡಲೇಬೇಕು ಎಂದು ಛಲ
ತೊಟ್ಟಿದ್ದೆ. ವೇಳಾಪಟ್ಟಿ
ಹಾಕ್ಕೊಂಡು ಓದುತ್ತಿದ್ದೆ.
ಓದಿದ್ದನ್ನು ಟಿಪ್ಪಣಿ
ಮಾಡಿಕೊಂಡು ಎಷ್ಟು ಸಾಧ್ಯನೋ
ಅಷ್ಟು ರಿವಿಷನ್ ಮಾಡುತ್ತಿದ್ದೆ.
ರೀಡಿಂಗ್ ಮತ್ತು ಓದಿದ್ದನ್ನೇ ಮತ್ತೆ
ಮತ್ತೆ ಪ್ರಾಕ್ಟೀಸ್ ಮಾಡಿದ್ರೆ
ಪರೀಕ್ಷಾ ಬರೆಯುವ ಸಂದರ್ಭದಲ್ಲಿ
ನಮ್ಮ ಮುಕ್ಕಾಲು ಭಾಗದಷ್ಟು
ಗೊಂದಲ ಬಗೆಹರಿದಂತೆ.
ತಯಾರಿಗೆ ಓದಿದ್ದೇನು?
ಯಾವುದೇ ಕಾಂಪಿಟೇಟಿವ್ ಎಗ್ಸಾಮ್ ಆಗಿರಲಿ
ನಮಗೆ ಹೈಸ್ಕೂಲ್ನಲ್ಲಿ ಓದಿರುವುದು ತುಂಬಾ
ಸಹಾಯವಾಗುತ್ತದೆ. ಏಕೆಂದರೆ ಬೇಸಿಕ್ ಪಠ್ಯ
ನಮಗೆ ಅದೇ. ಡಿಗ್ರಿಯಲ್ಲಿ ನಾನು ಓದಿದ್ದು ಹಿಸ್ಟರಿ,
ಎಕಾನಮಿಕ್ಸ್ ಮತ್ತು ಪೊಲಿಟಿಕಲ್
ಸೈನ್ಸ್. ಎಗ್ಸಾಮ್ನಲ್ಲಿ ಸಮಾಜ ವಿಜ್ಞಾನ, ರಸಾಯನ
ಶಾಸ್ತ್ರ, ಜೀವಶಾಸ್ತ್ರ, ಗಣಿತ,
ರಾಜ್ಯಶಾಸ್ತ್ರ ಎಲ್ಲಾ ವಿಷಯಗಳ ಮೇಲೆಯೂ
ನಿರ್ದಿಷ್ಟ ಅಂಕಗಳ ಪ್ರಶ್ನೆಗಳನ್ನು ಕೇಳುತ್ತಾರೆ.
ಆದ್ದರಿಂದ ನಾವು ಎಗ್ಸಾಮ್ಗೆ ತಯಾರಿ ನಡೆಸುವಾಗ
'ಆಲ್ರೌಂಡರ್' ಕೆಲಸ ಮಾಡಬೇಕಾಗುತ್ತದೆ. ನಾನು
ಕನ್ನಡ ಪುಸ್ತಕಗಳನ್ನೇ ಹೆಚ್ಚಾಗಿ ರೆಫರ್ ಮಾಡಿದ್ದೆ.
ಕನ್ನಡದಲ್ಲಿ ಯಾವುದು ಲಭ್ಯವಿಲ್ಲವೋ ಅದನ್ನು
ಮಾತ್ರ ಇಂಗ್ಲಿಷ್ ಪುಸ್ತಕ
ತೆಗೆದುಕೊಂಡು ಓದುತ್ತಿದ್ದೆ.
ಜೊತೆಗೆ ಎನ್ಸಿಆರ್ಟಿ ಸಿಲಬಸ್ಗಳನ್ನೂ
ಓದಿದ್ದೆ.
ಪತ್ರಿಕೆ/ಮ್ಯಾಗಜಿನ್ಗಳ ಓದು
ಕಾಂಪಿಟೇಟಿವ್ ಎಗ್ಸಾಮ್ ಬರೆದ ಯಾವುದೇ
ಅಭ್ಯರ್ಥಿಗಳನ್ನು ಕೇಳಿ ಪತ್ರಿಕೆ ಮತ್ತು
ಮ್ಯಾಗಜಿನ್ಗಳ ಓದು ವೆರಿ ಇಂಪಾರ್ಟೆಂಟ್
ಎನ್ನುತ್ತಾರೆ. ನಾನು ಹೇಳುವುದು ಅದನ್ನೇ. ಕನ್ನಡ ಮತ್ತು
ಇಂಗ್ಲಿಷ್ ಎರಡೂ ಪತ್ರಿಕೆ/ಮ್ಯಾಗಜಿನ್ಗಳನ್ನು
ಓದುತ್ತಿದ್ದೆ. ಎಗ್ಸಾಮ್ನಲ್ಲಿ ಇಂಥ
ವಿಷಯಗಳನ್ನು ಕೇಳುವ ಸಾಧ್ಯತೆ ಇದೆ
ಎಂದನಿಸಿದರೆ ಆ ಭಾಗಗಳನ್ನು ಕಟ್
ಮಾಡಿಕೊಂಡು ಸಂಗ್ರಹಿಸಿ,
ಪರೀಕ್ಷಾ ಸಮಯದಲ್ಲಿ ಮತ್ತೆ
ಓದಿಕೊಳ್ಳುತ್ತಿದ್ದೆ.
ಸಂಪಾದಕೀಯ ತಪ್ಪದೆ ಓದಲೇಬೇಕು.
ರಾಷ್ಟ್ರೀಯ ಮತ್ತು
ಅಂತಾರಾಷ್ಟ್ರೀಯ ವಿದ್ಯಮಾನಗಳು
ಎಲ್ಲಾ ಎಗ್ಸಾಮ್ನಲ್ಲೂ ಕೇಳೇ ಕೇಳುತ್ತಾರೆ. ಅಲ್ಲೇ
ನಮ್ಮ ಕಾಮನ್ ಸೆನ್ಸ್ ಟೆಸ್ಟ್ ಆಗುವುದು.
ಆಪ್ಷನಲ್ ಸಬ್ಜೆಕ್ಟ್ ಆಯ್ಕೆ ಹೇಗೆ?
ನಮಗೆ ಯಾವ ವಿಷಯ ಸುಲಭವಾಗಿ ಕಲಿಯಬಹುದು
ಎಂಬುದರ ಮೇಲೆ ನಾವು ಐಚ್ಛಿಕ ವಿಷಯ
ಆಯ್ಕೆ ಮಾಡಿಕೊಳ್ಳಬೇಕು. ನಾನು
ಆಯ್ಕೆ ಮಾಡಿಕೊಂಡಿದ್ದು
ಸಾರ್ವಜನಿಕ ಆಡಳಿತ ಹಾಗೂ
ಗ್ರಾಮೀಣಾಭಿವೃದ್ದಿ ಮತ್ತು ಸಹಕಾರ. ಸರ್ಕಾರಿ
ಇಲಾಖೆಗಳಲ್ಲಿ ನಾವು ಕಾರ್ಯನಿರ್ವಹಿಸಬೇಕಾದರೆ
ಸಾರ್ವಜನಿಕ ಆಡಳಿತ ಅತ್ಯಂತ ಮುಖ್ಯವಾಗಿ
ಬೇಕು. ಇನ್ನೊಂದು
ಗ್ರಾಮೀಣಾಭಿವೃದ್ದಿ ಮತ್ತು ಸಹಕಾರ. ಈ
ವಿಷಯವನ್ನು ಆಯ್ಕೆ
ಮಾಡಿಕೊಳ್ಳಲು ಕಾರಣ
ನಾನೊಬ್ಬ ಗ್ರಾಮೀಣ
ಪ್ರದೇಶದಿಂದ ಬಂದ ಅಭ್ಯರ್ಥಿ.
ಗ್ರಾಮೀಣ ಸ್ಥಿತಿಗತಿ, ಅಲ್ಲಿನ
ನಂಬಿಕೆಗಳು, ಧರ್ಮ,
ವಿದ್ಯುತ್...ಹೀಗೆ ಹತ್ತು-ಹಲವು
ವಿಷಯಗಳಲ್ಲಿ ಯಾವುದನ್ನೇ ಕೇಳಲಿ
ಗ್ರಾಮೀಣ ಭಾಗದ ಅಭ್ಯರ್ಥಿಗಳು
ಉತ್ತರಿಸುವುದು ಸುಲಭ.
ಅನುವಾದ ಕಲಿತಿದ್ದು ಹೀಗೆ
'ಅನುವಾದ ಮಾಡುವುದು ಭಾಳ ಕಷ್ಟಾರೀ.
ಕನ್ನಡ ಮೀಡಿಯಂ ಬೇರೆ.
ಕನ್ನಡದಿಂದ ಇಂಗ್ಲಿಷ್ಗೆ ತರ್ಜುಮೆ ಟಫ್
ಅನಿಸ್ತು' ಎಂದು ಹೇಳುವುದನ್ನು ಕೇಳಿದ್ದೇನೆ. ನಾನೂ
ಕನ್ನಡ ಮೀಡಿಯಂ ವಿದ್ಯಾರ್ಥಿ.
ನಾನು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳನ್ನು
ಮನೆಗೆ ತರಿಸುತ್ತಿದ್ದೆ. ಎರಡೂ ಪತ್ರಿಕೆಗಳಲ್ಲಿ
ಮುಖ್ಯವಾದ ಕೆಲ ಸುದ್ದಿಗಳು ಪ್ರಕಟವಾಗುವುದು
ಕಾಮನ್. ಆಗ ಅದನ್ನು ನಾನು ಅನುವಾದಿಸುತ್ತಿದ್ದೆ. ಬಳಿಕ
ಎರಡೂ
ಪತ್ರಿಕೆಯನ್ನಿಟ್ಟುಕೊಂಡು ನಾನು
ಬರೆದಿದ್ದು ಸರಿ ಇದೆಯೇ? ಕೆಲ ಪದಗಳಿಗೆ ನಿರ್ದಿಷ್ಟ
ಟರ್ಮ್ಗಳನ್ನು ಬಳಸಿರುತ್ತಾರೆ ಅವುಗಳನ್ನೂ
ಗಮನಿಸುತ್ತಿದ್ದೆ. ಹೀಗೆ ಸಾಕಷ್ಟು ಬಾರಿ
ಅಭ್ಯಾಸ ಮಾಡಿ ಮಾಡಿ ಅನುವಾದಿಸುವುದನ್ನು ಕಲಿತೆ.
ನೀವೂ ಹಾಗೇ ಮಾಡಿ, ನಿಮ್ಮ ಪ್ರಯತ್ನಕ್ಕೆ
ಖಂಡಿತಾ ಮೋಸವಾಗದು!.
ಸಂದರ್ಶನ ಕಷ್ಟವೇನೂ ಇಲ್ಲ
ಸಾಮಾನ್ಯವಾಗಿ ಸಂದರ್ಶನದಲ್ಲಿ ನಮ್ಮ
ಹಿನ್ನೆಲೆ ಹೆಚ್ಚಾಗಿ ಕೇಳುತ್ತಾರೆ. ಜೊತೆಗೆ
ನಮ್ಮೂರು, ಅಲ್ಲಿನ ಇತಿಹಾಸ, ಐತಿಹಾಸಿಕ ಸ್ಥಳ-
ಸ್ಮಾರಕಗಳು, ಸುತ್ತಮುತ್ತಲಿನ ಪರಿಸರ
ಮುಂತಾದವುಗಳ ಬಗ್ಗೆ ಹೆಚ್ಚು ಕೇಳಿದ್ರು.
ಜೊತೆಗೆ ಕೆಎಎಸ್ ಎಗ್ಸಾಮ್ ಬರೆಯಲು
ಕಾರಣ...ಉದ್ದೇಶ ಇಂಥದ್ದೆಲ್ಲಾ ಕೇಳ್ತಾರೆ.
ಸಲಹೆಗಳೇನು?
-ಸಮರ್ಪಣಾ ಭಾವ, ಏಕಾಗ್ರತೆ ಮತ್ತು ನಿರಂತರತೆ
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ
ಪ್ರತಿಯೊಬ್ಬರಲ್ಲೂ ಇರಲೇಬೇಕು
-ಓದಿದನ್ನು ಟಿಪ್ಪಣಿ
ಮಾಡಿಕೊಂಡು ರಿವಿಷನ್ ಮಾಡಿ
Everything is something ಆದ್ದರಿಂದ
ಎಲ್ಲಾ ವಿಷಯಗಳನ್ನೂ ನಾವು ಚೆನ್ನಾಗಿ ಅರ್ಥ
ಮಾಡಿಕೊಂಡು
ಓದಿಕೊಳ್ಳಬೇಕು.
-ಪ್ರತಿಯೊಬ್ಬರೂ
ಕಂಪ್ಯೂಟರ್ನಲ್ಲಿ ಕೆಲಸ
ಮಾಡುವುದರಿಂದ ಸ್ಪರ್ಧಾತ್ಮಕ
ಪರೀಕ್ಷೆಗಳಲ್ಲಿ ನೀಡಿದ
ನಿಗದಿತ ಸಮಯದಲ್ಲಿ ಪರೀಕ್ಷೆ ಬರೆದು
ಮುಗಿಸುವುದು ತುಂಬಾ ಕಷ್ಟವಾಗುತ್ತದೆ.
ಆದ್ದರಿಂದ ಓದಿದ್ದನ್ನು ಬರೆದು ಬರೆದು
ಅಭ್ಯಾಸ ಮಾಡಬೇಕು.
-----
ಓದಿನಲ್ಲಿ ಎರಡು ವಿಧ. ಒಂದು ಅರ್ಜುನ ಮತ್ತು
ಇನ್ನೊಂದು ಏಕಲವ್ಯ. ನಾನು
ಓದಿದ್ದು ಏಕಲವ್ಯನ ತರ. ಶ್ರಮ, ನಿಷ್ಠೆ, ಛಲ
ಇಷ್ಟಿದ್ದರೆ ಸಾಕು ನಾವೆಲ್ಲರೂ ಏಕಲವ್ಯರಾಗಬಹುದು